ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯ ಆಯವ್ಯಯ: ವಿರೋಧವಿಲ್ಲದೆ ಅನುಮೋದನೆ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2011-12ನೇ ಸಾಲಿನ ಬಜೆಟ್‌ನಲ್ಲಿ ಕೆಲವು ವಾರ್ಡ್‌ಗಳಿಗೆ ಹೆಚ್ಚುವರಿ ಅನುದಾನ ಹಾಗೂ ಕೆಲ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಕಾಯ್ದಿರಿಸುವ ಮೂಲಕ 9,382 ಕೋಟಿ ರೂಪಾಯಿ ಮೊತ್ತದ ಆಯವ್ಯಯಕ್ಕೆ ಶನಿವಾರ ನಡೆದ ಪಾಲಿಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಬಜೆಟ್ ಮಂಡನೆಯಾದಾಗಿನಿಂದ ಆಯವ್ಯಯ ಸಮರ್ಪಕವಾಗಿಲ್ಲ ಎಂದು ದೂರುತ್ತಲೇ ಬಂದ ವಿರೋಧ ಪಕ್ಷಗಳು ಶನಿವಾರ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ.
ಪ್ರಸಕ್ತ ಸಾಲಿನಲ್ಲಿ ಒಟ್ಟು 9,382 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿದ್ದು, 9,380 ಕೋಟಿ ರೂಪಾಯಿ ವೆಚ್ಚ ಮಾಡುವ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಯಿತು.

ಪಾಲಿಕೆ ಪೌರ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ ಮಾತನಾಡಿ, ಪ್ರಸಕ್ತ ಸಾಲಿನ ಬಜೆಟ್‌ಗೆ ಅನುಮೋದನೆ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಸದಸ್ಯರು ಎಲ್ಲ ಸದಸ್ಯರಿಗೂ ಸಮಾನವಾಗಿ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಜೆಟ್ ಕುರಿತ ಚರ್ಚೆ ವೇಳೆ ತಿಳಿಸಲಾದ ಲೋಪಗಳನ್ನು ಸರಿಪಡಿಸಬೇಕು. ಸಲಹೆಗಳನ್ನು ಸ್ವೀಕರಿಸಬೇಕು ಎಂದು ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದರು. ನಂತರ ಅವರು ತಮ್ಮ ಪಕ್ಷದ ಸದಸ್ಯರೊಂದಿಗೆ ಮೇಯರ್ ಪೀಠದ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು. ಬಳಿಕ ಆಡಳಿತ ಪಕ್ಷದ ಸದಸ್ಯರು ಸಮಾಧಾನಪಡಿಸಿದಾಗ ಪ್ರತಿಭಟನೆ ಹಿಂಪಡೆದರು.

ನಂತರ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥರಾಜು, `ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಲಾಗಿದೆ. ಆಸ್ತಿ ತೆರಿಗೆ ಸಂಗ್ರಹಣೆಗೂ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. `ಪೇಯಿಂಗ್ ಗೆಸ್ಟ್~ ನಡೆಸುವ ಕಟ್ಟಡಗಳಿಗೂ ವಾಣಿಜ್ಯ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಹೆಚ್ಚು ಆದಾಯ ಸಂಗ್ರಹವಾಗುವ ರೀತಿಯಲ್ಲಿ ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ~ ಎಂದರು.

ಅವರ ಪ್ರತಿಕ್ರಿಯೆಗೆ ವಿರೋಧ ಪಕ್ಷಗಳ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಅಲ್ಲದೇ ಸದಸ್ಯರ ಆರೋಪಗಳಿಗೆ ಸಮರ್ಪಕ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು.

ವಿಳಂಬಕ್ಕೆ ಎಲ್ಲರೂ ಹೊಣೆ:
ನಂತರ ಪ್ರತಿಕ್ರಿಯೆ ನೀಡಿದ ಆಯುಕ್ತ ಸಿದ್ದಯ್ಯ, `ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ವಿಳಂಬವಾಗಿದೆ. ನೂತನ ಮೇಯರ್, ಉಪಮೇಯರ್ ಏಪ್ರಿಲ್‌ನಲ್ಲಿ ಆಯ್ಕೆಯಾದರೆ, ಇತರೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಮೇ ತಿಂಗಳಲ್ಲಿ. ಈ ವಿಳಂಬಕ್ಕೆ ಎಲ್ಲರೂ ಜವಾಬ್ದಾರರು~ ಎಂದರು.

`2010-11ನೇ ಸಾಲಿನಲ್ಲಿ 3,517 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು, 3,856 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ (ಪ್ರಾರಂಭಿಕ ಶಿಲ್ಕು ಒಳಗೊಂಡಂತೆ). ಕಳೆದ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 1,600 ಕೋಟಿ ರೂಪಾಯಿ ಸಂಗ್ರಹ ಗುರಿ ಇತ್ತು. ಆದರೆ ಸಂಗ್ರಹವಾಗಿದ್ದು ರೂ 1,108 ಕೋಟಿ ಮಾತ್ರ. ಆದರೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ 40ರಷ್ಟು ಸುಧಾರಣೆಯಾಗಿದೆ ಎಂಬುದು ಗಮನಾರ್ಹ~ ಎಂದು ಹೇಳಿದರು.

`454 ಕಿ.ಮೀ. ಉದ್ದದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳ ವಿಸ್ತರಣೆ, ಅಭಿವೃದ್ಧಿಗಾಗಿ ಕಳೆದ ಸಾಲಿನಲ್ಲಿ 1,000 ಕೋಟಿ ರೂಪಾಯಿ ಕಾಯ್ದಿರಿಸಿ, ರೂ 1,000 ಕೋಟಿ ಸಾಲ ಪಡೆಯಲು ನಿರ್ಧರಿಸಲಾಗಿತ್ತು. ಆದರೆ ಯೋಜನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಸಾಲ ಪಡೆಯಲಿಲ್ಲ~ ಎಂದರು.

`ಸರ್ಕಾರದಿಂದ 1,300 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಿದ್ದರೂ ಬಿಡುಗಡೆಯಾಗಿದ್ದು ಕೇವಲ ರೂ 300 ಕೋಟಿ ಮಾತ್ರ. ತ್ಯಾಜ್ಯ ಕರದಿಂದ ನಿರೀಕ್ಷಿಸಲಾಗಿದ್ದ 150 ಕೋಟಿ ರೂಪಾಯಿ ಕೂಡ ಸಂಗ್ರಹವಾಗಲಿಲ್ಲ. ಆದರೆ ಎಲ್ಲ ನಿರೀಕ್ಷಿತ ಆದಾಯಗಳು ಸಂಗ್ರಹವಾಗಿದ್ದರೆ 7,000 ಕೋಟಿ ರೂಪಾಯಿ ಗಳಿಸಬಹುದಿತ್ತು. ಆದರೂ ಯಾವುದೇ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗದಂತೆ ಎಚ್ಚರ ವಹಿಸಲಾಗಿದೆ~ ಎಂದು ಹೇಳಿದರು.

`ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಮಿತವ್ಯಯ ಸಾಧಿಸುವ ಮೂಲಕ ಬಂಡವಾಳ ಕ್ರೋಢೀಕರಣಕ್ಕೆ ಒತ್ತು ನೀಡಲಾಗುವುದು. ಹಾಗೆಯೇ ಗುಣಮಟ್ಟದ ಕಾಮಗಾರಿ ಕೈಗೊಂಡು ಜನತೆಗೆ ಸುಧಾರಿತ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು~ ಎಂದರು.

ಆದರೆ ಆಯುಕ್ತರ ಪ್ರತಿಕ್ರಿಯೆಗೂ ವಿರೋಧ ಪಕ್ಷಗಳ ಸದಸ್ಯರು ತೃಪ್ತರಾಗಲಿಲ್ಲ. ಬಜೆಟ್‌ನಲ್ಲಿರುವ ಲೋಪಗಳನ್ನು ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಮೈಮರೆತ ವಿರೋಧ ಪಕ್ಷಗಳು!:
ಈ ನಡುವೆ ಬಜೆಟ್‌ನಲ್ಲಿ ವಾರ್ಡ್‌ಗಳಿಗೆ ಹೆಚ್ಚುವರಿಯಾಗಿ ನೀಡಲಾದ ಅನುದಾನದ ಪಟ್ಟಿಯನ್ನು ಪರಿಶೀಲಿಸುವುದರಲ್ಲಿ ವಿರೋಧ ಪಕ್ಷಗಳ ಸದಸ್ಯರು ಮಗ್ನರಾಗಿದ್ದರು. ಈ ಸಂದರ್ಭದಲ್ಲೇ ಆಡಳಿತ ಪಕ್ಷದ ನಾಯಕರು ಆಯವ್ಯಯಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಹೆಚ್ಚುವರಿ ವಿಷಯಗಳನ್ನು ಓದಿ ಅನುಮೋದನೆ ಪಡೆದುಕೊಂಡರು. ಬಳಿಕ ಮೇಯರ್ ಪಿ.ಶಾರದಮ್ಮ ಅವರು ಸಭೆಯನ್ನು ಮುಂದೂಡಿದರು.

ಆಗ ಎಚ್ಚೆತ್ತುಕೊಂಡ ಕಾಂಗ್ರೆಸ್ ಸದಸ್ಯರು, ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸುತ್ತಾ ಫಲಕಗಳನ್ನು ಪ್ರದರ್ಶಿಸಿದರು. ಆ ಹೊತ್ತಿಗಾಗಲೇ ಮೇಯರ್ ಸಭಾಂಗಣದಿಂದ ಹೊರಗೆ ಹೋಗಿದ್ದರು.

ನಾಲ್ಕು ನಿಮಿಷದ ಪ್ರತಿಕ್ರಿಯೆ

ಬಿಬಿಎಂಪಿಯ 2011-12ನೇ ಸಾಲಿನ ಬಜೆಟ್ ಕುರಿತು ನಾಲ್ಕು ದಿನಗಳ ಕಾಲ ಸುದೀರ್ಘ ಚರ್ಚೆ ನಡೆದಿತ್ತು. ವಿರೋಧ ಪಕ್ಷಗಳು ಮಾತ್ರವಲ್ಲದೇ, ಆಡಳಿತ ಪಕ್ಷದ ಕೆಲ ಸದಸ್ಯರು ಸಹ ಬಜೆಟ್‌ನಲ್ಲಿರುವ ಲೋಪಗಳ ಬಗ್ಗೆ ಬೆಳಕು ಚೆಲ್ಲಿದ್ದರು.
 
ಆದರೆ ಶನಿವಾರ ನಡೆದ ಸಭೆಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಅವರು ಕೇವಲ ಮೂರ‌್ನಾಲ್ಕು ನಿಮಿಷಗಳಲ್ಲೇ ಪ್ರತಿಕ್ರಿಯೆ ನೀಡಿದ್ದು, ವಿರೋಧ ಪಕ್ಷಗಳ ಸದಸಶ್ಯರ ಆಕ್ರೋಶಕ್ಕೆ ಕಾರಣವಾಯಿತು.

ಅನುದಾನ ಏರಿಕೆ/ ಕಡಿತ
ಆಗಸ್ಟ್ 18ರಂದು ಮಂಡನೆಯಾದ ಬಜೆಟ್ ಕುರಿತು ನಾಲ್ಕು ದಿನ ಚರ್ಚೆ ನಡೆದ ಬಳಿಕ 161 ವಾರ್ಡ್‌ಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ. ಹಾಗೆಯೇ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ, ಪುಲಿಕೇಶಿನಗರ ಕ್ಷೇತ್ರ, ಮಹಾಲಕ್ಷ್ಮಿ ಬಡಾವಣೆ, ಶಿವಾಜಿನಗರ, ಗೋವಿಂದರಾಜನಗರ, ವಿಜಯನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ತಲಾ 2 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಬಿಟಿಎಂ ಲೇಔಟ್, ಶಾಂತಿನಗರ ಕ್ಷೇತ್ರಕ್ಕೆ ತಲಾ 5 ಕೋಟಿ ರೂಪಾಯಿ, ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ 3 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಆದರೆ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಮಲ್ಲೇಶ್ವರ ಕ್ಷೇತ್ರಕ್ಕೆ ನೀಡಲಾಗಿದ್ದ 30 ಕೋಟಿ ಅನುದಾನವನ್ನು ಹಿಂಪಡೆಯಲಾಗಿದೆ. ಹಾಗೆಯೇ ಪದ್ಮನಾಭನಗರ ಕ್ಷೇತ್ರಕ್ಕೆ ಕಾಯ್ದಿರಿಸಲಾಗಿದ್ದ ಅನುದಾನದಲ್ಲಿ 15 ಕೋಟಿ, ಜಯನಗರ ಕ್ಷೇತ್ರದಿಂದ ರೂ 15 ಕೋಟಿ ಹಿಂಪಡೆಯಲಾಗಿದೆ.

ಮಾಹಿತಿಯೇ ಇಲ್ಲ

ಆಗಸ್ಟ್ 18ರಂದು ಮಂಡನೆಯಾದ ಪಾಲಿಕೆಯ 2011-12ನೇ ಸಾಲಿನ ಬಜೆಟ್‌ನ ಗಾತ್ರ 9,197 ಕೋಟಿ ರೂಪಾಯಿ ಇತ್ತು. ಆದರೆ ಶನಿವಾರ ನಡೆದ ಸಭೆಯಲ್ಲಿ ಬಜೆಟ್ ಗಾತ್ರವನ್ನು 9,382 ಕೋಟಿ ರೂಪಾಯಿಗೆ ಏರಿಕೆ ಮಾಡಿ ಅನುಮೋದನೆ ಪಡೆಯಲಾಯಿತು.

ಆದರೆ ಯಾವ ಅನುದಾನವನ್ನು ಕಡಿತಗೊಳಿಸಲಾಗಿದೆ, ಹೊಸ ಆದಾಯ ಮೂಲಗಳು ಯಾವುವು, ಹೆಚ್ಚುವರಿ 185 ಕೋಟಿ ರೂಪಾಯಿ ಹಣವನ್ನು ಹೊಂದಾಣಿಕೆ ಮಾಡಿರುವ ಬಗ್ಗೆ ಯಾರ ಬಳಿಯೂ ಮಾಹಿತಿ ಇಲ್ಲ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಆಡಳಿತ ಪಕ್ಷದ ನಾಯಕರ ಬಳಿಯೂ ಇದಕ್ಕೆ ಉತ್ತರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT