ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಕು ಇದೆಯಾ?

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಹಳ್ಳಕ್ಕೆ ಬಿದ್ದ ಕುರಿಗೆ ಆಳಿಗೊಂದು ಕಲ್ಲು ಎಂಬ ಗಾದೆ ಮಾತನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಲೇಬೇಕು!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಪರಿಸ್ಥಿತಿಯನ್ನು ಈ ಗಾದೆ ಮಾತಿಗೆ ಅನ್ವಯಿಸಬಹುದೇನೊ? ನಿಜ, ಈ ಆಟಗಾರರು ಕೆಟ್ಟದಾಗಿ ಆಡುತ್ತಿದ್ದಾರೆ.  ವಿದೇಶದ ಪಿಚ್‌ಗಳಲ್ಲಿ ಬ್ಯಾಟ್ ಬೀಸುವುದನ್ನೇ ಮರೆತಂತೆ ಕಾಣುತ್ತಿದ್ದಾರೆ. ಅದರಲ್ಲಿ ಸಂಶಯವಿಲ್ಲ.

ಆದರೆ ಈ ಅವಕಾಶವನ್ನೇ ಉಪಯೋಗಿಸಿಕೊಂಡಿರುವ ಆಸ್ಟ್ರೇಲಿಯಾ ಮಾಧ್ಯಮಗಳು ಭಾರತ ತಂಡದಲ್ಲಿ ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿರುವಂತಿದೆ. 2008ರಲ್ಲಿ ಪ್ರವಾಸ ಕೈಗೊಂಡಿದ್ದಾಗ ಕೂಡ ಅಂತಹ ಒಂದು ಯತ್ನ ನಡೆದಿತ್ತು.

ಆದರೆ ಆಗ ನಾಯಕರಾಗಿದ್ದ ಅನಿಲ್ ಕುಂಬ್ಳೆ ಜಾಣ್ಮೆ ಹಾಗೂ ಹರಭಜನ್ ಸಿಂಗ್ ಅವರ ನೆರವಿಗೆ ನಿಂತಿದ್ದ ಸಚಿನ್ ತೆಂಡೂಲ್ಕರ್ ಬುದ್ಧಿವಂತಿಕೆಯಿಂದಾಗಿ ಕಾಂಗರೂ ನಾಡಿನ ಜನರು ನಿರಾಸೆ ಅನುಭವಿಸಿದ್ದರು!

ಈ ಬಾರಿ ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ವೀರೇಂದ್ರ ಸೆಹ್ವಾಗ್ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ರೀತಿ ಆಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ವದಂತಿಗಳು ಸೃಷ್ಟಿಯಾಗಿದ್ದವು. ಆದರೆ ಅದ್ಯಾವುದಕ್ಕೂ ಸರಿಯಾದ ಸಾಕ್ಷಿ ಇಲ್ಲ.

ನಿಜ, ಯಾವುದೇ ಕ್ಷೇತ್ರದಲ್ಲಿ ವಿಭಿನ್ನ ಅಭಿಪ್ರಾಯಗಳು ಇದ್ದೇ ಇರುತ್ತವೆ. ಅದಕ್ಕೆ ಭಾರತದ ಕ್ರಿಕೆಟ್ ಹೊರತಲ್ಲ. ಹಾಗೇ, ತಂಡಕ್ಕೆ ಸಂಬಂಧಿಸಿದ ಕೆಲ ವಿಷಯಗಳಲ್ಲಿ ದೋನಿ ಹಾಗೂ ಸೆಹ್ವಾಗ್ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಈ ಬಗ್ಗೆ ಅವರ ನಡುವೆ ಸಂಘರ್ಷ ನಡೆದಿರಬಹುದು. ಹಾಗೇ, ಕೆಂಡವಿಲ್ಲದೇ ಹೊಗೆ ಬರುವುದಿಲ್ಲ ಎಂಬ ಮಾತೂ ಇದೆ.

ದೋನಿ ಪದಾರ್ಪಣೆಗೆ ಮುನ್ನವೇ ಸೆಹ್ವಾಗ್ ಭಾರತ ತಂಡದ ಉಪನಾಯಕರಾಗಿದ್ದವರು. ವೀರೂ ಪದಾರ್ಪಣೆ ಮಾಡಿದ್ದು 1999ರಲ್ಲಿ. ದೋನಿ ಮೊದಲ ಏಕದಿನ ಪಂದ್ಯ ಆಡಿದ್ದು 2004ರಲ್ಲಿ. ದೋನಿಗಿಂತ ಸೆಹ್ವಾಗ್ ಐದು ವರ್ಷ ಹಿರಿಯ ಆಟಗಾರ.

ಆದರೆ ಮಹಿ ತಂಡ ಸೇರಿದ ಎರಡೇ ವರ್ಷಗಳಲ್ಲಿ ನಾಯಕರಾದರು. ತಮಗಿಂತ ಕಿರಿಯ ಆಟಗಾರ ನಾಯಕನಾದ ಎಂಬ ವಿಷಯ ಸೆಹ್ವಾಗ್ ಅವರ ಅಸಮಾಧಾನಕ್ಕೆ ಕಾರಣರಾಗಿರಬಹುದು. ಅದಕ್ಕಾಗಿಯೋ ಏನೊ  ಉಪನಾಯಕ ಪಟ್ಟ ಕೂಡ ಬೇಡ ಎಂದು ಅವರು ಒಮ್ಮೆ ಹೇಳಿದ್ದರು.

ಆಮೇಲೆ ದೋನಿ ಯಶಸ್ಸಿನ ಶಿಖರವೇರಿದ್ದು ಎಲ್ಲರಿಗೂ ಗೊತ್ತೇ ಇದೆ. ಟ್ವೆಂಟಿ-20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇ ಅದಕ್ಕೆ ಸಾಕ್ಷಿ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದರು. ಸಚಿನ್ ನಂತರ ಈ ಪ್ರಶಸ್ತಿ ಗೆದ್ದ ಮತ್ತೊಬ್ಬ ಕ್ರಿಕೆಟಿಗ ಎಂದರೆ ದೋನಿ.

ಆದರೆ ವೀರೂ ಅತ್ಯುತ್ತಮ ಬ್ಯಾಟ್ಸ್‌ಮನ್ ಎನಿಸಿಕೊಂಡರೇ ಹೊರತು ದೋನಿಗೆ ಸಿಕ್ಕಷ್ಟು ಖ್ಯಾತಿ, ಗೌರವ, ಗ್ಲಾಮರ್ ಸ್ಪರ್ಶ ಸಿಗಲಿಲ್ಲ. ಮಧ್ಯದಲ್ಲಿ ಕೆಲ ದಿನ ಸ್ಥಾನ ಕೂಡ ಕಳೆದುಕೊಂಡರು. ಒಮ್ಮೆ ದೆಹಲಿ ಕ್ರಿಕೆಟ್ ಸಂಸ್ಥೆಯನ್ನು ಎದುರು ಹಾಕಿಕೊಂಡಿದ್ದರು. ಅದಕ್ಕೆ ಗಂಭೀರ್ ಕೂಡ ಧ್ವನಿಗೂಡಿಸಿದ್ದರು.
 
ಭಾರತ ತಂಡದಲ್ಲಿ ಈಗ ದೆಹಲಿ ಆಟಗಾರರದ್ದೇ ಒಂದು ಗುಂಪು ಎಂಬ ಮಾತುಗಳಿವೆ. ಯಾವುದೇ ಪ್ರವಾಸವಿರಲಿ, ಸೆಹ್ವಾಗ್ ಸದಾ ಗಂಭೀರ್ ಜೊತೆ ಇರುತ್ತಾರೆ. ಇನ್ನು ದೋನಿ ಯುವ ಆಟಗಾರರೊಂದಿಗಿರುತ್ತಾರೆ.

ಸೆಹ್ವಾಗ್ ಕೊಂಚ ಸಿಡುಕ. ಏಟಿಗೆ ಎದುರೇಟು ನೀಡುವಂತಹ ಆಟಗಾರ. ಅಂಗಳದಲ್ಲಿ ಅಗತ್ಯಕ್ಕಿಂತ ಹೆಚ್ಚು ಆಕ್ರಮಣಕಾರಿ ಆಗಿರುತ್ತಾರೆ. ಯಾರು ಎಂದರೆ ನೀನ್ಯಾರು ಎಂದು ಕೇಳುವ ಮನೋವೃತ್ತಿಯ ಆಟಗಾರ.  ತಮ್ಮ ಬ್ಯಾಟಿಂಗ್‌ನಂತೆ! ಹೇಳಬೇಕಾಗಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಆದರೆ ದೋನಿ ಹಾಗಲ್ಲ. ಅವರೊಂಥರಾ ಡಿಪ್ಲೊಮೆಟಿಕ್.

ಯಾರು ಎಂದು ಪ್ರಶ್ನಿಸಿದರೆ ಮೊದಲು ತಮ್ಮ ಸ್ವವಿವರ ಹೇಳಿ, ಬಳಿಕ ನೀವು ಯಾರು ಎಂದು ತಿಳಿಯಬಹುದೇ ಎಂದು ಕೇಳುವ ನಾಯಕ.  ದೋನಿ ಹಾಗೂ ಸೆಹ್ವಾಗ್ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನಲಾದ ಸಂಬಂಧ ಹರಿದಾಡಿದ ಸುದ್ದಿಗಳು ಇಲ್ಲಿವೆ.

 ಘಟನೆ-1: ದೋನಿ ಹಾಗೂ ವೀರೂ ನಡುವೆ ಮನಸ್ತಾಪವಿದೆ ಎಂಬುದು ಮೊದಲು ವರದಿಯಾಗಿದ್ದು 2009ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ. ಭುಜದ ನೋವಿನ ಕಾರಣ ಆ ವಿಶ್ವಕಪ್ ಮಧ್ಯದಲ್ಲೇ ಸೆಹ್ವಾಗ್ ಸ್ವದೇಶಕ್ಕೆ ಹಿಂತಿರುಗುವ ನಿರ್ಧಾರ ಕೈಗೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ನಾಯಕ ದೋನಿ ಅವರೊಂದಿಗಿನ ಬಿಕ್ಕಟ್ಟು ಈ ದಿಢೀರ್ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿತ್ತು. ಏಕೆಂದರೆ ಸೆಹ್ವಾಗ್ ಅವರು ತಮ್ಮ ಭುಜದ ನೋವಿಗೆ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದೇ ದೋನಿ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿತ್ತು. ಅದನ್ನು ತಳ್ಳಿ ಹಾಕಿದ್ದ ದೋನಿ ಪತ್ರಿಕಾಗೋಷ್ಠಿಗೆ ಇಡೀ ತಂಡವನ್ನು ಕರೆತಂದು ಪೆರೇಡ್ ಮಾಡಿಸಿದ್ದರು. ಎಲ್ಲವೂ ಸರಿ ಇದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದರು.

ಘಟನೆ-2: 2010ರ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧ ಮಿರ್‌ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೂ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಸುದ್ದಿಯಾಗಿತ್ತು.
 
ಆ ಪಂದ್ಯದಲ್ಲಿ ಅಮಿತ್ ಮಿಶ್ರಾ ಅವರನ್ನು ಆಡಿಸದೇ ಇದ್ದದ್ದು ಉಪನಾಯಕ ಸೆಹ್ವಾಗ್ ಅಸಮಾಧಾನಕ್ಕೆ ಕಾರಣವಾಗಿತ್ತು. ಏಕೆಂದರೆ ಚಿತ್ತಗಾಂಗ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ದೋನಿ ಅಲಭ್ಯರಾಗಿದ್ದ ಕಾರಣ ವೀರೂ ತಂಡ ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಮಿಶ್ರಾಗೆ ಸ್ಥಾನ ನೀಡಿದ್ದರು. ಅದರಲ್ಲಿ ಮಿಶ್ರಾ ಉತ್ತಮ ಪ್ರದರ್ಶನ ತೋರಿದ್ದರು.

ಆದರೆ ಮಿರ್‌ಪುರದಲ್ಲಿ ನಡೆದ ನಂತರ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಿದ್ದ ದೋನಿ ಲೆಗ್ ಸ್ಪಿನ್ನರ್ ಮಿಶ್ರಾ ಅವರನ್ನು ಕೈಬಿಟ್ಟು ಪ್ರಗ್ಯಾನ್ ಓಜಾ ಅವರನ್ನು ಆಡಿಸಿದ್ದರು. ಕೊನೆ ಕ್ಷಣದಲ್ಲಿ ದೋನಿ ಈ ನಿರ್ಧಾರ ಕೈಗೊಂಡಿದ್ದು ಅನುಮಾನಕ್ಕೆ ಕಾರಣವಾಗಿತ್ತು.

ಈಗ ಕಾಂಗರೂ ನಾಡಿನಲ್ಲಿ ಎದ್ದಿರುವ ವಿವಾದವೆಂದರೆ ದೋನಿ ಕಂಡರೆ ಸೆಹ್ವಾಗ್‌ಗೆ ಆಗುತ್ತಿಲ್ಲ ಎಂಬುದು. ಗೋ-ಕಾರ್ಟಿಂಗ್‌ಗೆ ಹೋಗದೇ ಅಭ್ಯಾಸ ನಡೆಸೋಣ ಎಂದು ವೀರೂ ಹೇಳಿದ ಮಾತನ್ನು ದೋನಿ ಒಪ್ಪಲಿಲ್ಲ ಎಂಬುದು ಆಸ್ಟ್ರೇಲಿಯಾದ ಪತ್ರಿಕೆಯೊಂದರ ವರದಿ.
ದೋನಿ ಈ ಸರಣಿಯಲ್ಲಿ ನಾಯಕರಾಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ಪೂರ್ಣ ವಿಫಲವಾಗಿದ್ದಾರೆ.

ಅದನ್ನೇ ಅಲ್ಲಿನ ಮಾಧ್ಯಮಗಳು ಬಂಡವಾಳ ಮಾಡಿಕೊಂಡು ದೋನಿ ವಿರುದ್ಧ ಹರಿಹಾಯುತ್ತಿವೆ. ವೀರೂ ಸಿಡ್ನಿ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಉದ್ದೇಶಪೂರ್ವವಾಗಿ ವಿಕೆಟ್ ಒಪ್ಪಿಸಿದರು ಎಂದು ಬರೆಯುತ್ತಿವೆ.
ಬಾಗಿದವನಿಗೆ ಎರಡು ಗುದ್ದು ಹೆಚ್ಚು ಎಂಬಂತಾಗಿದೆ ಈಗ ಭಾರತದ ಪರಿಸ್ಥಿತಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT