ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಅ.22ಕ್ಕೆ `ಐಟಿ ಬಿಜ್'

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ಅಕ್ಟೋಬರ್ 22 ಮತ್ತು 23ರಂದು ನಗರದಲ್ಲಿ `ಬೆಂಗಳೂರು ಐಟಿ ಬಿಜ್' ಸಮಾವೇಶ ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್, ನಗರದಲ್ಲಿ ಮುಂದಿನ ವರ್ಷದ ಜೂನ್‌ನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ `ಐಟಿ ಬಿಜ್' ಪೂರಕವಾಗಲಿದೆ. ಈಗಾಗಲೇ ಮೈಸೂರು ಮತ್ತು ಮಂಗಳೂರಿನಲ್ಲಿ `ಐಟಿ ಬಿಜ್' ಉಪ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯಲ್ಲೂ ಸೆ.26ರಂದು `ಐಟಿ ಬಿಜ್' ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ಮುಂದಿನ ಒಂದೂವರೆ ತಿಂಗಳಲ್ಲಿ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ರೋಡ್ ಶೋ ಕೈಗೊಂಡು ರಾಜ್ಯದಲ್ಲಿ ಬಂಡವಾಳ ಹೂಡುವಂತೆ  ಬಂಡವಾಳ ಹೂಡಿಕೆದಾರರಿಗೆ ಮನವಿ ಮಾಡಲಾಗುವುದು. ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಹಾರ್ಡ್‌ವೇರ್ ವಲಯದಲ್ಲಿ ದೇಶ ಸ್ವಾವಲಂಬನೆ ಸಾಧಿಸದಿದ್ದರೆ ಉಳಿಗಾಲವಿಲ್ಲ ಎನ್ನುವ ಅರಿವು ಸರ್ಕಾರಕ್ಕಿದೆ. ಆದ್ದರಿಂದ ಸೆಮಿಕಂಡಕ್ಟರ್ ಮತ್ತು ಹಾರ್ಡ್‌ವೇರ್ ಉತ್ಪಾದನೆಗೂ ಸರ್ಕಾರ ಆದ್ಯತೆ ನೀಡಲಿದೆ ಎಂದರು.

`ಐಟಿಐಆರ್'ಗೆ ಹಸಿರು ನಿಶಾನೆ
ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್) ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದ ನಡುವೆ 10,500 ಎಕರೆ ಪ್ರದೇಶದಲ್ಲಿ ಐಟಿಐಆರ್ ಸ್ಥಾಪಿಸಲಾಗುವುದು. ಮೊದಲ ಹಂತದಲ್ಲಿ 2072 ಎಕರೆ ಜಮೀನು ಸ್ವಾಧೀನಕ್ಕೆ ಕೆಐಎಡಿಬಿ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಐಟಿಐಆರ್ ಯೋಜನೆಗೆ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಏಳು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಈ ಯೋಜನೆಯಲ್ಲಿ 1.06 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ. ಐಟಿಐಆರ್ ಯೋಜನೆ ಪೂರ್ಣವಾದರೆ 12 ಲಕ್ಷ ಮಂದಿಗೆ ಪ್ರತ್ಯಕ್ಷ ಹಾಗೂ 28 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಜತೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಗುಲ್ಬರ್ಗಾ ನಗರಗಳಲ್ಲೂ ಮಾಹಿತಿ ತಂತ್ರಜ್ಞಾನ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುವುದು. ಹುಬ್ಬಳ್ಳಿಯಲ್ಲಿ ಇನ್ಫೊಸಿಸ್‌ಗೆ ಜಾಗ ಒದಗಿಸಲಾಗಿದ್ದು, ಅಂದಾಜು 900 ಕೋಟಿ ಬಂಡವಾಳ ಹೂಡುವ ನಿರೀಕ್ಷೆ ಇದೆ. ಇದರಿಂದ 10 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
ಪ್ರತಿ ವರ್ಷ 20ರಿಂದ 25 ಯುವ ಉದ್ದಿಮೆದಾರರನ್ನು ಸರ್ಕಾರಿ ವೆಚ್ಚದಲ್ಲಿ ವಿದೇಶಗಳಿಗೆ ಕಳುಹಿಸಿ ಕಂಪೆನಿಗಳನ್ನು ಸ್ಥಾಪಿಸುವ ಕುರಿತು ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿನ 50 ಎಕರೆ ಪ್ರದೇಶದಲ್ಲಿ 128 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ಸ್ಥಾಪಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರ 45 ಕೋಟಿ ರೂಪಾಯಿ ನೀಡಲಿದೆ. ಉಳಿದ 45 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.

ಸರ್ಕಾರಿ ಆಸ್ತಿಗಳನ್ನು ಗುರುತಿಸುವ `ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ'ಯನ್ನು 160 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ 80 ಕೋಟಿ ರೂಪಾಯಿ ನೀಡಲಿದೆ ಎಂದು ತಿಳಿಸಿದರು.

ಅಶ್ಲೀಲ ವೆಬ್‌ಸೈಟ್‌ಗೆ ತಡೆ
ಬೆಂಗಳೂರು:
ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡಲು ಸಾಧ್ಯವಾಗದಂತೆ `ಫೈರ್‌ವಾಲ್' ಅಳವಡಿಸಲಾಗುವುದು ಎಂದು ಸಚಿವ ಎಸ್.ಆರ್. ಪಾಟೀಲ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಕರ್ನಾಟಕ ಸೈಬರ್ ರಾಜ್ಯವಾಗಲಿದೆ. ಆದ್ದರಿಂದ ಸೈಬರ್ ಅಪರಾಧಗಳು ನಡೆಯದಂತೆ ಅಗತ್ಯ ಕ್ರಮಕೈಗೊಳ್ಳುವುದು ಮುಖ್ಯವಾಗಲಿದೆ. ವಿಧಾನಸೌಧದಲ್ಲಿ ಸರ್ಕಾರಿ ನೌಕರರು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾರೆ ಎನ್ನುವ ಬಗ್ಗೆ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಫೈರ್‌ವಾಲ್ ಅಳವಡಿಸಲು ನಿರ್ಧರಿಸಲಾಗಿದೆ. ಆರಂಭದಲ್ಲಿ ವಿಧಾನಸೌಧ, ನಂತರ ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದರು.

ಸಾರ್ವಜನಿಕರಿಗೆ ಸುಲಭವಾಗಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ಹಂತ ಹಂತವಾಗಿ `ವೈ ಫೈ' ಸೌಲಭ್ಯ ಕಲ್ಪಿಸಲಾಗುವುದು. ನಗರದ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಅತಿ ಶೀಘ್ರದಲ್ಲೇ ಪ್ರಾಯೋಗಿಕವಾಗಿ `ವೈ ಫೈ' ಸೌಲಭ್ಯವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT