ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆಗೆ ಚಾಲನೆ

ವಿಶೇಷಾಧಿಕಾರಿಯಾಗಿ ವೇಣುಗೋಪಾಲ್ ನೇಮಕ
Last Updated 24 ಡಿಸೆಂಬರ್ 2012, 20:04 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಕ್ಷೇತ್ರದ ತಜ್ಞರ ವರದಿಯನ್ನು ಆಧರಿಸಿ ಏಷ್ಯಾದ ದೊಡ್ಡ ವಿಶ್ವವಿದ್ಯಾಲಯವಾಗಿರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜನೆ ಮಾಡಲು ತೀರ್ಮಾನಿಸಿ ಉನ್ನತ ಶಿಕ್ಷಣ ಇಲಾಖೆಯು ಸೋಮವಾರ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ವಿವಿ ಎರಡು ವಿವಿಗಳಾಗಿ ವಿಭಜನೆ ಹೊಂದಲಿದೆ.

ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಬೆಂಗಳೂರು ಉತ್ತರ ವಿವಿಗೆ `ಡಿ.ವಿ.ಜಿ.ಜ್ಞಾನವಾಹಿನಿ ವಿಶ್ವವಿದ್ಯಾಲಯ' ಎಂಬ ಹೆಸರಿಡಲು ತೀರ್ಮಾನಿಸಲಾಗಿದೆ. ಈ ವಿವಿಯ ಪೂರ್ವಭಾವಿ ಕೆಲಸಗಳ ನಿರ್ವಹಣೆಗಾಗಿ ನಗರದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ) ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್ ಅವರನ್ನು ವಿಶೇಷಾಧಿಕಾರಿ ಯಾಗಿ ನೇಮಿಸಲಾಗಿದೆ. ಈ ಸಂಬಂಧ ಇತರ ಷರತ್ತು ಹಾಗೂ ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಕಾಶ್ ರಾವ್ ಕೇಸರ್‌ಕರ್ ಆದೇಶದಲ್ಲಿ ತಿಳಿಸಿದ್ದಾರೆ.

1964ರ ಜುಲೈಯಲ್ಲಿ ಆರಂಭಗೊಂಡಿರುವ ಬೆಂಗಳೂರು ವಿವಿಯಲ್ಲಿ ಪ್ರಸ್ತುತ 653 ಕಾಲೇಜುಗಳು ಹಾಗೂ 56 ಸ್ನಾತಕೋತ್ತರ ಕೇಂದ್ರಗಳು ಇವೆ. 3.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಡಾ.ಎನ್.ರುದ್ರಯ್ಯ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಬೆಂಗಳೂರು ವಿವಿಯನ್ನು ಮೂರು ವಿಶ್ವವಿದ್ಯಾಲಯಗಳಾಗಿ ವಿಭಜಿಸಬೇಕು ಎಂದು ಶಿಫಾರಸು ಮಾಡಿತ್ತು. ಗುಣಾತ್ಮಕ ಶಿಕ್ಷಣಕ್ಕಾಗಿ ತಜ್ಞರು ನೀಡಿದ್ದ ಈ ವರದಿಯನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಹಾಗೂ ಜ್ಞಾನ ಆಯೋಗ ಪರಿಶೀಲನೆ ನಡೆಸಿತ್ತು. ಬಳಿಕ ವಿಶ್ವವಿದ್ಯಾಲಯವನ್ನು ಎರಡು ವಿವಿಗಳಾಗಿ ವಿಭಜಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸಿತ್ತು.

ಈಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರು ವಿವಿಯನ್ನು ಎರಡು ವಿವಿಗಳಾಗಿ ವಿಭಜಿಸಲಾಗುತ್ತಿದೆ ಎಂದು ಪ್ರಕಟಿಸಿದ್ದರು. ಹೊಸಕೋಟೆ ಬಳಿ ಉತ್ತರ ವಿವಿಯನ್ನು ಸ್ಥಾಪಿಸುವ ಪ್ರಸ್ತಾಪ ಇದೆ ಎಂದು ಅವರು ತಿಳಿಸಿದ್ದರು. ನೂತನ ವಿವಿ ವ್ಯಾಪ್ತಿಯಲ್ಲಿ ಸುಮಾರು 300 ಕಾಲೇಜುಗಳಿರುವ ನಿರೀಕ್ಷೆ ಇದೆ. ವಿವಿ ಆಡಳಿತದ ಮೇಲಿನ ಒತ್ತಡದ ಹೊರೆಯನ್ನು ಕಡಿಮೆ ಮಾಡಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಉನ್ನತ ಶಿಕ್ಷಣ ಇಲಾಖೆಯ ಈ ನಿರ್ಧಾರವನ್ನು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ.ಕೆ.ವಿ. ಆಚಾರ್ಯ ಸ್ವಾಗತಿಸಿದ್ದಾರೆ. `ಈಚಿನ ದಿನಗಳಲ್ಲಿ ವಿವಿ ವಿವಾದಗಳಿಂದಾಗಿ ಸುದ್ದಿಯಾಗಿತ್ತು. ರಾಜ್ಯ ಸರ್ಕಾರ ಈಗ ಉತ್ತಮ ತೀರ್ಮಾನ ತೆಗೆದುಕೊಂಡಿದೆ. ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಹೊಸ ವಿವಿ ಮಾದರಿಯಾಗಬೇಕು' ಎಂದು ಅವರು ಆಶಿಸಿದ್ದಾರೆ.

ವಿದ್ಯಾವಿಷಯಕ ಪರಿಷತ್ ಸದಸ್ಯ ಎಚ್. ಕರಣ್ ಕುಮಾರ್ ಪ್ರತಿಕ್ರಿಯಿಸಿ, `ಈಗಿನ ಪರಿಸ್ಥಿತಿಯಲ್ಲಿ ವಿವಿ ವಿಭಜನೆ ಉತ್ತಮ ನಿರ್ಧಾರ. ವಿಭಜಿಸುವುದರ ಜೊತೆಗೆ ಕಾಲೇಜುಗಳಿಗೆ ಸಂಯೋಜನೆ ನೀಡಲು ಹಾಗೂ ಕಾಲೇಜುಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲದಿದ್ದರೆ ವಿಭಜನೆ ಅರ್ಥ ಕಳೆದುಕೊಳ್ಳುತ್ತದೆ' ಎಂದರು.

ಡಾ. ಕೆ.ಆರ್. ವೇಣುಗೋಪಾಲ್ ಪರಿಚಯ
ಡಾ. ವೇಣುಗೋಪಾಲ್ ಅವರು ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಂಪ್ಯೂಟರ್ ಸೈನ್ಸ್ ಹಾಗೂ ಅರ್ಥಶಾಸ್ತ್ರ ವಿಭಾಗಗಳಲ್ಲಿ 35 ಕೃತಿಗಳನ್ನು ರಚಿಸಿದ್ದಾರೆ. ಅವರು ಎಂಜಿನಿಯರಿಂಗ್ ಶಿಕ್ಷಕರ ವಿಭಾಗದ ಮಾಜಿ ಶಾಖಾಧ್ಯಕ್ಷರು, ವಿದ್ಯಾವಿಷಯಕ ಪರಿಷತ್ತಿನ ಮಾಜಿ ಸದಸ್ಯರು ಹಾಗೂ ಸಿಂಡಿಕೇಟಿನ ಮಾಜಿ ಸದಸ್ಯರು.

`ನೂತನ ವಿವಿಯ ವಿನ್ಯಾಸದ ಬಗ್ಗೆ ಮಾತನಾಡಲು ಈಗ ಸೂಕ್ತ ಸಮಯ ಅಲ್ಲ. ಆರಂಭಿಕ ಹಂತದಲ್ಲಿ ವಿಶ್ವವಿದ್ಯಾಲಯದ ಆಡಳಿತ ಹಾಗೂ ತಜ್ಞರ ಜತೆಗೆ ಸಮಾಲೋಚನೆ ನಡೆಸಬೇಕಿದೆ. ಬಳಿಕ ನೂತನ ವಿವಿಯ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ಸಾಧ್ಯವಾಗುತ್ತದೆ. ಅರ್ಪಣಾ ಮನೋಭಾವದಿಂದ ಹಾಗೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇನೆ' ಎಂದು ಡಾ.ವೇಣುಗೋಪಾಲ್ ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT