ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಳ ತುದಿಯಲ್ಲಿ ಮಾಹಿತಿ: ಟೆಲಿಬ್ರಹ್ಮ ನೆರವು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಚಲನಚಿತ್ರಗಳ ಸಂಕ್ಷಿಪ್ತ ವಿವರಣೆ ನೀಡುವ ತುಣುಕುಗಳು (ಟ್ರೇಲರ್) ಚಿತ್ರಪ್ರೇಮಿಗಳಲ್ಲಿ  ಸಾಕಷ್ಟು ಕುತೂಹಲ ಕೆರಳಿಸುತ್ತವೆ. ಇದೇ ತತ್ವವನ್ನು ಗ್ರಾಹಕರು ಖರೀದಿಸುವ  ಸರಕುಗಳಿಗೂ ಅನ್ವಯಿಸಬಹುದು. ಈಗ ಜಾಹೀರಾತು ಲೋಕದ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಚಲನಚಿತ್ರ ಮಂದಿರ, ಟೆಲಿವಿಷನ್, ಇಂಟರ್‌ನೆಟ್  ದಾಟಿ ಈಗ ಮೊಬೈಲ್‌ಗಳಿಗೂ   ಲಗ್ಗೆ ಇಟ್ಟಿವೆ.  ಗ್ರಾಹಕರು ತಮ್ಮ ಬೆರಳ ತುದಿಯಲ್ಲಿಯೇ  ತಮಗೆ ಬೇಕಾದ ಮಾಹಿತಿ ದೊರೆಯಬೇಕು / ಪಡೆಯಬೇಕು ಎಂದು ಬಯಸುತ್ತಾರೆ. ಮೊಬೈಲ್ ಬಳಕೆದಾರರ ಇಂತಹ ಕನಸುಗಳನ್ನು ಟೆಲಿಬ್ರಹ್ಮ ಸಂಸ್ಥೆಯು ಸಾಕಾರಗೊಳಿಸುತ್ತಿದೆ.

ಬೆಂಗಳೂರು ಮೂಲದ ಟೆಲಿಬ್ರಹ್ಮ ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವು ಗ್ರಾಹಕರಿಗೆ ಬೇಕಾದ ಚಲನಚಿತ್ರ, ಜಾಹೀರಾತುಗಳ ಸಮಗ್ರ ವಿವರಗಳನ್ನೆಲ್ಲ ಮೊಬೈಲ್ ಪರದೆಯಲ್ಲಿಯೇ ಒದಗಿಸಲಿದೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಚಲನಚಿತ್ರಗಳ ಜಾಹೀರಾತು, ಗೋಡೆಗಳಿಗೆ ಅಂಟಿಸಿರುವ ಭಿತ್ತಿಚಿತ್ರಗಳನ್ನು ಮೊಬೈಲ್  ಕ್ಯಾಮೆರಾದಿಂದ ಸೆರೆ ಹಿಡಿದರೆ ಸಾಕು, ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮೊಬೈಲ್ ಪರದೆ ಮೇಲೆ ಮೂಡಲಿದೆ. ಮಾಹಿತಿ, ವಿಡಿಯೊ, ಡೌನ್‌ಲೋಡ್ ಉಚಿತವಾಗಿದ್ದರೂ, ಇಂಟರ್‌ನೆಟ್ ಬಳಕೆಗೆ ಮೊಬೈಲ್‌ನಲ್ಲಿನ ಹಣ ಖರ್ಚಾಗುತ್ತದೆ.

ಚಿತ್ರ ನಿರ್ಮಾಪಕರು, ಜಾಹೀರಾತು ಸಂಸ್ಥೆಗಳು, ವಿವಿಧ ಸರಕುಗಳ ತಯಾರಕರ ಜತೆಗಿನ ಒಪ್ಪಂದದ ಮೂಲಕ ಟೆಲಿಬ್ರಹ್ಮ ಸಂಸ್ಥೆಯು ಬಳಕೆದಾರರಿಗೆ ಸರಕು, ವಾಹನ, ಚಲನಚಿತ್ರ ಮುಂತಾದವುಗಳ ಸಮಗ್ರ ಮಾಹಿತಿ ಒದಗಿಸಲು ಮುಂದಾಗಿದೆ. ಸಂಸ್ಥೆಯ ಸರ್ವರ್‌ನಲ್ಲಿ ಇರುವ ಮಾಹಿತಿಯು ಮೊಬೈಲ್‌ಗಳಿಗೆ ಕೆಲವೇ ಕ್ಷಣಗಳಲ್ಲಿ ತಲುಪುವ ವ್ಯವಸ್ಥೆ ಇಲ್ಲಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿ, ಚಿತ್ರ, ಲೇಖನಗಳಿಗೂ ಇಂತಹ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ ಎಂದು  ಸಂಸ್ಥೆಯ ಸಿಇಒ ಸುರೇಶ್ ನರಸಿಂಹ ಹೇಳುತ್ತಾರೆ.

ಯಾವುದೇ ಒಂದು ಚಲನಚಿತ್ರ, ಕಾರ್ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಇಚ್ಛಿಸುವ ಗ್ರಾಹಕರು- ಆಯಾ ಉತ್ಪನ್ನದ ಜಾಹೀರಾತಿನ  ಚಿತ್ರವನ್ನು ಸೆರೆಹಿಡಿದರೆ ಅದರಿಂದ ಮೊಬೈಲ್‌ನಲ್ಲಿ ಆ ಬಗ್ಗೆ ಹೆಚ್ಚು ಮಾಹಿತಿ ದೊರೆಯಲಿದೆ.

ಇದಕ್ಕೆಲ್ಲ ಬ್ಲೂಟೂಥ್ ಮತ್ತು ಕ್ಯಾಮರಾ ಸೌಲಭ್ಯ ಇರುವ ಮೊಬೈಲ್ ಇದ್ದರೆ ಸಾಕು. ಮೊಬೈಲ್‌ಗೆ ಇಂಟರ‌್ಯಾಕ್ಟ್ ಸೌಲಭ್ಯವನ್ನು ಡೌನ್‌ಲೋಡ್ ಮಾಡಿಕೊಂಡು ಈ ಸೌಲಭ್ಯ ಬಳಸಬಹುದು. ಇಲ್ಲಿ ಮಾಹಿತಿ ಮಹಾಪೂರಕ್ಕೆ ಯಾವುದೇ ಮಿತಿ ಇಲ್ಲ.
 
ಸುದ್ದಿಗಳಿಗೆ ಸಂಬಂಧಿಸಿದಂತೆ ಮಾತ್ರ ಕೆಲಮಟ್ಟಿಗೆ ಮಿತಿ ವಿಧಿಸಬಹುದಾಗಿದೆ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶಿವಾ ಕೊಲಂಬಸ್ ಹೇಳುತ್ತಾರೆ. ತುಂಬ ಜನದಟ್ಟಣೆ ಇರುವ ಪ್ರದರ್ಶನ ಮೇಳದಲ್ಲಿ ಕಾರು, ಮತ್ತಿತರ ಸರಕುಗಳ ಮಾಹಿತಿಯನ್ನು ಮೊಬೈಲ್‌ನಲ್ಲಿಯೇ ಪಡೆಯಬಹುದು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಾಹನ ಮೇಳದಲ್ಲಿ  ಇಂತಹ ಸೌಲಭ್ಯವನ್ನು ಸಾವಿರಾರು ಜನರು ಬಳಸಿಕೊಂಡಿದ್ದಾರೆ. 

ದೇಶದ ಪ್ರಮುಖ ನಗರಗಳಲ್ಲಿನ ಸರ್ವ ಸರಕು ಮಳಿಗೆ ಮತ್ತಿತರ ಕಡೆಗಳಲ್ಲಿ ಸಂಸ್ಥೆ ಅಳವಡಿಸಿರುವ ಬ್ಲೂಫಿ (Blue -Fi) ಸಂಪರ್ಕ ಜಾಲದ ಮೂಲಕ ಮೊಬೈಲ್ ಬಳಕೆದಾರರು ಸರಕುಗಳ ಖರೀದಿಯಲ್ಲಿ ಹೊಸ ಅನುಭವವನ್ನೂ ಪಡೆಯಬಹುದಾಗಿದೆ. 

ಕ್ರೀಡಾಂಗಣ, ವಿಮಾನ ನಿಲ್ದಾಣ, ಷೋರೂಂ ಮತ್ತಿತರ ಕಡೆಗಳಲ್ಲಿ  ಮೊಬೈಲ್‌ಗಳಲ್ಲಿನ ಬ್ಲೂಟೂಥ್‌ಗೆ (bluetooth) ಚಾಲನೆ ನೀಡಿ  ಕೊಡುಗೆ, ರಿಯಾಯ್ತಿ, ಬಹುಮಾನ ಗೆಲ್ಲುವ ಅವಕಾಶ ಮತ್ತಿತರ ಸೌಲಭ್ಯಗಳ ಮಾಹಿತಿಯನ್ನೂ ಪಡೆಯಬಹುದಾಗಿದೆ.

 intaract.mobi  ತಾಣಕ್ಕೆ ಭೇಟಿ ನೀಡಿ ಈ ಸೌಲಭ್ಯ ಡೌನ್‌ಲೋಡ್ ಮಾಡಿಕೊಳ್ಳಬೇಕು.  ಆನಂತರ ಮೊಬೈಲ್‌ನಲ್ಲಿನ ಇಂಟರ‌್ಯಾಕ್ಟ್ ಬಿಂಬದ ಮೇಲೆ ಬೆರಳು ಒತ್ತಿದಾಗ ಮೊಬೈಲ್‌ನ ಕ್ಯಾಮೆರಾ ಚಾಲನೆಗೊಳ್ಳುತ್ತದೆ.

ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಯಾವುದೇ ಭಾಷೆಯ ಚಲನಚಿತ್ರದ ಜಾಹೀರಾತಿನ ಮೇಲೆ ಇಲ್ಲವೇ ಗೋಡೆ ಮೇಲಿನ ಭಿತ್ತಿಪತ್ರ ಚಿತ್ರ ತೆಗೆಯುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ವಿಡಿಯೊ ಮತ್ತಿತರ ಮಾಹಿತಿ ಮೊಬೈಲ್‌ನಲ್ಲಿ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT