ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ದಾರಿಯಲಿ ಕುಂಚದ ನಡಿಗೆ

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಕಲೆ ದೇವರು ಕೊಟ್ಟ ವರ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕು ಎನ್ನುವ ಧ್ಯೇಯ ಚಿತ್ರ ಕಲಾವಿದೆ ಆಶಾ ವಿವೇಕ್‌ ಅವರದು.

ಬಾಲ್ಯದಿಂದಲೇ ಚಿತ್ರಕಲೆಯ ಗೀಳು ಬೆಳೆಸಿಕೊಂಡಿರುವ ಆಶಾ ಅವರ ಕಲಾಕೃತಿಗಳು ಮೇ 27, 28 ಮತ್ತು 29 ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಳ್ಳಲಿವೆ.

ವೃತ್ತಿಪರ ಕಲಾವಿದೆಯಾಗಿ ಬೆಳೆಯುವ ಕನಸು ಹೊತ್ತಿರುವ ಅವರು ತಮ್ಮ ಕಲಾ ಪಯಣ ಮತ್ತು ಪ್ರಸ್ತುತ ಪ್ರದರ್ಶನದ ಕುರಿತು ಇಲ್ಲಿ ಮಾತನಾಡಿದ್ದಾರೆ. ಕಲೆಗಾಗಿ ಸಮಯ ಮೀಸಲು. ಶಾಲೆ ಕಲಿಯುತ್ತಿರುವಾಗಲೇ ಚಿತ್ರ ಬಿಡಿಸುವುದನ್ನು ಕರಗತ  ಮಾಡಿಕೊಂಡಿದ್ದೆ. ಆದರೆ ತಂದೆಯವರು ಮೊದಲು ವಿದ್ಯಾಭ್ಯಾಸದ ಕಡೆ ಗಮನ ಕೊಡು ನಂತರ ಇವೆಲ್ಲ ಎಂದು ಹೇಳುತ್ತಿದ್ದರು. ಆದರೂ ಮನಸ್ಸಿನ ಸೆಳೆತ ಮಾತ್ರ ಚಿತ್ರಕಲೆ ಕಡೆಗೇ ಇತ್ತು.

ಪದವಿ  ನಂತರ ಮದುವೆ. ಆಮೇಲೆ ಗಂಡ, ಮಕ್ಕಳು, ಅತ್ತೆ–ಮಾವ ಹೀಗೆ ಸಂಸಾರದ ಜಂಜಾಟದಲ್ಲಿ ಮುಳುಗಿದ್ದೆ. ಆ ಎಲ್ಲ ಜವಾಬ್ದಾರಿಗಳ ನಡುವೆಯೂ ಕಲೆಗಾಗಿ ಸಮಯ ಮೀಸಲಿಡಲು ಮರೆಯಲಿಲ್ಲ.

ಮನೆಗೆ ಸಮೀಪವೇ ಇದ್ದ ಸಂಸ್ಥೆಯೊಂದರಿಂದ ರಷ್ಯಾ ಶೈಲಿ ಬೊಂಬೆಗಳ ತಯಾರಿಕೆ ಕಲಿತುಕೊಂಡೆ. ಬಾಣಂತನಕ್ಕೆಂದು ತವರಿಗೆ ಹೋದಾಗ ಚಾರ್ಕೋಲ್‌ ಚಿತ್ರಕಲಾ ವಿಧಾನ ತಿಳಿದುಕೊಂಡೆ. ಪತಿಯ ಉದ್ಯೋಗದ ನಿಮಿತ್ತ ಕೊಯಮತ್ತೂರಿನಲ್ಲಿ ಐದು ವರ್ಷ ನೆಲೆಸಬೇಕಾಯಿತು. ಅಲ್ಲಿ ನನ್ನ ಆಸಕ್ತಿಗೆ ಉತ್ತಮ ಭೂಮಿಕೆ ದೊರೆಯಿತು.

ಕಲಾಶಾಲೆಗೆ ಪ್ರವೇಶ
ಕಲೆಯ ಬಗೆಗಿನ ನನ್ನ ಚಡಪಡಿಕೆ ಗಮನಿಸಿದ್ದ ಪತಿ ವಿವೇಕ್ ಚಿತ್ರಕಲಾ ಶಾಲೆಗೆ ಸೇರಿ ಹೆಚ್ಚಿನ ತರಬೇತಿ ಪಡೆದುಕೊಳ್ಳಲು ಸೂಚಿಸಿದರು. ರವಿರಾಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫೈನ್‌ ಆರ್ಟ್ಸ್‌ಗೆ ಸೇರಿದೆ. 2007ರಲ್ಲಿ ಅಲ್ಲಿನ ಲಲಿತಾ ಕಲಾಕ್ಷೇತ್ರದಲ್ಲಿ ವಿವಿಧ ಕಲಾವಿದರೊಂದಿಗೆ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದೆ. ಆಗ ಗುರುಗಳಾದ ಸಿ.ವಿ.ರಾಜನ್‌ ಅವರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರು.

ನಂತರ 2009–10ರಲ್ಲಿ ಶಿವೇಶ್‌ ಆಟಿಸಂ ಕೇಂದ್ರದಲ್ಲಿ ಸ್ವತಂತ್ರವಾಗಿ ಪ್ರದರ್ಶನ ಏರ್ಪಡಿಸಿದ್ದೆ. ನಂತರ ಕೊಯಮತ್ತೂರಿನಿಂದ ಗುಡಗಾಂವ್‌ಗೆ ವರ್ಗಾವಣೆಯಾಗಿ ಹೋದೆವು. ನಾವು ಮನೆ ಮಾಡಿದ್ದ ಸ್ಥಳದಲ್ಲಿ ದಕ್ಷಿಣ ಭಾರತೀಯರು ಬಹುತೇಕರಿದ್ದರು.

ನಾನು ಬಿಡಿಸಿದ ಚಿತ್ರಗಳನ್ನು ಗಮನಿಸಿದ್ದ ಅವರು ಕಲಿಸುವಂತೆ ಕೇಳಿಕೊಂಡರು. ನಾವು ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಧಾರೆ ಎರೆಯುವುದರ ಸಂತೋಷವೇ ಬೇರೆ. ಗುಡಗಾಂವ್‌ನಲ್ಲಿ ಸುಮಾರು 15–20 ಜನರಿಗೆ ತರಬೇತಿ ನೀಡಿದ್ದೇನೆ. ಬೆಂಗಳೂರಿಗೆ ಬಂದ ನಂತರವೂ ಕಲಾ ಶಿಕ್ಷಣ ಮುಂದುವರಿದಿದೆ. ಈಗಲೂ 8ರಿಂದ 10 ಮಂದಿ ಬರುತ್ತಿದ್ದಾರೆ.

ಪರಿಸರ ನನ್ನ ಆಸಕ್ತಿ
ನನ್ನ ಚಿತ್ರಗಳ ವಸ್ತುವಿಷಯ ಪರಿಸರ. ಅಭಿವೃದ್ಧಿ ಕೆಲಸಗಳ ನೆಪದಲ್ಲಿ ಮರಗಳ ಕಟಾವು ಹೆಚ್ಚಿದ್ದು, ಬೆಂಗಳೂರು ನಗರ ಅಪಾಯದ ಅಂಚಿಗೆ ದೂಡಲ್ಪಟ್ಟಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದೂ ಇದರ ಉದ್ದೇಶ. ಪ್ರವಾಸಕ್ಕೂ ಉತ್ತಮ ಪರಿಸರದ ಊರುಗಳೇ ನಮ್ಮ ಆಯ್ಕೆ. ಚಿತ್ರಗಳನ್ನು ನೋಡುವವರಿಗೆ ಅವರು ಅದೇ ಪರಿಸರದಲ್ಲಿ ನಿಂತ ಅನುಭವ  ಮೂಡಿಸುವುದು ನನ್ನ ಗುರಿ.

ನನ್ನ ಕಲಾಕೃತಿಯನ್ನು ತೆಗೆದುಕೊಂಡು ಹೋಗಿದ್ದ ಸ್ನೇಹಿತರೊಬ್ಬರು ದಿನವಿಡೀ ಆಸ್ಪತ್ರೆಯಲ್ಲಿ ಒತ್ತಡದಲ್ಲಿ ಕೆಲಸ ಮಾಡಿರುತ್ತೇವೆ. ಸಂಜೆ ಬಂದು ನಿಮ್ಮ ಕಲಾಕೃತಿ ಮುಂದೆ ಕುಳಿತಾಗ ಮನಸ್ಸಿಗೆ ಶಾಂತಿ ಸಿಗುತ್ತದೆ. ಉಲ್ಲಸಿತರಾಗುತ್ತೇವೆ. ಆ ಪರಿಸರದೊಳಗೆ ಲೀನವಾದ ಭಾವ ತೋರುತ್ತದೆ ಎಂದಾಗ ಸಾರ್ಥಕ್ಯದ ಭಾವ ಮೂಡಿತ್ತು.

ಮಾರಾಟಕ್ಕೆ ಇಟ್ಟಿಲ್ಲ
ನಾನು ಈವರೆಗೆ ಯಾವುದೇ ಕಲಾಕೃತಿಯನ್ನು ಮಾರಾಟಕ್ಕೆ ಇಟ್ಟಿಲ್ಲ. ಕಲಾಕೃತಿಗಳು ನನ್ನ ಮಗು ಇದ್ದಂತೆ. ಅವನ್ನು ಮಾರಾಟಕ್ಕೆ ಇಡಲಾರೆ. ನಾನು ರೂಪಿಸಿದ ಕಲಾಕೃತಿಗಳ ಬಗ್ಗೆ ಅವರಿವರಿಂದ ಕೇಳಿ, ತಿಳಿದುಕೊಂಡ ಅನೇಕರು ಇಷ್ಟಪಟ್ಟು ಖರೀದಿಸಿದ್ದಾರೆ.

ಪತಿಯ ಪಾತ್ರ ದೊಡ್ಡದು
ನನ್ನ ಬೆಳವಣಿಗೆಯಲ್ಲಿ ಪತಿ ವಿವೇಕ್‌ ಪಾತ್ರ ಬಹು ದೊಡ್ಡದರು. ಮದುವೆಯಾದ ವ್ಯಕ್ತಿ ಬೇರೆ ಊರಿಗೆ ಹೋಗಿ ವಾಪಸ್ ಬರುವಾಗ ತನ್ನ ಪತ್ನಿಗೆಂದು ಸೀರೆ ತರುವುದು ರೂಢಿ. ಆದರೆ ನನ್ನ ಪತಿ ಮಾತ್ರ ನನಗೆ ಬಣ್ಣದ ಡಬ್ಬಿಗಳು ಮತ್ತು ಬ್ರಷ್‌ ತರುತ್ತಿದ್ದರು.  ಮಗಳು ನಿಶಿತಾ ಸಹ ಎಂದಿಗೂ ಕರ್ತವ್ಯಕ್ಕೆ ಅಡ್ಡಿ ಬಂದವಳಲ್ಲ. 

ಪ್ರದರ್ಶನದ ವಿವರಗಳು
ಬೆಳಕಿನ ವಿಶೇಷ ವಿನ್ಯಾಸವೇ ಆಶಾ ಅವರ ಕಲಾಕೃತಿಗಳ ಮೂಲ ಶಕ್ತಿ.  ಅವರ ಕಲಾಕೃತಿಗಳ ಪ್ರದರ್ಶನದ ಹೆಸರೂ ‘ಬೆಳಕು’. ನಾಳೆ (ಮೇ 27)ರಂದು ಚಿತ್ರಕಲಾ ಪರಿಷತ್ತಿನಲ್ಲಿ ಆರಂಭವಾಗುವ ಈ ಪ್ರದರ್ಶನಕ್ಕೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷೆ ರಾಣಿ ಸತೀಶ್‌ ಅವರು ಚಾಲನೆ ನೀಡುವರು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಲಾಕೃತಿಗಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತವೆ. ವಿಳಾಸ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ.
ಹೆಚ್ಚಿನ ಮಾಹಿತಿಗೆ: 9980930456

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT