ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹೊಳೆಯಲ್ಲಿ ಮಿಂಚಿದ ಶಿಬಿರ

Last Updated 25 ಜನವರಿ 2012, 5:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನಗರದ ತಾರಿಹಾಳ ಬೈಪಾಸ್ ಬಳಿ ಏರ್ಪಡಿಸಿರುವ ಹಿಂದು ಶಕ್ತಿ ಸಂಗಮದ ಸಿದ್ಧತೆಗಳು ಪೂರ್ಣಗೊಂಡಿದ್ದು, ವೇದಿಕೆಗಳಿಗೆ ಅಂತಿಮ ಟಚ್ ಕೊಡುವ ಕೆಲಸ ಭರದಿಂದ ನಡೆದಿದೆ. `ಸಂಘಮೂಲಂ ಮಹಾಬಲಂ~ ಎಂಬುದು ಸಮಾವೇಶದ ಧ್ಯೇಯ ವಾಕ್ಯವಾಗಿದೆ.

ಶಿಬಿರದಲ್ಲಿ ಮಂಗಳವಾರ ರಾತ್ರಿ ಸಾವಿರಾರು ವಿದ್ಯುತ್ ದೀಪಗಳು ಒಮ್ಮೆಲೆ ಬೆಳಗಿದಾಗ ಸೇರಿದ್ದ ಸ್ವಯಂಸೇವಕರು ಸಂಭ್ರಮದಿಂದ ಅಲ್ಲಿಯ ವಾತಾವರಣವನ್ನು ಕಣ್ತುಂಬಿಕೊಂಡರು. ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತದ ಕಾರ್ಯವಾಹ ಅರವಿಂದ ದೇಶಪಾಂಡೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಂಸದ ಪ್ರಹ್ಲಾದ ಜೋಶಿ, ಆರ್‌ಎಸ್‌ಎಸ್ ಮುಖಂಡರಾದ ಶಂಕರನಾಂದ, ರಾಘವೇಂದ್ರ ಕಾಸರಗೋಡು ಮತ್ತಿತರರು ಸಿದ್ಧತೆಗಳನ್ನು ಪರಿಶೀಲಿಸಿದರು.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನೂ ಸಮಾವೇಶಕ್ಕೆ ಕರೆತರಲು ಯತ್ನಿಸಲಾಗುತ್ತಿದ್ದು, ಸಂಘದ ಸ್ವಯಂ ಸೇವಕರು ನಗರದ 20ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ಮತ್ತು ಪ್ರಾಚಾರ್ಯರನ್ನು ಭೇಟಿಮಾಡಿ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ದೇಶ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಪ್ರದರ್ಶಿನಿಯನ್ನು ವಿದ್ಯಾರ್ಥಿಗಳಿಗೆ ತೋರಿಸುವುದು ಸಂಘಟಕರ ಮುಖ್ಯ ಉದ್ದೇಶವಾಗಿದೆ.

ಋಷಿ-ಮುನಿಗಳ ಕಾಲದಿಂದ ಇಂದಿನ ದಿನದವರೆಗೆ ಭಾರತ ಬೆಳೆದುಬಂದ ಬಗೆಯನ್ನು ಪ್ರದರ್ಶಿನಿಯಲ್ಲಿ ತೋರಿಸಲಾಗುತ್ತದೆ. ಸಮ್ಮೇಳನದ ಯಶಸ್ಸಿಗಾಗಿ ಸ್ವಯಂಸೇವಕರು ಹಗಲು-ರಾತ್ರಿ ಶ್ರಮಿಸುತ್ತಿದ್ದು, ಶಿಬಿರದ ಎಲ್ಲ ನಗರಗಳಲ್ಲಿ ಮಂಗಳವಾರ ಭಗವಾ ಧ್ವಜಗಳನ್ನು ಹಾರಿಸಲಾಯಿತು. ಶಿಬಿರದ ಸಿದ್ಧತೆಗಳನ್ನು ನೋಡಲು ನಗರದಿಂದ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.

ಸಂಘದ ನೇತಾರರು, ಸ್ವಾತಂತ್ರ್ಯ ಸೇನಾನಿಗಳು, ದೇಶಪ್ರೇಮಿಗಳ ಭಾವಚಿತ್ರಗಳು ಶಿಬಿರದ ತುಂಬಾ ರಾರಾಜಿಸುತ್ತಿವೆ. 140 ಎಕರೆ ಪ್ರದೇಶವೆಲ್ಲ ಕೇಸರಿಮಯವಾಗಿ ಪರಿವರ್ತನೆಯಾಗಿದೆ. ಸಮವಸ್ತ್ರ ಧರಿಸಿದ ಕಾರ್ಯಕರ್ತರು ಗಡಿಬಿಡಿಯಿಂದ ಓಡಾಡುತ್ತಿದ್ದಾರೆ. ಕರ್ನಾಟಕದ ಆರ್‌ಎಸ್‌ಎಸ್ ಪ್ರಮುಖರೆಲ್ಲ ಶಿಬಿರದಲ್ಲೇ ಬೀಡುಬಿಟ್ಟಿದ್ದು, ಸ್ವಯಂ ಸೇವಕರಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ.

ಶಿಬಿರದಲ್ಲಿ 6 ನಗರಗಳನ್ನು ನಿರ್ಮಿಸಲಾಗಿದ್ದು, ಒಂದೊಂದು ಜಿಲ್ಲೆಗೆ ಒಂದೊಂದು ನಗರವನ್ನು ಮೀಸಲಿಡಲಾಗಿದೆ. ಪ್ರತಿ ನಗರಕ್ಕೂ ಒಬ್ಬೊಬ್ಬ ದೇಶಪ್ರೇಮಿ ನಾಯಕನ ಹೆಸರು ಇಡಲಾಗಿದೆ.

ಆಯಾ ನಗರದ ಮುಂದೆ ಅವರ ಭಾವಚಿತ್ರದ ಕಟೌಟ್ ನಿಲ್ಲಿಸಲಾಗಿದ್ದು, ಅದರ ಕೆಳಗೆ ಅವರ ಜೀವನ ಚರಿತ್ರೆಯನ್ನು ಬರೆಯಲಾಗಿದೆ. ನಗರಗಳ ವಿವಿರ ಈ ಕೆಳಗಿನಂತಿದೆ:
ಗುಲ್ಬರ್ಗ-ಯಾದಗಿರಿ (ರಾಜಾ ವೆಂಕಟಪ್ಪ ನಗರ), ಬೀದರ್ (ಭಾಯಿ ಸಾಹೇಬ್ ಸಿಂಗ್‌ನಗರ), ಕಾರವಾರ (ಹಕ್ಕ-ಬುಕ್ಕನಗರ), ಶಿರಸಿ (ಕದಂಬ ಮಯೂರ ವರ್ಮನಗರ), ಕೇಂದ್ರ ಶಿಬಿರ (ವಿದ್ಯಾರಣ್ಯನಗರ, ಈ ನಗರದಲ್ಲಿ ಆರ್‌ಎಸ್‌ಎಸ್ ವರಿಷ್ಠ ಮೋಹನ್ ಭಾಗವತ್ ಸೇರಿದಂತೆ ಪ್ರಮುಖರು ವಾಸಿಸಲಿದ್ದಾರೆ), ಬೇರೆ ರಾಜ್ಯ ಪ್ರತಿನಿಧಿಗಳ ಶಿಬಿರ (ಶಿವಪ್ಪ ನಾಯಕನಗರ).

ಬಾಗಲಕೋಟೆ-1 (ಸಿಂಧೂರ ಲಕ್ಷ್ಮಣನಗರ), ಬಾಗಲಕೋಟೆ-2 (ಇಮ್ಮಡಿ ಪುಲಕೇಶಿನಗರ), ಚಿಕ್ಕೋಡಿ (ಹೊಯ್ಸಳನಗರ), ಬೆಳಗಾವಿ (ಸಂಗೊಳ್ಳಿ ರಾಯಣ್ಣನಗರ), ವಿಜಾಪುರ (ನೃಪತುಂಗನಗರ), ಧಾರವಾಡ ಗ್ರಾಮಾಂತರ (ಮುಂಡರಗಿ ಭೀಮರಾಯನಗರ), ಹುಬ್ಬಳ್ಳಿ ಶಹರ (ಮೈಲಾರ ಮಹಾದೇವನಗರ), ಗದಗ-ಹಾವೇರಿ (ನರಗುಂದ ಬಾಬಾಸಾಹೇಬನಗರ), ಬಳ್ಳಾರಿ (ಕೃಷ್ಣದೇವರಾಯನಗರ), ರಾಯಚೂರು, ಕೊಪ್ಪಳ (ಕುಮಾರರಾಮನಗರ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT