ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗದ ಹೈಮಾಸ್ಟ್ ದೀಪ: ಆರೋಪ

Last Updated 19 ಜನವರಿ 2011, 7:05 IST
ಅಕ್ಷರ ಗಾತ್ರ

ಚಿಂತಾಮಣಿ: ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಹಾಗೂ ರಸ್ತೆ ಮಧ್ಯದಲ್ಲಿ ಅಳವಡಿಸಿರುವ ವಿದ್ಯುತ್ ಸಂಪರ್ಕದ ಕಾಮಗಾರಿ ಕಳಪೆಯಿಂದ ಕೂಡಿದ್ದು, ದೀಪಗಳು ಬೆಳಗುವುದೇ ಇಲ್ಲ ಎಂದು ನಗರಸಭೆ ಸದಸ್ಯರು ಆರೋಪಿಸಿದರು.

ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಎಲ್ಲ ಸದಸ್ಯರು ಪಕ್ಷಾತೀತವಾಗಿ ಹೈಮಾಸ್ಟ್ ಮತ್ತು ರಸ್ತೆ ವಿಭಜಕಗಳಲ್ಲಿ ಅಳವಡಿಸಿರುವ ವಿದ್ಯುತ್ ಸಂಪರ್ಕವು ಮುಕ್ತಾಯವಾಗಿ ನಗರಸಭೆಗೆ ಹಸ್ತಾಂತರಿಸುವ ಮೊದಲೇ ಅಧಿಕಾರಿಗಳು ಬಿಲ್‌ಗಳನ್ನು ಪಾವತಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಯಾರ ಅನುಮತಿ ಪಡೆದು ಬಿಲ್ ಪಾವತಿಸಲಾಗಿದೆ ಎಂದು ಪ್ರಶ್ನಿಸಿದರು.

ಸಭೆ ಗಮನಕ್ಕೂ ತರದೆ ಕಾಮಗಾರಿ ಮುಕ್ತಾಯವಾಗಿ ಅಧಿಕೃತವಾಗಿ ಸಂಪರ್ಕವನ್ನು ಹಾಗೂ ದೀಪಗಳನ್ನು ನಗರಸಭೆಗೆ ಹಸ್ತಾಂತರಿಸದೆ ಬಿಲ್‌ಗಳನ್ನು ಪಾವತಿ ಮಾಡಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪೌರಾಯುಕ್ತ ರಾಮೇಗೌಡ ಸಮಜಾಯಿಷಿ ನೀಡಿ ತಾನು ಇಲ್ಲಿಗೆ ಬರುವುದಕ್ಕೆ ಮೊದಲೇ ಬಿಲ್‌ಗಳ ಪಾವತಿಯಾಗಿದೆ. ಕಡತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನೆಕ್ಕುಂದಿಪೇಟೆ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ನೀರಿನ ಟ್ಯಾಂಕ್‌ಗಳು ಶಿಥಿಲಗೊಂಡಿದ್ದು, ಒಳಗಡೆ ಕಬ್ಬಿಣದ ಕಂಬಿಗಳು ತುಕ್ಕು ಹಿಡಿದಿದ್ದು ನೀರು ಕಲುಷಿತಗೊಳ್ಳುತ್ತಿದೆ. ಮೇಲ್ಛಾವಣಿಯ ಸಿಮೆಂಟ್ ಸಹ ಕಿತ್ತು ಬರುತ್ತಿದ್ದು ನೀರಿನಲ್ಲಿ ಬೀಳುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ;  ಕ್ರಮ ಕೈಗೊಂಡಿಲ್ಲ ಎಂದು ಅಬ್ಬುಗುಂಡು ಶ್ರೀನಿವಾಸರೆಡ್ಡಿ ಟೀಕಿಸಿದರು.

ನಗರದಲ್ಲಿರುವ ಅನಧಿಕೃತ ಮನೆಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ಸದಸ್ಯರು ಅಕ್ರಮ ಸಕ್ರಮ ಅಥವಾ ದಂಡ ವಿದಿಸುವುದು ಮತ್ಯಾವುದಾದರೂ ರೀತಿಯಲ್ಲಿ ಅವುಗಳನ್ನು ನಗರಸಭೆಗೆ ಸೇರಿಸಿಕೊಳ್ಳಬೇಕು ಎಂದು ಸೂಚಿಸಿದರು. ಪೌರಾಯುಕ್ತ ರಾಮೇಗೌಡ ಉತ್ತರಿಸಿ ಅಕ್ರಮ-ಸಕ್ರಮದ ಬಗ್ಗೆ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಕಾನೂನಿನಲ್ಲಿ ಒಂದಕ್ಕೆ ಎರಡರಷ್ಟು ತೆರಿಗೆಯನ್ನು ಪಡೆಯುವುದಕ್ಕೆ ಅವಕಾಶವಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಅನಧಿಕೃತವಾಗಿ ಬರೆಯುತ್ತಿರುವ ಗೋಡೆ ಬರಹ ತಡೆಗಟ್ಟುವುದು, ನಗರಸಭೆಯಿಂದಲೇ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಚಿತ್ರಗಳನ್ನು ಮತ್ತು ಬರಹಗಳನ್ನು ಬರೆಸಲು ತೀರ್ಮಾನಿಸಲಾಯಿತು. ನೀರು ಸರಬರಾಜು, ಬೀದಿ ದೀಪ, ಹಾಗೂ ಒಳಚರಂಡಿ ವಾರ್ಷಿಕ ನಿರ್ವಹಣೆ ಮಾಡಲು ಟೆಂಡರ್ ಕರೆಯುವ ಬಗ್ಗೆಯೂ ಅನುಮೋದಿಸಲಾಯಿತು.

ನಗರಸಭೆಯ ಆರ್ಥಿಕ  ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿ ಸಿಬ್ಬಂದಿ ವರ್ಗದವರು ಸೇರಿ ಜನವರಿ 21ರಿಂದ ಮಾರ್ಚ್ 31ರವರೆಗೆ ವಸೂಲಾತಿ ಮಾಸಾಚರಣೆ ನಡೆಸಲು ತೀರ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷೆ ಎನ್.ನಾಗರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಎಂ.ಸಿ.ಸುಧಾಕರ್, ಉಪಾಧ್ಯಕ್ಷ ಚೌಡರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT