ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಪರಿಹಾರಕ್ಕೆ ಆಗ್ರಹ: ಜಗನ್ ಉಪವಾಸ ಆರಂಭ

Last Updated 22 ಡಿಸೆಂಬರ್ 2010, 10:05 IST
ಅಕ್ಷರ ಗಾತ್ರ

ವಿಜಯವಾಡ (ಪಿಟಿಐ): ಆಂಧ್ರಪ್ರದೇಶದಲ್ಲಿ ಈ ತಿಂಗಳ ಆರಂಭದಲ್ಲಿ ಬಿದ್ದ ಭಾರಿ ಮಳೆಗೆ ಬೆಳೆಯನ್ನು ಕಳೆದುಕೊಂಡಿರುವ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಲು ಮಾಜಿ ಸಂಸದ ಜಗನ್‌ಮೊಹನ್ ರೆಡ್ಡಿ 48 ಗಂಟೆಗಳ ಕಾಲದ ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ಬೆಳಿಗ್ಗೆ ಆರಂಭಿಸಿದರು.

ಕಡಪಾ ಕ್ಷೇತ್ರದ ಮಾಜಿ ಸಂಸದ ರೆಡ್ಡಿ ಅವರು 37 ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕೃಷ್ಣಾ ನದಿಯ ತಟದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಅನೇಕ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಲು ಸ್ಥಳಕ್ಕೆ ಆಗಮಿಸಿದ್ದರು.
ಇದಲ್ಲದೆ ಗುಂಟೂರು, ಕೃಷ್ಣ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಿಂದ ಆಗಮಿಸಿದ್ದ ಜನರು ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.

ನಾಯ್ಡು ಆರೋಗ್ಯ ಗಂಭೀರ 
 ತೊಂದರೆಗೆ ಒಳಗಾಗಿರುವ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ.

ಆಹಾರವನ್ನು ಸ್ವೀಕರಿಸಲು ನಾಯ್ಡು ನಿರಾಕರಿಸುತ್ತಿರುವುದರಿಂದ ದೇಹಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ಅವರ ಕುಟುಂಬದ ವೈದ್ಯ ಡಾ. ಸೊಮರಾಜು ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹವನ್ನು ಇನ್ನೂ ಮುಂದುವರಿಸಿದರೆ ಜೀವದ ಮೇಲೆ ಅಪಾಯ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಸ್ತೆ ತಡೆ: ಟಡಿಪಿ ಮತ್ತು ಎಡಪಕ್ಷಗಳ ಕಾರ್ಯಕರ್ತರು ಅನೇಕ ಕಡೆಗಳಲ್ಲಿ ರಸ್ತೆ ತಡೆ ಚಳವಳಿ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕೃಷ್ಣಾ ಜಿಲ್ಲೆಯ ನಂದಿಗಾಮದಲ್ಲಿ ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿದ ಕಾರ್ಯಕರ್ತರು ನೌಕರರಿಗೆ ಕಾರ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡಿದರು.

  ನಾಯ್ಡು ಅವರನ್ನು ಸೇರಿಸಲಾಗಿರುವ ನಿಜಾಮ ವೈದ್ಯಕೀಯ ವಿಜ್ಞಾನ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಟಿಡಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಕೇಂದ್ರದಿಂದ ಪರಿಹಾರ
ನವದೆಹಲಿ (ಪಿಟಿಐ): ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡಿರುವ ಆಂಧ್ರಪ್ರದೇಶದ ರೈತರಿಗೆ ಕೇಂದ್ರ ಸರ್ಕಾರ 400 ಕೋಟಿ ರೂಪಾಯಿ ಪರಿಹಾರ ಪ್ರಕಟಿಸಿದೆ.
ತಕ್ಷಣದ ಪರಿಹಾರವಾಗಿ 400 ಕೋಟಿ ಬಿಡುಗಡೆ ಮಾಡುತ್ತಿದ್ದು, ಕೇಂದ್ರದ ತಂಡ ಬೆಳೆ ನಷ್ಟದ ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನಿ ತಮ್ಮನ್ನು ಭೇಟಿ ಮಾಡಿದ ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT