ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾ.ಪಂ ನೌಕರರ ಪ್ರತಿಭಟನೆ

Last Updated 13 ಡಿಸೆಂಬರ್ 2013, 7:42 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಗುರು­ವಾರ ನಗರದ ಶಾಸ್ತ್ರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ ತಳಕ, ‘ರಾಜ್ಯ ಸರ್ಕಾ­ರವು ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆ ನೀಡುತ್ತಿಲ್ಲ. ನೌಕರರೂ ನಿವೃತ್ತಿ ಹೊಂದುತ್ತಿದ್ದರೂ, ಅವರಿಗೆ ಉಪದಾನ ನೀಡುತ್ತಿಲ್ಲ. ಜನಶ್ರೀ ಯೋಜನೆ, ಭವಿಷ್ಯ ನಿಧಿ ಯೋಜನೆ ಜಾರಿ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ನೌಕರರ ಖಾತೆಗೆ ಶಾಸನಬದ್ಧ ಹಣ ಜಮಾ ಮಾಡಿ, ವೇತನ ನೀಡಲು ಆದೇಶ ನೀಡಿದ್ದರೂ, ಸಮಪರ್ಕವಾಗಿ ಖಾತೆಗೆ ಹಣ ಜಮಾ ಮಾಡದೇ ಬೇರೆಯದಕ್ಕೆ ಬಳಸಿಕೊಂಡು, 15–-20 ತಿಂಗಳಿಗಿಂತ ಹೆಚ್ಚಿಗೆ ವೇತನ ಸಿಗದೇ ನೌಕರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪಂಚಾಯಿತಿ ಎಲ್ಲ ನೌಕರರಿಗೆ ಸಮವಸ್ತ್ರ ನೀಡಬೇಕು. ಪಂಪ್ ಆಪರೇಟರ್‌ಗಳಿಗೆ ಸೈಕಲ್, ಬ್ಯಾಟರಿ ಒದಗಿಸಬೇಕು. ತಾಲ್ಲೂಕು ಪಂಚಾ­ಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಇ.ಪಿ.ಎಫ್. ಖಾತೆ ಪ್ರಾರಂಭಿಸುವಂತೆ ನಿರ್ದೇಶನ ನೀಡಬೇಕು. ಬಾಕಿ ಇರುವ ಅನುಕಂಪ ನೇಮಕಾತಿ ಮೃತ ಮತ್ತು ನಿವೃತ್ತಿ ನೌಕರರಿಗೆ ಗ್ರಾಚ್ಯೂಟಿ ಇತರೇ ಸೌಲಭ್ಯ ನೀಡಬೇಕು. ಕಂಪ್ಯೂಟರ್ ಆಪರೇಟರ್‌ಗಳನ್ನು ಸೆಕ್ಷನ್ 113ರ ಪ್ರಕಾರ ಪಂಚಾಯಿತಿ ನೌಕರರೆಂದು ಪರಿಗಣಿಸಬೇಕು.

ಎಸ್ಸೆಸ್ಸೆಲ್ಸಿ ಪಾಸಾಗಿ, ಸತತ 5 ವರ್ಷ ಸೇವೆ ಸಲ್ಲಿಸಿದ ನೀರು ಸಿಬ್ಬಂದಿಗಳಿಗೆ ಬಿಲ್‌ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ತಾಲ್ಲೂಕು ಮಟ್ಟದ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. 8 ವರ್ಷಗಳ ಸೇವೆ ಸಲ್ಲಿಸಿದ ಪಿಯುಸಿ ಪಾಸಾದ ಬಿಲ್‌ ಕಲೆಕ್ಟರ್‌ಗಳಿಗೆ ಸಾಮಾನ್ಯ ಪಟ್ಟಿ ತಯಾರಿಸಿ ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು. ಈಗಾಗಲೇ ಬಿಲ್‌ ಕಲೆಕ್ಟರ್‌ಗಳ ಮೂಲ ದಾಖಲೆಗಳು ಪರಿಶೀಲಿಸಿದ ವಿವರಗಳ ಕಡತ ತಮ್ಮಲ್ಲಿದ್ದು, ಅರ್ಹ ನೌಕರರನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಪ್ರಕಟಿಸಬೇಕು. ಬಿಲ್‌ ಕಲೆಕ್ಟರ್‌ ವೃಂದದಿಂದ ಲೆಕ್ಕ ಸಹಾಯಕ ಹಾಗೂ ಕಾರ್ಯದರ್ಶಿ ಗ್ರೇಡ್-–2 ಹುದ್ದೆಗೆ ಬಡ್ತಿ ನೀಡಿ ಆದೇಶ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಬಿಲ್‌ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್‌ಗಳಿಗೆ ₨ 6,276, ಪಂಪ್ ಆಪರೇಟರ್‌ಗಳಿಗೆ ₨6,165, ಜವಾನ­ರಿಗೆ ₨5,944, ಸ್ವೀಪರ್‌ಗಳಿಗೆ ₨4841 ರಂತೆ ಕನಿಷ್ಠ ವೇತನ ಜಾರಿಗೊಳಿ­ಸ­ಬೇಕು. ವೇತನಕ್ಕಾಗಿ ಬೇಕಾಗಿರುವ ಅನುದಾನದ ಜೊತೆಗೆ ಬಾಕಿ ಹಣವನ್ನು ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದ ಮೂಲಕ ಹೊಂದಿಸಿ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಕೊಡುವಂತೆ ಪಿಡಿಒಗಳಿಗೆ ಆದೇಶಿಸಿ, ಜಾರಿಯಾಗುವಂತಾಗಬೇಕು. ಎಲ್ಲ ಸಿಬ್ಬಂದಿಗೆ 1993ರ ಕಾಯ್ದೆ ಕಲಂ 113 ರ ಪ್ರಕಾರ ಅನುಮೋದನೆ ನೀಡಬೇಕು. ಅನುಮೋದನೆಯ ಪ್ರಸ್ತಾವನೆ ಸಲ್ಲಿಸಲು ಎಲ್ಲ ಪಿಡಿಒಗಳಿಗೆ ಸೂಚಿಸಬೇಕು. ಎಲ್ಲ ಸಿಬ್ಬಂದಿಗಳ ಸೇವಾ ಪುಸ್ತಕ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಪವಾರ್, ಉಪಾಧ್ಯಕ್ಷ ನರಸಿರಡ್ಡಿ ಮಿನಾಸಪೂರ, ಜೈಲಾಲ ತೋಟದಮನಿ, ನಿಂಗಪ್ಪ, ಕನಕಪ್ಪ ದೊರೆ, ಬಸವರಾಜ, ಹುಲಗಪ್ಪ ಖಾನಾಪೂರ, ತುಳಜಪ್ಪ, ಈಶಪ್ಪ ರ್‍ಯಾಖಾ ಸೇರಿದಂತೆ ಹಲವಾರು ನೌಕರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT