ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಅಭಿಷೇಕ್, ರೇಷ್ಮಾಗೆ ಪ್ರಶಸ್ತಿ

Last Updated 11 ಸೆಪ್ಟೆಂಬರ್ 2011, 18:45 IST
ಅಕ್ಷರ ಗಾತ್ರ

ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ  ಗೌತಮ್ ಭಟ್ ಅವರನ್ನು ಮಣಿಸಿದ ಅಭಿಷೇಕ್ ಎಲಿಗಾರ, ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯ 19 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಅಭೀಷೇಕ್ ಮೊದಲ ಸೆಟ್‌ನಲ್ಲಿ 21-08ರ ಅಂತರದಲ್ಲಿ ನಿರಾಯಾಸವಾಗಿ ಜಯ ಸಾಧಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಗೌತಮ್ ಭಟ್ 21-16ರ ಅಂತರದ ಜಯ ಸಾಧಿಸಿ ಪಂದ್ಯಕ್ಕೆ ರೋಚಕ ತಿರುವು ತಂದುಕೊಟ್ಟರು.

ನಿರ್ಣಾಯಕ ಮೂರನೇ ಸೆಟ್‌ನಲ್ಲಿ  ಆರಂಭಿಕ ಮುನ್ನಡೆ ಪಡೆದರೂ ಕೊನೆಗೆ ಎದುರಾಳಿಗೆ ಮಣಿದರು.
19 ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ರೇಷ್ಮಾ ಕಾರ್ತಿಕ್, 21-16, 21-14 ಸೆಟ್‌ಗಳಿಂದ ಸಿಂಧೂ ಭಾರದ್ವಾಜ್ ಅವರನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು.

ಪುರಷರ ಡಬಲ್ಸ್‌ನ ಫೈನಲ್‌ನಲ್ಲಿ ಅಜಿತ್ ಹಾಗೂ ಎಸ್.ಡಿ.ಎಸ್.ಕೃಷ್ಣ ಜೋಡಿ 21-17, 21-16ರ ಅಂತರದಿಂದ ಆದರ್ಶ ಕುಮಾರ ಹಾಗೂ ವೆಂಕಟೇಶ್ ಪ್ರಸಾದ್ ಜೋಡಿಯನ್ನು ಮಣಿಸಿದರು.

ಇದೇ ವಿಭಾಗದ ಸಿಂಗಲ್ಸ್ ಫೈನಲ್ ಏಕಪಕ್ಷೀಯವಾಗಿತ್ತು. ಪ್ರಶಸ್ತಿ ಪಡೆದ ಆದಿತ್ಯ ಪ್ರಕಾಶ್ 21-12, 21-07 ಸೆಟ್‌ಗಳಿಂದ ರಾಜಸ್ ಜವಾಲಕರ್ ಅವರನ್ನು ಸೋಲಿಸಿದರು. ಟೂರ್ನಿ ಯುದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿದ ಕಾರ್ತಿಕ್ ರೇಷ್ಮಾ , ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 21-14, 21-11 ಸೆಟ್‌ಗಳಿಂದ ಫೈನಲ್‌ನಲ್ಲಿ ಅವರು ಮಹಿಮಾ ಅಗರವಾಲ್ ಅವರ ವಿರುದ್ಧ ಗೆಲುವು ಸಾಧಿಸಿದರು.

19 ವರ್ಷದೊಳಗಿನ ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ ಪೂರ್ವಶಿ ಎಸ್.ರಾಮ್-ಉತ್ತರಾಪ್ರಕಾಶ ಜೋಡಿ ಪ್ರಶಸ್ತಿಯನ್ನು ಪಡೆದರು. ಫೈನಲ್‌ನಲ್ಲಿ ಅವರು ದೇವಿಕಾ ರವೀಂದ್ರನ್ ಮತ್ತು ಸಿಂಧೂ ಭಾರದ್ವಾಜ್ ಜೋಡಿಯನ್ನು (21-11, 21-11) ಮಣಿಸಿದರು.

ಇದೇ ವಿಭಾಗದ ಬಾಲಕರ ವಿಭಾಗದಲ್ಲಿ ಅಭಿಷೇಕ್ ಎಲಿಗಾರ ಮತ್ತು ರಾಜಾಸ್ ಜವಳಕರ ಜೋಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಫೈನಲ್‌ನಲ್ಲಿ  ಅವರು, ನಿಶಾಂತ ಹಾಗೂ ಎಂ.ಕಾರ್ತಿಕ್ ಜೋಡಿ (21-17, 21-16) ಸೋಲಿಸಿದರು.  ಮಹಿಳೆಯರ ಡಬಲ್ಸ್‌ನಲ್ಲಿ ಪೂರ್ವಿಶಾ ಎಸ್.ರಾಮ್ ಮತ್ತು ಜಿ.ಎಂ.ನಿಶ್ಚಿತ ಜೋಡಿ, ಶಾಯಿದಾ ಸಾದತ್ ಹಾಗೂ ಮಹಿಮಾ ಅಗರ್‌ವಾಲ್   ಜೋಡಿಯನ್ನು (21-11, 21-12) ಮಣಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಜಿ.ಎಮ್.ನಿಶ್ಚಿತ ಹಾಗೂ ಗುರುಪ್ರಸಾದ್ ಜೋಡಿ, ಆದರ್ಶಕುಮಾರ ಹಾಗೂ ಅದ್ಫಾ ತಕ್ವಿ ಜೋಡಿಯನ್ನು (21-17, 21-15, 21-11) ಮಣಿಸಿ ಪ್ರಶಸ್ತಿ ಪಡೆದರು. ಎರಡೂ ಗೇಮ್‌ಗಳಲ್ಲಿ ಈ ಜೋಡಿ ಉತ್ತಮ ಪ್ರದರ್ಶನ ನೀಡಿ ಗೆಲುವಿನ ಹಾದಿ ತುಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT