ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿಯಾಟ್ರಿಕ್ ಚಿಕಿತ್ಸೆಯ ಈ ದಾರಿ

Last Updated 25 ಜುಲೈ 2012, 19:30 IST
ಅಕ್ಷರ ಗಾತ್ರ

`ನಾನು ಸೌಂದರ್ಯತಜ್ಞೆ. ದಿನೇದಿನೇ ಹೆಚ್ಚುತಿದ್ದ ನನ್ನ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದೆ ಬೇಸರಗೊಂಡಿದ್ದೆ. ಮಧುಮೇಹ ತೊಂದರೆಯೂ ಇದ್ದದ್ದರಿಂದ ಬದುಕು ಕಷ್ಟ ಎನಿಸುತ್ತಿತ್ತು. ಅಲ್ಲದೆ ಋತುಚಕ್ರ ಸಮಸ್ಯೆಯೂ ಕಾಣಿಸಿಕೊಂಡು ಮಕ್ಕಳಾಗುವ ಅವಕಾಶದಿಂದ ವಂಚಿತನಾಗುತ್ತೇನೆ ಎಂಬ ಭಯ ಶುರುವಾಯಿತು. ಈ ಎಲ್ಲಾ ದುಗುಡಗಳಿಂದ ನನಗೀಗ ಮುಕ್ತಿ ದೊರೆತಿದೆ. ಸುಮಾರು 30 ಕೆ.ಜಿ ತೂಕ ಕಳೆದುಕೊಂಡಿದ್ದೇನೆ~ ಫರೀದಾ (ಹೆಸರು ಬದಲಾಯಿಸಲಾಗಿದೆ) ಖುಷಿಯಿಂದ ಮಾತಿಗಿಳಿದರು. 

 ನಿದ್ರಾಹೀನತೆ, ಗೊರಕೆ ಹೊಡೆಯುವುದು, ಮಧುಮೇಹ ಸಮಸ್ಯೆಗಳಿಂದ ಅವರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮಧುಮೇಹವೂ ಶೇ 90ರಷ್ಟು ಗುಣವಾಗಿದೆ. ಕ್ಯಾಲ್ಶಿಯಂ ಟ್ಯಾಬ್ಲೆಟ್ ಒಂದನ್ನು ಬಿಟ್ಟು ಇನ್ಯಾವ ಔಷಧವನ್ನೂ ಸೇವಿಸುತ್ತಿಲ್ಲ. ಎಲ್ಲರಂತೆ ಊಟ ಮಾಡುತ್ತಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಒಂದು ತಿಂಗಳಾದ ನಂತರ ಜಿಮ್ ಮಾಡಲು ಪ್ರಾರಂಭಿಸಿದ್ದಾರೆ. ತಾಯಿಯಾಗುವ ಅವಕಾಶದಿಂದ ವಂಚಿತನಾಗುತ್ತೇನೆ ಎಂಬ ಅವರ ಭಯವೂ ಈಗ ದೂರವಾಗಿದೆ.

ದೇಹಾಕಾರ ಬದಲಾದ ಕಾರಣಕ್ಕೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ದೇಹ ಭಾರ ಕಡಿಮೆಯಾಗಿ ಮನಸ್ಸೂ ಹಗುರಾಗಿದೆ ಎನ್ನುವ ಅವರ ಖುಷಿಗೆ ಕಾರಣವಾಗಿದ್ದು ಫೋರ್ಟಿಸ್ ಆಸ್ಪತ್ರೆಯಲ್ಲಿ ಮಾಡಿಸಿಕೊಂಡ `ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ~. ಸಮಸ್ಯೆಗಳು ಹೇಳದೆ ಕೇಳದೆ ಬರುವ ಅತಿಥಿಯಿದ್ದಂತೆ ಎಂಬ ಮಾತಿದೆ.

ಈಗೀಗಲಂತೂ ಫಾಸ್ಟ್‌ಫುಡ್‌ನಿಂದ ಬೊಜ್ಜು, ಮಧುಮೇಹ ಮೊದಲಾದ ಕಾಯಿಲೆಗಳು ಸದ್ದಿಲ್ಲದೆ ಬಂದು ಬೀಡು ಬಿಡುತ್ತವೆ. ಒಮ್ಮೆ ದೇಹದ ಮನೆ ಪ್ರವೇಶಿಸುವ ಅವು ಜಪ್ಪಯ್ಯ ಎಂದರೂ ಹೋಗಲೊಲ್ಲವು.

ಇಂಥ ಹಲವು ಕಾಯಿಲೆಗಳಲ್ಲಿ ಬೊಜ್ಜು ಅತ್ಯಂತ ಅಸಹನೀಯ ಹಾಗೂ ಸಂಕೀರ್ಣವಾದದ್ದು. ಅತಿಯಾದ ದೇಹದ ಭಾರದಿಂದ ಹತ್ತಾರು ಕಾಯಿಲೆಗಳು ಗೋಳುಗುಟ್ಟಿಸುತ್ತವೆ. ಹೀಗಾಗಿ ತೂಕ ಹೆಚ್ಚುತ್ತಿದ್ದಂತೆ ಕೆಲವರು ಕಂಗಾಲಾಗುತ್ತಾರೆ.

ವೈದ್ಯರು, ಔಷಧಿ, ಚಿಕಿತ್ಸೆ ಎಂದು ತಲೆ ಕೆಡಿಸಿಕೊಳ್ಳಲಾರಂಭಿಸುತ್ತಾರೆ. ಇಂಥವರ ಸಮಸ್ಯೆಗೆ ಪರಿಹಾರವೇನೋ ಎಂಬಂತೆ ವೈದ್ಯಲೋಕದಲ್ಲಿ ಕಾಲಿಟ್ಟಿದ್ದು ಈ ಬ್ಯಾರಿಯಾಟ್ರಿಕ್ ಸರ್ಜರಿ.

ಏನಿದು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ?
ಹೊಟ್ಟೆಯೊಳಗೆ ವೈದ್ಯಕೀಯ ಸಾಧನವನ್ನು ತೂರಿಸಿ (ಗ್ಯಾಸ್ಟ್ರಿಕ್ ಬ್ಯಾಂಡಿಂಗ್) ಅಥವಾ ಹೊಟ್ಟೆಯ ಒಂದು ಭಾಗವನ್ನು ತೆಗೆಯುವ ಮೂಲಕ (ಸ್ಲೀವ್‌ಗ್ಯಾಸ್ಟ್ರೆಕ್ಟಮಿ ಅಥವಾ ಬಿಲಿಯೋಪ್ಯಾಂಕ್ರಿಯಾಟಿಕ್ ಡೈವರ್ಶನ್ ವಿಥ್ ಡಿಯೋಡೆನಲ್ ಸ್ವಿಚ್) ಅಥವಾ ಸಣ್ಣಕರುಳನ್ನು ವಿಭಾಗಿಸುವ ಹಾಗೂ ಹೊಟ್ಟೆಯ ಸಣ್ಣ ಚೀಲವಾಗಿ ಅದನ್ನು ಮರುಮಾರ್ಗಗೊಳಿಸುವ (ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ) ಮೂಲಕ ತೂಕ ಇಳಿಸಲಾಗುತ್ತದೆ.

ಉಪಯೋಗವೇನು?
ಈ ಶಸ್ತ್ರಚಿಕಿತ್ಸೆಯಿಂದ ತೂಕವನ್ನು ಗಣನೀಯವಾಗಿ ಇಳಿಸಬಹುದು. ಮಧುಮೇಹ, ಹೃದಯಸಂಬಂಧಿ ಕಾಯಿಲೆ, ಋತುಚಕ್ರ ಸಮಸ್ಯೆ, ಬಂಜೆತನ ಮುಂತಾದ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ಬೊಜ್ಜಿನಿಂದ ಸಾಯುವ ಪ್ರಮಾಣವನ್ನು ಶೇ 40ರಿಂದ ಶೇ 23ರವರೆಗೆ ಇಳಿಸುತ್ತದೆ ಎಂಬುದು ವೈದ್ಯಕೀಯ ಸಾಧನೆಯೇ ಸರಿ ಎಂಬುದು ಫೋರ್ಟಿಸ್ ಆಸ್ಪತ್ರೆಯ ವೈದ್ಯರ ಅಭಿಪ್ರಾಯ.

ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆ

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿಯೇ ಅತ್ಯಂತ ಪ್ರಚಲಿತವಾದ ಚಿಕಿತ್ಸೆ ಇದಾಗಿದೆ. ಹೊಟ್ಟೆಯ ಮೇಲುಭಾಗವನ್ನು ಸ್ಟೇಪಲ್ ಮಾಡಿ ಚಿಕ್ಕ ಚೀಲವನ್ನು ನಿರ್ಮಿಸಿಕೊಳ್ಳಲಾಗುತ್ತದೆ. ನಂತರ ಈ ಚಿಕ್ಕ ಚೀಲವನ್ನು ಸಣ್ಣಕರುಳಿನ ಕೆಳಭಾಗಕ್ಕೆ ಜೋಡಿಸಲಾಗುತ್ತದೆ. ಹೊಟ್ಟೆಯ ಉಳಿದ ಭಾಗ ಹಾಗೂ ಸಣ್ಣ ಕರುಳಿನ ಮೇಲ್ಭಾಗವನ್ನು ಮುಂದುವರೆದ ಸಣ್ಣಕರುಳಿನೊಳಗೆ `ವೈ~ ಆಕಾರವನ್ನು ತಳೆಯುವಂತೆ ಪುನಃ ಜೋಡಿಸಲ್ಪಡುತ್ತವೆ. ಶಸ್ತ್ರಚಿಕಿತ್ಸೆಯ ನಂತರ ಆಹಾರವು ಹೊಟ್ಟೆಯಿಂದ ನೇರವಾಗಿ ಸಣ್ಣಕರುಳಿನ ಕೊನೆಯ ಭಾಗಕ್ಕೆ ಸಾಗುತ್ತದೆ ಹಾಗೂ ಬಹುತೇಕ ಆಹಾರ ಜೀರ್ಣವಾಗದಂತೆ ಮಾಡುತ್ತದೆ. ಹೀಗಾಗಿ ಆರರಿಂದ 12 ತಿಂಗಳೊಳಗಾಗಿ ತೂಕದಲ್ಲಿ ಭಾರಿ ಇಳಿಕೆ ಕಂಡುಬರುತ್ತದೆ ಎನ್ನುತ್ತಾರೆ ಡಾ. ಶಬ್ಬೀರ್ ಅಹಮದ್. ದೇಶ ವಿದೇಶದಲ್ಲಿ ಇಂಥ 604 ಶಸ್ತ್ರಚಿಕಿತ್ಸೆ ಮಾಡಿರುವ ಶಬ್ಬೀರ್ ನಗರದಲ್ಲಿ ಇದುವರೆಗೆ 104 ಜನರ ಸಮಸ್ಯೆ ಪರಿಹರಿಸಿದ್ದಾರೆ.

ಸಂಪರ್ಕಕ್ಕೆ: 9900246002 (ಡಾ. ಶಬ್ಬೀರ್ ಅಹಮದ್).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT