ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರದರ್‌ಹುಡ್ ಪಾತ್ರ ಕಡೆಗಣಿಸಿದ ಒಬಾಮ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಈಜಿಪ್ಟ್‌ನಲ್ಲಿ ಜನಪ್ರತಿನಿಧಿಗಳ ಮತ್ತು ಜವಾಬ್ದಾರಿಯುತ ಸರ್ಕಾರ ರಚನೆಯಾಗಬೇಕು ಎಂಬ ಜಗತ್ತಿನ ಹಲವು ರಾಷ್ಟ್ರಗಳ ಒತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ನೂತನ ಸರ್ಕಾರದಲ್ಲಿ ಮುಸ್ಲಿಂ ಬ್ರದರ್‌ಹುಡ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.

ನೂತನ ಸರ್ಕಾರದಲ್ಲಿ ಯಾವುದೇ ಕ್ಷಣದಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಿರುವ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಪಾತ್ರವೇನೂ ಇರುವುದಿಲ್ಲ ಎಂದೂ ಅಮೆರಿಕ ಭಾವಿಸಿದೆ. ಪ್ರತಿಭಟನೆಗೂ ಮೊದಲಿದ್ದ ಸ್ಥಿತಿಗೆ ಈಜಿಪ್ಟ್ ಹಿಂದಿರುಗುವುದೂ ಸಾಧ್ಯವಿಲ್ಲ.

ಮುಸ್ಲಿಂ ಬ್ರದರ್‌ಹುಡ್ ಎನ್ನುವುದೊಂದು ಬಣವಷ್ಟೇ ಹೊರತು ಸರ್ಕಾರ ರಚಿಸುವಂತಹ ಜನಬೆಂಬಲ ಅದಕ್ಕಿಲ್ಲ ಎಂದು ಒಬಾಮ ಅವರು ‘ಫಾಕ್ಸ್’ ಟೆಲಿವಿಷನ್‌ಗೆ ತಿಳಿಸಿದ್ದಾರೆ.
‘ಈ ಬ್ರದರ್‌ಹುಡ್ ಸಂಘಟನೆ ವ್ಯವಸ್ಥಿತವಾಗಿ ಸಂಘಟಿತವಾಗಿರುವುದು ಮತ್ತು ಅಮೆರಿಕ ವಿರೋಧಿ ನೀತಿ ತಳೆದಿರುವುದು ನಿಜ. ಆದರೆ ಅದಕ್ಕೆ ಜನರ ಬೆಂಬಲ ಅಷ್ಟಾಗಿ ಇಲ್ಲ. ಚುನಾವಣೆಯಲ್ಲಿ ಜನಪ್ರತಿನಿಧಿ ಸರ್ಕಾರವೇ ಬರುತ್ತದೆ ಎಂಬ ಭಾವನೆ ಅಮೆರಿಕದ್ದು’ ಎಂದು ಒಬಾಮ ಹೇಳಿದ್ದಾರೆ.

ಹಿಲೆರಿ ಎಚ್ಚರಿಕೆ: ಒಬಾಮ ಅವರ ಆಶಯವನ್ನು ಸಮ್ಮತಿಸಿರುವ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್,  ಟುನಿಷಿಯಾ ಮತ್ತು ಈಜಿಪ್ಟ್‌ಗಳಲ್ಲಿ ನಡೆದಿರುವ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳಿಂದ ಅರಬ್ ನಾಯಕರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.

‘ಈ ಎರಡೂ ದೇಶಗಳಲ್ಲಿ ಯುವಕರೇ ಹೆಚ್ಚಾಗಿ ಅಧಿಕಾರದ ಬದಲಾವಣೆಗಾಗಿ ಇದೀಗ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇವರು ಅಸಂಘಟಿತರು ಮತ್ತು ಸೂಕ್ತ ಮಾರ್ಗದರ್ಶನ ಇಲ್ಲದವರು. ತಮ್ಮ ದೇಶದ ಪ್ರಜೆಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಅವರು ಉತ್ತಮ ಕೆಲಸ ಮಾಡಬೇಕಿದೆ’ ಎಂದು ಕ್ಲಿಂಟನ್ ಅವರು  ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಂಡು ವಾಪಸಾಗುವಾಗ ಪತ್ರಕರ್ತರಿಗೆ ತಿಳಿಸಿದ್ದಾರೆ.

ಈಜಿಪ್ಟ್ ಈಗಾಲೇ ಹಲವು ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದೆ. ತಕ್ಷಣ ಕುರ್ಚಿ ಬಿಟ್ಟೇಳಲು ಮುಬಾರಕ್ ಮೇಲೆ ಒತ್ತಡ ತಂದರೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗುವ ಸಾಧ್ಯತೆ ಇದೆ. ದೇಶದಲ್ಲಿ ಸೂಕ್ತ ಬದಲಾವಣೆ ತರಲು ಜನ ಸಜ್ಜಾಗಬೇಕಿದೆ ಎಂದರು.

ಮಲೇಷ್ಯಾ ವಿಶ್ವಾಸ: (ಕ್ವಾಲಾಲಂಪುರ ವರದಿ):  ಈಜಿಪ್ಟ್‌ನಲ್ಲಿ ನಡೆದಿರುವ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಉರುಳಿಸುವ ಯತ್ನದ ಬಗ್ಗೆ ಎಚ್ಚರಿಕೆ ನೀಡಿರುವ ಮಲೇಷ್ಯಾ ಪ್ರಧಾನಿ ನಜೀಬ್ ತುನ್ ರಜಾಕ್, ಈಜಿಪ್ಟ್‌ನಲ್ಲಿ ನಡೆದಂತಹ ಪ್ರತಿಭಟನೆಗಳನ್ನು ಇಲ್ಲೂ ನಡೆಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಪ್ರಧಾನಿ ಅವರು ಯಾರನ್ನು ಉದ್ದೇಶಿಸಿಯೂ ಈ ಎಚ್ಚರಿಕೆ ನೀಡಿಲ್ಲ. ಆದರೆ 2013ರಲ್ಲಿ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆ ಅದಕ್ಕಿಂತ ಮೊದಲೇ ನಡೆಯುವ ಸಾಧ್ಯತೆ ಇರುವುದರಿಂದ  ಅವರ ಇಂತಹ ಹೇಳಿಕೆ ನೀಡಿರಬೇಕು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಕೆನಡಾ ಬೆಂಬಲ (ಒಟ್ಟಾವ ವರದಿ): ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಈಜಿಪ್ಟ್‌ನ ಜನರ ಭಾವನೆಯನ್ನು ಗೌರವಿಸಿರುವ ಕೆನಡಾ, ಮುಂದೆ ಬರಲಿರುವ ಯಾವುದೇ ಸರ್ಕಾರ ಈಗ ಇಸ್ರೇಲ್‌ನೊಂದಿಗೆ ಜಾರಿಯಲ್ಲಿರುವ ಶಾಂತಿ ಒಪ್ಪಂದವನ್ನು ಗೌರವಿಸಬೇಕು ಎಂದಿದೆ.

‘ಅಂತರರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದಂತೆ ಈಜಿಪ್ಟ್‌ನ ಬದ್ಧತೆಯನ್ನು ಮುಂದೆ ಬರಲಿರುವ ಯಾವುದೇ ಸರ್ಕಾರವಾದರೂ ಗೌರವಿಸಬೇಕು. ಇದರಲ್ಲಿ ಇಸ್ಟೇಲ್ ಜತೆಗೆ 1978ರಲ್ಲಿ ಮಾಡಿಕೊಂಡ ಶಾಂತಿ ಒಪ್ಪಂದವೂ ಸೇರುತ್ತದೆ’ ಎಂದು ವಿದೇಶಾಂಗ ಸಚಿವ ಲಾರೆನ್ಸ್ ಕ್ಯಾನನ್ ತಿಳಿಸಿದ್ದಾರೆ.

ಶೀಘ್ರ ಚುನಾವಣೆಗೆ ಸ್ಪೇನ್ ಒತ್ತಾಯ (ಮ್ಯಾಡ್ರಿಡ್ ವರದಿ): ಈಜಿಪ್ಟ್‌ನ ಆಡಳಿತಗಾರರು ಶೀಘ್ರ ಚುನಾವಣೆ ಘೋಷಿಸಿ ಇದೀಗ ಪ್ರತಿಭಟನೆಯಲ್ಲಿ ನಿರತರಾಗಿರುವವರನ್ನು ಸಮಾಧಾನಪಡಿಸಬೇಕು ಎಂದು ಸ್ಪೇನ್‌ನ ವಿದೇಶಾಂಗ ಸಚಿವೆ ಟ್ರಿನಿಡಾಡ್ ಜಿಮೆನೆಜ್ ಸಲಹೆ ನೀಡಿದ್ದಾರೆ.

 ಈಗಲೇ ಚುನಾವಣೆ ಘೋಷಿಸಿದರೆ ಜೂನ್ ಒಳಗೆ ಮತದಾನ ಕೊನೆಗೊಂಡು ಜನಪ್ರಿಯ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂಬ ಉದ್ದೇಶದೊಂದಿಗೆ ಅವರು ಈ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT