ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾರ್‌ ಮೇಲೆ ಹಲ್ಲೆ: ನಾಲ್ವರಿಗೆ ಜೈಲು

ಸ್ವರ್ಣಮಂದಿರದಲ್ಲಿ ಸೇನಾ ಕಾರ್ಯಾಚರಣೆಗೆ ಪ್ರತಿಕಾರ
Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ‘ಆಪರೇಷನ್‌ ಬ್ಲೂ­ಸ್ಟಾರ್‌’ ಕಾರ್ಯಾಚರಣೆಯ ಹೀರೊ, ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಕೆ.ಎಸ್‌. ಬ್ರಾರ್‌ ಅವರ ಮೇಲೆ ಭೀಕರ  ಹಲ್ಲೆ  ನಡೆಸಿದ್ದ ಮಹಿಳೆ ಸೇರಿದಂತೆ ನಾಲ್ವರಿಗೆ ಬ್ರಿಟನ್‌ ನ್ಯಾಯಾಲಯ ಮಂಗಳವಾರ ಶಿಕ್ಷೆ ಪ್ರಕಟಿಸಿದೆ.

1984ರಲ್ಲಿ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರ­ದಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಕೆ.ಎಸ್‌. ಬ್ರಾರ್‌ ಅವರ ನೇತೃತ್ವದಲ್ಲಿ ‘ಆಪರೇಷನ್‌ ಬ್ಲೂಸ್ಟಾರ್‌’ ಕಾರ್ಯಾ­ಚರಣೆ ನಡೆಸಿ ಸದೆಬಡಿಯಲಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಖಾಲಿ­ಸ್ತಾನ ಪರ ಬೆಂಬಲಿಗರು ಕಳೆದ ವರ್ಷ ಮಧ್ಯ ಲಂಡನ್‌ನಲ್ಲಿ ಬ್ರಾರ್‌ ಅವರ ಕತ್ತು ಕೊಯ್ದು ಹತ್ಯೆ ಮಾಡಲು ವಿಫಲ ಯತ್ನ ನಡೆಸಿದ್ದರು.

ಬರ್ಜಿಂದರ್‌ ಸಿಂಗ್‌ ಸಂಘಾ ಮತ್ತು ದಿಲ್‌ಬಾಗ್‌ ಸಿಂಗ್‌ಗೆ ತಲಾ 14 ವರ್ಷ. ಮನ್‌ದೀಪ್‌ ಸಿಂಗ್‌ ಸಂಧುಗೆ 10 ವರ್ಷ ಆರು ತಿಂಗಳು ಮತ್ತು ಹರ್ಜಿತ್‌ ಕೌರ್‌ಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಸೌತ್‌ವಾರ್ಕ್‌ ಕ್ರೌನ್‌ ಕೋರ್ಟ್‌ ಮಂಗಳ­­ವಾರ ಆದೇಶ ನೀಡಿದೆ.
ಶಿಕ್ಷೆಯ ಅರ್ಧ ಅವಧಿಯನ್ನು ಅವರು ಜೈಲಿನಲ್ಲೇ ಕಳೆಯಬೇಕು. ಬಳಿಕ ಅವರು ಜಾಮೀನು ಪಡೆದುಕೊಳ್ಳ­ಬಹುದು ಎಂದು ಕೋರ್ಟ್‌ ಹೇಳಿದೆ.

ಸಂಘಾ (33), ಸಂಧು (34), ಸಿಂಗ್‌ (36) ಮತ್ತು ಕೌರ್‌ (38) ತಪ್ಪಿತಸ್ಥರು ಎಂದು ಇದೇ ನ್ಯಾಯಾಲಯ ಜುಲೈ 31ರಂದು ಹೇಳಿತ್ತು.
‘ದಾಳಿಯಲ್ಲಿ ಬ್ರಾರ್‌ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ವರ್ಣ­ಮಂದಿರ­ದಲ್ಲಿ ನಡೆದ ಕಾರ್ಯಾ­ಚ­ರ­ಣೆಗೆ ಪ್ರತೀಕಾರ ತೀರಿಸಿಕೊಳ್ಳುವು­ದ­ಕ್ಕಾ­ಗಿ­ಯೇ ಈ ದಾಳಿ ನಡೆಸಲಾಗಿತ್ತು ಎನ್ನುವುದು ಸ್ಪಷ್ಟವಾಗಿದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಬ್ರಾರ್‌ ಅವರು ಪತ್ನಿ ಮೀನಾ ಜೊತೆ ಲಂಡನ್‌ನ ವೆಸ್ಟ್‌ ಎಂಡ್‌ನಲ್ಲಿ ಖಾಸಗಿ ಪ್ರವಾಸಕ್ಕೆ ಬಂದಿದ್ದರು. ಇವರ ಬೆನ್ನು ಹತ್ತಿದ್ದ ಕೌರ್‌, ಅವರ ಇರುವಿಕೆ ಬಗ್ಗೆ ದಾಳಿಕೋರರಿಗೆ ಮಾಹಿತಿ ನೀಡಿದ್ದಳು. ಬಳಿಕ 2012ರ ಸೆಪ್ಟೆಂಬರ್‌ 30ರಂದು ಸಂಘಾ, ಸಂಧು ಮತ್ತು ಸಿಂಗ್‌ ಸೇರಿ­ಕೊಂಡು ಬ್ರಾರ್‌ ಅವರ ಹತ್ಯೆಗೆ ಸಂಚು ರೂಪಿಸಿದ್ದರು.

‘ಖಲಿಸ್ತಾನ ಪರ ಹೋರಾಟಗಾ­ರರು ವೆಬ್‌ಸೈಟ್‌ನಲ್ಲಿ ತಮ್ಮನ್ನು ‘ಸಿಖ್ಖರ ನಂಬರ್‌ ಒನ್‌ ಶತ್ರು’ ಎಂದು ಘೋಷಿಸಿ­ದ್ದಾರೆ’ ಎಂಬುದಾಗಿ ಬ್ರಾರ್‌ ಅವರು ನ್ಯಾಯಾ­ಲಯಕ್ಕೆ ಸಾಕ್ಷ್ಯ ಒದಗಿಸಿದ್ದರು.

‘ಏಳು ಬಾರಿ ನನ್ನ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸಲಾಗಿತ್ತು. ಆದರೆ, ಅದು ಕೈಗೂಡಿರಲಿಲ್ಲ. ಖಾಸಗಿ ಪ್ರವಾಸಕ್ಕೆ ಹೋಗಿದ್ದ ವೇಳೆ, ಎಂಟನೇ ಬಾರಿಗೆ ಅದು ಘಟಿಸಿ ಹೋಯಿತು’ ಎಂದೂ ಬ್ರಾರ್‌ ತಿಳಿಸಿದ್ದರು.

ಶಿಕ್ಷೆ ಪ್ರಮಾಣ ಘೋಷಿಸುವ ಸಂದ­ರ್ಭ­ದಲ್ಲಿ ನ್ಯಾಯಾಲಯದ ಬಳಿ ಬ್ರಿಟನ್‌­ನಲ್ಲಿರುವ ನೂರಾರು ಸಿಖ್ಖರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT