ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದ ಸಿದ್ಧತೆ: ಬಿಗಿ ಭದ್ರತೆ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಎಂ.ಜಿ.ರಸ್ತೆಯಲ್ಲಿರುವ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಬುಧವಾರ ನಡೆಯಲಿರುವ ಸಮಾರಂಭಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.

‘ಇದೇ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಆಚರಣೆ ಸಮಾರಂಭಕ್ಕೆ ಸಿದ್ಧತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆ ದಿನ ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಧ್ವಜಾರೋಹಣ ಮಾಡಲಿದ್ದಾರೆ. ನಂತರ ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸಂದೇಶ ನೀಡಲಿದ್ದಾರೆ’ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ವಿವಿಧ ಶಾಲೆಗಳ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. ಆ ಮಕ್ಕಳು ಈಗಾಗಲೇ ಅಭ್ಯಾಸ ಆರಂಭಿಸಿದ್ದು, ಊಟ ಹಾಗೂ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.

ವಿಪತ್ತು ನಿರ್ವಹಣಾ ಘಟಕ: ಸಮಾರಂಭದ ವೇಳೆ ಯಾವುದೇ ಅವಘಡ ಸಂಭವಿಸಿದರೂ ತಕ್ಷಣವೇ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ವಿಪತ್ತು ನಿರ್ವಹಣಾ ಘಟಕ ತೆರೆಯಲಾಗುವುದು. ತುರ್ತು ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯವುಳ್ಳ ಎಂಟು ಹಾಸಿಗೆಯ ವಿಶೇಷ ವಾಹನವನ್ನು ಮೈದಾನದಲ್ಲಿಡಲಾಗುವುದು. ಹಾಗೆಯೇ 12 ಅಂಬುಲೆನ್ಸ್‌ಗಳು, 3 ಅಗ್ನಿಶಾಮಕ ವಾಹನಗಳು ಇರಲಿವೆ’ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಟಿ.ಸುನೀಲ್ ಕುಮಾರ್, ‘ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭ ನಡೆಯುವ ಮೈದಾನದಲ್ಲಿ 23 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಪ್ರಮುಖ ದ್ವಾರಗಳಲ್ಲಿ ಲೋಹ ಶೋಧಕ ಸಾಧನ ಅಳವಡಿಸಲಾಗುವುದು. ಒಟ್ಟು 26 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದರು.

ಬಿಗಿ ಪೊಲೀಸ್ ಭದ್ರತೆ:‘ಸಮಾರಂಭದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಎಂಟು ಮಂದಿ ಡಿಸಿಪಿಗಳು, 15 ಎಸಿಪಿಗಳು, 32 ಇನ್‌ಸ್ಪೆಕ್ಟರ್‌ಗಳು, 100 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳು, 2,000 ಪೊಲೀಸರು ಹಾಗೂ ರಾಜ್ಯ ಮೀಸಲು ಪೊಲೀಸ್ ಪಡೆಯ10 ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ವಿವರಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT