ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಆರಂಭ

Last Updated 8 ಸೆಪ್ಟೆಂಬರ್ 2013, 19:57 IST
ಅಕ್ಷರ ಗಾತ್ರ

ನೇರ ನುಡಿ ಮತ್ತು ದೂರದೃಷ್ಟಿಯ ಚಿಂತನೆಗೆ ಹೆಸರಾಗಿರುವ ರಘುರಾಂ ಗೋವಿಂದ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಹೊಸ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ದೇಶಿ ಅರ್ಥವ್ಯವಸ್ಥೆಯಲ್ಲಿ ಭರವಸೆ ಮೂಡಿಸುವ ಹೊಸ ಬೆಳವಣಿಗೆಗಳು ಕಂಡುಬಂದಿರುವುದು ಆಶಾದಾಯಕವಾಗಿದೆ.

ರಾಜನ್ ಅವರ ಭರವಸೆಯ ಮಾತುಗಳನ್ನು ಮಾರುಕಟ್ಟೆಯು ಕಿವಿಗೊಟ್ಟು ಆಲಿಸುತ್ತಿರುವಂತೆ ಭಾಸವಾಗುತ್ತಿದೆ. ರೂಪಾಯಿ ಮೌಲ್ಯವು ಎರಡು ವಾರಗಳಲ್ಲಿಯೇ ಗರಿಷ್ಠ ಮಟ್ಟದಲ್ಲಿ ಚೇತರಿಸಿಕೊಂಡಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಷೇರುಪೇಟೆಯಲ್ಲಿಯೂ `ರಾಜನ್ ಪರಿಣಾಮ' ಕಣ್ಣಿಗೆ ರಾಚುತ್ತಿದೆ. 2008ರ ಜಾಗತಿಕ ಆರ್ಥಿಕ ಹಿಂಜರಿತವನ್ನು ಮೊದಲೇ ಅಂದಾಜಿಸಿ ಹೇಳ್ದ್ದಿದ ಹೆಗ್ಗಳಿಕೆಯ ರಾಜನ್ ಅವರ ಮುಂದೆ ಈಗ ಸವಾಲಿನ ದೊಡ್ಡ ಬೆಟ್ಟವೇ ಇದೆ.

ತುರ್ತಾಗಿ ಕಾರ್ಯಪ್ರವೃತ್ತರಾಗಲು ಬೊಗಸೆ ತುಂಬ ಕೆಲಸವೂ ಇದೆ. ಜಾಗತಿಕ ಆರ್ಥಿಕ ಅಸ್ಥಿರತೆ, ಹಣದುಬ್ಬರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ, ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚಳ ಹೀಗೆ ಹತ್ತಾರು ಸವಾಲುಗಳು ಅವರ ಮುಂದೆ ಸಾಲುಗಟ್ಟಿ ನಿಂತಿವೆ. ಇವುಗಳನ್ನೆಲ್ಲ ಆದ್ಯತೆ ಮೇರೆಗೆ ಪರಿಹರಿಸುವಲ್ಲಿ ರಾಜನ್ ಅವರ ಜಾಣ್ಮೆ ಮುಂಬರುವ ದಿನಗಳಲ್ಲಿ ನಿಕಷಕ್ಕೆ ಒಳಪಡಲಿದೆ.

ಸಾಮಾನ್ಯರೂ ಸೇರಿದಂತೆ ಆರ್ಥಿಕ ಪರಿಣತರ ಎಣಿಕೆಗೂ ನಿಲುಕದ ಹಣಕಾಸು ಪೇಟೆಯ ಅಸ್ಥಿರತೆಯನ್ನು ಸರಿದಾರಿಗೆ ತರುವ ಗುರುತರ ಹೊಣೆಗಾರಿಕೆ ಅವರ ಮೇಲಿದ್ದು, ಆರಂಭಿಕ ಹೆಜ್ಜೆಯನ್ನು ದೃಢವಾಗಿಯೇ ಊರಿದ್ದಾರೆ. ಪ್ರಪಾತಕ್ಕೆ ಕುಸಿಯುತ್ತಿದ್ದ ರೂಪಾಯಿ ವಿನಿಮಯ ಮೌಲ್ಯದ ಚೇತರಿಕೆಗೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಅದು ಸ್ವಲ್ಪಮಟ್ಟಿಗೆ ಫಲವನ್ನೂ ನೀಡಿರುವುದು ಶುಭ ಸಂಕೇತವಾಗಿದೆ.

ಆರ್ಥಿಕ ವೃದ್ಧಿ ಜತೆಗೆ ಎಲ್ಲರಿಗೂ ಅಭಿವೃದ್ಧಿಯ ಫಲ ದೊರೆಯುವಂತೆ ಮಾಡಲು ಆದ್ಯತೆ ನೀಡುವುದಾಗಿ ಹೇಳಿರುವುದೂ ಸರಿಯಾಗಿಯೇ ಇದೆ. ಜನರ ಉಳಿತಾಯವನ್ನು ಹಣಕಾಸು ಮಾರುಕಟ್ಟೆಗೆ ತಂದು ಬಂಡವಾಳ ಕೊರತೆ ನೀಗಿಸಲು ರಾಜನ್ ಕ್ರಮ ಕೈಗೊಂಡಿರುವುದೂ ಸಮಯೋಚಿತವಾಗಿದೆ.

ಆರ್ಥಿಕ ಬೆಳವಣಿಗೆಗಿಂತ ಹಣಕಾಸು ಸ್ಥಿರತೆ ಕಾಯ್ದುಕೊಳ್ಳುವುದೇ ಆರ್‌ಬಿಐನ ಪ್ರಾಥಮಿಕ ಕರ್ತವ್ಯ ಎಂದು ಪ್ರತಿಪಾದಿಸುವ ರಾಜನ್, ಬೆಳವಣಿಗೆ ಕುಂಠಿತವಾದ ಮತ್ತು ಸತ್ವ ಕಳೆದುಕೊಂಡಿರುವ ಹಣಕಾಸು ವಲಯಕ್ಕೆ ಆಧುನಿಕ ಸ್ಪರ್ಶ ನೀಡುವಲ್ಲಿಯೂ ತಮ್ಮ ದಕ್ಷತೆ ಮೆರೆಯಬೇಕಾಗಿದೆ. ಕೇಂದ್ರೀಯ ಬ್ಯಾಂಕ್‌ನ ಉಪಕ್ರಮಗಳಿಗೆ ಪೂರಕವಾಗಿ, ಕೇಂದ್ರ ಸರ್ಕಾರವು ಆರ್ಥಿಕ ವೃದ್ಧಿ ದರ ಹೆಚ್ಚಿಸುವ, ವಿತ್ತೀಯ ಕೊರತೆ ತಗ್ಗಿಸುವ ಮತ್ತು  ವಿದೇಶಿ ಹೂಡಿಕೆದಾರರು ದೇಶದಲ್ಲಿ ಹಣ ಹೂಡಿಕೆ ಮಾಡಲು ಉತ್ತೇಜಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಕುಂಠಿತ ಆರ್ಥಿಕ ಬೆಳವಣಿಗೆಯನ್ನು ಸ್ಥಿರಗೊಳಿಸಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಸಮನ್ವಯದಿಂದ ಕಾರ್ಯೋನ್ಮುಖವಾಗದಿದ್ದರೆ ರಾಜನ್ ಅವರ ಪ್ರಯತ್ನಗಳೆಲ್ಲ ವಿಫಲವಾಗಲಿವೆ. ಪಿಂಚಣಿ, ಹೊಸ ಭೂಸ್ವಾಧೀನ ಮಸೂದೆಗಳಿಗೆ ಸಂಸತ್‌ನಲ್ಲಿ ಅಂಗೀಕಾರ ಪಡೆಯುವ ಮೂಲಕ ಕೇಂದ್ರ ಸರ್ಕಾರವು ಆರ್‌ಬಿಐ ನಿಲುವಿಗೆ ತನ್ನ ಬೆಂಬಲ ಇರುವುದನ್ನು ಸಾಬೀತುಪಡಿಸಿದೆ.

ಗರ ಬಡಿದಂತಾಗಿದ್ದ ಮಾರುಕಟ್ಟೆಗೆ ರಘುರಾಂ ರಾಜನ್ ಅವರ ಪ್ರವೇಶದಿಂದ ಹೊಸ ಚೈತನ್ಯ ಬಂದಂತೆ ಆಗಿರುವುದು ನಿಜ. ಸವಾಲುಗಳನ್ನು ಮೆಟ್ಟಿನಿಂತು ಬಿಕ್ಕಟ್ಟುಗಳನ್ನೆಲ್ಲ ಪರಿಹರಿಸಲು ರಾಜನ್, ಇನ್ನಷ್ಟು ಆಕ್ರಮಣಕಾರಿ ಧೋರಣೆಯಿಂದ ಮುನ್ನುಗ್ಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT