ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಬಾಲಗಾಯಕ ಚರಣ್

Last Updated 25 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಚಾಮರಾಜನಗರ: ಹಾಡುಗಾರಿಕೆ ಅದ್ಭುತ ಕಲೆ. ಇದರ ಕರಗತಕ್ಕೆ ಸತತ ಅಭ್ಯಾಸ ಹಾಗೂ ಏಕಾಗ್ರತೆ ಬೇಕು. ಕಂಚಿನ ಕಂಠ ಹೊಂದಿದ್ದರೆ ಸಂಗೀತಾಸಕ್ತರ ಮನಗೆಲ್ಲಬಹುದು. ಈಗ ಟಿವಿಗಳಲ್ಲಿ ಮಕ್ಕಳ ಸಂಗೀತ ಪ್ರತಿಭೆ ಗುರುತಿಸುವ ಹಲವು ಕಾರ್ಯಕ್ರಮ ಪ್ರಸಾರ ಗೊಳ್ಳುತ್ತಿವೆ. ಹೀಗಾಗಿ, ಪೋಷಕರು ಮಕ್ಕಳಿಗೆ ಸಂಗೀತ ಕಲಿಸಲು ವಿಶೇಷ ಒತ್ತು ನೀಡುವುದು ಉಂಟು.

ಬಾಲ್ಯದಲ್ಲಿಯೇ ಗಾಯನ ಒಲಿದರೆ ಮಕ್ಕಳ ಭವಿಷ್ಯ ಭದ್ರವಾಗಿರುತ್ತದೆ ಎಂಬುದು ಪೋಷಕರ ಅನಿಸಿಕೆ. ಅಂತೆಯೇ ತಂದೆ-ತಾಯಿ, ಗುರುಗಳ ಪ್ರೋತ್ಸಾಹ ದಿಂದ ನಗರದ ಭ್ರಮರಾಂಭ ಬಡಾವಣೆಯ ವಿದ್ಯಾರ್ಥಿ ಎಸ್. ಚರಣ್ ಭರವಸೆಯ ಗಾಯಕನಾಗಿ ಹೊರಹೊಮ್ಮುತ್ತಿದ್ದಾನೆ.

ಬಿಳಿಗಿರಿ ಶ್ರೀನಿವಾಸ್ ಮತ್ತು ಎಸ್. ನಾಗವೇಣಿ ದಂಪತಿಯ ಪುತ್ರನಾಗಿರುವ ಈತ ವಿಶ್ವಹಿಂದೂ ಪರಿಷತ್‌ನ ಕನ್ನಡ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಈಶ್ವರಿ ಸ್ಕೂಲ್ ಆಫ್ ಮ್ಯೂಸಿಕ್‌ನಲ್ಲಿ ಸಂಗೀತಾಭ್ಯಾಸ ಆರಂಭಿಸಿದ ಚರಣ್‌ಗೆ 2005ರಲ್ಲಿ ನಡೆದ `ಹಾಡೊಂದ ಹಾಡುವೆ~ ಕಾರ್ಯಕ್ರಮದಲ್ಲಿ ಉತ್ತಮ ಬಾಲಗಾಯಕ ಎಂಬ ವಿಶೇಷ ಬಹುಮಾನ ಲಭಿಸಿತು. ಅಂದಿನಿಂದ  ಪಾಲ್ಗೊಳ್ಳುತ್ತಿರುವ ಪ್ರತಿಯೊಂದು ಸ್ಪರ್ಧೆಯಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡು ಹೋಗುತ್ತಿರುವುದು ಆತನ ಹೆಗ್ಗಳಿಕೆ.

ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲೂ ಆತನಿಗೆ ಪ್ರಶಸ್ತಿ ಒಲಿದು ಬಂದಿವೆ. 2001-10ರವರೆಗೆ ಪ್ರತಿಭಾ ಕಾರಂಜಿ ಸ್ಪರ್ಧೆಯ ಲಘು ಸಂಗೀತ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿರುವುದು ಆತನ ಗಾಯನದ ವಿಶೇಷತೆಯಾಗಿದೆ.

2008ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಕಲಾಪ್ರತಿಭೋತ್ಸವದ ಸುಗಮ ಸಂಗೀತ ವಿಭಾಗದಲ್ಲಿ ಜಿಲ್ಲಾಮಟ್ಟದಿಂದ ಆಯ್ಕೆಯಾಗಿ ಹಾಸನದಲ್ಲಿ ನಡೆದ ವಲಯಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾನೆ. 2011ರಲ್ಲಿ ಮೈಮುಲ್‌ನಿಂದ ನಡೆದ ನಂದಿನಿ ಪ್ರತಿಭಾನ್ವೇಷಣಾ ಸ್ಪರ್ಧೆಯಲ್ಲಿ ಜಿಲ್ಲಾ ಮತ್ತು ವಲಯಮಟ್ಟದಲ್ಲಿ ಸ್ಪರ್ಧಿಸಿ ಬಹುಮಾನ ಪಡೆದಿದ್ದಾನೆ.

 ಜತೆಗೆ, ಅದೇ ವರ್ಷ ವಿಷ್ಣು ನೆನಪಿನೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಡಾ.ವಿಷ್ಣುವರ್ಧನ್ ಚಲನಚಿತ್ರ ಗೀತೆಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆತನಿಗೆ ಬಹುಮಾನ ಲಭಿಸಿದೆ. ಈತನ ಪ್ರತಿಭೆಗೆ `ಈಶ್ವರಿ ಸ್ಕೂಲ್ ಆಫ್ ಮ್ಯೂಸಿಕ್ ಪ್ರಶಸ್ತಿ~ಯೂ ಸಿಕ್ಕಿದೆ.

ಈಗ ಈಶ್ವರಿ ಸ್ಕೂಲ್ ಆಫ್ ಮ್ಯೂಸಿಕ್‌ನಲ್ಲಿ ವೆಂಕಟೇಶ್ ಅವರ ಮಾರ್ಗದರ್ಶನದಡಿ ಗಾಯಕ ಎಸ್. ಮಹೇಂದರ್ ಅವರ ವಿದ್ಯಾರ್ಥಿಯಾಗಿ ಸುಗಮ ಸಂಗೀತ ಅಭ್ಯಸಿಸುತ್ತಿದ್ದಾನೆ. ಖ್ಯಾತ ಸಂಗೀತ ನಿರ್ದೇಶಕ ರಾಜನ್ ಅವರ ಸಮ್ಮುಖದಲ್ಲಿ ಗಾಯನ ಪ್ರಸ್ತುತಪಡಿಸಿ ಮೆಚ್ಚುಗೆ ಕೂಡ ಸಂಪಾದಿಸಿದ್ದಾನೆ. ಸಂಗೀತಾಸಕ್ತರಿಗೆ ಗಾಯನದ ಮೋಡಿ ಹಾಕುವ ಚರಣ್‌ಗೆ ಪ್ರಸಿದ್ಧ ಹಿನ್ನೆಲೆ ಗಾಯಕನಾಗಬೇಕೆಂಬ ಹೆಬ್ಬಯಕೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT