ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಹೊಂಬೆಳಕು

ಆರ್‌ಬಿಐನ ಹೊಸ ಗವರ್ನರ್ ರಘುರಾಂ ರಾಜನ್ ಅಧಿಕಾರ ಸ್ವೀಕಾರ
Last Updated 4 ಸೆಪ್ಟೆಂಬರ್ 2013, 20:03 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಹಣದುಬ್ಬರ ತಗ್ಗಿಸಲು ಕಠಿಣ ಹಣಕಾಸು ನೀತಿಯನ್ನೇ ಮುಂದುವರಿಸಿಕೊಂಡು ಹೋಗುವ ಸಂಪ್ರದಾಯ ಮುರಿಯಲು ಮತ್ತು ಆರ್ಥಿಕ ವೃದ್ಧಿ ದರ ಉತ್ತೇಜಿಸಲು ಹಲವಾರು ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹೊಸ ಗವರ್ನರ್ ರಘುರಾಂ ಗೋವಿಂದ ರಾಜನ್ ಸುಳಿವು ನೀಡಿದ್ದಾರೆ.

ಬುಧವಾರ ಇಲ್ಲಿ `ಆರ್‌ಬಿಐ'ನ 23ನೇ ಗವರ್ನರ್ ಆಗಿ  ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, `ದೇಶದ ಅರ್ಥ ವ್ಯವಸ್ಥೆ ಸದ್ಯ ಸವಾಲಿನ ಹಾದಿಯಲ್ಲಿದೆ. ಹಾಗಂತ ಇದನ್ನು ಬಿಕ್ಕಟ್ಟು ಎಂದು ಕರೆಯಲು ಸಾಧ್ಯವಿಲ್ಲ. ದೇಶದ ಅರ್ಥ ವ್ಯವಸ್ಥೆಯ ಬುನಾದಿ ಸದೃಢವಾಗಿದೆ. ಭವಿಷ್ಯವೂ  ಉಜ್ವಲವಾಗಿದೆ. ಹಣಕಾಸು ಮಾರುಕಟ್ಟೆ ಅಸ್ಥಿರತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

ರೂಪಾಯಿ ಮೌಲ್ಯವರ್ಧನೆ: ರೂಪಾಯಿ ಅಪಮೌಲ್ಯ ತಪ್ಪಿಸುವುದೂ ಸೇರಿದಂತೆ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ತರಲು ಕೂಡ ರಾಜನ್ ಅನೇಕ  ಕ್ರಮಗಳನ್ನು ಪ್ರಕಟಿಸಿದ್ದಾರೆ. ರೂಪಾಯಿಯಲ್ಲೇ ವಹಿವಾಟು ನಡೆಯುವಂತೆ ಹೆಚ್ಚಿನ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದು ಸದ್ಯದ ಅಗತ್ಯವಾಗಿದೆ. ಇದಕ್ಕಾಗಿ ರೂಪಾಯಿಯನ್ನು ಅಂತರರಾಷ್ಟ್ರೀಕರಣಗೊಳಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ. `ಆರ್‌ಬಿಐ' ಸೆ. 20 ರಂದು ಪ್ರಕಟಿಸಲಿರುವ ವಾರ್ಷಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಈ ಎಲ್ಲ `ಆರಂಭಿಕ ಉತ್ತೇಜನ ಕೊಡುಗೆ'ಗಳನ್ನು ನಿರೀಕ್ಷಿಸಬಹುದು ಎಂಬ ಸುಳಿವನ್ನೂ ಅವರು ನೀಡಿದ್ದಾರೆ.
`ಆರ್‌ಬಿಐ' ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಜತೆಯಲ್ಲೇ, ಆರ್ಥಿಕ ಏರಿಳಿತವನ್ನು ಮೊದಲೇ ಅಂದಾಜು ಮಾಡಲು ತಾವು ಆದ್ಯತೆ ನೀಡುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾರುಕಟ್ಟೆ ಚೇತರಿಕೆ: ರಾಜನ್ ಅಧಿಕಾರ ಸ್ವೀಕಾರದ ಬೆನ್ನಲ್ಲೇ ದೇಶದ ಹಣಕಾಸು ಮಾರುಕಟ್ಟೆ ಚೇತರಿಕೆ ಕಂಡಿದೆ. ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ  56 ಪೈಸೆಗಳಷ್ಟು ಚೇತರಿಕೆ ಕಂಡಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವೂ 333 ಅಂಶಗಳಷ್ಟು ಜಿಗಿದಿದೆ.

`ದೇಶದ ಅರ್ಥ ವ್ಯವಸ್ಥೆಯು ತೀವ್ರ ಬಿಕ್ಕಟ್ಟಿನ ಕಾಲಘಟ್ಟದಲ್ಲಿರುವಾಗ ರಾಜನ್ ಅವರು ಅಧಿಕಾರ ಸ್ವೀಕರಿಸಿರುವುದಕ್ಕೆ   ವಿಶೇಷ ಮಹತ್ವ ಇದೆ. ಹೂಡಿಕೆದಾರರಲ್ಲಿ ಇದು ಭಾರಿ ಭರವಸೆ ಮೂಡಿಸಿದೆ.  ಇದರಿಂದ ಅಲ್ಪಾವಧಿ ಬಡ್ಡಿ ದರ (ರೆಪೊ) ಕಡಿತವಾಗದಿದ್ದರೂ, ಏರಿಕೆಯ ಭಯವಂತೂ ಇರಲಿಕ್ಕಿಲ್ಲ' ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಬ್ಯಾಂಕುಗಳು, ವಾಣಿಜ್ಯೋದ್ಯಮ ಸಂಘಗಲೂ  ಅವರ ನೇಮಕವನ್ನು ಸ್ವಾಗತಿಸಿವೆ.

ಸಿ.ಡಿ ದೇಶ್‌ಮುಖ್ ಮತ್ತು ಮನಮೋಹನ್ ಸಿಂಗ್ ಅವರನ್ನು ಹೊರತುಪಡಿಸಿದರೆ `ಆರ್‌ಬಿಐ' ಗವರ್ನರ್ ಹುದ್ದೆಗೇರಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ರಾಜನ್ (50) ಕೂಡ ಒಬ್ಬರು.

ಶೀಘ್ರದಲ್ಲೇ ಅನುಮತಿ: ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ನೀಡುವಲ್ಲಿ ಪಾರದರ್ಶಕತೆಯ ಗರಿಷ್ಠ ಮಾನದಂಡ ಅನುಸರಿಸಲಾಗುವುದು ಮತ್ತು  ಶಾಖೆ ವಿಸ್ತರಣೆಗೆ ಬ್ಯಾಂಕ್‌ಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು ಎಂದೂ  ರಾಜನ್ ಹೇಳಿದ್ದಾರೆ.

`ಆರ್‌ಬಿಐ'ನ ಮಾಜಿ ಗವರ್ನರ್ ಬಿಮಲ್ ಜಲನ್ ಅಧ್ಯಕ್ಷತೆಯಲ್ಲಿನ ಆಂತರಿಕ ಸಮಿತಿ ಈಗಾಗಲೇ ಬ್ಯಾಂಕ್ ಪರವಾನಗಿ ಕೋರಿ ಬಂದಿರುವ 26 ಅರ್ಜಿಗಳನ್ನು ಪರಿಶೀಲಿಸಿದೆ ಎಂದು ಅವರು ಹೇಳಿದರು.

ಹಣದುಬ್ಬರ ಸೂಚ್ಯಂಕ (ಸಿಪಿಐ) ಆಧರಿಸಿದ ಉಳಿತಾಯ ಬಾಂಡ್‌ಗಳು ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬರಲಿದೆ. ಇದರ ಜತೆಯಲ್ಲೇ ಮೊಬೈಲ್ `ಎಸ್‌ಎಂಎಸ್' ಆಧಾರಿತ ನಗದು ವರ್ಗಾವಣೆ ವ್ಯವಸ್ಥೆ  ಜಾರಿಗೆ ತರಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT