ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ಜಾತಿ, ಜಾತಿಯ ಭವಿಷ್ಯ

Last Updated 19 ಮೇ 2013, 19:59 IST
ಅಕ್ಷರ ಗಾತ್ರ

Caste cannot be outcast.
                                   - Anon
ಭೂತವನ್ನು ಆವಾಹಿಸಲು ಮಾನವ ದೇಹವು ಹೇಗೆ ಮಾಧ್ಯಮವಾಗಲೇ ಬೇಕಾಗುತ್ತದೋ ಹಾಗೆಯೆ ಜಾತಿಯ ಅಸ್ತಿತ್ವಕ್ಕೂ ಒಂದು ಮಾಧ್ಯಮ ಬೇಕು. ಮನುಷ್ಯಾಕಾರವಲ್ಲದ ಭೂತವು ಎದುರಾದರೂ ಅದನ್ನು ನಾವು ಗುರ್ತಿಸೆವು. ಮಾಧ್ಯಮದ ನಿರೂಪಣೆಯಿಲ್ಲದೆ ಜಾತಿಯನ್ನು ಯಾರೂ ಗ್ರಹಿಸಲಾರರು. ಮಾಧ್ಯಮಾತೀತವಾದ ಜಾತಿ ಎಂಬುದು ಇರಲು ಸಾಧ್ಯವೇ ಇಲ್ಲ. ಜಾತಿಯ ಸಂದರ್ಭದಲ್ಲಿ ಮಾಧ್ಯಮ ಅಂದರೆ ಜಾತಿ ಆಚರಣೆಗಳು ಮತ್ತು ಅದರ ಅಭಿವ್ಯಕ್ತಿ. ಮೂಲಭೂತವಾಗಿ ಜಾತಿ ಎಂಬುದು ಸಮಾಜೋ-ರಾಜಕಾರಣದ ವೈಪರೀತ್ಯಕ್ಕೆ ಎಡೆಮಾಡಿಕೊಟ್ಟ ಒಂದು ಪರಿಶುದ್ಧ ಪರಿಕಲ್ಪನಾ ನಿರೂಪಣೆ ಎಂದಂತಾಯಿತು. ಜಾತಿಯ ಹೆಸರಿನಲ್ಲಿ ಅಪಾರವಾದ ಜೀವಹಾನಿಯಾಗಿರುವಾಗಲೂ ಈ ಮಾತು ನಿಜ. ಜಾತಿಯ ಭವಿಷ್ಯ ಮತ್ತು ಭವಿಷ್ಯದಲ್ಲಿ ಜಾತಿಯ ಪಾಡನ್ನು ಅರ್ಥಮಾಡಿಕೊಳ್ಳಲು ಈ ಹಿನ್ನೆಲೆ ಅತ್ಯಗತ್ಯ.

ಜಾತಿ ಎಂಬ ಪದ ಮತ್ತು ಅದರ ಅಸ್ತಿತ್ವವನ್ನು ಸಾಬೀತು ಮಾಡುವ ಚಟುವಟಿಕೆಗಳನ್ನು (ಆಚರಣೆ) ತೆಗೆದುಹಾಕಿಬಿಟ್ಟಲ್ಲಿ ಆ ಜಾತಿ ಅಸ್ತಿತ್ವದಲ್ಲಿರುತ್ತದೆಯೆ? ಭವಿಷ್ಯವು ಈ ತಾತ್ವಿಕ ಪ್ರಶ್ನೆಯನ್ನು ತೀವ್ರವಾಗಿ ಎದುರಿಸಬೇಕಾಗುತ್ತದೆ; ಮತ್ತು ಮೀಸಲಾತಿಯನ್ನು ವಿರೋಧಿಸುವ ಐಟಿ ಕಂಪೆನಿ ಮುಂತಾದೆಡೆಯಲ್ಲಿ ಈಗಾಗಲೇ ಈ ಚಿಂತನೆ ಕುಡಿಯೊಡೆಯತೊಡಗಿದೆ. `ವ್ಯಕ್ತಿಯ ಸಾಮರ್ಥ್ಯವೊಂದೇ ಜಾತಿ' ಎಂಬ ಹೊಸ ಜಾತಿಯೊಂದು ಈಗಾಗಲೆ ಅಭಿವೃದ್ಧಿಯ ಹೆಸರಿನ ಆರ್ಥಿಕ ಲಾಭಕೋರರು ಹುಟ್ಟುಹಾಕತೊಡಗಿದ್ದಾರೆ. ಮುಂದೆ ಇದು ಸಾಂಸ್ಥೀಕರಣಗೊಳ್ಳಲಿದೆ. `ಮಾತೆಂಬುದು ಜ್ಯೋತಿರ್ಲಿಂಗ' ಎಂಬ ಹಂಪಿ ವಿಶ್ವವಿದ್ಯಾಲಯದ ಮುಖವಾಣಿಯಂತೆ, `ಶ್ರಮಕ್ಕೆ ಹಣವೊಂದೇ ಸೂಕ್ತ ಪಾರಿತೋಷಕ' ಎಂಬುದು ಆ ನವ-ಜಾತಿ ಸಂಪ್ರದಾಯದ ಧ್ಯೇಯ ವಾಕ್ಯವಾಗಲಿದೆ. ಈ ಹೊಸ ಜಾತಿಯಲ್ಲಿ ಬಹುಪಾಲು ಜನರಿಗೆ ಏನೇನೂ ತಪ್ಪು ಕಾಣುವುದಿಲ್ಲ. ಆದರೆ ರೂಢಿಗತ ಜಾತಿಯೊಳಗಣ ಐತಿಹಾಸಿಕತೆಯನ್ನು ಅದು ತನ್ನ ಕಾರ್ಯಶೈಲಿಯಿಂದಲೇ ನಾಶಮಾಡಲು ಯತ್ನಿಸುತ್ತದೆ.

ಆದ್ದರಿಂದ ಭವಿಷ್ಯದಲ್ಲಿ ಈಗಾಗಲೇ ಅಸ್ಪಷ್ಟವಾಗತೊಡಗಿರುವ ಜಾತಿ ಎಂಬ ಪರಿಕಲ್ಪನೆಯು ತನ್ನ ಈಗಿನ ರೂಪುರೇಷೆಯ ಗುರುತೇ ಸಿಗದಂತೆ ರೂಪಾಂತರಗೊಳ್ಳಲಿದೆ. ಸೌಂದರ್ಯಶಾಸ್ತ್ರದ ಉದಾಹರಣೆಯೊಂದನ್ನು ನೀಡಿ ಇದನ್ನು ವಿವರಿಸಬಹುದಾದರೆ, ಮೈಸೂರು ಸಾಂಪ್ರದಾಯಿಕ ಚಿತ್ರರಚನೆಯು  ಕಲಾಕೃತಿ  ಎಂದು ಸ್ವೀಕೃತವಾಗಿದ್ದ ಕಾಲವೊಂದಿತ್ತು. ಇಂದು ಅದು ಕೇವಲ ಒಂದು ಕರಕುಶಲ ಕಲೆ. ಇಂದು ಕಲೆ ಎಂದು ನಾವು ಗ್ರಹಿಸುವ ಚೌಕಟ್ಟಿನ ಹೊರಗಿನ ಸೃಷ್ಟಿ ಅದು. ಅದು ಕಲಾಕೃತಿಯಾಗಿದ್ದಾಗ ಅದರ ರಚನೆಯನ್ನು (ಆಚರಣೆಯನ್ನು) ನಿರ್ದಿಷ್ಟ ಜಾತಿಯ ಕಲಾವಿದರು, ಅದರಲ್ಲಿ ತಂದೆಯಿಂದ ಮಗನಿಗೆ ದಾಟಿ ಹೋಗುತ್ತಿದ್ದ ಧಾರ್ಮಿಕ-ಜಮೀನ್ದಾರಿ ಆಚರಣೆ. ಅದಕ್ಕಿಂತಲೂ ಮುಖ್ಯವಾಗಿ ತಾಯಿಯಿಂದ ಮಗಳಿಗೆ ಕೊಡಮಾಡಲಾಗದಿದ್ದ ಆಚರಣೆಯೂ ಹೌದು (ಸ್ತ್ರೀವಾದಿ ಪರಿಕಲ್ಪನೆಯ ಅತ್ಯಂತ ಸರಳ ರೂಪವಿದು). ಇದು ಇಂದಿನ ದೃಷ್ಟಿ.

ಮುಂದೊಮ್ಮೆ-ಈ ಉದಾಹರಣೆಗಾಗಿ ಕ್ಷಮೆಯ ಅವಶ್ಯಕತೆ ಇದ್ದಲ್ಲಿ ಕ್ಷಮೆ ಇರಲಿ-ಸಲಿಂಗಕಾಮಿ ಸಂಪ್ರದಾಯವು ಎಲ್ಲೆಡೆ ಸಾರ್ವತ್ರಿಕವಾಗಿ ಅಧಿಕೃತಗೊಂಡಲ್ಲಿ ಆಗ ಈ ಪುರುಷನಿರ್ಮಿತ, ಸ್ತ್ರೀವಿರೋಧಿ, ಕಲೆ-ಕುಶಲಕಲೆಯ ಅಲ್ಲಿಯವರೆಗಿನ ಜ್ಞಾನ ನಿರ್ಮಿತಿಗಳ ಅರ್ಥೈಸುವಿಕೆಯ ಅಧಿಕೃತತೆಯು ಕ್ಷೀಣಿಸಲಿದೆ. ಆಗ ಯಾವ ಹಂತದ  ಮೈಸೂರು ಸಾಂಪ್ರದಾಯಿಕ ಚಿತ್ರಪ್ರಕಾರವನ್ನು  ಒಪ್ಪಬೇಕು? ಮತ್ತು ಅದಕ್ಕಿರುವ ಕಲೆ, ಕುಶಲಕಲೆ ಮತ್ತು ಪುರುಷನಿರ್ಮಿತಿ ಎಂದು ಇರುವ ಮೂರಾದರೂ ಅರ್ಥಗಳಲ್ಲಿ ಯಾವುದಾದರೂ ಒಂದನ್ನು ಏಕೆ ಸ್ವೀಕಾರ ಮಾಡಬೇಕು? ಈ ಉದಾಹರಣೆಯೊಳಗಿನ ಜಾತಿ/ಲಿಂಗ/ವರ್ಗ ಮತ್ತವುಗಳನ್ನು ಕುರಿತಾದ ಸಾಮಾಜಿಕವಾದ ಅರ್ಥೈಸುವಿಕೆಯನ್ನು ಜಾತಿಯು ನಿರ್ಧರಿಸುತ್ತದೆ.  ಕಲಾವಿದ ಕೆ.ವೆಂಕಟಪ್ಪನವರು ಆಂದ್ರಪ್ರದೇಶದಿಂದ ವಲಸೆ ಬಂದ ಮೈಸೂರು ಅರಮನೆಯ ಆರ್ಯವಂಶ ಸೋಮಕ್ಷತ್ರೀಯ ಕಲಾವಿದರ ವಂಶದವರಾಗಿದ್ದರು  ಎಂಬ ವಾಕ್ಯದ ಉವಾಚವೇ ಆಧುನಿಕ, ಸಮಕಾಲೀನ ಕಲಾವಿದರಲ್ಲಿ ನಗೆಬುಗ್ಗೆಯನ್ನು ಉಕ್ಕಿಸಬಹುದು. ಆದರೆ ಕೆ. ವೆಂಕಟಪ್ಪನವರ ಆ ಹಿನ್ನೆಲೆಯೂ ಸೇರಿದಂತೆ ಇನ್ನಿತರೆ ಜಾತಿ-ನಿರ್ದಿಷ್ಟ ಅಂಶಗಳು ಮುಂದೆ ಅವರನ್ನು ಪ್ರಮುಖ ಕರ್ನಾಟಕದ ಆಧುನಿಕ ಕಲಾವಿದರೆಂದು ಪಟ್ಟಾಭಿಷೇಕ ಮಾಡಲು ಕಾರಣ ಎಂಬ ಅಂಶವನ್ನು ಈ ನಗೆಬುಗ್ಗೆಯ ಮಂದಿಯೂ ನಿರಾಕರಿಸಲಾರರು!  ಈ ಮುಂಚೆ ವಿವರಿಸಲಾದ ಮುಂದೊಂದು ದಿನ ಹುಟ್ಟಬಹುದಾದ ಹಣ-ಪ್ರದಾನ ಜಾತಿಗೆ, ಜಾತೀಯ ಇತಿಹಾಸವನ್ನು ಕುರಿತಾದ  ಮೌನವು ಅದ್ಭುತ ಅಸ್ತ್ರವಾಗಿ ಲಭಿಸಲಿದೆ. ಈಗ ವಾಚ್ಯವಾಗಿ ಉವಾಚಿಸದಿರುವ ಜಾತಿ ರಾಜಕಾರಣದ ಲಾಭವನ್ನು ಭವಿಷ್ಯದ ಹಣವಂತ ಜಾತಿಯವರು ಪಡೆದುಕೊಳ್ಳಲಿದ್ದಾರೆ.

ಅಂದರೆ ಸೌಂದರ್ಯಶಾಸ್ತ್ರೀಯ ಅಭಿವ್ಯಕ್ತಿಗಳಲ್ಲಿ ವಾಚ್ಯಾತೀತವಾದ (ಅಂದರೆ ಕಥೆ, ಕಾದಂಬರಿಗಳು ಎಂಬರ್ಥದ) ಮಾಧ್ಯಮಗಳು ಮೌನವನ್ನೂ ಬಂಡವಾಳ ಮಾಡಿಕೊಳ್ಳಲು ಕಾರಣ ವಾಚ್ಯಪ್ರದಾನವಾದ ನಿರೂಪಣೆಯನ್ನು ಆಧರಿಸುವ ಹಿನ್ನೆಲೆ ಇರುವ ಜಾತಿ ಎಂಬುದು ಕೆಟ್ಟದ್ದು, ತಪ್ಪು ಎಂಬ ಪೂರ್ವಗ್ರಹದಿಂದಾಗಿಯೇ. ಆದರೆ ಮೌನದೊಳಗಣ ಜಾತಿರಾಜಕಾರಣವು ಭವಿಷ್ಯದಲ್ಲಿ ಯಾವ ಸದ್ದನ್ನು ಹೊರಡಿಸಿದರೂ ಸರಿ,  ಮೌನಂ ಸಮ್ಮತಿ ಲಕ್ಷಣಂ  ಎಂಬ ನಾಣ್ಣುಡಿಯನ್ನು ಮಾತ್ರ ಸುಳ್ಳಾಗಿಸಲಿದೆ. ಸಮಕಾಲೀನವಾಗಿ ವಾಸ್ತು ನಿರ್ಮಿತಿಯ ಅಚ್ಚರಿ ಎನ್ನಿಸಿರುವ ಟ್ವಿನ್-ಟವರ್ಸ್‌ನ ವಾಸ್ತುಶಿಲ್ಪಿ, ಯಾವುದಕ್ಕೂ ಇರಲಿ ಎಂದು  ಫೆಂಗ್-ಶ್ವೆಯ್ ಯನ್ನು ಅದರಲ್ಲಿ ಅಳವಡಿಸಿದ್ದಾನಂತೆ!

ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಬಹುದು, ಜನರಿಗೆ ಜಾತಿಯ ಸಮಾಜೋ-ರಾಜಕಾರಣದ ಸಂವಾದ, ಪ್ರಭಾವ, ಪರಿಣಾಮಗಳನ್ನು ತಪ್ಪಿಸಿಕೊಳ್ಳಲಿಚ್ಛಿಸುವ ಆದರ್ಶಮಯ ಅವಕಾಶಗಳಲ್ಲಿ ಸೃಜನಾತ್ಮಕ ಅಭಿವ್ಯಕ್ತಿಗಳು ಪ್ರಥಮ. ಅದರಲ್ಲೂ ವಾಚ್ಯತೆ, ಪದಬಳಕೆ ಮುಂತಾದವುಗಳು ಇಲ್ಲದಿದ್ದಲ್ಲಿ ಇನ್ನೂ ಒಳಿತು. ಚಿತ್ರಕಲೆಯಲ್ಲಿ ಸಿನೆಮಾ, ನಾಟಕ, ಟಿವಿ ಸೀರಿಯಲ್ಲಿಗಿಂತ ಕಡಿಮೆ ಸದ್ದು ಮತ್ತು ಪದಬಳಕೆ ಇದೆ ಎಂದಲ್ಲ.  ಜಾತಿ ಅನಿವಾರ್ಯವಾಗಿರುವ ವಾಸ್ತವ ಜಗತ್ತಿನ ಆಗುಹೋಗುಗಳ ಸದ್ದನ್ನು ಮ್ಯೂಟ್ ಮಾಡಿಬಿಡುವ ಸಾಮರ್ಥ್ಯವು ಭವಿಷ್ಯದಲ್ಲಿ ಎಲ್ಲಾ ಸೃಜನಶೀಲ ಅಭಿವ್ಯಕ್ತಿಗಳ ಮೊದಲ ಪ್ರಯತ್ನವಾಗಿರುತ್ತದೆ ಎಂದರೆ ಇದರ ವಿರುದ್ಧ ಈಗ ಸೃಜನಶೀಲರಲ್ಲದವರು ಸೃಜನಾತ್ಮಕವಾಗಿ ಮುಗಿಬಿದ್ದಾರು, ಜೋಕೆ.
***
ಭವಿಷ್ಯದಲ್ಲಿ ಅಥವಾ ಜಾತಿಯ ಮುಂದುವರಿದ ರೂಪವೆಂಬುದು ಎರಡು ರೀತಿಯಲ್ಲಿ ಪರಸ್ಪರ ಘರ್ಷಣೆಗಿಳಿಯುವ ಅಪರೂಪದ ಪ್ರಸಂಗ ಒದಗಲಿದೆ. ಎದುರಾಳಿಗಳು ಪರಸ್ಪರ ಒಂದೇ ಅವತಾರದ (ಜಾತಿಯೆಂಬ) ಹೆಸರನ್ನು ಹೊಂದಲಿದ್ದಾರೆ! 1. ಆರ್ಥಿಕ ಲಾಭವೇ ಸರ್ವಸ್ವವೆಂಬ ಒಂದು ಜಾತಿ. 2. ಸೌಂದರ್ಯಶಾಸ್ತ್ರೀಯತೆಗೆ ಮಾತ್ರ ಅಂಟಿಕುಳಿತ ಕಲಾತ್ಮಕ ಅಭಿವ್ಯಕ್ತಿಕಾರ ಮತ್ತೊಂದು ಜಾತಿ. ಇವರು ಪರಸ್ಪರ ತಮ್ಮ ರೂಪಕ ಶಕ್ತಿಗಳಿಂದಲೇ ಲೇವಡಿ ಮಾಡಿಕೊಳ್ಳುವಂತಹ ಜಾತಿಗಳ ನಡುವಣ ಘರ್ಷಣೆಯಲ್ಲಿ ಜ್ಞಾನ, ಶಕ್ತಿ, ರಾಷ್ಟ್ರ ಮುಂತಾದ ಪರಿಕಲ್ಪನೆಗಳನ್ನು ವಿಕ್ಷಿಪ್ತವಾಗಿ ಪರೀಕ್ಷೆಗೊಡ್ಡಲಾಗುತ್ತದೆ. ಅತ್ತ ಸಹಜವಾಗಿ, ಹೊಸ ಮಾಧ್ಯಮದ ಮುಖಾಂತರವೇ ರೂಪಾಂತರಗೊಳ್ಳಲಿರುವ ಈ ಮೂರೂ ಅಂಶಗಳು ಮತ್ತೊಂದು ಅವಳಿ-ಜವಳಿ ಪರಿಕಲ್ಪನೆಯನ್ನು ಹುಟ್ಟುಹಾಕಲಿದೆ. ಅಂದರೆ ಮುಂದೊಮ್ಮೆ ಒಂದೇ ಹೆಸರಿನ ಎರಡು ಪರಸ್ಪರ ವಿರುದ್ಧ ಜಾತಿಗಳು ಜ್ಞಾನ, ಶಕ್ತಿ, ರಾಷ್ಟ್ರವೆಂಬ ಪರಿಕಲ್ಪನೆಗಳನ್ನು ಮಾರ್ಪಾಡು ಮಾಡುತ್ತಿದ್ದರೆ, ಅನ್ಯನಿಮಿತ್ತ ಕಾರಣಗಳಿಂದಲೂ ಈ ಮೂರೂ ಅಂಶಗಳು ಬದಲಾಗುತ್ತಿರುತ್ತವೆ. ಆಗ ನವಸಂಜಾತ ಅವಳಿ-ಜಾತಿಗಳನ್ನೊಳಗೊಂಡಂತೆ ಎರಡು ಭಿನ್ನ ಮೂಲಗಳಿಂದ ರೂಪಾಂತರ ಹೊಂದಬೇಕಾದ ಜ್ಞಾನ-ಶಕ್ತಿ-ರಾಷ್ಟ್ರಗಳು ಅರಿಯದೇ ಹೋಗುವಷ್ಟು ಸಂಕೀರ್ಣಗೊಂಡುಬಿಡುವ ಅಂಶವೊಂದಿರುತ್ತದೆ. ಯಾವ ಜಾತಿಗಳು ತಮ್ಮನ್ನು ಬದಲಿಸಲು ಯತ್ನಿಸುತ್ತಿವೆಯೋ, ಆ ಜಾತಿಗಳೇ ಹುಟ್ಟುಹಾಕಿದ ಜ್ಞಾನಪ್ರಕಾರದ ಶಕ್ತ ರಾಷ್ಟ್ರಗಳು ತಾವೇ ಎಂಬುದನ್ನು ಅರಿಯದೇ ಹೋಗುತ್ತವೆ. ಸೃಷ್ಟಿ ಮತ್ತು ಸೃಷ್ಟಿಕರ್ತ ಇತಿಮಿತಿಯನ್ನೇ ಮೈಮೇಲೆ ಹೊತ್ತುಕೊಳ್ಳುವುದರಿಂದಾಗಿ, ಆಗ ಸ್ವತಃ ಜಾತಿಯೇ ಅಪಾರವಾದ ಶಕ್ತಿ ಹೊಂದಿದ್ದರೂ ಸಹ, ಒಂದೇ ಹೆಸರಿನ ಎರಡೆರೆಡು ವೈರುಧ್ಯ ಸಂರಚನೆ ಹೊಂದಿದ್ದರೂ ಸಹ (ಹೊಂದಿರುವುದರಿಂದಲೇ) ಕ್ಷೀಣಿಸತೊಡಗುತ್ತದೆ. ಸೋವಿಯತ್ ರಷ್ಯವನ್ನು ಅಂತ್ಯಗೊಳಿಸುವ ಯತ್ನದಲ್ಲಿ ಸ್ವತಃ ಗೊರ್ಬಚೆವ್ ಅಧಿಕಾರವಿಹೀನರಾದಂತೆ ಇದು.
***
ಅಂದರೆ ಜ್ಞಾನವು ಒಂದು ಶಕ್ತಿ ಎಂದು ನಂಬಲು ರಾಷ್ಟ್ರದ (ಮತ್ತು ಧರ್ಮ) ಪರಿಕಲ್ಪನೆ ಈಗ ಹೇಗೆ ಮುಖ್ಯವಾಗಿದೆಯೋ, ಹಾಗೆ ಭವಿಷ್ಯದಲ್ಲಿ ರಾಷ್ಟ್ರವು ಭೌತಿಕವಾಗಿರುವುದಿಲ್ಲ, ಭೌತಿಕವಾಗಿ ಮಾತ್ರ ಅಸ್ತಿತ್ವದಲ್ಲಿರುವುದಿಲ್ಲ. ನಮ್ಮ ಈಗಿನ ಕಲ್ಪನೆಯ ಇತಿಮಿತಿಯೊಳಗಿನಿಂದ ಹೇಳಬಹುದಾದರೆ ಆನ್‌ಲೈನ್-ಸಂಸಾರ ಸಾಗಿಸುವವರು ( ಜಪಾನೀಸ್ ವೈಫ್  ಸಿನೆಮ ನೆನೆಸಿಕೊಳ್ಳಿ), ವರ್ಚುಯಲ್, ಸಿಮ್ಯುಲೇಷನ್ ಮುಂತಾದ ಕೈಗಾರಿಕೆಗಳ (ಐಟಿ, ಕಾಲ್-ಸೆಂಟರ್, ಮಾಹಿತಿ ತಂತ್ರಜ್ಞಾನ ಇತ್ಯಾದಿ) ಫಲಾನುಭವಿಗಳು ಪುರಾತನ ಜಾತಿಗಳ ಇತಿಹಾಸವನ್ನು ಓದಿ  ಮನುಷ್ಯರು ಹೀಗೆಲ್ಲಾ ಬದುಕಿದ್ದರೆ  ಎಂದು ಗಾಬರಿಗೊಂಡು, ಯಾವ ರೀತಿಯಲ್ಲಿಯೂ ಭವಿಷ್ಯದಲ್ಲಿ ಪ್ರಸ್ತುತವಾಗದ ಜಾತೀಯ ಇತಿಹಾಸಗಳನ್ನು ಜಪಾನೀ ಕಾಮಿಕ್‌ಗಳ ಶೈಲಿಯಲ್ಲಿ (ಈಗ ಈ ಶೈಲಿಯಲ್ಲಿ  ರಾಮಾಯಣವು ಬಂದಾಗಿದೆ) ಫ್ಯಾಂಟಸಿ-ಸಾಹಿತ್ಯವನ್ನಾಗಿ ರೂಪಾಂತರಿಸುವ ಬಿಲ್ ಪಾಸು ಮಾಡಲಿದ್ದಾರೆ.

ಇತ್ತ ಕೌಟುಂಬಿಕ ನೆಲೆಯಲ್ಲಿ ಒಂದೊಮ್ಮೆ ಮತ್ತು ಈಗಲೂ ಸಹ ತಮ್ಮ ವಂಶವೃಕ್ಷವನ್ನು ಹುಡುಕುವವರಿರುವಂತೆ ಭವಿಷ್ಯತ್ತಿನಲ್ಲಿ ತಡಕಾಡುವವರಿಗೆ ಹೊಸದೊಂದು ಕ್ರಿಯಾತ್ಮಕ ಸಮಸ್ಯೆ ಉದ್ಭವಿಸಿಬಿಟ್ಟಿರುತ್ತದೆ (ನೆನಪಿರಲಿ ಭವಿಷ್ಯದಲ್ಲಿ  ಕ್ರಿಯಾತ್ಮಕ  ಎಂಬುದಕ್ಕೆ  ಜಾತಿಯ ಮೌನ ರಾಜಕಾರಣ  ಎಂಬ ಅರ್ಥವೂ ಇರುತ್ತದೆ). ಸಲಿಂಗ-ಕುಟುಂಬಗಳಿಗೇ ನಿರ್ದಿಷ್ಟವಾದ ಸಮಸ್ಯೆ ಅದು. ಅದರೊಳಗೊಂದು ಅಂತರ್ಜಾತಿ ವಿವಾಹ ಎಂಬುದು ಹುಟ್ಟಿಕೊಂಡಲ್ಲಿ ತಂದೆಯ ಜಾತಿಯನ್ನು ಮಕ್ಕಳಿಗೆ ನೀಡುವ ಅಭ್ಯಾಸದಲ್ಲಿ ಎರಡು ವಿರುದ್ಧ ಜಾತಿಗಳ ಸಮ್ಮಿಶ್ರ ತಳಿಯ ವಿಶಿಷ್ಟ ಸಂಜಾತಿಯೊಂದು ಹುಟ್ಟಿಕೊಳ್ಳಬಹುದು. ದತ್ತು  ತೆಗೆದುಕೊಳ್ಳುವುದು ಒಂದು ಸಂಪ್ರದಾಯವೇ ಆಗಿಬಿಟ್ಟು  ಜಾತಿಗೆ ಯಾವ ರೀತಿಯಲ್ಲಿಯೂ ಡಿ.ಎನ್.ಎ ಸಾಕ್ಷಿಯಾಗಲಾರದು. ರೂಢಿಗತ ಜಾತಿಯ ವಂಶಪಾರಂಪರ್ಯಕ್ಕೆ ಆಗ ಮರ್ಮಾಘಾತವಾಗಬಹುದು.

ಈಗಾಗಲೇ ವಿವರಿಸಲಾಗಿರುವಂತೆ ಭವಿಷ್ಯದಲ್ಲಿ  ಹಣವಂತ ಜಾತಿ-ಸೃಜನಶೀಲ ಜಾತಿ ಎಂಬ ಎರಡು ಜಾತಿಗಳ ಬೆರಕೆಯ ಶಿಶುಗಳಿಗೆ ದತ್ತು ಸ್ವೀಕಾರದಿಂದ ಸಲಿಂಗೀಯ ಸಂಜಾತ ಜಾತಿಯನ್ನು ಲಭಿಸಿಕೊಂಡವರು ಪೂರ್ವಸೂರಿಗಳಾಗಿಬಿಡುತ್ತಾರೆ. ಆಗಿನ ಕುಟುಂಬ ವ್ಯವಸ್ಥೆಯಲ್ಲಿ  ಸ್ಪರ್ಶಾತೀತವಾದ ಸಂಬಂಧಗಳು ಅಪ್ಯಾಯಮಾನವಾಗಿ, ಪ್ಲೇಟಾನಿಕ್-ಸಂಸಾರಗಳದ್ದೂ ಒಂದು ಮುಖ್ಯ ಮತವಾಗಲಿದೆ. ಈಗ ಜ್ಞಾನಕ್ಕೆ ಆಗಿರುವಂತೆ ( ವಿಕಿಪೀಡಿಯ ಒದಗಿಸುವ ಜ್ಞಾನಕ್ಕೆ ಯಾವುದೇ ಊರ್ಜಿತತೆ ಇಲ್ಲ ಎಂದು ಅದು ಔಪಚಾರಿಕವಾಗಿ ಘೋಷಿಸಿಕೊಂಡಿದ್ದಾಗಿದೆ) ಮುಂದೊಮ್ಮೆ ದೇಶ ಮತ್ತು ಕುಟುಂಬಗಳು ವಾಸ್ತವ ಹಂತವನ್ನು ದಾಟಿ ವರ್ಚ್ಯುಯಲ್ ಆಗಿರುತ್ತದೆ. ಒಂದು ನಿರ್ದಿಷ್ಟ ಕಾಲಕ್ಕೆ ಮಾತ್ರ ದೇಶ, ಕುಟುಂಬಗಳು ಅಸ್ತಿತ್ವದಲ್ಲಿರಬೇಕೆಂದೂ, ತದನಂತರ ಅವುಗಳ ಹೆಸರು, ಸ್ಥಳ, ಸ್ಥಾನಗಳು ಬದಲಾಯಿಸಬೇಕೆಂದು ಯುನೈಟೆಡ್ ನೇಷನ್ಸ್, ತನ್ನ ಭೌಗೋಳೀಕರಣದ ಏಕರೂಪಿ ಬದುಕಿನ ಆದರ್ಶಕ್ಕನುಗುಣವಾಗಿ ಪ್ರಚಾರ ಕೈಗೊಳ್ಳಲಿದೆ. ಇದಕ್ಕೆ ಪೂರ್ವಸೂರಿಗಳು ಈಗಾಗಲೇ ಆಗಿ ಹೋಗಿದ್ದಾರೆ: ಈಗಿನ್ನೂ ಹಾಟ್‌ಮೈಲ್, ಆರ್‌ಕುಟ್‌ಗಳನ್ನು ಬಳಸುವವರಿದ್ದರೆ, ಅಂತಹವರನ್ನು ಸ್ವಲ್ಪ ವಿಚಿತ್ರವಾಗಿ ನೋಡುವುದಿಲ್ಲವೆ, ಹಾಗೆ ಇದು. ಭವಿಷ್ಯದ ಆನ್‌ಲೈನ್  ಸಂಸಾರಗಳು ವಾಸ್ತವ ಕುಟುಂಬದ ವ್ಯಾಖ್ಯೆಗೆ ತಿಲಾಂಜಲಿ ಇಡಲಿರುವುದಕ್ಕೆ ಕಾರಣ ಜಾತಿ-ಸಂಜಾತ ಇತಿಹಾಸದೊಳಗಿನ ಕೆಲಸಕ್ಕೆ ಬಾರದ ಸಮಾಜೋ-ರಾಜಕೀಯ ಸಮಸ್ಯೆಗಳನ್ನು ಮಾತ್ರ ಕೇಂದ್ರೀಕರಿಸಿರುವುದು. ಮತ್ತು ಜಾತಿವ್ಯವಸ್ಥೆಯೊಳಗೆ ಇರುವ ಅದ್ಭುತ ಫ್ಯಾಂಟಸಿಯ ಅಂಶಗಳನ್ನು ತಮ್ಮ ಪೂರ್ವಸೂರಿಗಳು ಬಳಸದ ದಡ್ಡತನವನ್ನು ಕುರಿತಾದ ಸಿಟ್ಟೂ ಭವಿಷ್ಯದಲ್ಲಿ ಆಗಿನ ಜಾತಿಯ ಸುತ್ತ ಕೆಲಸ ಮಾಡಲಿದೆ.

ಭವಿಷ್ಯದ ಶೈಕ್ಷಣಿಕ ಕ್ಷೇತ್ರಗಳಲ್ಲಿ ಆಬಾಲವೃದ್ಧ  ಗುರುಗಳೆಲ್ಲರೂ ಈ ಫ್ಯಾಂಟಸಿಯಲ್ಲಿ ಆಸಕ್ತರಾಗಿದ್ದರೂ, ಹೊಸದಾಗಿ ಹುಟ್ಟಿಕೊಂಡಿರುವ ಪರಿಕಲ್ಪನಾತ್ಮಕ ರಾಷ್ಟ್ರದ (ವರ್ಚುಯಲ್ ನೇಷನ್) ಹಿನ್ನೆಲೆಯಲ್ಲಿ ಅದನ್ನು ಹೇಗೆ ಅರಗಿಸಿಕೊಳ್ಳುವುದು ಎಂದು ತಿಳಿಯಲಾಗದೆ, ದತ್ತಿ ನೀಡಲಿರುವ ಸಂಸ್ಥೆಯ ಆಶಯದಂತೆ ತಮ್ಮ ವಾಗ್ಯುದ್ಧಗಳನ್ನು ಜಾತಿಗೆ ಸಂಬಂಧಿಸಿದಂತೆ ರೂಪಾಂತರಿಸಿಬಿಡುವ ನಿರಾಳತೆಯನ್ನು ಮುಂದುವರೆಸಲಿದ್ದಾರೆ. ಅಂತಹ ಸ್ವಾತಂತ್ರ್ಯ ನೀಡಿದ ಹೊಸ ಜಾತಿ ವ್ಯವಸ್ಥೆಯನ್ನು, ಅದು ವರ್ಚ್ಯುಯಲ್ ಆದರೂ ಸಹ, ತಮ್ಮೆರೆಡೂ ಕೈಗಳಿಂದ ಅಪ್ಪಿಕೊಳ್ಳಲಿದ್ದಾರೆ. ಅವರುಗಳ ಅರ್ಥಸೂಚಿಗಳಲ್ಲಿ  ಭಿನ್ನ ಹಾಗೂ ವಿರುದ್ಧಾರ್ಥಗಳನ್ನು ಸೂಚಿಸುತ್ತ, ಒಂದೇ ಹೆಸರನ್ನು ಬಯಸುವ ಅಭೀಪ್ಸೆಗೆ ಜಾತಿ ಎನ್ನುತ್ತಾರೆ ಎಂಬ ವ್ಯಾಖ್ಯೆ ಹುಟ್ಟಿಕೊಳ್ಳಬಹುದು!
***
ಭವಿಷ್ಯದಲ್ಲಿ ಜಾತಿಯ ಈ ಸಂಕೀರ್ಣಾವಸ್ಥೆಗೆ ಪದ ಮತ್ತು ಆಚರಣೆಗಳೇ ಪ್ರಮುಖ ಕಾರಣವಾಗುವುದರಿಂದ, ಅವೆರಡನ್ನೂ ಹೊರತುಪಡಿಸಿದ ಜಾತಿಯೊಂದರ ಇರುವಿಕೆ ಸಾಧ್ಯವೆ ಎಂದು ಮತ್ತೆ ಮತ್ತೆ ಶೋಧಿಸಲಾಗುತ್ತದೆ. ಏಕೆಂದರೆ ಜಾತಿ ನಮ್ಮನ್ನು ಬಿಟ್ಟರೂ ನಾವು ಜಾತಿಯನ್ನು ಬಿಡುವುದಿಲ್ಲವಲ್ಲ. ಈ ನಂಬಿಕೆಗೆ ಮಾತ್ರ ಭೂತ-ವರ್ತಮಾನ-ಭವಿಷ್ಯತ್ ಎಂಬ ಭೇದಭಾವವೇನು ಇರುವುದಿಲ್ಲ.

ಜಾತಿಯನ್ನು ನಿರೂಪಿಸುವ ಲಾಂಛನಗಳು ರೂಪಾಂತರ ಹೊಂದತೊಡಗಿದಾಗ ಉದ್ಭವವಾಗುವ ಮೊದಲ ಸಮಸ್ಯೆ ಎಂದರೆ ಅದರ ಅಸಲಿ ರೂಪದ ಅಧಿಕೃತತೆ. ಈ ಹಿನ್ನೆಲೆಯಲ್ಲಿ ಮುಂದೊಮ್ಮೆ ಹಿಂದಿರುಗಿ ನೋಡಿದಾಗ ಜಾತಿಗೆ ಹಿಂದೆಯೂ ಮೂಲಸ್ವರೂಪ ಮತ್ತು ನಿಶ್ಚಿತ ವ್ಯಾಖ್ಯಾನ ಎಂಬುದು ಇರಲೇ ಇಲ್ಲ ಎಂಬುದು ಕುತೂಹಲದ ವಿಷಯವಾಗಿಬಿಡುತ್ತದೆ. ಮತ್ತು ಇದಕ್ಕೆ ಕಾರಣ ಹಿಂದಿನ ಹಲವು ಕಾಲಘಟ್ಟಗಳಲ್ಲಿ ಒಂದೇ ಜಾತಿಯ ವ್ಯಾಖ್ಯಾನ ಹಲವು ವಿಧದಲ್ಲಿರುವುದು ಕಂಡುಬಂದಿರುವುದೂ ಆಗಿರುತ್ತದೆ.

ಹಾಗಿದ್ದರೆ ಜಾತಿ ಪದ್ಧತಿಯ ಸಮಸ್ಯೆಗಳ ಪಾಡೇನು? ಅವೂ ಸಹ ಹಾಗೆಯೇ ಉಳಿಯಲಿವೆ! ಜಾತಿ ರಾಜಕಾರಣ, ಜಾತ್ಯತೀತತೆಯ ಆದರ್ಶದ ಪರಿಕಲ್ಪನೆ, ಜಾತಿವಾರು ಮೀಸಲಾತಿ, ಅದನ್ನು ಕುರಿತ ಅದರಿಂದ ವಂಚಿತರಾದವರ ತಳಮಳ ಇತ್ಯಾದಿಗಳು ಗಣನೀಯವಾಗಿ ತಂತ್ರಜ್ಞಾನ ಪ್ರಣೀತ ವರ್ಚ್ಯುಯಲ್ ಜಗತ್ತಿನ ಭಾಷೆಗೆ ಭಾಷಾಂತರವಾಗಲಿವೆ. ಮುಂದೊಮ್ಮೆ ಜಾತಿಯ ಮತ್ತು ಅದರ ಇತಿಹಾಸ ಕುರಿತಾದ ಸಂಶೋಧನೆಯು ಗ್ಲುಕೋಮದ ಪರಿಸ್ಥಿತಿಯಂತಾಗುತ್ತದೆ. ಪರ್ಯಾಯ ಮಾರ್ಗದಲ್ಲಿ ಮಾತ್ರ ಶೋಧಿಸಲಾಗುತ್ತದೆ. ತದನಂತರ, ಅದರ ಅಗತ್ಯವೇನೆಂಬುದನ್ನು ಕುರಿತ ನೈತಿಕ ಪ್ರಶ್ನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜಾತಿಗೆ ವೈಜ್ಞಾನಿಕತೆ ಮತ್ತು ನೈತಿಕ ಸಮಸ್ಯೆಗಳ ಅವಶ್ಯಕತೆಗಳು ಏಕೆ ಎಂದು ವಾದಿಸುವವರಿಗೆ, ಬದುಕಿನ ಮೂಲಭೂತ ಗುರಿಗಳ ರಿಹ್ಯಾಬಿಲಿಟೇಷನ್ ಕೇಂದ್ರಗಳು ಆರಂಭಗೊಳ್ಳುತ್ತವೆ.

ಅಂತಿಮವಾಗಿ ವರ್ಚ್ಯುಯಲ್ ಜಗತ್ತಿನ ಅಧಿಪತಿಗಳು, ಅದಾಗಲೇ ಕಾಲಬದ್ಧ ದೇಶ, ಆದೇಶ-ನಿರ್ದಿಷ್ಟ ಜ್ಞಾನಶಾಖೆಗಳ ಪಂಡಿತರು ಶೋಧಿಸಲಿರುವುದೇನೆಂದರೆ: ಜಾತಿ ಎಂಬುದು ಅದನ್ನು ಹುಟ್ಟುಹಾಕಿದವನ/ಳ ವೀಕ್‌ನೆಸ್ ಅನ್ನು ಸೂಚಿಸುವಷ್ಟು, ಅದು ಧಮನಿಸಿದ ವರ್ಗವನ್ನು ನಿರೂಪಿಸುವುದಿಲ್ಲ ಎಂದು!  ವೃತ್ತಿನಿರ್ದಿಷ್ಟವಾಗಿ ಜಾತಿ ಹುಟ್ಟಿದ್ದು  ಎಂಬ ವಾದವನ್ನು ಮಾಹಿತಿ-ತಂತ್ರಜ್ಞಾನವನ್ನೇ ವೃತ್ತಿಯಾಗಿ ಹೊಂದಲಿರುವ ಭವಿಷ್ಯತ್ತಿನ ಮಂದಿ ಹಾಸ್ಯ ಮಾಡುತ್ತ,  ಹಾಗಿದ್ದರೆ ನನ್ನದು ಎಚ್‌ಟಿಎಂಎಲ್ ಜಾತಿ, ನಿನ್ನದು ಗೂಗಲ್ ಜಾತಿ ಎಂದು ಲೇವಡಿ ಮಾಡಲಿದ್ದಾರೆ. ನಾನು ಉಳಿದವರಿಗಿಂತಲೂ ಮೇಲು ಎಂದು ಸಾಬೀತುಪಡಿಸಿದರೂ, ಮುಂದೊಮ್ಮೆ ಮತ್ಯಾರೋ ತನಗಿಂತ ಮೇಲಾಗಿಬಿಡುವುದರಿಂದ, ಆತನನ್ನು/ಆಕೆಯನ್ನು ಈಗಲೇ ನಿಯಂತ್ರಣದಲ್ಲಿರಿಸುವುದೂ ಸಹ ಅಂತಹ ಪ್ರತಿಭೆಯ ಭಾಗವಾಗಿಬಿಡುತ್ತದೆ. ಹೀಗೆ ನಿಯಮಿತವಾಗಿ ನಿಯಂತ್ರಿಸುವವರಲ್ಲಿ ಕೆಲವರಿಗೆ ತಾವು ಧಮನಕ್ಕೊಳಪಡಿಸುತ್ತಿರುವವರ ಬಗ್ಗೆ ಅನುಕಂಪ ಸೂಚಿಸುತ್ತ  ತಾಂತ್ರಿಕ-ಮೀಸಲಾತಿಯನ್ನು ಹುಟ್ಟುಹಾಕಲಿದ್ದಾರೆ. ನಿಜಕ್ಕೂ ಇತರರ ಬಗ್ಗೆ ಅನುಕಂಪ ಹೊಂದಿದಾತ, ಮೊದಲು ತನ್ನಲ್ಲಿನ ಪಾಪಪ್ರಜ್ಞೆಯನ್ನು ತೀವ್ರಗೊಳಿಸಿ, ವರ್ಚ್ಯುಯಲ್-ರಾಜಕಾರಣದ ನಾಯಕನಾಗುತ್ತಾನೆ (ಹುತಾತ್ಮನಾಗುವ ಮುನ್ನ). ಭಾಷೆ, ವಾಚನ, ನಿರೂಪಣೆಗಳಲ್ಲಿ ಕೊನೆಯದನ್ನು ಉಳಿಸಿಕೊಂಡು, ಮೊದಲೆರಡನ್ನು ಅಳಿಸಿ ಹಾಕಿ ವಾಚ್ಯ-ಲಿಖಿತ-ದೃಶ್ಯ ಭಾಷೆಯ ಜಾಗದಲ್ಲಿ ಸಾರ್ವತ್ರಿಕ ಗಣಿತದ ಭಾಷೆಯೊಂದನ್ನು ಆಚರಣೆಗೆ ತರುವ ಬೃಹತ್ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಲಿದ್ದಾನೆ.  ಎಡಕ್ಕಿರುವ ಸೊನ್ನೆ ನಾಲಾಯಕ್ಕು, ಬಲಕ್ಕೆ ಬಂದರೆ ಹತ್ತು ಪಟ್ಟು ಹೆಚ್ಚುಗಾರಿಕೆ  ಎಂಬುದು ಆತನ ಸಂಖ್ಯಾವಾಕ್ಯ (ಹಿಂದೊಮ್ಮೆ ವೇದವಾಕ್ಯವಿದ್ದಂತೆ) ಆಗಲಿದೆ. 420, 13, 786 ಇವೇ ಮುಂತಾದ ಅಂಕಿಗಳ ಶಾಪಗ್ರಸ್ತ ಮತ್ತು ಸೌಲಭ್ಯಗಳನ್ನು ಶೂನ್ಯಗೊಳಿಸಲಿದ್ದಾನೆ. ರೂಢಿಗತ ಜಾತಿ ಮತ್ತು ತಂತ್ರಾಂಶ ಜಾತಿಯ ಜನರ ನಡುವೆ ಮೂರನೇ ಪ್ರಪಂಚ ಯುದ್ಧವಾಗಿ, ಮೊದಲನೆಯ ವರ್ಗದವರು ಭೂಗತರಾಗಲಿದ್ದಾರೆ. ಅದಕ್ಕೆ ಕೌಂಟ್‌ಡೌನ್ ಆರಂಭವಾಗಿದೆ 9..8..7..6..5..4..3..2..1.....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT