ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯಲಕ್ಷ್ಮೀ ಬಾಂಡ್‌ಗೆ ಅಲೆದಾಟ

Last Updated 12 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಚಾಮರಾಜನಗರ: ಭಾಗ್ಯಲಕ್ಷ್ಮೀ ಯೋಜನೆಯ ಪಾಲುದಾರ ಹಣಕಾಸು ಸಂಸ್ಥೆಯಾದ ಭಾರತೀಯ ಜೀವವಿಮಾ ನಿಗಮಕ್ಕೆ(ಎಲ್‌ಐಸಿ) ರಾಜ್ಯ ಸರ್ಕಾರ 2011-12ನೇ ಸಾಲಿನಡಿ ನಿಗದಿತ ಠೇವಣಿ ಮೊತ್ತ ಪಾವತಿಸದಿರುವ ಪರಿಣಾಮ ಜಿಲ್ಲೆಯಲ್ಲಿ ಫಲಾನುಭವಿಗಳು ಬಾಂಡ್‌ಗಾಗಿ ಅಲೆದಾಡುವಂತಾಗಿದೆ.

ಸರ್ಕಾರದ ನಿರ್ಲಕ್ಷ್ಯದಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಫಲಾನುಭವಿಗಳು ನಿತ್ಯವೂ ಎಡತಾಕುತ್ತಿದ್ದಾರೆ. ಅಧಿಕಾರಿಗಳ ಸಿದ್ಧ ಉತ್ತರ ಕೇಳಿ ನಿರಾಸೆಯಿಂದ ಮನೆಯತ್ತ ಹೆಜ್ಜೆಹಾಕುವಂತಾಗಿದೆ. ಕಳೆದ ಸಾಲಿನಡಿ ಭಾಗ್ಯಲಕ್ಷ್ಮೀ ಬಾಂಡ್‌ಗಳೇ ಬಂದಿಲ್ಲ. ಈ ಹಿನ್ನೆಲೆಯಲ್ಲಿ 2012-13ನೇ ಸಾಲಿನಡಿ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ. ಹೀಗಾಗಿ, ಫಲಾನುಭವಿಗಳು ಕಂಗಾಲಾಗಿದ್ದಾರೆ.

ಸರ್ಕಾರ 2006-07ನೇ ಸಾಲಿನಡಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಅನುಷ್ಠಾನಗೊಳಿಸಿತು. ಮೊದಲ ಹೆಣ್ಣುಮಗುವಿಗೆ ಮಾತ್ರವೇ ಈ ಯೋಜನೆಯನ್ನು ಸೀಮಿತಗೊಳಿಸಲಾಗಿತ್ತು. 2008-09ನೇ ಸಾಲಿನಡಿ ಎರಡನೇ ಹೆಣ್ಣುಮಗುವಿಗೂ ಯೋಜನೆಯಡಿ ಸೌಲಭ್ಯ ವಿಸ್ತರಿಸಲಾಯಿತು.

ಮೊದಲ ಮಗುವಿಗೆ 19,300 ರೂ ಹಾಗೂ ಎರಡನೇ ಮಗುವಿಗೆ 18,350 ರೂಗಳನ್ನು ಎಲ್‌ಐಸಿ ಸಂಸ್ಥೆಯಲ್ಲಿ ನಿಶ್ಚಿತ ಠೇವಣಿ ಇಟ್ಟು 18 ವರ್ಷದ ನಂತರ 1 ಲಕ್ಷ ಮೊತ್ತವನ್ನು ದೊರೆಕಿಸಿಕೊಡುವ ಉದ್ದೇಶ ಹೊಂದಲಾಗಿತ್ತು. ಜತೆಗೆ, ಫಲಾನುಭವಿಯು 15ವರ್ಷ ತಲುಪಿದಾಗ ಹಾಗೂ 10ನೇ ತರಗತಿಯಲ್ಲಿ ಉತ್ತೀರ್ಣಳಾದರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಗೀಕೃತ ಬ್ಯಾಂಕ್‌ಗಳಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಅನ್ನು ಅಡಮಾನವಿಟ್ಟು 50 ಸಾವಿರ ರೂ ಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಪ್ರಸಕ್ತ ಸಾಲಿನಲ್ಲಿ ಯೋಜನೆಯಡಿ ಹೆಸರು ನೋಂದಣಿ ಮಾಡಿಸಲು ದಾಖಲಾತಿಯೊಂದಿಗೆ ಸಿದ್ಧತೆ ನಡೆಸಿರುವ ಜಿಲ್ಲೆಯ ಫಲಾನುಭವಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಕಾಯಂ ಬಿಪಿಎಲ್ ಚೀಟಿ: ಕಳೆದ ಏಪ್ರಿಲ್‌ನಿಂದ ಭಾಗ್ಯಲಕ್ಷ್ಮೀ ಯೋಜನೆಯಡಿ ಸೌಲಭ್ಯ ಪಡೆಯಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಜತೆಗೆ, ಕಡ್ಡಾಯವಾಗಿ ಮಗುವಿನ ಪೋಷಕರು ಕಾಯಂ ಬಿಪಿಎಲ್ ಪಡಿತರ ಚೀಟಿಯನ್ನು ಹಾಜರುಪಡಿಸಬೇಕಿದೆ.

ಆದರೆ, ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಲವು ಕುಟುಂಬಗಳಿಗೆ ತಾತ್ಕಾಲಿಕ ಬಿಪಿಎಲ್ ಚೀಟಿ ನೀಡಲಾಗಿದೆ. ಇಂದಿಗೂ ಅವರಿಗೆ ಕಾಯಂ ಪಡಿತರ ಚೀಟಿ ಸಿಕ್ಕಿಲ್ಲ. ಮತ್ತೊಂದೆಡೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಾತ್ಕಾಲಿಕ ಪಡಿತರ ಚೀಟಿಯನ್ನು ಅಂಗೀಕರಿಸುತ್ತಿಲ್ಲ. ಇದರ ಪರಿಣಾಮ ಫಲಾನುಭವಿಗಳು ತೊಂದರೆಗೆ ಸಿಲುಕಿದ್ದಾರೆ. ತಾತ್ಕಾಲಿಕ ಚೀಟಿ ಪಡೆದಿರುವ ಅರ್ಹರಿಗೆ ಕಾಯಂ ಬಿಪಿಎಲ್ ಚೀಟಿ ನೀಡುವಂತೆ ಆಹಾರ ಇಲಾಖೆಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎನ್ನುವುದು ಫಲಾನುಭವಿಗಳ ಅಳಲು.

ಜಿಲ್ಲೆಯಲ್ಲಿ 2006-07ರಲ್ಲಿ 5,143, 2007-08ರಲ್ಲಿ 5,569, 2008-09ರಲ್ಲಿ 6,185, 2009-10ರಲ್ಲಿ 5,205 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಗಿದೆ. 2010-11ನೇ ಸಾಲಿನಡಿ 5,557 ಫಲಾನುಭವಿಗಳಿಗೆ ಮಂಜೂರಾತಿ ನೀಡಲಾಗಿದೆ. ಆದರೆ, 4,713 ಬಾಂಡ್‌ಗಳನ್ನು ಮಾತ್ರವೇ ವಿತರಿಸಲಾಗಿದೆ. ಮುದ್ರಣ ವಿಳಂಬದ ಪರಿಣಾಮ ಉಳಿದ ಬಾಂಡ್‌ಗಳು ಇಂದಿಗೂ ವಿತರಣೆಯಾಗಿಲ್ಲ.

`2011-12ನೇ ಸಾಲಿನಡಿ ಜಿಲ್ಲಾ ವ್ಯಾಪ್ತಿ ಒಟ್ಟು 4,025 ಫಲಾನುಭವಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಎಲ್ಲ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರಕ್ಕೂ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಎಲ್‌ಐಸಿ ಸಂಸ್ಥೆಗೆ ನಿಗದಿತ ಠೇವಣಿ ಸಂದಾಯವಾಗಿಲ್ಲ. ಹೀಗಾಗಿ, ಒಂದೂವರೆ ವರ್ಷ ಉರುಳಿದರೂ ಈ ಅವಧಿಯ ಭಾಗ್ಯಲಕ್ಷ್ಮೀ ಬಾಂಡ್‌ಗಳು ಬಂದಿಲ್ಲ~ ಎನ್ನುವುದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ವಿವರಣೆ.

`ಗ್ರಾಮದಲ್ಲಿರುವ ಬಿಪಿಎಲ್ ಕುಟುಂಬಕ್ಕೆ ಸೇರಿದ ಅರ್ಹರನ್ನು ಗುರುತಿಸಿ  ಭಾಗ್ಯಲಕ್ಷ್ಮೀ ಯೋಜನೆಯಡಿ ಸೌಲಭ್ಯಕ್ಕಾಗಿ ಇಲಾಖೆಗೆ ಪ್ರಾಮಾಣಿಕವಾಗಿ ವರದಿ ನೀಡುತ್ತೇವೆ. ಆದರೆ, ಸರ್ಕಾರದಮಟ್ಟದಲ್ಲಿ ಬಾಂಡ್ ವಿತರಣೆಗೆ ವಿಳಂಬವಾಗುತ್ತಿದೆ. ಇದರ ಪರಿಣಾಮ ಫಲಾನುಭವಿಗಳು ನಮ್ಮಂದಿಗೆ ಜಗಳಕ್ಕೆ ಇಳಿದಿರುವ ನಿದರ್ಶನವೂ ಇದೆ. ಆದರೆ, ಸರ್ಕಾರ ಹಾಗೂ ಇಲಾಖೆಯು ಫಲಾನುಭವಿಗಳಿಗೆ ವಾಸ್ತವಾಂಶ ತಿಳಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ನಾವು ತೊಂದರೆ ಅನುಭವಿಸುವಂತಾಗಿದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು `ಪ್ರಜಾವಾಣಿ~ಯೊಂದಿಗೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT