ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 12-2-1962

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಭಾನುವಾರ, 12-2-1962

`ದಾರಿದ್ರ್ಯ,ಅಜ್ಞಾನ ಅಂತ್ಯವಾಗದೆ ದೇಶದಲ್ಲಿಸಾಮಾಜಿಕ ಕ್ರಾಂತಿ ಪೂರ್ಣವಾಗದು~
ಕೊಲ್ಲಾಪುರ, ಫೆ. 11
- ದಾರಿದ್ರ್ಯ ಮತ್ತು ಅಜ್ಞಾನಗಳು ನಿರ್ಮೂಲವಾದಲ್ಲದೆ ಭಾರತದಲ್ಲಿ ಈಗ ನಡೆಯುತ್ತಿರುವ ಸಾಮಾಜಿಕ ಕ್ರಾಂತಿಯು ಪೂರ್ಣವಾಗದೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ಇಲ್ಲಿ ತಿಳಿಸಿದರು.

`ಆರ್ಥಿಕ ರಂಗದಲ್ಲಿ ನಲವತ್ತು ಕೋಟಿ ಜನರು ಮುನ್ನಡೆಯುತ್ತಿದ್ದಾರೆ. ಸ್ವಾತಂತ್ರ್ಯವು ದೊರೆತಾಗಿನಿಂದ ಭಾರತದ ಪೂರ್ಣ ಚಿತ್ರವು ಪಂಚವಾರ್ಷಿಕ ಯೋಜನೆಗಳ ಜಾರಿಯ ಮೂಲಕ ತ್ವರಿತವಾಗಿ ಮಾರ್ಪಾಡಾಗುತ್ತಿದೆ~ ಎಂದು ಅವರು ಇಲ್ಲಿನ ಭಾರಿ ಚುನಾವಣಾ ಪ್ರಚಾರದ ಸಭೆಯೊಂದರಲ್ಲಿ ನುಡಿದರು.

ನೆಹರೂ ಭಾಷಣವನ್ನು ಕೇಳಲು ಹತ್ತಿರದ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಗ್ರಾಮಸ್ಥರು ಸಭೆಗೆ ಬಂದಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವೈ. ಬಿ. ಚವಾಣರೂ ಹಾಜರಿದ್ದರು.

ಸರ್ಕಾರಿ ನೌಕರರ ವಸತಿ ನಿರ್ಮಾಣಕ್ಕೆ 2 ಕೋಟಿ ರೂ
ನವದೆಹಲಿ, ಫೆ. 11
- ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ಸೂಕ್ತ ವಸತಿ ಸೌಲಭ್ಯವೊದಗಿಸಲು ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 11 ರಾಜ್ಯ ಸರ್ಕಾರಗಳಿಗೆ ಸಾಲದ ರೂಪದಲ್ಲಿ ಒಟ್ಟು 2 ಕೋಟಿ ರೂಪಾಯಿ ನೆರವನ್ನು ಮಂಜೂರು ಮಾಡಿದೆ.

ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ ಈ ಹಣವನ್ನು ಭಾರತದ ಜೀವ ವಿಮಾ ಕಾರ್ಪೊರೇಷನ್ ಸಂಸ್ಥೆ ನೇರವಾಗಿ ರಾಜ್ಯ ಸರ್ಕಾರಗಳಿಗೆ ಮುಂಗಡವಾಗಿ ಕೊಡುವುದು.
ರಾಜ್ಯವಾರು ಹಂಚಿಕೆಯ ಪ್ರಕಾರ ಈ ಹಣದಲ್ಲಿ ಮೈಸೂರು ರಾಜ್ಯಕ್ಕೆ 11.25 ಲಕ್ಷ ರೂ. ದೊರೆಯಲಿದೆ.

ಪಾಕ್ ಜೊತೆ `ಸಮರವಿಲ್ಲ~ ಒಪ್ಪಂದಕ್ಕೆ ಸಿದ್ಧ
ಅಲಹಾಬಾದ್, ಫೆ. 11
- `ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಭಾರತವು ಪಾಕಿಸ್ತಾನದ ವಿರುದ್ಧ ಹೋರಾಟ ನಡೆಸದು, ಪಾಕಿಸ್ತಾನದೊಡನೆ `ಸಮರವಿಲ್ಲ~ ಒಪ್ಪಂದ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ~ ಎಂಬುದಾಗಿ ಭಾರತದ ವಿದೇಶಾಂಗ ಶಾಖೆ ಉಪ ಸಚಿವೆ ಶ್ರೀಮತಿ ಲಕ್ಷ್ಮಿ ಮೆನನ್ ಅವರು ನಿನ್ನೆ ಇಲ್ಲಿ ಘೋಷಿಸಿದರು.

ಅಲಹಾಬಾದ್ ಜಿಲ್ಲೆಯಲ್ಲಿ ಮೂರು ದಿನಗಳ ಚುನಾವಣಾ ಪ್ರವಾಸ ಕೈಗೊಳ್ಳಲು ನಿನ್ನೆ ಮಧ್ಯಾಹ್ನ ಇಲ್ಲಿಗೆ ಆಗಮಿಸಿದ ಶ್ರೀಮತಿ ಮೆನನ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದರು.

ಶಾಂತಿಸ್ಥಾಪನೆ ಬಗ್ಗೆ ಶೀಘ್ರವೇ ಅಂತಿಮ ಮಾತುಕತೆ
ಪ್ಯಾರಿಸ್, ಫೆ. 11
- ಫ್ರೆಂಚ್ ಸಂಪುಟದ ಮೂವರು ಸಚಿವರು ಮತ್ತು ಆಲ್ಜೀರಿಯನ್ ತಾತ್ಕಾಲಿಕ ಸರ್ಕಾರದ ಸಚಿವರು ಶಾಂತಿ ಸ್ಥಾಪನೆ ಬಗ್ಗೆ ಅಂತಿಮ ಘಟ್ಟದ ರಹಸ್ಯ ಮಾತುಕತೆಗಾಗಿ `ಶೀಘ್ರವೇ~ ಸಮಾವೇಶಗೊಳ್ಳಲಿರುವರೆಂದು ನಿನ್ನೆ ಪ್ಯಾರಿಸ್‌ನಲ್ಲಿ ಬಲ್ಲ ವಲಯಗಳು ತಿಳಿಸಿದವು.

ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲು ಇವರು ಸೇರುತ್ತಿಲ್ಲವೆಂದೂ, ಇತ್ಯರ್ಥವಾಗದೆ ಉಳಿದಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಭೇಟಿಯಾಗುವರೆಂದೂ ಈ ವಲಯಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT