ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರದ ಸುಂದರ ಸ್ವಪ್ನಗಳು...

ಸಂಗೀತದ ಹುಚ್ಚು ಹೊಳೆಯಲ್ಲಿ ತೇಲಿಸಿದ ಶ್ರೇಯಾ, ರಘು ದೀಕ್ಷಿತ್‌
Last Updated 16 ಡಿಸೆಂಬರ್ 2013, 5:33 IST
ಅಕ್ಷರ ಗಾತ್ರ

ಧಾರವಾಡ: ಅವಳಿ ನಗರದ ಮಂದಿಗೆ ಇಂತಹ ಭಾನುವಾರ ಇನ್ನೊಂದು ಸಿಗಲಿಕ್ಕಿಲ್ಲ. ಒಂದು ಬಾಲಿವುಡ್‌ನ ಪ್ರತಿಭೆಯಾದರೆ, ಮತ್ತೊಂದು ನಮ್ಮದೇ ಕನ್ನಡದ ಪ್ರತಿಭೆ.

ಇದರೊಂದಿಗೆ ವಿವಿಧ ನೃತ್ಯ ತಂಡಗಳ ಸಮಾಗಮ ಸೇರಿ ಕೆಸಿಡಿ ಮೈದಾನ ಎಷ್ಟೋ ಮಂದಿಗೆ ಅಚ್ಚಳಿಯದ ನೆನಪುಗಳನ್ನು ಸೃಷ್ಟಿಸಿದ ಸ್ವಪ್ನಗಳ ಅಕ್ಷಯಪಾತ್ರೆಯಾಯಿತು.

ಧಾರವಾಡ ಉತ್ಸವದ ಅಂಗವಾಗಿ ಬಾಲಿವುಡ್ನ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌ ಬರುವರೆಂದು ಸಂಜೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕೆಸಿಡಿಯತ್ತ ದಾಪುಗಾಲು ಹಾಕುತ್ತಿದ್ದರು. ಶ್ರೇಯಾ ಆಗ ಬರುತ್ತಾರೆ, ಈಗ ಬರುತ್ತಾರೆ ಎನ್ನುತ್ತಿದ್ದಂತೆಯೇ ಹಲವು ಸುಮಧುರ ಹಾಡುಗಳಿಗೆ ಕಂಠ ನೀಡಿದಾಕೆ ಬಂದೇಬಿಟ್ಟಳು.

ಬಾಡಿಗಾರ್ಡ್‌ ಚಿತ್ರದ ‘ತೇರಿ ಮೇರಿ ಪ್ರೇಮ್‌ ಕಹಾನಿ ಹೇ ಮುಷ್ಕಿಲ್‌ ...’, ‘ಸುನ್‌ ರಹಾ ಹೈ...’ ಸೇರಿದಂತೆ ಹಲವು ಬಾಲಿವುಡ್‌ ಗೀತೆಗಳನ್ನಲ್ಲದೇ, ಸಂಜು ವೆಡ್ಸ್‌ ಗೀತಾ ಚಿತ್ರದ ‘ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ ಕಡಲು ಕರೆದಂತೆ...’ ಹಾಡನ್ನು ಸುಮಧುರವಾಗಿ ಹಾಡಿದರು. ತಮ್ಮ ಹಾಡಿಗೆ ಇತರರೂ ದನಿಗೂಡಿಸಲಿ ಎಂಬ ಉದ್ದೇಶದಿಂದ ಹಾಡಿನ ಪಲ್ಲವಿ ಮುಗಿದ ಬಳಿಕ ಮೈಕ್‌ನ್ನು ಪ್ರೇಕ್ಷಕರತ್ತ ಹಿಡಿದರು. ಶ್ರೇಯಾ ಇಡೀ ವೇದಿಕೆಯ ತುಂಬಾ ಓಡಾಡುತ್ತಾ ಹಾಡಿದರು.

ಧಾರವಾಡದ ಅಭಿಮಾನಿಗಳನ್ನು ಕುರಿತಂತೆ ಅಚ್ಚಗನ್ನಡದಲ್ಲಿ ‘ನಾನು ನಿಮ್ಮನ್ನು ಪ್ರೀತಿಸು­ತ್ತೇನೆ...’ ಎನ್ನುತ್ತಿದ್ದಂತೆ ಇಡೀ ಕ್ರೀಡಾಂಗಣದ ತುಂಬ ಕರತಾಡನ ಕೇಳಿಬಂತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಶ್ರೇಯಾ ಗಾನ ಮಾಧುರ್ಯ ನಡೆದೇ ಇತ್ತು. ಜನಪ್ರಿಯ ಹಾಡಿಗೆ ‘ಒನ್ಸ್‌ ಮೋರ್‌’ ಎಂಬ ವಿನಂತಿ ಕೇಳಿ­ಬಂದಾಗ, ಇನ್ನು ಸಾಕಷ್ಟು ಹಾಡು ಹಾಡಲಿಕ್ಕಿದೆ ಎಂದು ಮುಂದುವರೆದರು.

ಕನ್ನಡದ ಗಾಯಕ ರಘು ದೀಕ್ಷಿತ್‌ ಸುದೀರ್ಘ ಒಂದು ಗಂಟೆವರೆಗೆ ಗಾಯನ ಪ್ರಸ್ತುತಪಡಿಸಿ­ದರು. ಬಹುತೇಕ ಶಿಶುನಾಳ ಷರೀಫರ ಮೂಲ ಜನಪದ ಧಾಟಿಯಿಂದ ಭಿನ್ನವಾಗಿ ತಮ್ಮದೇ ಆದ ಫ್ಯೂಷನ್‌ ಸಂಗೀತವನ್ನು ಅಳವಡಿಸಿದ್ದ ಹಾಡುಗಳನ್ನು ಹಾಡಿದರು. ‘ಗುಡುಗುಡಿಯ ಸೇದಿ ನೋಡು...’ ಎಂಬ ಹಾಡು ಸಹ ಅವರ ‘ಫ್ಯೂಷನ್‌ ಆಟ’ದ ವಸ್ತುವಾಯಿತು. ನಂತರ ಅವರೇ ಹಾಡಿದ ‘ಸೈಕೊ’ ಸಿನಿಮಾದ ‘ನಿನ್ನ ಪೂಜೆಗೆ ಬಂದೆ ಮಾದೇಸ್ವರಾ’ ಎಂಬ ಹಾಡನ್ನೂ ಅಬ್ಬರದ ಸಂಗೀತದ ಮಧ್ಯೆ ಹಾಡಿದರು.

ಇದಕ್ಕೂ ಮುನ್ನ ಮೂರು ದಿನಗಳ ಉತ್ಸವಕ್ಕೆ ಅಧಿಕೃತ ಮುಕ್ತಾಯ ಹೇಳಲಾಯಿತು. ಹಿರಿಯ ಕವಿ ಡಾ.ಚನ್ನವೀರ ಕಣವಿ, ವಿಧಾನಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ನಾಗರಾಜ ಛಬ್ಬಿ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಜಿ.ಪಂ. ಸಿಇಓ ಪಿ.ಎ.ಮೇಘಣ್ಣವರ, ಎಸ್ಪಿ ಬಿ.ಎಸ್‌.­ಲೋಕೇಶ­ಕುಮಾರ್‌ ಹಾಜರಿದ್ದರು. ಉತ್ಸವ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ ಎಲ್ಲರಿಗೂ ಅಭಾರ ಮನ್ನಣೆ ಸಲ್ಲಿಸಿದರು.

ಮುಖ್ಯ ವೇದಿಕೆಯಲ್ಲಿ ಐಟಂ ಡಾನ್ಸ್‌...!
ಸದಭಿರುಚಿಯ ಕಲೆ, ಸಂಗೀತವನ್ನು ಬಿಂಬಿಸುವ ಹೊಣೆ ಹೊತ್ತಿರುವ ಜಿಲ್ಲಾಡಳಿತ ಆಯೋಜಿಸಿದ್ದ ಜಿಲ್ಲಾ ಉತ್ಸವದಲ್ಲಿ ಭಾನುವಾರ ಕಶ್ಮೀರ ಶಹಾ ಮತ್ತು ತಂಡದವರು ಬಾಲಿವುಡ್‌ನ ಎರಡು ಐಟೆಂ ಹಾಡುಗಳಿಗೆ ಹೆಜ್ಜೆ ಹಾಕಿದರು.

ಅಗ್ನಿಪಥ್‌ ಸಿನಿಮಾದಲ್ಲಿ ಕತ್ರಿನಾ ಕೈಫ್‌ ಅಭಿನಯಿಸಿದ ಐಟೆಂ ಗೀತೆ ‘ಚಿಕ್ನಿ ಚಮೇಲಿ...’, ವಿದ್ಯಾಬಾಲನ್‌, ನಾಸಿರುದ್ದೀನ್‌ ಷಾ ಅಭಿನಯದ ‘ಡರ್ಟಿ ಪಿಕ್ಚರ್‌’ ಸಿನಿಮಾದ ‘ಊಲಾಲಾ ಊಲಾಲಾ...’ ಎಂಬ ಮಾದಕ ಹಾಡಿಗೆ ಕಶ್ಮೀರ ಹೆಜ್ಜೆ ಹಾಕಿದರು. ನೃತ್ಯಕ್ಕಾಗಿ ಅವರು ಧರಿಸಿದ ಉಡುಪು ಕೂಡ ಹಲವು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿ ಕೆಲವರು ಹೊರ ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT