ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭಾರತ- ಚೀನಾ ಸೌಹಾರ್ದದಿಂದ ವಿಶ್ವ ಶಾಂತಿ'

Last Updated 1 ಸೆಪ್ಟೆಂಬರ್ 2013, 20:14 IST
ಅಕ್ಷರ ಗಾತ್ರ

ಬೆಂಗಳೂರು: `ವಿಶ್ವ ಶಾಂತಿಗಾಗಿ ಭಾರತ ಮತ್ತು ಚೀನಾದ ನಡುವೆ ಸೌಹಾರ್ದಯುತ ಸಂಬಂಧ ಏರ್ಪಡಬೇಕಾದ ಅಗತ್ಯವಿದೆ' ಎಂದು ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಅಭಿಪ್ರಾಯಪಟ್ಟರು.

ಭಾರತ ಚೀನಾ ಮೈತ್ರಿ ಕೂಟಕರ್ನಾಟಕ ಮತ್ತು ಚೀನಾ ಗಣರಾಜ್ಯದ ದೂತಾವಾಸ ಮುಂಬೈ ಜಂಟಿಯಾಗಿ ಭಾನುವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಚೀನಾ ಗಣರಾಜ್ಯದ 65ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಭಾರತದೊಂದಿಗೆ ಚೀನಾ ಸಂಬಂಧ ಹೊಂದಿದೆ. ಭಾರತಕ್ಕೆ ಬಂದಿದ್ದ ಚೀನಿ ಪ್ರವಾಸಿಗರು ಸಹ ಇದನ್ನು ದಾಖಲಿಸಿದ್ದಾರೆ. ಗಾಂಧೀಜಿಯವರ ಆರ್ಥಿಕ ಚಿಂತನೆಗಳು ಮತ್ತು ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆಯನ್ನು ಚೀನಾದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ. ಅಲ್ಲಿನ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಯು ಇತರ ದೇಶಗಳಿಗೆ ಮಾದರಿಯಾಗಿದೆ ಎಂದರು.

ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಚೀನಾಗಿಂತ ಒಂಬತ್ತು ವರ್ಷಗಳಷ್ಟು ಹಿಂದಿದೆ. ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಶಿಸ್ತು ಮತ್ತು ಶ್ರದ್ಧೆಯಿಂದ ಯೋಜನೆಗಳನ್ನು ಜಾರಿಗೊಳಿಸಬೇಕು. ನೆರೆಯ ರಾಷ್ಟ್ರಗಳ ನಡುವೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪರಸ್ಪರ ಮಾತುಕತೆಯ ಮೂಲಕ ಶಾಂತಿಯುತವಾಗಿ ಅವುಗಳನ್ನು ಬಗೆಹರಿಸಿಕೊಂಡು ಅಭಿವೃದ್ಧಿಯೆಡೆಗೆ ಚಿಂತನೆ ನಡೆಸಬೇಕು ಎಂದು ಹೇಳಿದರು.

ಚೀನಾ ಗಣರಾಜ್ಯದ ಕಾನ್ಸುಲ್ ಜನರಲ್ ಡಾ.ಲಿ.ಯುಫಾ ಮಾತನಾಡಿ, `ಚೀನಾ ಗಣರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ ಗಾಯಗೊಂಡ ಚೀನಾದ ಸೈನಿಕರು ಮತ್ತು ಸಾರ್ವಜನಿಕರ ವೈದ್ಯಕೀಯ ಸೇವೆಗೆ ವೈದ್ಯರ ತಂಡವನ್ನು ಕಳುಹಿಸಿದ್ದು ಭಾರತದ ಮಾನವೀಯತೆಗೆ ಸಾಕ್ಷಿ. ವೈದ್ಯರ ತಂಡದಲ್ಲಿದ್ದ ಡಾ.ಡಿ.ಎಸ್.ಕೊಟ್ನಿಸ್ ಮತ್ತು ಬಿ.ಕೆ.ಬೋಸ್ ಅವರ ಸೇವೆ ಅಪಾರವಾದದ್ದು' ಎಂದು ಶ್ಲಾಘಿಸಿದರು.

ಚೀನಾದಲ್ಲಿ ಇಂದಿಗೂ ಡಾ.ಕೊಟ್ನಿಸ್ ಅವರ ಸ್ಮರಣೆ ನಡೆಯುತ್ತದೆ. ಹಲವು ಸಂದರ್ಭಗಳಲ್ಲಿ ಚೀನಾದ ನೆರವಿಗೆ ಬಂದಿರುವ ಭಾರತದ ಜತೆಗಿನ ಸಂಬಂಧವನ್ನು ವೃದ್ಧಿಸಿಕೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ ಚೀನಾಗೆ ತೆರಳಿದ್ದ ವೈದ್ಯರ ತಂಡದ ಸೇವೆ, ಭಾರತ-ಚೀನಾಗೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಾಯಿತು.ಪ್ರದರ್ಶನವು ಸೆಪ್ಟೆಂಬರ್ 3ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT