ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಪಾಕಿಸ್ತಾನ ಕದನ ಕುತೂಹಲ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣ. ಪಾಕಿಸ್ತಾನ ಒಂಬತ್ತು ವರ್ಷಗಳ ನಂತರ- 1999ರ ಕೊನೆಯಲ್ಲಿ ಭಾರತ ಪ್ರವಾಸದ ಮೊದಲ ಟೆಸ್ಟ್‌ನಲ್ಲಿ ಜಯಗಳಿಸಿದ ಕ್ಷಣವದು. ಗೆದ್ದ ಕೂಡಲೇ ಮೈದಾನಕ್ಕೆ ಮುತ್ತಿಕ್ಕಿ, ಪಾಕಿಸ್ತಾನ ಆಟಗಾರರು ಕ್ರೀಡಾಂಗಣದಲ್ಲಿ ಕೈಬೀಸುತ್ತ `ವಿಜಯದ ಸುತ್ತು' ಓಡಿದಾಗ ಎಲ್ಲ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದ್ದರು.

ಈಗ ಕ್ರಿಕೆಟ್ ಜೀವನದ ಮುಸ್ಸಂಜೆಯಲ್ಲಿರುವ ಸಚಿನ್ ತೆಂಡೂಲ್ಕರ್ ಅಂದು ಪಾಕ್ ದಾಳಿ ಮತ್ತು ಬೆನ್ನುನೋವಿನ ನಡುವೆ ಪ್ರಯಾಸದಿಂದ 18ನೇ ಟೆಸ್ಟ್ ಶತಕ ಹೊಡೆದಿದ್ದು ವ್ಯರ್ಥವಾಗಿತ್ತು. ಅದು ಚೆನ್ನೈ ಪ್ರೇಕ್ಷಕರ ಕ್ರೀಡಾಸ್ಫೂರ್ತಿ ಮಾತ್ರವಲ್ಲ, ಕ್ರಿಕೆಟ್ ಅಭಿಮಾನಿಗಳ ಹೃದಯವನ್ನೂ ಗೆದ್ದ ಕ್ಷಣ.

ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಂದರೆ ಅದು ಎಲ್ಲರ ಗಮನ ಸೆಳೆಯುತ್ತದೆ. ಅದು ಟೆಸ್ಟ್ ಇರಲಿ, ಒಂದು ದಿನದ ಪಂದ್ಯವಿರಲಿ, ಮೇಲಿನ ಪಂದ್ಯವೊಂದೇ ಉದಾಹರಣೆಯಲ್ಲ. ಷಾರ್ಜಾದಲ್ಲಿ ನಡೆದ 1986ರ ಆಸ್ಟ್ರೇಲೇಷ್ಯ ಕಪ್ ಫೈನಲ್‌ನಲ್ಲಿ ಜಾವೇದ್ ಮಿಯಾಂದಾದ್, ಚೇತನ್ ಶರ್ಮ ಅವರ ಪಂದ್ಯದ ಕೊನೆಯ ಎಸೆತವನ್ನು ಮಿಡ್‌ವಿಕೆಟ್‌ಗೆ ಸಿಕ್ಸರ್ ಎತ್ತಿದ್ದು, 1996ರಲ್ಲಿ ಬೆಂಗಳೂರಿನ ವಿಲ್ಸ್ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಅಜಯ್ ಜಡೇಜಾ ಬಿರುಸಿನ ಆಟ, ಮರು ವರ್ಷ ಆರಂಭಿಕ ಬ್ಯಾಟ್ಸ್ ಮನ್ ಸಯೀದ್ ಅನ್ವರ್ ಚೆನ್ನೈನ ಇಂಡಿಪೆಂಡೆನ್ಸ್ ಕಪ್ ಪಂದ್ಯದಲ್ಲಿ ಆಗ ಅತ್ಯಧಿಕವೆನಿಸಿದ್ದ 194 ರನ್ ಬಾರಿಸಿದ್ದು, ದಕ್ಷಿಣ ಆಫ್ರಿಕದ 20-20 ವಿಶ್ವಕಪ್ ಪಂದ್ಯದಲ್ಲಿ ಜೋಗಿಂದರ್ ಸಿಂಗ್ ಕೊನೆಯ ಎಸೆತದಲ್ಲಿ ಮಿಸ್ಬಾ-ಉಲ್- ಹಕ್ ಅವರನ್ನು ಎಸ್.ಶ್ರೀಶಾಂತ್ ಕ್ಯಾಚ್ ಮಾಡಿದ ಕ್ಷಣಗಳು.... ಇವು ಕೆಲವು ರೋಚಕ ಸಂದರ್ಭಗಳಿಗೆ ಉದಾಹರಣೆಗಳು ಮಾತ್ರ.

ಈ ಎರಡು ಸಾಂಪ್ರದಾಯಿಕ ತಂಡಗಳ ನಡುವಣ ಪಂದ್ಯವನ್ನು ಕ್ರಿಕೆಟ್ ಮೈದಾನದಲ್ಲಿ ಪ್ರತಿಷ್ಠೆಯ ರೀತಿಯಲ್ಲೇ  ಪರಿಗಣಿಸಲಾಗುತ್ತಿದೆ. ಭಾರತ ಗೆದ್ದಾಗ ಇಲ್ಲಿ ಸಂಭ್ರಮಾಚಾರಣೆ ನಡೆಯುತ್ತಿದ್ದರೆ, ಭಾರತ ಸೋತರೆ ಪಾಕಿಸ್ತಾನದಲ್ಲಿ ಸಂಭ್ರಮ. ಪಟಾಕಿಯ ಸದ್ದುಗಳೂ ಕೇಳುತ್ತವೆ. ಪಂದ್ಯ ನಡೆಯುವಾಗ ರಸ್ತೆಗಳು ಖಾಲಿ ಖಾಲಿ. 

1996ರಲ್ಲಿ ಭಾರತ, ಕೋಲ್ಕತ್ತದಲ್ಲಿ ಶ್ರೀಲಂಕಾ ಎದುರು ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತಾಗ ಪಾಕಿಸ್ತಾನದ ಲಾಹೋರ್‌ನಲ್ಲಿ ಮಧ್ಯರಾತ್ರಿ ವೇಳೆಯೂ `ಕ್ರಿಕೆಟ್ ಪ್ರೇಮಿಗಳು' ಸಂಭ್ರಮ ಆಚರಿಸಿದ್ದರು. ಬೆಂಗಳೂರಿನ ಕ್ವಾರ್ಟರ್‌ಫೈನಲ್‌ನಲ್ಲಿ ಪಾಕ್, ಭಾರತಕ್ಕೆ ಸೋತಿದ್ದು ಇದಕ್ಕೆ ಸ್ವಲ್ಪ ಕಾರಣ ಇರಬಹುದು.

ಈಗ ಮತ್ತೊಮ್ಮೆ ಭಾರತದಲ್ಲಿ ಎರಡು ಟ್ವೆಂಟಿ-20 ಮತ್ತು ಮೂರು ಒಂದು ದಿನದ ಪಂದ್ಯಗಳ ಸರಣಿ ಆಡಲು ಪಾಕಿಸ್ತಾನ ತಂಡ ಆಗಮಿಸುತ್ತಿದೆ. ಭಾರತ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಈಗ ಇಲ್ಲಿಗೆ ಆಡಲು ಬರುವುದು ಸರಿಯಲ್ಲ ಎಂಬ ಆಕ್ಷೇಪಗಳೂ, ಆಡಲು ಬಿಡುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಹಿಂದೆಯೂ ಇಂಥದ್ದೇ ಅಪಸ್ವರಗಳು ಕೇಳಿಬಂದಿದ್ದವು. ಎರಡು ರಾಷ್ಟ್ರಗಳ ನಡುವೆ ಕ್ರಿಕೆಟ್ ರಾಯಭಾರದ ಮೂಲಕ ಸೌಹಾರ್ದ ಮೂಡಿಸುವ ಮಾತು ಕೂಡ ಹಳೆಯದು. ಕ್ರಿಕೆಟ್‌ನಿಂದ ಬಾಂಧವ್ಯ ಸುಧಾರಿಸುತ್ತಿರುವಂತೆ ಕಂಡಿಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಖಜಾನೆ ತುಂಬುತ್ತದೆ.

ದಾಖಲೆಗಳು
ಕ್ರೀಡಾಂಗಣದಲ್ಲಿ ಈ ದಾಯಾದಿಗಳ ನಡುವಣ ಸೆಣಸಾಟ ಹಲವು ಬಾರಿ `ಸಮರ'ದ ಸ್ವರೂಪ ಪಡೆದಿವೆ. ಎಷ್ಟೋ ಬಾರಿ ಪಂದ್ಯಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿವೆ. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪರಸ್ಪರ ಎದುರಾದಾಗ ಭಾರತ 48 ಬಾರಿ, ಪಾಕಿಸ್ತಾನ 69 ಬಾರಿ ಜಯಗಳಿಸಿದೆ. ನಾಲ್ಕು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ವಿಶ್ವ ಕಪ್‌ನಲ್ಲಿ ಎದುರಾದಾಗ ಭಾರತ ಎಲ್ಲ ಐದೂ ಸಂದರ್ಭಗಳಲ್ಲಿ ಪಾಕಿಸ್ತಾನ ವಿರುದ್ಧ ಜಯಗಳಿಸಿದೆ. ತಟಸ್ಥ ಸ್ಥಳಗಳಲ್ಲಿ 20 ಬಾರಿ ಭಾರತ, 19 ಬಾರಿ ಪಾಕಿಸ್ತಾನ ಗೆಲುವು ಸಾಧಿಸಿದೆ.

ಕೊನೆಯ ಬಾರಿ ಪಾಕಿಸ್ತಾನ, ಭಾರತ ಪ್ರವಾಸ ಕೈಗೊಂಡಿದ್ದು 2007ರ ನವೆಂಬರ್‌ನಲ್ಲಿ. ಆ ಪ್ರವಾಸದಲ್ಲಿ ಭಾರತ 3-2 ರಲ್ಲಿ ಸರಣಿ ವಶ ಮಾಡಿಕೊಂಡಿತ್ತು. ಅದಕ್ಕೆ ಹಿಂದಿನ ವರ್ಷ ಭಾರತ, ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗಲೂ ಅಮೋಘ ರೀತಿಯಲ್ಲಿ 4-1ರಲ್ಲಿ ಜಯಗಳಿಸಿತ್ತು.

ಯುವ ಪಡೆಗೆ ಅವಕಾಶ
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಅನಿರೀಕ್ಷಿತವಾಗಿ 1-2 ರಲ್ಲಿ ಕಳೆದುಕೊಂಡ ನಂತರ ಭಾರತ ತಂಡ ಇಂಥ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದೆ. ಅನುಭವಿಗಳಾದ ರಾಹುಲ್ ದ್ರಾವಿಡ್, ವಿ.ವಿ.ಎಸ್.ಲಕ್ಷ್ಮಣ್ ನಿವೃತ್ತರಾದ ಮೇಲೆ ಸಚಿನ್ ತೆಂಡೂಲ್ಕರ್ ಮಾತ್ರ ಟೆಸ್ಟ್‌ನಲ್ಲಿ ಉಳಿದುಕೊಂಡಿರುವ ಅನುಭವಿ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಯುವ ಆಟಗಾರನಿಗೆ ಮುಂದೆ ಟೆಸ್ಟ್ ತಂಡದಲ್ಲೂ ಸ್ಥಾನ ಖಚಿತಪಡಿಸಿಕೊಳ್ಳಲು ಅವಕಾಶವಿದೆ.

ಯುವರಾಜ ಸಿಂಗ್, ಸುರೇಶ್ ರೈನಾ ಟೆಸ್ಟ್‌ನಲ್ಲಿ ಅವಕಾಶ ಪಡೆದರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಕ್ರಿಕೆಟ್‌ನ ಎಲ್ಲ ಪ್ರಕಾರಗಳಲ್ಲಿ ಸಲ್ಲುವ ವಿರಾಟ್ ಕೊಹ್ಲಿ ಪ್ರದರ್ಶನ ಮಟ್ಟದಲ್ಲಿ ಮೊದಲಿದ್ದ ಸ್ಥಿರತೆ ಈಗ ಉಳಿದಿಲ್ಲ. ಹೀಗಾಗಿ ಇಲ್ಲಿ ಅವರು ನೀಡುವ ನಿರ್ವಹಣೆ ಎಲ್ಲರ ಗಮನ ಸೆಳೆಯಲಿದೆ. ಪಾಕಿಸ್ತಾನ ಸರಣಿ ಈ ಯುವಪಡೆಗೆ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಟೆಸ್ಟ್ ಸರಣಿ ಸೋಲಿನ ಕಹಿನೆನಪು ಅಳಿಸಿಹಾಕಲು ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೂ ಇದೊಂದು ಅವಕಾಶವಾಗಿದೆ.

ಭಾರತಕ್ಕೆ ಬೌಲಿಂಗ್ ವಿಭಾಗದಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ಅನುಭವಿಗಳ ಕೊರತೆ ಇದೆ. ಗೆಲ್ಲಲು ಯುವರಾಜ್ ಸಿಂಗ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್ ಅವರಂಥ ಆಲ್‌ರೌಂಡರ್‌ಗಳು ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯ. ವೇಗದ ಬೌಲಿಂಗ್ ವಿಭಾಗದಲ್ಲಿ ಯಾರೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.

ಭಾರತ ವಿರುದ್ಧ ಕಡೆಯ ಎರಡು ಸರಣಿಗಳನ್ನು ಸೋತಿರುವ ಪಾಕಿಸ್ತಾನಕ್ಕೆ ಈ ಪ್ರವಾಸ ಮಹತ್ವದ್ದು. ಇಲ್ಲಿಗೆ     ಬರುವ ಮೊದಲು ಅಬುದಾಬಿಯಲ್ಲಿ ಆಸ್ಟ್ರೇಲಿಯ ಎದುರು ಪಾಕ್ 1-2ರಲ್ಲಿ ಸೋಲನುಭವಿಸಿತ್ತು. ಆದರೆ ಈ ತಂಡದಲ್ಲಿ ಅನುಭವಿಗಳ ಜತೆಗೆ ಪ್ರತಿಭಾವಂತ ಆಟಗಾರರಿದ್ದಾರೆ. ಭಾರತ ವಿರುದ್ಧ ಆಡುವುದನ್ನು ಅವರು ಸವಾಲಾಗಿ ತೆಗೆದುಕೊಳ್ಳುತ್ತಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಿಸ್ಬಾ ಉಲ್ ಹಕ್ ನಾಯಕತ್ವದ ಈ ತಂಡದ ಯೂನಿಸ್ ಖಾನ್, ಕಮ್ರಾನ್ ಅಕ್ಮಲ್, ಉಮರ್ ಅಕ್ಮಲ್,       ಸ್ಪಿನ್ನರ್ ಸಯೀದ್ ಅಜ್ಮಲ್, ವೇಗದ ಬೌಲರ್ ಉಮರ್ ಗುಲ್ ಅನುಭವಿಗಳೇ. ಆಫ್ ಸ್ಪಿನ್ನರ್ ಅಜ್ಮಲ್ ಇತ್ತೀಚಿನ ವರ್ಷಗಳಲ್ಲಿ 20-20, ಏಕದಿನ ಪಂದ್ಯಗಳಲ್ಲಿ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಈ ಸರಣಿ ಕ್ರಿಕೆಟ್ ಪ್ರಿಯರ ಕುತೂಹಲ ಕೆರಳಿಸಿದೆ. ಟೆಸ್ಟ್ ಪಂದ್ಯದಲ್ಲಿ ಟೀಕೆಗೆ ಒಳಗಾದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೂ ಗೆಲುವು ಪ್ರತಿಷ್ಠೆಯ ಪ್ರಶ್ನೆ. ದೋನಿ ಈ ಹಿಂದೆ ಮುಟ್ಟಿದ್ದೆಲ್ಲ ಚಿನ್ನವಾಗಿತ್ತು. ಈಗ ಅವರೂ ಅದೃಷ್ಟದ  ಜತೆಗೆ ಪರಿಶ್ರಮ ಪಡಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT