ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಪಾಕ್ ಕ್ರಿಕೆಟ್ ಪಂದ್ಯ: ಬಿಗಿ ಬಂದೋಬಸ್ತ್

Last Updated 22 ಡಿಸೆಂಬರ್ 2012, 19:38 IST
ಅಕ್ಷರ ಗಾತ್ರ

ಬೆಂಗಳೂರು: `ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ.25ರಂದು ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು ಎರಡು ಸಾವಿರ ಸಿಬ್ಬಂದಿಯನ್ನು ಕ್ರೀಡಾಂಗಣದ ಸುತ್ತಮುತ್ತ ಭದ್ರತೆಗೆ ನಿಯೋಜಿಸಲಾಗುತ್ತಿದೆ. ಅಲ್ಲದೇ, ಆಂತರಿಕ ಭದ್ರತಾ ವಿಭಾಗದ ಗರುಡ ಪಡೆಯ ಕಮಾಂಡೊಗಳು ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಪಂದ್ಯಕ್ಕೆ ಯಾವುದೇ ರೀತಿಯ ಬೆದರಿಕೆ ಇಲ್ಲ. ಪಂದ್ಯದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಲ್ಕು ಮಂದಿ ಡಿಸಿಪಿಗಳು, 27 ಎಸಿಪಿಗಳು, 90 ಇನ್‌ಸ್ಪೆಕ್ಟರ್‌ಗಳು, 270 ಎಸ್‌ಐ, 240 ಎಎಸ್‌ಐ, 1,750 ಹೆಡ್ ಕಾನ್‌ಸ್ಟೇಬಲ್, ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್) ಹತ್ತು ತುಕಡಿ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 12 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೆಲ ಸಂಘಟನೆಗಳು ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಮಿರ್ಜಿ, ಕ್ರೀಡಾಂಗಣದ ಬಳಿ ಪ್ರತಿಭಟನೆ ನಡೆಸಲು ಯಾವುದೇ ಸಂಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಸಂಘಟನೆಗಳು ಬೇರೆಡೆ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ಮಾಡಬಹುದು. ಮುಂಜಾಗ್ರತಾ ಕ್ರಮವಾಗಿ ಯಾವುದೇ ಸಂಘಟನೆಯ ಸದಸ್ಯರನ್ನು ಈವರೆಗೆ ಬಂಧಿಸಿಲ್ಲ. ಪಂದ್ಯಕ್ಕೆ ಅಡ್ಡಪಡಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಭದ್ರತೆ ದೃಷ್ಟಿಯಿಂದ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶ, ಪ್ರವೇಶ ದ್ವಾರಗಳು, ಅಕ್ಕಪಕ್ಕದ ರಸ್ತೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಅನುಚಿತವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಪ್ರೇಕ್ಷಕರ ಚಲನವಲನಗಳ ಮೇಲೆ ಸಿ.ಸಿ ಟಿ.ವಿ ಕ್ಯಾಮೆರಾಗಳ ಮೂಲಕ ತೀವ್ರ ನಿಗಾ ಇಡಲಾಗುತ್ತದೆ. ಪಾಕಿಸ್ತಾನ ತಂಡದ ಆಟಗಾರರ ಭದ್ರತೆ ವಿಷಯವಾಗಿ ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಟಗಾರರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದ್ದು, ಅದರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಪ್ರೇಕ್ಷಕರ ಅನುಕೂಲಕ್ಕಾಗಿ ಕ್ರೀಡಾಂಗಣದ ಒಂದನೇ ಪ್ರವೇಶ ದ್ವಾರದ ಬಳಿ ಪೊಲೀಸ್ ಹೊರ ಠಾಣೆ (ಔಟ್ ಪೋಸ್ಟ್) ತೆರೆಯಲಾಗುತ್ತಿದೆ. ಪ್ರೇಕ್ಷಕರನ್ನು ಮೂರು ಹಂತಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ತಪಾಸಣೆ ವೇಳೆ ಪ್ರೇಕ್ಷಕರು ಸಿಬ್ಬಂದಿಗೆ ಸಹಕಾರ ನೀಡಬೇಕು. ಕ್ರೀಡಾಂಗಣದ ಅಧಿಕಾರಿಗಳು ಹಾಗೂ ಪೊಲೀಸರು ನೀಡುವ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಸೂಚನೆಗಳು: ಪ್ರೇಕ್ಷಕರು ಮಧ್ಯಾಹ್ನ 2 ಗಂಟೆ ನಂತರ ಕ್ರೀಡಾಂಗಣ ಪ್ರವೇಶಿಸಬೇಕು. ಕ್ರೀಡಾಂಗಣದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದರಿಂದ ಬಾಟಲಿಯನ್ನು ತರುವಂತಿಲ್ಲ. ಟಿಕೆಟ್‌ನಲ್ಲಿ ಸೂಚಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ಯಾಮೆರಾ, ಲ್ಯಾಪ್‌ಟಾಪ್, ಕೊಡೆ, ಸ್ಫೋಟಕ ವಸ್ತುಗಳು, ಬ್ಯಾಗ್, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ, ಲೈಟರ್, ಬಾಟಲಿ, ಚಾಕು, ಮದ್ಯ, ಬಾವುಟ, ಹೆಲ್ಮೆಟ್, ಪ್ಲಾಸ್ಟಿಕ್ ಕವರ್‌ಗಳನ್ನು ಕ್ರೀಡಾಂಗಣಕ್ಕೆ ತರುವಂತಿಲ್ಲ.

ಸಂಚಾರ ವ್ಯವಸ್ಥೆ: ಪಂದ್ಯದ ಹಿನ್ನೆಲೆಯಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 11 ಗಂಟೆವರೆಗೆ ಕ್ವೀನ್ಸ್ ರಸ್ತೆಯ ಎರಡು ಬದಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಕ್ರೀಡಾಂಗಣದ ಒಳಗೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಪ್ರತಿಮೆ ವೃತ್ತದವರೆಗೆ, ಲಿಂಕ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಮದ್ರಾಸ್ ಬ್ಯಾಂಕ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಕಬ್ಬನ್ ಪಾರ್ಕ್ ಒಳ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ.
ಪ್ರೇಕ್ಷಕರು ತಮ್ಮ ವಾಹನಗಳನ್ನು ಸಂಚಾರ ಪೊಲೀಸರು ಸೂಚಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕು. ಶಿವಾಜಿನಗರದಲ್ಲಿನ ಬಿಎಂಟಿಸಿ ಬಸ್ ನಿಲ್ದಾಣ ಕಟ್ಟಡ, ಕಂಠೀರವ ಕ್ರೀಡಾಂಗಣ ಹಾಗೂ ಕಾಮರಾಜ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT