ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ- ರಷ್ಯ ಒಪ್ಪಂದ: ಸರಳ ವೀಸಾ ಸೌಲಭ್ಯ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಾಸ್ಕೊ (ಪಿಟಿಐ): ಭಾರತೀಯ ಪ್ರಜೆಗಳಿಗೆ ಅನುಕೂಲವಾಗುವಂಥ ವೀಸಾ ನೀತಿಗೆ ರಷ್ಯ ಸಂಸತ್ ಅನುಮೋದನೆ ನೀಡಿದೆ.

ಪ್ರವಾಸ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ರಷ್ಯಗೆ ಭೇಟಿ ನೀಡುವ ಭಾರತೀಯರಿಗೆ ಸರಳ ವೀಸಾ ಸೌಲಭ್ಯ ಒದಗಿಸುವ ಒಪ್ಪಂದ ಇದಾಗಿದೆ.

ಶುಕ್ರವಾರ ನಡೆದ ಸಂಸತ್‌ನ ಅಧಿವೇಶನದಲ್ಲಿ 428 ಮತಗಳ ಮೂಲಕ ಈ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಹಾಗೂ ರಷ್ಯ ಈ ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಹಾಕಿದ್ದವು.

ಎರಡೂ ದೇಶಗಳ ಪ್ರಜೆಗಳ ಪರಸ್ಪರ ಪ್ರವಾಸದ ಆಧಾರದಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಕಾನೂನು ಚೌಕಟ್ಟಿನಲ್ಲಿ ಬಲಪಡಿಸುವುದು, ಉಭಯ ದೇಶಗಳ ಪ್ರಜೆಗಳಿಗೆ ಕೆಲವೊಂದು ವಿಭಾಗದಲ್ಲಿ ಅನುಕೂಲಕರ ವಾತಾವರಣ ರೂಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.

`ಉಭಯ ದೇಶಗಳ ಔದ್ಯಮಿಕ ಪ್ರತಿನಿಧಿಗಳು, ವಿಜ್ಞಾನಿಗಳು, ಸಾಂಸ್ಕೃತಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವುದು ಪ್ರಮುಖ ಉದ್ದೇಶವಾಗಿದೆ~ ಎಂದು ರಷ್ಯದ ಉಪ ವಿದೇಶಾಂಗ ಸಚಿವ ಅಲೆಕ್ಸಿ ಬೊರೊಡವ್‌ಕಿನ್ ಹೇಳಿದ್ದಾರೆ.
 
ಸಂಸತ್‌ನ ಮೇಲ್ಮನೆಯಲ್ಲಿ (ಫೆಡರಲ್ ಕೌನ್ಸಿಲ್) ಈ ಒಪ್ಪಂದಕ್ಕೆ ಅನುಮೋದನೆ ಸಿಕ್ಕಿದೆ. ಕಾಯ್ದೆಯನ್ನಾಗಿ ಇದನ್ನು ಅನುಷ್ಠಾನಕ್ಕೆ ತರಲು ಈಗಾಗಲೇ ರಷ್ಯ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಸಹಿ ಹಾಕಿದ್ದಾರೆ. ಹಾಗಾಗಿ ಇನ್ನು ಮುಂದೆ ಎರಡೂ ದೇಶಗಳ ಪ್ರಜೆಗಳು ಅಥವಾ ಸಂಸ್ಥೆಗಳು ಆಯಾಯ ದೇಶಕ್ಕೆ ಪ್ರವಾಸ ಕೈಗೊಳ್ಳಲು ನೇರವಾಗಿ ವೀಸಾಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಒಪ್ಪಂದದ ಪ್ರಕಾರ, ಅರ್ಹ ರಾಷ್ಟ್ರೀಯ ಪಾಸ್‌ಪೋರ್ಟ್ ಹೊಂದಿರುವ ಎರಡೂ ದೇಶಗಳ ಪ್ರಜೆಗಳು ಇನ್ನೊಂದು ದೇಶದಲ್ಲಿ 90 ದಿನಗಳವರೆಗೆ ವಾಸ್ತವ್ಯ ಹೂಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT