ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭಾರತದ ಒಂದಿಂಚೂ ಭೂಮಿ ಚೀನಾಕ್ಕಿಲ್ಲ'

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಭಾರತದ ಒಂದಿಂಚೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಚೀನಾಕ್ಕೆ ಅವಕಾಶ ನೀಡುವುದಿಲ್ಲ' ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿದೆ. ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿ ಕಾಪಾಡಲು ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಭರವಸೆ ನೀಡಿದೆ.

ಲಡಾಖ್ ಬಳಿಯ ಗಡಿ ವಾಸ್ತವ ರೇಖೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಚೀನಾ, ಭಾರತದ 640 ಚದರ ಕಿ.ಮೀ ನೆಲವನ್ನು ಅತಿಕ್ರಮಿಸಿಕೊಂಡಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವಿರೋಧ ಪಕ್ಷಗಳು ಮಾಡಿದ ಆರೋಪವನ್ನು ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.

ಲೋಕಸಭೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ಸದಸ್ಯರು ಮಾಡಿದ ಆರೋಪವನ್ನು ನಿರಾಕರಿಸಿದ ರಕ್ಷಣಾ ಸಚಿವ ಎ.ಕೆ. ಆಂಟನಿ, ಭಾರತದ ಯಾವುದೇ ಭಾಗವನ್ನು ಚೀನಾಕ್ಕೆ ಒಪ್ಪಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭರವಸೆ ನೀಡಿದರು. ಇದು ರಾಷ್ಟ್ರೀಯ ವಿಷಯಕ್ಕೆ ಸಂಬಂಧಿಸಿದ ವಿಷಯವಾದ ಕಾರಣ ವಾಸ್ತವ ಗಡಿ ರೇಖೆಯೊಳಗೆ ಚೀನಾದ ಅಕ್ರಮ ಪ್ರವೇಶಕ್ಕೆ ಸಂಬಂಧಪಟ್ಟಂತೆ ಮುಚ್ಚಿಡುವಂಥ ರಹಸ್ಯವೇನೂ ಇಲ್ಲ. ವಾಸ್ತವ ಸಂಗತಿಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ಬಹಿರಂಗಪಡಿಸಲಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಲಡಾಖ್‌ಗೆ ಭೇಟಿ ನೀಡಿದ್ದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಅಧ್ಯಕ್ಷ ಶ್ಯಾಮ್ ಸರಣ್, ಗಡಿಯಲ್ಲಿಯ ಚಟುವಟಿಕೆ ಮತ್ತು ವಿದ್ಯಮಾನಗಳ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ನೀಡಿದ್ದಾರೆ. ವರದಿಯಲ್ಲಿ ಅವರು ಎಲ್ಲಿಯೂ ಚೀನಾ ಅತಿಕ್ರಮಣದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಸದನಕ್ಕೆ ತಿಳಿಸಿದರು.

ಲಡಾಖ್ ಗಡಿಯಲ್ಲಿ ವೈಮಾನಿಕ ಸೌಲಭ್ಯ ಹೆಚ್ಚಿಸುವ ಮತ್ತು ದೇಶದ ಇತರ ಭಾಗಗಳೊಂದಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ಸರಣ್ ತಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಗಡಿ ಭಾಗದ ಜನರ ಕುಂದುಕೊರತೆ ಮತ್ತು ಸಮಸ್ಯೆಗಳಿಗೆ ಸೂಕ್ತ ರೀತಿಯ ಸ್ಪಂದನೆ, ಯುವಕರಿಗೆ ಉದ್ಯೋಗ, ಪ್ರವಾಸೋದ್ಯಮಕ್ಕೆ ಉತ್ತೇಜನ, ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ ಎಂದು ಆಂಟನಿ ಲೋಕಸಭೆಗೆ ತಿಳಿಸಿದರು.

ಪುಕ್ಕಲು ಸರ್ಕಾರ-ದುರ್ಬಲ ನೀತಿ
`ಚೀನಾ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಇಡೀ ದೇಶವೇ ಆತಂಕದಲ್ಲಿರುವಾಗ, ಕೇಂದ್ರ ಸರ್ಕಾರ ಗಡಿಯಲ್ಲಿ ಏನೂ ನಡದೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಈ ವಿವಾದವನ್ನು ಹಗುರವಾಗಿ ತೆಗೆದುಕೊಂಡಿರುವ ಸರ್ಕಾರ ಅತ್ಯಂತ ದುರ್ಬಲವಾಗಿ ಪ್ರತಿಕ್ರಿಯಿಸಿದೆ' ಎಂದು ಬಿಜೆಪಿಯ ಪ್ರಕಾಶ್ ಜಾವಡೇಕರ್ ಹೇಳಿದರು.

ರಾಜ್ಯಸಭೆಯಲ್ಲೂ ಚೀನಾ ಅತಿಕ್ರಮಣ ವಿವಾದ ಪ್ರತಿಧ್ವನಿಸಿತು. ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿ ಸುಮ್ಮನೆ ಕೂರಲು ಸಂಸತ್ತು ಮೂಕಪ್ರೇಕ್ಷಕನಲ್ಲ' ಎಂದು ಬಿಜೆಪಿ ನಾಯಕ ಎಂ.ವೆಂಕಯ್ಯ ನಾಯ್ಡು ಹರಿಹಾಯ್ದರು.

`ಸರ್ಕಾರ ಪುಕ್ಕಲೂ ಅಲ್ಲ, ದುರ್ಬಲವೂ ಅಲ್ಲ. ಈ ವಿಷಯವಾಗಿ ಬಹಳಷ್ಟು ಗಾಳಿ ಸುದ್ದಿಗಳು ರಕ್ಕೆಪುಕ್ಕ ಪಡೆದು ಹರಿದಾಡುತ್ತಿವೆ. ಯಾವುದೇ ವಿಷಯವನ್ನು ಸರ್ಕಾರ ಮುಚ್ಚಿಟ್ಟಿಲ್ಲ' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಸ್ಪಷ್ಟನೆ ನೀಡಿದರು.

ಸ್ಪಷ್ಟೋಕ್ತಿ
ಭಾರತದ ಯಾವುದೇ ಭಾಗವನ್ನು ಚೀನಾಕ್ಕೆ ಒಪ್ಪಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ವಾಸ್ತವ ಗಡಿ ರೇಖೆಯೊಳಗೆ ಚೀನಾದ  ಅಕ್ರಮ ಪ್ರವೇಶಕ್ಕೆ ಸಂಬಂಧಪಟ್ಟಂತೆ    ಮುಚ್ಚಿಡುವಂಥ ರಹಸ್ಯವೇನೂ  ಇಲ್ಲ ಎಂದು ಸಚಿವ ಆಂಟನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT