ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ದೂದಪೀರಾ ಉರುಸು ಇಂದಿನಿಂದ

Last Updated 11 ಸೆಪ್ಟೆಂಬರ್ 2011, 6:50 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಇಲ್ಲಿಯ ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಹರಿಕಾರರಾಗಿ ಮೆರೆದು ಈ ಭಾಗದಲ್ಲಿ ಭಾವೈಕ್ಯತೆಯ ಬೀಜ ಬಿತ್ತಿದ ದೂದಪೀರಾ ಉರುಸು ಇದೇ 11ರಿಂದ ಆರಂಭವಾಗಲಿದೆ.

ಯಾವುದೇ ಜಾತಿ ಬೇಧವಿಲ್ಲದೆ ಎಲ್ಲ ಜಾತಿಯ ಜನರೂ ಈಗಲೂ ಸಹ ಶ್ರೀದೂದಪೀರಾಂರವ ಗದ್ದುಗೆಗೆ ಬಂದು ದರ್ಶನ ಭಾಗ್ಯ ಪಡೆದು ಕಷ್ಟಗಳಿಂದ ಮುಕ್ತಿ ಪಡೆಯುತ್ತಿದ್ದಾರೆ. ನಂಬಿ ಬಂದ ಭಕ್ತರ ಸಂಕಷ್ಟಗಳನ್ನು ಇಂದಿಗೂ ದೂದಪೀರಾ ಅವರು ಪರಿಹರಿಸುತ್ತಿದ್ದಾರೆ.

ಸುಮಾರು 18ನೇ ಶತಮಾನದ ಕೊನೆಯಲ್ಲಿ ದೂರದ ಬಾಗ್ದಾದ್ ಪಟ್ಟಣದಿಂದ ಹುಬ್ಬಳ್ಳಿಗೆ ಬಂದ ಸಂತ ಸೈಯದ್ ಸುಲೇಮಾನ್ ಬಾದಶಃ ನೂರೇ ಖಾದರ್ ಅವರೇ ಮಹಾ ಮಹಿಮ ದೂದಪೀರಾ ಮಹಾತ್ಮರು.

ಇವರು 1881ರ ಸುಮಾರಿಗೆ ತಮ್ಮ ಶಿಷ್ಯ ರಜಾಕ್‌ಬೇಗ್ ಮಿರ್ಜಾ ಅವರ ಮನವಿಯ ಮೇರೆಗೆ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಬರುತ್ತಾರೆ. ಇಲ್ಲಿಗೆ ಬಂದ ನಂತರ ಜನರಲ್ಲಿನ ಮೂಢನಂಬಿಕೆಗಳನ್ನು ತೊಡೆದು ಹಾಕಿ ಅವರನ್ನು ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸಿದರು. ಕಷ್ಟದಲ್ಲಿದ್ದ ಜನತೆಗೆ ಸಹಾಯ ಹಸ್ತ ಚಾಚಿ ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಜನತೆಯ ನೋವು ನಿವಾರಿಸಿ ಅವರ ಬದುಕಿಗೆ ದಾರಿ ದೀಪವಾದರು. ಮಹಾ ತಪಸ್ವಿಯಾಗಿದ್ದ ಅವರು ಇಲ್ಲಿಗೆ ಬಂದ ನಂತರ ಅನೇಕ ಪವಾಡಗಳಿಂದ ಜನರ ಕಷ್ಟಗಳನ್ನು ದೂರ ಮಾಡಿ ಅಪಾರ ಶಿಷ್ಯ ವರ್ಗವನ್ನು ಸಂಪಾದಿಸಿದರು.

ಕೇವಲ ಮುಸ್ಲಿಂ ಸಮುದಾಯದ ಭಕ್ತರಷ್ಟೇ ಅಲ್ಲ ಹಿಂದೂ, ಕ್ರೈಸ್ತ ಬಾಂಧವರನ್ನೂ ಈ ಮಹಾತ್ಮರು ಸಂಕಷ್ಟದಿಂದ ಪಾರು ಮಾಡಿದರು. ಹೀಗೆ ಲಕ್ಷಾಂತರ ಭಕ್ತರ ಜನರ ನೋವು ನಿವಾರಿಸಿದ ಸಂತ ದೂದಪೀರಾ ಅವರು 1902ರಲ್ಲಿ ದೇಹತ್ಯಾಗ ಮಾಡಿದರು. ಇವರು ಇಹಲೋಕ ತ್ಯಜಿಸಿದ ನಂತರವೂ ಇವರ ಗದ್ದುಗೆ ಇರುವ ಸ್ಥಳವು ಪವಾಡ ಬೀರುವ ಕ್ಷೇತ್ರವಾಗಿದೆ. ಕರ್ನಾಟಕ ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಇವರಿಗೆ ಅಸಂಖ್ಯಾತ ಭಕ್ತರಿದ್ದಾರೆ.

ಇಂಥ ಪವಿತ್ರ ಕ್ಷೇತ್ರದ ಮಹಾಮಹಿಮ ದೂಪೀರಾರವರ ಉರುಸು ಪ್ರತಿ ವರ್ಷ ರಂಜಾನ್ ಆದ 12ನೇ ದಿನಕ್ಕೆ ವಿಜೃಂಭಣೆಯಿಂದ ಜರುಗುತ್ತದೆ. ಈ ಬಾರಿ ಮಹಾತ್ಮರ 122ನೇ ಉರುಸು ಇದೇ 11 ಮತ್ತು 12ರಂದು ಜರುಗಲಿದೆ. 11ರಂದು ರಾತ್ರಿ 9ಕ್ಕೆ ಸಂದಲ್ ಮುಬಾರಕ್ ಹಾಗೂ 12ರಂದು ರಾತ್ರಿ ಉರುಸು ನಡೆಯಲಿದೆ. ಉರುಸು ಕಾರ್ಯಕ್ರಮದ ಅಂಗವಾಗಿ ತಾಜಮಹಲ್ ಮೆರವಣಿಗೆ ಜರುಗುವುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT