ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಸಾಮರಸ್ಯದ ಸಂಕೇತ ಗಿಳಿವಿಂಡು

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಖ್ಯಾತ ಇಂಗ್ಲಿಷ್ ಸಾಹಿತಿ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ರಾಜ್ಯದಾದ್ಯಂತ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿರುವಾಗಲೇ,  ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ.

ಈ ಸ್ಮಾರಕಕ್ಕೆ `ಗಿಳಿವಿಂಡು~ (ಗೋವಿಂದ ಪೈಗಳ ಕವನ ಸಂಕಲನವೊಂದರ ಹೆಸರು) ಹೆಸರು ಇಡಲಾಗಿದೆ. ಸಾಹಿತ್ಯ ಪ್ರೇಮಿಗಳ ಒತ್ತಾಸೆ ಮೇರೆಗೆ ಕೇರಳ, ಕರ್ನಾಟಕ ಹಾಗೂ ಕೇಂದ್ರ ಸರ್ಕಾರಗಳು ಸೇರಿ ಜಾರಿಗೊಳಿಸುತ್ತಿರುವ ರಾಷ್ಟ್ರಕವಿಯ ಸ್ಮಾರಕ ಬಹುಭಾಷಾ ಸಾಮರಸ್ಯಕ್ಕೆ ಉತ್ತಮ ಉದಾಹರಣೆಯೂ ಹೌದು.

`ರಾಷ್ಟ್ರಕವಿ ಗೋವಿಂದ ಪೈ ನಿಧನರಾಗುವ ಹೊತ್ತಿಗೆ (1963) ಮಂಜೇಶ್ವರ ಕೇರಳದ ಪಾಲಾಗಿತ್ತು. ಪೈಗಳ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಕುಟುಂಬಸ್ಥರು ಅವರ ಮನೆ ಇದ್ದ 72 ಸೆಂಟ್ಸ್ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟರು. ಆ ಜಾಗದ ಪಕ್ಕದಲ್ಲೆ ಇದ್ದ 1.10 ಎಕರೆ ಜಾಗವನ್ನು ಗೋವಿಂದ ಪೈ ಸ್ಮಾರಕ ಕಾಲೇಜು ನಿರ್ಮಿಸಲು ಸರ್ಕಾರಕ್ಕೆ ನೀಡಿದ್ದರು.

ಅಲ್ಲಿ ಸ್ಥಾಪನೆಯಾದ ಕಾಲೇಜು ಸ್ಥಳಾಂತರಗೊಂಡ ಕಾರಣ ಆ ಜಾಗವೂ ಸರ್ಕಾರದ ಪಾಲಾಯಿತು. ಈಗ ಒಟ್ಟು ಲಭ್ಯ ಇರುವ 1.82 ಎಕರೆ ಜಾಗದಲ್ಲಿ ಗೋವಿಂದ ಪೈಗಳ ಸ್ಮಾರಕ ನಿರ್ಮಿಸಲಾಗುತ್ತಿದೆ~ ಎಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯ ಕಾರ್ಯದರ್ಶಿ ಬಿ.ವಿ.ಕಕ್ಕಿಲ್ಲಾಯ `ಪ್ರಜಾವಾಣಿ~ಗೆ ತಿಳಿಸಿದರು.

ಮಂಜೇಶ್ವರದಲ್ಲಿ ಪೈಗಳ 122ನೇ ಜನ್ಮದಿನಾಚರಣೆಯಲ್ಲಿ (2004) ಭಾಗವಹಿಸಿದ್ದ ಆಗಿನ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಸ್ಮಾರಕದ ದುಃಸ್ಥಿತಿಯನ್ನು ಕಂಡು ಅದನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು.  ಪೈ ಅವರ 125ನೆಯ ಜನ್ಮದಿನದಂದು (2008 ಮಾ. 23) `ಗಿಳಿವಿಂಡು~ ಯೋಜನೆಗೆ ಶಿಲಾನ್ಯಾಸ ನಡೆದಿತ್ತು.

ಕಾಸರಗೋಡು ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ `ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ~ ಯೋಜನೆ ಕಾರ್ಯಗತಗೊಳಿಸುವ ಹೊಣೆ ಹೊತ್ತಿದೆ. ಈ ಸಮಿತಿಗೆ ಪೂರಕವಾಗಿ ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ `ಮಂಜೇಶ್ವರ ಗೋವಿಂದ ಪೈ ಸ್ಮಾರಕ ಪ್ರತಿಷ್ಠಾನ~ ವೂ ರಚನೆಗೊಂಡಿದೆ.

`ಗಿಳಿವಿಂಡು~ ಸಂಕೀರ್ಣವನ್ನು ನಲಂದ (ಸಂಶೋಧನೆ ಮತ್ತು ಅಧ್ಯಯನ ಕೇಂದ್ರ),  ಭವನಿಕಾ (ಲಲಿತಾಕಲಾ ರಂಗಮಂದಿರ), ವೈಶಾಖಿ, ಸಾಕೇತ, ಆನಂದ (ವಸತಿ ವಿಭಾಗ), ಬೋಧಿರಂಗ (ಬಯಲು ರಂಗಮಂದಿರ) ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ನಲಂದ ವಿಭಾಗದಲ್ಲಿ ಗೋವಿಂದ ಪೈ ಅವರ ಕೃತಿಗಳನ್ನು ಒಳಗೊಂಡ ಗ್ರಂಥಾಲಯ `ಸಾರಸ್ವತ~, ಪ್ರಾಚೀನ ಹಸ್ತಪ್ರತಿ ಹಾಗೂ ತಾಳ ಪತ್ರಗಳನ್ನು ರಕ್ಷಿಸಿಡುವ

`ಕಂಠಪತ್ರ~, ಕಲಾತ್ಮಕ ಚಿತ್ರಗಳನ್ನು ಹಾಗೂ ಕೆತ್ತನೆಗಳ ಪ್ರದರ್ಶನಕ್ಕಾಗಿ `ಮನೋಲ್ಲಾಸ~ ಹಾಗೂ ಯಕ್ಷಗಾನ ಕವಿ ಪಾರ್ತಿಸುಬ್ಬನ ಯಕ್ಷಗಾನ ದೇಗುಲ, ತೌಲನಿಕ ಅಧ್ಯಯನಕ್ಕಾಗಿ `ಸಮತೋಲನ~, ಪ್ರಾಚೀನ ಸಾಹಿತ್ಯಾಧ್ಯಯನ ಮತ್ತು ಸಂಶೋಧನೆಗಾಗಿ `ಧಮ್ಮಪದ~ ಹಾಗೂ ಪ್ರಾಚೀನ ಸಾಹಿತ್ಯದ ಮೂಲ ಆಕರಗಳ ವಸ್ತು ಸಂಗ್ರಹಾಲಯ `ಮಾಹಿತಿ ಕೋಶ~ ಹಾಗೂ  `ಅಂತರ್ಜಾಲ~ ಉಪವಿಭಾಗ ಬರಲಿವೆ.

`ಆರಂಭದಲ್ಲಿ ರೂ 4 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಪ್ರಸ್ತುತ ಯೋಜನೆ ಪೂರ್ಣಗೊಳಿಸಲು ಕನಿಷ್ಠ 8 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಗೋವಿಂದ ಪೈಗಳ ಮನೆಯನ್ನು ಹಾಗೆಯೇ ಉಳಿಸಿಕೊಂಡು ಅಲ್ಪ ಸ್ವಲ್ಪ ದುರಸ್ತಿಯೊಂದಿಗೆ ನಲಂದ ವಿಭಾಗವನ್ನಾಗಿ ಅಭಿವೃದ್ಧಿ ಪಡಿಸುತ್ತೇವೆ. ಇದಕ್ಕೆ ರೂ 4 ಕೋಟಿ ವೆಚ್ಚವಾಗಲಿದ್ದು ಕೇಂದ್ರ ಸರ್ಕಾರ ಇದಕ್ಕೆ ಅನುದಾನ ಒದಗಿಸಲಿದೆ.

ಈ ಹಿಂದೆ ಕಾಲೇಜು ತರಗತಿ ನಡೆಯುತ್ತಿದ್ದ ಕಟ್ಟಡವನ್ನು ನೆಲಸಮ ಮಾಡಲಾಗಿದ್ದು, ಆ ಸ್ಥಳದಲ್ಲಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ `ಭವನಿಕಾ~ ರಂಗ ಮಂದಿರ ನಿರ್ಮಾಣವಾಗಲಿದೆ. ಇದರ ಒಟ್ಟು ವೆಚ್ಚವನ್ನು ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಸಮನಾಗಿ ಹಂಚಿಕೊಳ್ಳಲಿವೆ. ಈ ಪೈಕಿ ಕೇರಳ ಸರ್ಕಾರ ರೂ 20 ಲಕ್ಷ ಹಾಗೂ ಕರ್ನಾಟಕ ಸರ್ಕಾರ ರೂ 25 ಲಕ್ಷ ಬಿಡುಗಡೆ ಮಾಡಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಿಸುವ ಚಿಂತನೆ ಇದೆ. ಸ್ಥಳೀಯ ಶಾಸಕರ ನಿಧಿ ಹಾಗೂ ಸಂಸದರ ನಿಧಿಯಿಂದ ಸುಮಾರು ರೂ 33 ಲಕ್ಷ ವೆಚ್ಚದಲ್ಲಿ ವಸತಿ ವಿಭಾಗದ ಎರಡು ಅತಿಥಿಗೃಹಗಳು ಪೂರ್ಣಗೊಂಡಿದ್ದು, ನವೆಂಬರ್‌ನಲ್ಲಿ ಉದ್ಘಾಟಿಸುವ ಚಿಂತನೆ ಇದೆ~ ಎಂದು ಕಕ್ಕಿಲ್ಲಾಯ ಹೇಳಿದರು.

ನಿಧಾನಗತಿ ಕಾಮಗಾರಿ
`ಮೂರು ಸರ್ಕಾರಗಳು ಸೇರಿ ಜಾರಿಗೊಳಿಸುವ ಯೋಜನೆ ಇದಾಗಿರುವುದರಿಂದ ವಿಳಂಬ ಸಹಜ. ಕಡತ ವಿಲೇವಾರಿಗೆ ತಿರುವನಂತಪುರಕ್ಕೆ, ಬೆಂಗಳೂರಿಗೆ ಹಾಗೂ ದೆಹಲಿಗೆ ಓಡಾಟ ನಡೆಸಬೇಕಾಗುತ್ತದೆ.~ ಎಂದು ಕಕ್ಕಿಲ್ಲಾಯ ಹೇಳಿದರು. ಜಿಲ್ಲಾಧಿಕಾರಿಯವರು ಸಮಿತಿಯ ಅಧ್ಯಕ್ಷರು. 2008ರಿಂದ ಕನಿಷ್ಠ ಐದಾರು ಮಂದಿ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಇದು ಕೂಡಾ ಕಾಮಗಾರಿ ಪ್ರಗತಿ ಮೇಲೆ  ಪರಿಣಾಮ ಬೀರಿದೆ~ ಎಂದು ಅವರು ತಿಳಿಸಿದರು. 

ಚುರುಕುಗೊಳಿಸಲು ಕ್ರಮ
ಗಿಳಿವಿಂಡು ಕಾಮಗಾರಿ ಚುರುಕುಗೊಳಿಸುವ ಬಗ್ಗೆ ಚರ್ಚಿಸಲು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆದಿದೆ. ಇದೇ 8ರಂದು ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ ತಿರುವನಂತಪುರಕ್ಕೆ ಭೇಟಿ ನೀಡಲಿದ್ದಾರೆ. ಅವರ ಬಳಿ ಹಾಗೂ ಕೇರಳದ ಸಂಸ್ಕೃತಿ ಇಲಾಖೆ ಸಚಿವರ ಜತೆ ಚರ್ಚಿಸಿ `ಗಿಳಿವಿಂಡು~ ಕಾಮಗಾರಿ ಚುರುಕುಗೊಳಿಸಲು ಮನವಿ ಸಲ್ಲಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ~ ಎಂದು ಬಿ.ವಿ.ಕಕ್ಕಿಲ್ಲಾಯ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT