ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗತ ಲೋಕದ ಒಳ ಸುಳಿಗೆ ಲೈಲಾ ಬಲಿ

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಉಲ್ಲಾಸದ ವಸಂತದಲ್ಲಿ ಜೀಕುತ್ತಿದ್ದ ಆಕೆಗಿನ್ನೂ ಮೂವತ್ತೇ ವರ್ಷ. ಮಾಯಾನಗರಿ ಬಾಲಿವುಡ್‌ನಲ್ಲಿ ಅಷ್ಟೇನೂ ಬೆಳಕಿಗೆ ಬಾರದ ಥಳ ಥಳ ಹೊಳೆಯುವ ಬೆಡಗಿಯವಳು.
ಹೆಸರು ಲೈಲಾಖಾನ್ ಆಲಿಯಾಸ್ ರೇಶ್ಮಾ ನಾದಿರ್ ಷಾ ಪಟೇಲ್. ಹುಟ್ಟ್ದ್ದಿದು ಪಾಕಿಸ್ತಾನದಲ್ಲಿ.

ಬಾಲಿವುಡ್‌ನಲ್ಲಿ ರೇಶ್ಮಾ ಪಟೇಲ್ ಎಂಬ ಹೆಸರಿನಲ್ಲಿ ದಶಕಗಳ ಹಿಂದೆಯೇ ಮಾಡೆಲಿಂಗ್ ವೃತ್ತಿ ಆರಂಭಿಸಿದ್ದ ಈಕೆ ನಟಿಸಿದ್ದು ಒಂದೇ ಒಂದು ಹಿಂದಿ ಚಲನಚಿತ್ರ. `ವಫಾ~ ಎಂಬ ಹೆಸರಿನದ್ದು. 2008ರಲ್ಲಿ ತೆರೆಕಂಡ ಈ ಚಿತ್ರದಲ್ಲಿ  ರಾಜೇಶ್ ಖನ್ನಾ ಎದುರು ಈಕೆ ನಟಿಸಿದ್ದಕ್ಕಿಂತಲೂ ತನ್ನ ಧುಮ್ಮಿಕ್ಕುವ ಸೌಂದರ್ಯವನ್ನು ತೆರೆದಿಟ್ಟದ್ದೇ ಹೆಚ್ಚು. ಅಷ್ಟೇ ಅಲ್ಲ ಜಗ್ಗೇಶ್ ಜೊತೆಗಿನ `ಮೇಕಪ್~ ಹೆಸರಿನ ಕನ್ನಡ ಸಿನಿಮಾದಲ್ಲೂ ಇವಳು ಮುಖಕ್ಕೆ ಬಣ್ಣ ಬಳಿದುಕೊಂಡಿದ್ದಳು.

ಈ ಲೈಲಾಳಿಗೊಬ್ಬ ಗಂಡ. ಅವನ ಹೆಸರು ಮುನೀರ್ ಖಾನ್. ಈತ ಬಾಂಗ್ಲಾದೇಶದ `ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ~ ಉಗ್ರರ ಸಂಘಟನೆಯ ಸದಸ್ಯ. ಲೈಲಾ 2011ರಲ್ಲಿ ಬಾಲಿವುಡ್ ನಿರ್ದೇಶಕ ರಾಕೇಶ್ ಸಾವಂತ್‌ರ ತನ್ನ ಎರಡನೇ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾದಳು.

ಲೈಲಾಳ ತಂದೆ ನಾದಿರ್ ಷಾ ಪಟೇಲ್. ತಾಯಿ ಶೆಹಲೀನಾ. ಶೆಹಲೀನಾಗೆ 52ನೇ ವಯಸ್ಸಿನಲ್ಲಿ 29ವರ್ಷದ ಗಂಡನೊಬ್ಬನಿದ್ದ! ಅವನ ಹೆಸರು ಪರ್ವೇಜ್ ಇಕ್ಬಾಲ್ ತಕ್. ಈತ ಜಮ್ಮು ಕಾಶ್ಮೀರದ ಕಿಶ್ತ್ವಾರ ನಗರದವನು.

2009ರಿಂದ ಇವರಿಬ್ಬರೂ ಮುಂಬೈನಲ್ಲಿ ಒಟ್ಟಿಗೇ ವಾಸಿಸುತ್ತಿದ್ದರು. ಶೆಹಲೀನಾ, ಪರ್ವೇಜ್ ಮತ್ತು ಲೈಲಾ ಸೇರಿದಂತೆ ಈ ಕುಟುಂಬದ ಸದಸ್ಯರೆಲ್ಲಾ ಓಶಿವಾರದ ಫ್ಲಾಟ್‌ವೊಂದರಲ್ಲಿ ವಾಸವಿದ್ದರು. ಮುಂಬೈನಿಂದ 130 ಕಿ.ಮೀ.ದೂರದಲ್ಲಿರುವ ಸಹ್ಯಾದ್ರಿಯ ಮಡಿಲಲ್ಲಿರುವ ಸುಂದರವಾದ ಇಗತ್‌ಪುರಿಯಲ್ಲಿ ಇವರಿಗೆ ಒಂದು ಫಾರಂ ಹೌಸ್ ಕೂಡಾ ಇತ್ತು. ಇವರೆಲ್ಲಾ ಬೇಜಾರು ಕಳೆಯಲು ಆಗಾಗ್ಗೆ ಇಲ್ಲಿಗೆ ಹೋಗಿ ಬರುತ್ತಿದ್ದರು.

2011ರ ಫೆಬ್ರುವರಿ 9ನೇ ತಾರೀಖಿನ ನಂತರ ಲೈಲಾ ಮತ್ತು ಆಕೆಯ ತಾಯಿ ಶೆಹಲೀನಾ ಕಾಣೆಯಾಗಿದ್ದಾರೆ ಎಂದು ಮುಂಬೈ ಪೊಲೀಸರಿಗೆ ದೂರೊಂದನ್ನು ನೀಡಲಾಯಿತು.
 
ಈ ದೂರು ಕೊಟ್ಟವನು ಶೆಹಲೀನಾಳ ಮೊದಲನೇ ಗಂಡ ನಾದಿರ್ ಷಾ ಪಟೇಲ್. ಅಂದರೆ ಲೈಲಾ ಖಾನ್‌ಳ ತಂದೆ. ಈತ ಮುಂಬೈನ ಮೀರಾ ರೋಡ್ ನಿವಾಸಿ. ಇದೇ ವೇಳೆ ನಿರ್ದೇಶಕ ರಾಕೇಶ್ ಸಾವಂತ್ ಕೂಡಾ ಲೈಲಾ ಕಣ್ಮರೆಯಾಗಿದ್ದಾಳೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದರು.

ಈ ದೂರುಗಳ ಅನುಸಾರ ತನಿಖೆ ಆರಂಭಿಸಿದ ಪೊಲೀಸರಿಗೆ ಶಂಕೆ ಮೂಡಿದ್ದು ಶೆಹಲೀನಾಳ ಮೂರನೇ ಗಂಡ ಪರ್ವೇಜ್ ಇಕ್ಬಾಲ್ ತಕ್ ಮತ್ತು ಎರಡನೇ ಗಂಡ ಮುಂಬೈನ ಬಿಲ್ಡರ್ ಅಸೀಫ್ ಶೇಖ್ ಮೇಲೆ. ಅಸಲಿಗೆ ಪರ್ವೇಜ್ ಇಕ್ಬಾಲ್ ತಕ್ ಲಷ್ಕರ್ ಎ ತೊಯ್ಬಾದ ಶಂಕಿತ ಸದಸ್ಯ. ಆದಾಗಲೇ ಪೊಲೀಸರು ನಾದಿರ್ ಷಾ ಪಟೇಲ್‌ನನ್ನೂ ತಕ್ಕ ಮಟ್ಟಿಗೆ ವಿಚಾರಿಸಿದ್ದರು. ಆದರೆ ಅಂಥಾ ಗಟ್ಟಿ ಸುಳಿವೇನೂ ಸಿಕ್ಕಿರಲಿಲ್ಲ.

2012ರ ಜೂನ್ 21ರಂದು ಫೋರ್ಜರಿ ಪ್ರಕರಣವೊಂದರಲ್ಲಿ ಪರ್ವೇಜ್ ಇಕ್ಬಾಲ್ ತಕ್‌ನನ್ನು ಜಮ್ಮು ಕಾಶ್ಮೀರದ ಪೊಲೀಸರು ಬಂಧಿಸಿದರು. ಈ ಸಮಯದಲ್ಲಿ ಪೊಲೀಸರ ರುಬ್ಬುವಿಕೆ ತಾಳಲಾರದೆ ಪರ್ವೇಜ್ ಇಕ್ಬಾಲ್ ತಕ್ ಲೈಲಾ ಮತ್ತು ಶೆಹಲೀನಾಳ ಇಡೀ ಕುಟುಂಬ ಕಣ್ಮರೆಯಾದ ವೃತ್ತಾಂತವನ್ನು ಬಾಯ್ಬಿಟ್ಟ.
 
ಶೆಹಲೀನಾ, ಆಕೆಯ ಮೊದಲ ಮಗಳು 32 ವರ್ಷದ ಅಜ್ಮೀನಾ ಪಟೇಲ್, ಎರಡನೇ ಮಗಳು 30 ವರ್ಷದ ಲೈಲಾ, ಅವಳಿಗಳಾದ 25 ವರ್ಷದ ಝಾರಾ ಮತ್ತು ಇಮ್ರಾನ್ ಹಾಗೂ ಸಂಬಂಧಿಯಾದ 19ರ ಹರಯದ ರೇಶ್ಮಾ ಸಗೀರ್ ಖಾನ್ ಅಲಿಯಾಸ್ ತಲ್ಲಿ ಇವರೆಲ್ಲರೂ ಇಗತ್‌ಪುರಿಯಲ್ಲಿ ಕೊಲೆಯಾಗಿದ್ದಾರೆ ಎಂಬ ಬೆಚ್ಚಿಬೀಳಿಸುವ ಸಂಗತಿಯನ್ನು ಹೊರಗೆಡವಿದ.

ಶೆಹಲೀನಾಳಿಗೆ ನಾಲ್ಕನೆಯ ಪರಮಾಪ್ತ ಸಖನೊಬ್ಬ ದುಬೈನಲ್ಲಿದ್ದ. ಈತನ ಹೆಸರು ಸೋನು ಅಲಿಯಾಸ್ ವಫೀ ಖಾನ್. ಇವನ ಬಳಿಗೆ ಹೋಗಿ ದುಬೈನಲ್ಲೇ ನೆಲೆಸಬೇಕೆಂಬ ಇರಾದೆಯನ್ನು ಶೆಹಲೀನಾ ಹೊಂದಿದ್ದಳಂತೆ. ಆದರೆ ಪರ್ವೇಜ್‌ಗೆ ನೇಪಾಳಕ್ಕೆ ಹೋಗಿಬಿಡಬೇಕೆಂಬ ತುಡಿತ.

ದುಬೈಗೆ ಹೋಗಲು ಇವನ ಬಳಿ ಪಾಸ್‌ಪೋರ್ಟ್ ಇರಲಿಲ್ಲ. ಅಂತೆಯೇ ಭಾರತದ ನೆಲದಲ್ಲಿ ಇವನು ನಡೆಸಿದ್ದ ಘನಂದಾರಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪೊಲೀಸರು ಇವನ ಬೆನ್ನುಬಿದ್ದಿದ್ದರು. ಈ ಕಾಟದಿಂದ ತಪ್ಪಿಸಿಕೊಂಡು ಸುಲಭವಾಗಿ ಹೋಗಿ ತನ್ನ ಎಲ್‌ಇಟಿ ಸದಸ್ಯರ ಜೊತೆ ನೆಮ್ಮದಿಯಾಗಿ ಇರುವುದಕ್ಕೆ ನೇಪಾಳವೇ ಸೂಕ್ತ ಜಾಗ ಎಂದು ಆತ ಯೋಚಿಸಿದ್ದ. ಆದರೆ ಶೆಹಲೀನಾ ದುಬೈನಲ್ಲಿ ನಾಲ್ಕನೆಯ ಪ್ರಿಯತಮನ ಜೊತೆ ಕಾಲ ಕಳೆಯುವ ಕನಸು ಕಾಣುತ್ತಿದ್ದಳು. ಕುಟುಂಬ ಸಮೇತ ಅಲ್ಲಿಗೆ ಯಾವತ್ತು ಹೋದೇನೋ ಎಂದು ತುದಿಗಾಲಲ್ಲಿ ತವಕಿಸುತ್ತಿದ್ದಳು.

ಪರ್ವೇಜ್ ಇಕ್ಬಾಲ್ ತಕ್ ಹೇಳಿಕೆಯ ಅನುಸಾರ 2011ರ ಫೆಬ್ರುವರಿ ತಿಂಗಳ 8ರಂದು ಈ ಅರ್ಧ ಡಜನ್ ಜನರು ಅನಾಮತ್ತಾಗಿ ಕೊಲೆಯಾಗಿದ್ದಾರೆ. ಇಗತ್‌ಪುರಿಯಲ್ಲಿನ ಫಾರಂಹೌಸ್‌ನಲ್ಲಿ ಆವತ್ತು ರಾತ್ರಿ ಇವರೆಲ್ಲಾ ಭರ್ಜರಿ ಮೋಜು ಮಸ್ತಿ ಮಾಡಿದ್ದಾರೆ. ಅದ್ಯಾವುದೊ ಮೈಮರೆತ ಗಳಿಗೆಯಲ್ಲಿ ಶೆಹಲೀನಾ ತನ್ನ ಎರಡನೇ ಗಂಡ ಅಸೀಫ್ ಶೇಖ್‌ನ ಬಗ್ಗೆ ಅಕ್ಕರೆಯ ನೆನಪುಗಳನ್ನು ಕಕ್ಕಿಕೊಂಡಿದ್ದಾಳೆ.

ಮಧುರ ಕ್ಷಣಗಳನ್ನೆಲ್ಲಾ ಪರ್ವೇಜ್‌ಗೆ ಬಣ್ಣಿಸಿದ್ದಾಳೆ. ಪಕ್ಕದಲ್ಲೇ ನಾನಿರುವಾಗ ಇವಳು ಅವನ ಗುಣಗಾನ ಮಾಡುತ್ತಿದ್ದಾಳಲ್ಲಾ ಎಂದು ರೊಚ್ಚಿಗೆದ್ದ ಪರ್ವೇಜ್ ಅಲ್ಲೇ ಇದ್ದ ಕಬ್ಬಿಣದ ರಾಡಿನಿಂದ ಅವಳ ತಲೆಗೆ ಬಾರಿಸಿದ್ದಾನೆ. ಶೆಹಲೀನಾಳ ಕೂಗಾಟ ಕೇಳಿದ ಇತರರು ಕೆಳಗೆ ಓಡಿ ಬಂದು ನೋಡಿದರೆ ಶೆಹಲೀನಾ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಳೆ.

ಏನಾಗುತ್ತಿದೆ ಎಂಬುದನ್ನು ತಿಳಿಯದೇ ಎಲ್ಲರೂ ಚಡಪಡಿಸುತ್ತಿರುವಾಗ ಪರ್ವೇಜ್‌ನ ಕ್ರಿಮಿನಲ್ ಬುದ್ಧಿ ಕೆಲಸ ಮಾಡಿದೆ. ಇವರೆಲ್ಲಾ ಘಟನೆಗೆ ಸಾಕ್ಷಿಯಾಗಿಬಿಡುತ್ತಾರಲ್ಲಾ ಎಂದು ಕೂಡಲೇ ಕಾವಲುಗಾರ ಶಾಕೀರ್ ಹುಸೇನ್‌ನನ್ನು ಕೂಗಿದ್ದಾನೆ. ಈ ಶಾಕೀರ್ ಹುಸೇನ್ ಮೂಲತಃ ಕಾಶ್ಮೀರದವನು. ಎರಡು ತಿಂಗಳಿನಿಂದ ಅವನು ಇಗತ್‌ಪುರಿಯ ಈ ಫಾರಂಹೌಸ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.

ಶಾಕೀರ್ ಹುಸೇನ್‌ನ ಸಹಾಯದೊಂದಿಗೆ ಪರ್ವೇಜ್ ಎಲ್ಲರನ್ನೂ ಮುಗಿಸಿದ್ದಾನೆ. ಆರೂ ಜನ ಸತ್ತರೆಂದು ಖಾತ್ರಿಯಾದ ನಂತರ ಇಬ್ಬರೂ ಸೇರಿ ಅದೇ ಫಾರಂಹೌಸ್‌ನಲ್ಲಿ  ಹೆಣಗಳನ್ನು ಗುಂಡಿ ತೋಡಿ ಮುಚ್ಚಿ ಅದರ ಮೇಲೆ ಶಾಬಾದ್ ಕಲ್ಲುಗಳನ್ನು ಪೇರಿಸಿದ್ದಾರೆ. ತದನಂತರ ಹತ್ತಿರದ ಘೋಟಿ ಎಂಬಲ್ಲಿಗೆ ಹೋಗಿ ಖಾಸಗಿ ಚಾಲಕನೊಬ್ಬನನ್ನು ಬಾಡಿಗೆಗೆ ಪಡೆದು ಸ್ಕಾರ್ಪಿಯೋದಲ್ಲಿ ಓಶಿವಾರದ ಫ್ಲಾಟ್ ತಲುಪಿದ್ದಾರೆ. ಅಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಕಾಶ್ಮೀರಕ್ಕೆ ಪಲಾಯನಗೈದಿದ್ದಾರೆ...

ಇದಿಷ್ಟೂ ಪೊಲೀಸರು ಆರೋಪಿ ಪರ್ವೇಜ್ ಹೇಳಿಕೆಯನ್ನು ಆಧರಿಸಿ ಹೇಳುತ್ತಿರುವ ಒಂದು ಮುಖದ ಕಥೆ.ಇಷ್ಟೆಲ್ಲಾ ನಡೆಯುವುದಕ್ಕೆ ಕಾರಣ ಶೆಹಲೀನಾ ಮತ್ತು ಪರ್ವೇಜ್ ಇಕ್ಬಾಲ್ ತಕ್ ನಡುವಿನ ಮನಸ್ತಾಪ. ಕ್ಷಣಮಾತ್ರದ ಸಿಟ್ಟಿನ ಪರಿಣಾಮವದು. ಕೋಪದ ಭರದಲ್ಲಿ ಅವನು ಎಲ್ಲರನ್ನೂ ಕೊಂದು ಹಾಕಿದ್ದಾನೆ ಎಂದೇ ಎಲ್ಲರೂ ಊಹಿಸುತ್ತಿದ್ದಾರೆ. ಆದರೆ ಇಡೀ ಘಟನೆಗೆ ಈಗ ಬೇರೆ ಬೇರೆ ಮಗ್ಗುಲುಗಳೂ ಇರುವುದು ನಿಧಾನವಾಗಿ ಹೆಡೆ ಬಿಚ್ಚುತ್ತಿದೆ.

ಲೈಲಾ ಖಾನ್ ಮೂಲತಃ ಪಾಕಿಸ್ತಾನದ `ಐಎಸ್‌ಐ~ನ ಗೂಢಚಾರಿಣಿ ಹಾಗೂ ಇವಳು ಲಷ್ಕರ್ ಎ ತೊಯ್ಬಾದ ಭಾರತದಲ್ಲಿನ ಮಾಹಿತಿದಾರಿಣಿ ಎಂಬ ಗಂಭೀರ ಆರೋಪವಿದೆ. ಮುಂಬೈನ ಭಯೋತ್ಪಾದನಾ ನಿಗ್ರಹ ಪಡೆ ಎಟಿಎಸ್ ಕೂಡಾ ಇಂತಹುದೇ ಅಂದಾಜುಗಳಲ್ಲಿ ಈ ಲೈಲಾ ಖಾನ್ ಕೊಲೆ ಪ್ರಕರಣವನ್ನು ಬೇಧಿಸುತ್ತಿದೆ. ಅಷ್ಟೇ ಅಲ್ಲ 2011ರ ದೆಹಲಿ ಹೈಕೋರ್ಟಿನ ಆವರಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಬಳಸಲಾದ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಲೈಲಾ ಖಾನ್‌ಳ ವಾಹನದಲ್ಲೇ ಸಾಗಿಸಲಾಗಿತ್ತು ಎಂಬ ಗುಮಾನಿಗಳಿವೆ.

ಇವಳು ಕನ್ನಡದ `ಮೇಕಪ್~ ಸಿನಿಮಾದಲ್ಲಿ ನಟಿಸಲು ಬಂದ ನಂತರವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಫೋಟ ಪ್ರಕರಣ ಸಂಭವಿಸಿದೆ. ಉಗ್ರರು ಸ್ಫೋಟಿಸಲು ಉದ್ದೇಶಿಸುತ್ತಿದ್ದ ಜಾಗಗಳ ಬಗ್ಗೆ ಇವಳು ಮುಂಚಿತವಾಗಿ ಮಾಹಿತಿ ನೀಡುತ್ತಿದ್ದಳು ಎನ್ನಲಾಗುತ್ತಿದೆ.

ಅಂದರೆ ಇವಳ ಜೊತೆಗಿರುತ್ತಿದ್ದ ಮೇಕಪ್ ಮ್ಯಾನ್‌ಗಳು, ಪರಿಚಾರಕರು ಇಂತಹ ಕೆಲಸಗಳ ಭಾಗೀದಾರರು ಎಂದು ಲೆಕ್ಕ ಹಾಕಲಾಗಿದೆ. ಹೀಗಾಗಿ ಇವಳು ಲಷ್ಕರ್ ಎ ತೊಯ್ಬಾದ ಪ್ರಮುಖ ಮಾಹಿತಿದಾರಳು ಎಂಬ ಬಲವಾದ ಆರೋಪಕ್ಕೆ ಈಗ ಸಹಜವಾಗಿಯೇ ರೆಕ್ಕೆಪುಕ್ಕ ಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT