ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಪ್ರಕ್ರಿಯೆ ಊರ್ಜಿತ

Last Updated 4 ಅಕ್ಟೋಬರ್ 2012, 18:45 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಾಣಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೀರಸಂದ್ರದಲ್ಲಿ 47.3 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡಿದ್ದ ಕ್ರಮವನ್ನು ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ಭೂಮಿ ಸ್ವಾಧೀನ ಸಂಬಂಧ ಕೆಐಎಡಿಬಿ 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಅಧಿಸೂಚನೆಯನ್ನು ಚಿನ್ನಮ್ಮ ಎಂಬುವವರು ಹೈಕೋರ್ಟ್‌ನ ಏಕಸದಸ್ಯ ಪೀಠದ ಎದುರು ಪ್ರಶ್ನಿಸಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠ, ಭೂಸ್ವಾಧೀನವನ್ನು ರದ್ದು ಮಾಡಿತ್ತು.
ಇದನ್ನು ಪ್ರಶ್ನಿಸಿದ ಕೆಐಎಡಿಬಿ, ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಮತ್ತು ನ್ಯಾಯಮೂರ್ತಿ ಸೂರಿ ಅಪ್ಪಾರಾವ್ ನೇತೃತ್ವದ ವಿಭಾಗೀಯ ಪೀಠದ ಮೊರೆ ಹೋಯಿತು. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಭೂಸ್ವಾಧೀನವನ್ನು ಊರ್ಜಿತಗೊಳಿಸಿದೆ..

ಕಟ್ಟಡ ಒಡೆದುರುಳಿಸಿ:
ಬೆಂಗಳೂರಿನ ಚಿಕ್ಕ ಆಡುಗೋಡಿಯಲ್ಲಿರುವ ತಿರುಮಲ ಶೈಕ್ಷಣಿಕ ಟ್ರಸ್ಟ್‌ನ ಕಟ್ಟಡದ ನಾಲ್ಕು ಮತ್ತು ಐದನೆಯ ಮಹಡಿಯನ್ನು ಒಡೆದುರುಳಿಸಿ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶ ನೀಡಿದೆ.

`ನಾಲ್ಕು ಮತ್ತು ಐದನೆಯ ಮಹಡಿ ಒಡೆಯಲು ಕಾಲಾವಕಾಶ ನೀಡಬೇಕು~ ಎಂದು ಟ್ರಸ್ಟ್ ಪರ ವಕೀಲರು ಮಾಡಿದ ಮನವಿಯನ್ನು ತಳ್ಳಿ ಹಾಕಿದ ಪೀಠ, `ನಿಮಗೆ ಕಾನೂನಿನ ಬಗ್ಗೆ ಪ್ರೀತಿಯಿಲ್ಲ, ವಿದ್ಯಾರ್ಥಿಗಳ ಬಗ್ಗೆಯೂ ಪ್ರೀತಿಯಿಲ್ಲ~ ಎಂದು ತರಾಟೆಗೆ ತೆಗೆದುಕೊಂಡಿತು.

`ಕಾನೂನು ಮೀರಿ ನಿರ್ಮಿಸಿರುವ ಭಾಗವನ್ನು ಒಡೆಯಲು ತಡೆಯಾಜ್ಞೆ ನೀಡಲಾಗದು. ಇಂಥ ಕೆಲಸ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂಬುದು ಜನರಿಗೂ ಗೊತ್ತಾಗಲಿ~ ಎಂದು ಪೀಠ ಹೇಳಿತು. ಅಕ್ರಮ ಭಾಗವನ್ನು ಶುಕ್ರವಾರ ಬೆಳಿಗ್ಗೆ 8 ಗಂಟೆಯ ನಂತರ ಹತ್ತು ದಿನಗಳ ಒಳಗೆ ಒಡೆಯುವಂತೆ ಪೀಠ ಆದೇಶ ನೀಡಿತು.

ಬಡಾವಣೆಗೆ ತಡೆಯಾಜ್ಞೆ:
ಉತ್ತರಹಳ್ಳಿ - ಕತ್ರಿಗುಪ್ಪೆ ನಡುವಿನ ಹೊಸಕೆರೆಹಳ್ಳಿಯ ಉದ್ದೇಶಿತ `ಶ್ರೀನಿವಾಸ ನಗರ~ ಬಡಾವಣೆಯಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.

ಹೊಸಕೆರೆಹಳ್ಳಿಯಲ್ಲಿ `ಆಶ್ರಯ ಯೋಜನೆ~ಯಡಿ ಬಡಾವಣೆ ರೂಪಿಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂಲಕ ಇಲ್ಲಿ ಆಶ್ರಯ ಮನೆ ನಿರ್ಮಿಸಲು ಸರ್ಕಾರ ಅನುಮತಿ ನೀಡಿತ್ತು.

ಆದರೆ ಈ ಜಾಗದಲ್ಲಿ ಶಾಸಕ ಎಂ. ಶ್ರೀನಿವಾಸ್ ಅವರು ಬಡಾವಣೆ ನಿರ್ಮಿಸಲು ಮುಂದಾಗಿದ್ದಾರೆ. ಆಶ್ರಯ ಯೋಜನೆಯ ಅಡಿ 20*30 ಅಡಿ ಅಳತೆಯ ನಿವೇಶನಗಳನ್ನು ರೂಪಿಸಬಹುದು. ಆದರೆ ಇಲ್ಲಿ 30*40 ಅಡಿಯ ಅಳತೆಯ ನಿವೇಶನ ರೂಪಿಸಲು ಶ್ರೀನಿವಾಸ್ ಅವರು ಮುಂದಾಗಿದ್ದಾರೆ ಎಂದು ವೈ.ಎಚ್. ಶ್ರೀನಿವಾಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.

ನೋಟಿಸ್‌ಗೆ ಆದೇಶ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆ ನಡುವೆ 60 ಕಿಲೋ ವಾಟ್ ಸಾಮರ್ಥ್ಯದ ವಿದ್ಯುತ್ ತಂತಿ ಅಳವಡಿಸಲು ಪವರ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ನೀಡಿದ್ದ ಗುತ್ತಿಗೆಯನ್ನು ರದ್ದು ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ, ಸಂಸ್ಥೆ ಹೈಕೋರ್ಟ್ ಬಾಗಿಲು ಬಡಿದಿದೆ.

ಗುತ್ತಿಗೆ ರದ್ದು ಮಾಡಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಸರ್ಕಾರ ಮತ್ತು ರಾಜ್ಯ ವಿದ್ಯುತ್ ಪ್ರಸರಣ ನಿಗಮಕ್ಕೆ ನೋಟಿಸ್ ಜಾರಿಗೆ ಆದೇಶಿಸಿದೆ. ಮೊದಲನೇ ಹಂತದ ಕೆಲಸವನ್ನು ಸಂಸ್ಥೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಲ್ಲ ಮತ್ತು ಅಗತ್ಯ ಬ್ಯಾಂಕ್ ಭದ್ರತೆ ನೀಡಿಲ್ಲ ಎಂಬ ಕಾರಣ ನೀಡಿ, ಗುತ್ತಿಗೆ ರದ್ದು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT