ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರಿಗೆ ಶಿಕ್ಷೆ; ಪೊಲೀಸ್ ಮಂತ್ರವಾಗಲಿ

Last Updated 3 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಮಾಜಿಕ ಬದುಕಿನಲ್ಲಿ ಶಿಷ್ಟರಿಗೆ ರಕ್ಷೆ; ಭ್ರಷ್ಟರಿಗೆ ಶಿಕ್ಷೆ ನೀಡುವ ಕಾರ್ಯ ಪೊಲೀಸ್ ಮಂತ್ರವಾಗಲಿ ಎಂದು ಉಪ ಮುಖ್ಯಮಂತ್ರಿಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ವಿನೋಬ ನಗರದ ಪೊಲೀಸ್ ಚೌಕಿನಲ್ಲಿ ಮಂಗಳವಾರ ಪೊಲೀಸ್ ಇಲಾಖೆಯ ನೂತನ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಹೊಸ ಹೆಜ್ಜೆ ಇರಿಸಿದ್ದು, ಅಗತ್ಯ ಇರುವ ಕಡೆಗಳಲ್ಲಿ ಪೊಲೀಸ್ ಠಾಣೆ ಆರಂಭಿಸಲು ಅಗತ್ಯ ಅನುದಾನ ಹಾಗೂ ನೆರವು ಒದಗಿಸಲಿದೆ. ಅಲ್ಲದೆ ನಗರದಲ್ಲಿ ಶಾಂತಿ ಸುವ್ಯವಸ್ಥೆ  ಕಾಪಾಡಲು ಅಗತ್ಯವಾದ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿರುವಂತೆ ಸಿಬ್ಬಂದಿ ನೇಮಿಸಲಾಗಿದೆ ಎಂದರು.

ಪುಂಡರು, ರೌಡಿಗಳು ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ನಿರತರಾದವರನ್ನು ತಾವು ಬೆಂಬಲಿಸುವುದಿಲ್ಲ ಎಂದ ಅವರು, ಅಂತಹ ಅನೈತಿಕ ಕಾರ್ಯಗಳಲ್ಲಿ ನಿರತರಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ  ಮಾತನಾಡಿ, ಸಮಾಜದಲ್ಲಿ ಜನಸಾಮಾನ್ಯರು ಯಾವುದೇ ಅತಂಕವಿಲ್ಲದೆ ನೆಮ್ಮದಿಯಿಂದ ಬದುಕುವಂತೆ ಆಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅಂತೆಯೇ ಪೊಲೀಸ್ ಮತ್ತು ಸಮಾಜದ ನಡುವಿನ ಸಂಬಂಧ ಪರಸ್ಪರ ಪೂರಕವಾಗಿರಬೇಕು ಎಂದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಶಿವಮೊಗ್ಗ ನಗರದಲ್ಲಿ ರೌಡಿಗಳ ಸೊಲ್ಲು ಅಡಗಬೇಕು; ಮಾತ್ರವಲ್ಲ ಅಂತಹ ರೌಡಿಗಳು ಅನಧಿಕೃತ ಗಡೀಪಾರು ಆಗಬೇಕು ಎಂದ ಅವರು, ಕುಖ್ಯಾತ ರೌಡಿಗಳನ್ನು ಮಟ್ಟಹಾಕಿದ ಕೀರ್ತಿ ಶಿವಮೊಗ್ಗದ ಪೊಲೀಸರಿಗೆ ಇದೆ. ಯುವ ಪೊಲೀಸರು ತಮ್ಮ ವೃತ್ತಿಯಲ್ಲಿ ಹೊಸಶಕೆ ಆರಂಭಿಸಬೇಕು ಎಂದು ಹೇಳಿದರು.

ಪೊಲೀಸ್ ಇಲಾಖೆ ಜನಸ್ನೇಹಿ ಆಗಿರುವಂತೆಯೇ ಪುಂಡರಿಗೆ ದುಃಸ್ವಪ್ನವಾಗಿ ಕಾಡಬೇಕು. ಮಾನವ ಹಕ್ಕುಗಳ ಕಾಯ್ದೆಗೆ ಅಂಜದೆ ಪೊಲೀಸರು ವೃತ್ತಿಧರ್ಮ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಬೇಕು. ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳು ಹಿರಿಯ ಅಧಿಕಾರಿಗಳ ಮಟ್ಟಕ್ಕೆ ಹೋಗದಂತೆ ಕೆಳಹಂತದಲ್ಲೆ ಬಗೆಹರಿಸುವ ಚಾಕಚಕ್ಯತೆ ಹೊಂದಿರಬೇಕು ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ನಗರಸಭಾದ್ಯಕ್ಷ ಎಸ್.ಎನ್. ಚನ್ನಬಸಪ್ಪ, ಉಪಾಧ್ಯಕ್ಷ ರಾಮು, `ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್ ಗುಪ್ತ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಯ್ಯ ವಂದಿಸಿದರು.

ಹುದ್ದೆಗೆ ಅರ್ಜಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ತಾಲ್ಲೂಕುಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಗೊಳಪಡುವ ತ್ಯಾವರೆಚಟ್ನಳ್ಳಿ ಮತ್ತು ಬುಕ್ಲಾಪುರ ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ನಗರದ ರವಿವರ್ಮ ಬೀದಿ-2 ಮತ್ತು ಚೋರಡಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಸಹಾಯಕಿಯರ ಹುದ್ದೆಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಇಚ್ಚಿಸುವ ಮಹಿಳಾ ಅಭ್ಯರ್ಥಿಗಳು ಅ. 16ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಮೂರ್ತಿ ಪ್ಯಾರಾಡೈಸ್, 2ನೇ ಅಂತಸ್ತು, 60 ಅಡಿ ರಸ್ತೆ, ವಿನೋಬನಗರ, ಶಿವಮೊಗ್ಗ - ಈ ವಿಳಾಸಕ್ಕೆ ಸಲ್ಲಿಸಬಹುದು.

ಚೆಸ್ ತರಬೇತಿ ಶಿಬಿರ
ನಳಂದ ಚೆಸ್ ಅಕಾಡೆಮಿ ದಸರಾ ರಜೆ ಚೆಸ್ ತರಬೇತಿ ಶಿಬಿರವನ್ನು ವಿನೋಬನಗರದ ಕಚೇರಿಯಲ್ಲಿ ಆಯೋಜಿಸಿದೆ.

ಅ. 15ರಿಂದ 22ರವರೆಗೆ ತರಬೇತಿ ನಡೆಯಲಿದೆ. ಆಸಕ್ತರು ಮೊಬೈಲ್: 98444 36276, 87488 50011 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT