ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕುಕವಿದ ಕ್ರಿಯಾಶೀಲತೆ (ಚಿತ್ರ: ನಾನಲ್ಲ)

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೊಲೆ ಆರೋಪದಲ್ಲಿ ಸಿಲುಕಿರುವ ಯುವಕನೊಬ್ಬ, ವಕೀಲನೊಬ್ಬನ ಸಹಾಯದಿಂದ ಆರೋಪಮುಕ್ತ ಆಗುತ್ತಾನೆಯೇ ಇಲ್ಲವೇ ಎಂಬ ಕುತೂಹಲದ ಕತೆಯ ಎಳೆಯನ್ನು ಇಟ್ಟುಕೊಂಡು ದಿನೇಶ್‌ಬಾಬು `ನಾನಲ್ಲ~ ನಿರ್ದೇಶಿಸಿದ್ದಾರೆ.

ಪ್ರೀತಿಸಿದ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಬಳಿಕ  ಪ್ರೇಮಿಯೊಬ್ಬ ಕಾಲೇಜಿನ ಜನಪ್ರಿಯ ಅಧ್ಯಾಪಕನೊಬ್ಬನ ಕೊಲೆ ಪ್ರಕರಣದ ಆರೋಪಿಯಾಗುತ್ತಾನೆ. ಆದರೆ ಅವನು ಆ ಕೊಲೆಯನ್ನು ಮಾಡಿಲ್ಲ ಎನ್ನುವ ನಂಬಿಕೆಯಿಂದ ವಕೀಲ ಅನಂತನಾಗ್ ಹುಡುಗನ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಾರೆ.
 
ಆ ಹುಡುಗ ದ್ವಿವ್ಯಕ್ತಿತ್ವ ಉಳ್ಳವನು. ನಾಯಕನ ಎರಡು ವ್ಯಕ್ತಿತ್ವದಿಂದಾಗಿ ಸಿನಿಮಾಕ್ಕೆ ಮತ್ತಷ್ಟು ರಂಗು, ತೀವ್ರತೆಯೇನೊ ಬಂದಿದೆ. ಆದರೆ ಈ ಕತೆಯಲ್ಲಿ ಬಾಬು ಅವರ ಪ್ರತಿಭೆಗೆ ಅಂಥ ಕೆಲಸವೇನಿಲ್ಲ. ಏಕೆಂದರೆ ಇದು ಇಂಗ್ಲಿಷ್‌ನಲ್ಲಿ ಬಂದ ಜಾರ್ಜ್ ಹಾಲ್‌ಬಿಟ್ ನಿರ್ದೇಶನದ `ಪ್ರಿಮಲ್ ಫಿಯರ್~ (1996) ಸಿನಿಮಾ ನಕಲು ಮಾಡಿದ ಪರಿಣಾಮವಾಗಿ ಸಿದ್ಧವಾದದ್ದು. ಆದರೆ, ಬಾಬು ಕತೆ, ಚಿತ್ರಕತೆಯಲ್ಲಿ ತಮ್ಮ ಹೆಸರನ್ನು ಹಾಕಿಕೊಂಡಿದ್ದಾರೆ! ಇದೂ ಒಂದು ರೀತಿಯಲ್ಲಿ ಬೇರೆಯವರದನ್ನು ತಮ್ಮದನ್ನಾಗಿ ಮಾಡಿಕೊಳ್ಳುವ ನಿರ್ದೇಶಕರ ಕ್ರಿಯಾಶೀಲತೆ!

ದಿನೇಶ್‌ಬಾಬು ಅವರ ಗುರಿ ತಪ್ಪದ, ಬಿಗಿಯಾದ ನಿರೂಪಣೆಯಿಂದಾಗಿ ನೋಡಿಸಿಕೊಳ್ಳುವಂಥ ಸೀಮಿತ ಚೌಕಟ್ಟಿನ ಸಿನಿಮಾ ಇದು. ಇಲ್ಲಿ ಇದಕ್ಕೆ ಒಂದು ವಿಸ್ತಾರವಾಗಲಿ, ಉದ್ದೇಶವಾಗಲಿ ಇದ್ದಂತೆ ಕಾಣುವುದಿಲ್ಲ. ಕೇವಲ ಕೊಲೆಯ ಹಿಂದಿನ ಮರ್ಮವನ್ನು, ಕೊಲೆಗಾರನ ಪಾತಕ ಮನಸ್ಸನ್ನು ತೋರುವಲ್ಲಿ ಬಾಬು ಮಗ್ನರಾಗಿದ್ದುದರಿಂದಲೋ ಏನೋ ಹೆಚ್ಚಿನ ವ್ಯಾಪ್ತಿ ಸಿನಿಮಾಕ್ಕೆ ಸಿಕ್ಕಿಲ್ಲ.

ಅನಂತನಾಗ್, ರಂಗಾಯಣ ರಘು, ಖುಷ್ಬೂ ಹಾಗೂ ನಾಯಕ ತರುಣ್ ಅವರ ಪಾತ್ರ ಚಿತ್ರಣ ಜೀವಂತವಾಗಿದೆ. ಎರಡು ಹಾಡುಗಳಿಗೆ ಸ್ವರಸಂಯೋಜಿಸಿರುವ ಗಿರಿಧರ ದಿವಾನ್ ಅವರ ಸಂಗೀತದ ಬಗ್ಗೆ ಹೇಳುವಂಥದ್ದೇನಿಲ್ಲ. ಸುರೇಶ್ ಬೈರಸಂದ್ರ ಅವರ ಛಾಯಾಗ್ರಹಣ ಕೂಡ ಮನಸೆಳೆಯುವಂತಿಲ್ಲ.
 
ಸ್ವತಃ ಉತ್ತಮ ಛಾಯಾಗ್ರಾಹಕರಾಗಿರುವ ಬಾಬು ತಮ್ಮ ಸಿನಿಮಾದ ಛಾಯಾಗ್ರಹಣಕ್ಕೆ ಹೆಚ್ಚು ಒತ್ತು ನೀಡಿದಂತೆ ಇಲ್ಲಿ ಕಾಣದು. ನಾಯಕಿ ಶುಭಾ ಪೂಂಜಾ, ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು ಅವರಿಗೆ ಸಿನಿಮಾದಲ್ಲಿ ಹೆಚ್ಚು ಕೆಲಸವಿಲ್ಲ.

ದಿನೇಶ್ ಬಾಬು ಅವರ ಎಂದಿನ ಸಿನಿಮಾಗಳ ಶೈಲಿಯಲ್ಲೇ `ನಾನಲ್ಲ~ ಕೂಡ ಇದೆ. ತಮ್ಮ ಸಿನಿಮಾಗಳ ಕತೆಗಳ ಜಾಡಿನಿಂದ ಬಾಬು ಹೊರ ಬಂದಿಲ್ಲ.ಕೊಲೆಯನ್ನು ಭೇದಿಸುವ, ಪ್ರೀತಿಯ ಸ್ಪರ್ಶ ಇರುವ ಕತೆಗಳ ಸಿನಿಮಾಗಳನ್ನು ಲೀಲಾಜಾಲವಾಗಿ ಮಾಡಿ ಎಸೆಯುವುದು ಬಾಬು ಅವರಿಗೆ ಸುಲಭವಾಗಿದೆ.

ಬಾಬು ಕಸುಬುದಾರಿಕೆ ಮರೆತಿರುವುದನ್ನು, ಹೊಸ ಬಗೆಯ ಕತೆಯ ಹುಡುಕಾಟವಿಲ್ಲದ ಅವರ ಸೋಮಾರಿತನವನ್ನು, ಇಂಗ್ಲಿಷ್ ಸಿನಿಮಾದಿಂದ ಕತೆಯನ್ನು ಮುಲಾಜಿಲ್ಲದೆ ಎತ್ತಿಕೊಳ್ಳುವ ಅವರ ಮಂಕುಕವಿದ ಕ್ರಿಯಾಶೀಲತೆಯನ್ನು ಈ ಸಿನಿಮಾ ಸ್ಪಷ್ಟವಾಗಿ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT