ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು; ನೆಹರೂ ಮೈದಾನದಲ್ಲಿ ಮೈದಳೆದಿದೆ ಹಂಪಿ

Last Updated 4 ಮಾರ್ಚ್ 2011, 7:00 IST
ಅಕ್ಷರ ಗಾತ್ರ

ಮಂಗಳೂರು: ಹಂಪಿ ವಿಜಯನಗರ ಸಾಮ್ರಾಜ್ಯದ ತೌಳವ ದೊರೆ ಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಪ್ರಯುಕ್ತ ನಗರದ ನೆಹರೂ ಮೈದಾನದಲ್ಲಿ ಇದೇ 6 ಮತ್ತು 7ರಂದು ರಾತ್ರಿ ಸಂಜೆ 7 ಗಂಟೆಯಿಂದ ಧ್ವನಿ ಮತ್ತು ಬೆಳಕಿನ ಸಂಯೋಜನೆಯ ವಿನೂತನ ಪರಿಕಲ್ಪನೆಯ ‘ರಾಯರಥ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ರಾಜ್ಯ ಪ್ರವಾಸೋದ್ಯಮ ಇಲಾಖೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ನೆಹರೂ ಮೈದಾನದಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ.

ದ.ಕ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ‘ಕ್ರಿ.ಶ. 1336ರಿಂದ 1565ರವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ವಿಜಯನಗರ ಸಾಮ್ರಾಜ್ಯವು ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಸಂಗೀತ, ನಾಟಕ ಕಲೆಗಳಿಗೆ ಜಗತ್ಪ್ರಸಿದ್ಧವಾಗಿತ್ತು. 90 ಚದರ ಕಿ.ಮೀ. ವಿಶಾಲವಾಗಿದ್ದ ಹಂಪಿ ನಗರದ ಗತವೈಭವವನ್ನು ಮೆಲುಕು ಹಾಕುವ ಸಲುವಾಗಿ ಹಾಗೂ ಕೃಷ್ಣದೇವರಾಯನ ಜೀವನ ಚರಿತ್ರೆ ಹಾಗೂ ನಾಡಿನ ಸಂಸ್ಕೃತಿ ಪರಂಪರೆ ಪರಿಚಯಿಸಲು ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.

ವೀಕ್ಷಣೆಗೆ ಮುಕ್ತ: ‘ಹಂಪಿಯ ವಾಸ್ತುಶಿಲ್ಪ ವೈಭವ ಸಾರುವ ರಚನೆಗಳನ್ನು ನೆಹರೂ ಮೈದಾನದಲ್ಲಿ ಸ್ಥಾಪಿಸಲಾಗುತ್ತಿದೆ. ಕೃಷ್ಣದೇವರಾಯನ ಜನನ, ಪಟ್ಟಾಭಿಷೇಕ, ವಿವಾಹ, ಬ್ರಿಟಿಷರೊಂದಿಗಿನ ಸ್ನೇಹ, ಕಲ್ಲಿನ ರಥ, ಉಗ್ರ ನರಸಿಂಹ, ವಿಠಲ ದೇವಾಲಯ, ಕಮಲ ಮಹಲ್, ಕಡಲೇಕಾಳು ಗಣೇಶ, ಸಾಸಿವೆಕಾಳು ಗಣೇಶ, ವೀರೂಪಾಕ್ಷ ದೇವಾಲಯ, ಹಂಪಿ ಬಜಾರ್, ಆನೆಗಳ ಬಾಯಿ, ಆಂಜನೇಯ ಬೆಟ್ಟ, ಅಕ್ಕಂ-ತಂಗಿ ಬಂಡೆ... ಇನ್ನಿತರ ಸ್ಮಾರಕಗಳ ವೈಭವವನ್ನು 6 ಮತ್ತು 7ರಂದು ರಾತ್ರಿ 1 ಗಂಟೆ ಕಾಲ ಧ್ವನಿ ಹಾಗೂ ಬೆಳಕಿನ ಮೂಲಕ ಕಟ್ಟಿಕೊಡಲಾಗುವುದು. ಇದೇ 5ರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಇದೇ 6ರಂದು ಸಂಜೆ 6 ಗಂಟೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲೆಯಿಂದ 25 ಸಾವಿರ ಮಂದಿ ಈ ಕಾರ್ಯಕ್ರಮ ವೀಕ್ಷಿಸುವ ನಿರೀಕ್ಷೆ ಇದೆ’ ಎಂದರು.

‘ರಾಯರಥ ಕಾರ್ಯಕ್ರಮವನ್ನು ಪ್ರತಿ ಜಿಲ್ಲಾಕೇಂದ್ರದಲ್ಲೂ ಹಮ್ಮಿಕೊಳ್ಳಲಾಗುತ್ತಿದೆ. 500 ವಿದ್ಯುದ್ದೀಪ, 136 ಸರ್ಕಿಟ್ ಬಳಸಿ ಪ್ರೇಕ್ಷಕರ ಕಣ್ಣಮುಂದೆ ವಿಜಯನಗರದ ವೈಭವವನ್ನು ಪುನರ್‌ರೂಪಿಸಲಾಗುವುದು. ಸೆಟ್ ನಿರ್ಮಾಣಕ್ಕೆ 60 ಕಾರ್ಮಿಕರು ದುಡಿಯುತ್ತಿದ್ದಾರೆ. 2500 ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, 16 ವಾಹನಗಳ ಮೂಲಕ ಎಲ್ಲ ಪರಿಕರಗಳನ್ನು ಜಿಲ್ಲೆಯಿಂದ ಜಿಲ್ಲೆಗೆ ಸಾಗಿಸಲಾಗುತ್ತಿದೆ’ ಎಂದು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಂ.ಕೆ.ಮಠ ತಿಳಿಸಿದರು.‘ಬಂಟ್ವಾಳ ಮೂಲದ ಶಶಿಧರ ಅಡಪ ಅವರ ಪರಿಕಲ್ಪನೆಯಲ್ಲಿ ಈ ಸೆಟ್ ನಿರ್ಮಿಸಲಾಗಿದೆ. 300 ಕಲಾವಿದರು ಈ ಸೆಟ್ ನಿರ್ಮಿಸಲು ಮೂರು ತಿಂಗಳು ಶ್ರಮಿಸಿದ್ದಾರೆ’ ಎಂದು ಅವರು ತಿಳಿಸಿದರು.ಪ್ರವಾಸೊದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT