ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಿಸದ ಸಿಎಜಿ ವರದಿಗೆ ಆಕ್ಷೇಪ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಮತ್ತು ನಿವೇಶನ ಹಂಚಿಕೆಗೆ ಸಂಬಂಧಿಸಿದ ಮಹಾಲೇಖಪಾಲರ (ಸಿಎಜಿ) ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸದೇ ಇರುವುದಕ್ಕೆ ಕಾಂಗ್ರೆಸ್ ಸೋಮವಾರ ವಿಧಾನಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ, `ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಎಜಿ ಈಗಾಗಲೇ ಒಂದು ಲೆಕ್ಕ ಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಬಿಡಿಎ ನಿವೇಶನ ಹಂಚಿಕೆ ಹಾಗೂ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತೊಂದು ವರದಿಯನ್ನು ಸಲ್ಲಿಸಿದೆ. ಆದರೆ, ತನಗೆ ವಿರುದ್ಧವಾದ ಅಂಶಗಳು ವರದಿಯಲ್ಲಿವೆ ಎಂಬ ಕಾರಣಕ್ಕಾಗಿ ಈ ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ' ಎಂದು ದೂರಿದರು.

`ನವೆಂಬರ್ 27ರಂದೇ ಎರಡೂ ವರದಿಗಳು ಸರ್ಕಾರದ ಕೈಸೇರಿವೆ. ಸಂವಿಧಾನದ ಪ್ರಕಾರ ತಕ್ಷಣವೇ ಈ ವರದಿಗಳನ್ನು ರಾಜ್ಯಪಾಲರಿಗೆ ಕಳುಹಿಸಿ ಅನುಮೋದನೆ ಪಡೆಯಬೇಕಿತ್ತು. ಬಳಿಕ ವಿಧಾನಮಂಡಲದಲ್ಲಿ ಮಂಡಿಸಬೇಕಿತ್ತು. ಸಿಎಜಿ ವರದಿಗಳನ್ನು ಪಡೆಯುವುದು ನಮ್ಮ ಹಕ್ಕು. ಅದನ್ನು ಮೊಟಕುಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ವರದಿಗಳನ್ನು ಮಂಡಿಸದೇ ಇರಲು ಸರ್ಕಾರ ತೀರ್ಮಾನಿಸಿದೆ ಎಂಬ ಮಾಹಿತಿ ನನಗೆ ದೊರೆತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು' ಎಂದರು.

ಜಯಚಂದ್ರ ಅವರ ಆರೋಪಗಳಿಗೆ ಪ್ರತಿಕ್ರಿಸಿದ ಕಾನೂನು ಸಚಿವ ಎಸ್.ಸುರೇಶಕುಮಾರ್, `2012ರ ಮಾರ್ಚ್ 31ರ ಅವಧಿಗೆ ಕೊನೆಗೊಂಡಂತೆ ಎರಡು ವರದಿಗಳನ್ನು ಸಿಎಜಿ ಸಲ್ಲಿಸಿರುವುದು ನಿಜ. ಈ ವರದಿಗಳು ಸರ್ಕಾರದ ಪರಿಶೀಲನೆಯಲ್ಲಿವೆ. ಬಳಿಕ ರಾಜ್ಯಪಾಲರ ಅನುಮೋದನೆ ಪಡೆದು ಸದನದ ಮುಂದಿಡಲಾಗುವುದು' ಎಂದರು.

ಆಗ ಮತ್ತೆ ಆಕ್ಷೇಪ ಎತ್ತಿದ ಜಯಚಂದ್ರ, `ಸಿಎಜಿ ವರದಿಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಸಿಎಜಿ ಸಾಂವಿಧಾನಿಕ ಸಂಸ್ಥೆ. ಅದು ನೀಡುವ ವರದಿಯನ್ನು ತಕ್ಷಣವೇ ಸದನದ ಮುಂದಿಡಬೇಕಾದುದು ಸರ್ಕಾರದ ಹೊಣೆಗಾರಿಕೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ವರದಿಯನ್ನು ಈಗಾಗಲೇ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ' ಎಂದು ಸಚಿವರು ಸಮಜಾಯಿಷಿ ನೀಡಿದರು. `ವರದಿ ಬಂದು 15 ದಿನಗಳಾಗಿವೆ. ರಾಜ್ಯಪಾಲರ ಅನುಮೋದನೆ ಪಡೆಯಲು 15 ದಿನಗಳು ಬೇಕೇ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT