ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರಮ್ಮ!

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಟಾಪ್ ಧರಿಸಿದರೂ ಮುಚ್ಚಿದ್ದಕ್ಕಿಂತ ಬಿಚ್ಚಿಟ್ಟದ್ದೇ ಹೆಚ್ಚು ಅನ್ನುವಂತೆ ಗ್ಲಾಮರಸ್ ಆಗಿ ಹಲವು ಕ್ಷೇತ್ರಗಳಲ್ಲಿ ಮಿಂಚಿದ ಮಂದಿರಾ ಬೇಡಿ ಎಂಬ ಬಿಂದಾಸ್ ಬೆಡಗಿಯದು ಈಗ ತಾಯಿಯ ಗೆಟಪ್ಪು.

ಮಾತಿಗಿಳಿದರೆ ಒಬ್ಬ ಪಕ್ಕಾ ಅಮ್ಮ. ಗರ್ಭಧಾರಣೆ, ಪ್ರಸವ, ಎಳೆಗಂದನ ಆರೈಕೆ, ಅದರ ಬಾಲಲೀಲೆ, ಬೇಡಿಕೆ ಹೀಗೆ ತಾಯ್ತನದ ಸುತ್ತ ಮಾತಿನ ಗಿರಕಿ...

`ಮಂದಿರಮ್ಮ~ನಾಗಿ ಅನುಭವ ಹೇಗಿದೆ?
ಅದೊಂದು ಅದ್ಭುತ ಅನುಭವ. ಹೆಣ್ಣಾಗಿ ಹುಟ್ಟಿದ ಪ್ರತಿಯೊಬ್ಬಳೂ ಒಂದು ಬಾರಿಯಾದರೂ ತಾಯ್ತನದ ಸುಖ ಅನುಭವಿಸಲೇಬೇಕು. ಹೆಣ್ಣು ಮಾತ್ರ ಅನುಭವಿಸಬಹುದಾದ ವಿಶೇಷ ಅವಕಾಶವದು.

ಗರ್ಭಧಾರಣೆ ಸಂದರ್ಭದಲ್ಲಿ ನಿಮಗೇ ಗೊತ್ತಿದೆ, ವರ್ಲ್ಡ್ ಕಪ್ ಕ್ರಿಕೆಟ್ ನಡೀತಿತ್ತು. ಅದರಿಂದ ಕಳಚಿಕೊಳ್ಳುವ ಅವಕಾಶವೇ ಇರಲಿಲ್ಲ. ಆದರೆ ಮೂರು ತಿಂಗಳು ಆರೋಗ್ಯದ ದೃಷ್ಟಿಯಿಂದ ಸವಾಲೇ ಆಗಿತ್ತು.

ಆನಂತರ ಏಳು ತಿಂಗಳವರೆಗೂ ಅನುಚಾನವಾಗಿ ಕೆಲಸ ಮಾಡುತ್ತ ಬಂದೆ. ಎಂಟು ಮತ್ತು ಒಂಬತ್ತನೇ ತಿಂಗಳಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆ.

ವೃತ್ತಿ ಜೊತೆ ಮಗುವಿನ ಲಾಲನೆ ಪಾಲನೆ ಹೇಗೆ ಸಂಭಾಳಿಸುತ್ತೀರಿ?
ನಾನು ಎಷ್ಟೇ ಬ್ಯುಸಿಯಾಗಿರಲಿ ಅವನಿಗೆ ಬಹುಪಾಲು ಮೀಸಲಿಡುವುದು ನನ್ನ ಆದ್ಯತೆ. ಮನೇಲಿದ್ದಾಗ ಅವನನ್ನು ಬಿಟ್ಟು ಕದಲುವುದಿಲ್ಲ. ಅವನ ಎಲ್ಲಾ ಕೆಲಸಗಳನ್ನೂ ನಾನೇ ನಿಭಾಯಿಸುತ್ತೇನೆ. ಅದು ನನ್ನ ಇಷ್ಟ ಕೂಡಾ. ಆದರೆ ಹೀಗೆ ಪರವೂರುಗಳಿಗೆ ಬಂದಾಗ ಪತಿ ಕೌಶಲ್ ಮನೆಯಿಂದಲೇ ಕೆಲಸ ಮಾಡುತ್ತಾರೆ. ನಾನು ಅವನ ಧ್ಯಾನದಲ್ಲಿ ಶೆಡ್ಯೂಲ್ ಮುಗಿಸುತ್ತೇನೆ.

ಮನೆಗೆ ಮರಳಿದ ತಕ್ಷಣ ಅವನನ್ನೆತ್ತಿಕೊಳ್ಳುತ್ತೇನೆ. ಅವನೂ ಅಷ್ಟೆ, ಮಮ್ಮಾ ಎತ್ತಿಕೋ ಅಂತ ಎರಡೂ ಕೈಗಳನ್ನೆತ್ತಿಕೊಂಡು ಕಾಲಿಗೆ ಜೋತುಬೀಳುತ್ತಾನೆ. ಆ ಎಳೆತೋಳುಗಳ ಬಿಸಿಯಪ್ಪುಗೆ, ಸಿಹಿಮುತ್ತು ಕೂಡಾ ತಾಯ್ತನದ ಸುಖದ ಭಾಗವೇ ಅಲ್ವಾ? ಓ ಐ ಎಂಜಾಯ್ ಇಟ್!

ಹೊಕ್ಕುಳಬಳ್ಳಿಯ ಆಕರಕೋಶ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ?

ಹೊಕ್ಕುಳ ಬಳ್ಳಿಯ ಆಕರಕೋಶಗಳನ್ನು ಕಾಪಾಡಿಟ್ಟುಕೊಳ್ಳುವ ಬಗ್ಗೆ ಜನಜಾಗೃತಿ ಸಾಲದು. 75ಕ್ಕೂ ಹೆಚ್ಚು ವಂಶವಾಹಿ ಕಾಯಿಲೆಗಳ ನಿವಾರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹೊಕ್ಕುಳಬಳ್ಳಿಯ ಆಕರಕೋಶಗಳ ಆಪತ್ಬಾಂಧವ ಅಲ್ವೇ? ಹೊಕ್ಕುಳಬಳ್ಳಿ ಉದುರಿದ ತಕ್ಷಣ ಅದನ್ನು ಕಸದಬುಟ್ಟಿಗೆಸೆಯುವ ಬದಲು ಉಳಿಸಿಕೊಳ್ಳುವ ಬಗ್ಗೆ ಪ್ರತಿಯೊಬ್ಬರೂ ಚಿಂತಿಸುವುದು ಅಗತ್ಯ.

ಅಂದಹಾಗೆ, ಬೆಂಗಳೂರಿನಲ್ಲಿ ಆರಂಭವಾಗಿರುವ ಹೊಕ್ಕುಳಬಳ್ಳಿಯ ಆಕರಕೋಶಗಳ ಬ್ಯಾಂಕ್ `ಕ್ರಯೋ- ಸೇವ್~ಗೆ ನಾನು ಭಾರತದ ರಾಯಭಾರಿ. ನನ್ನ ಮಗುವಿನ ಹೊಕ್ಕುಳಬಳ್ಳಿಯ ಆಕರಕೋಶಗಳನ್ನು ಇದೇ ಬೆಂಗಳೂರಿನಲ್ಲಿ ಜೋಪಾನ ಮಾಡಿದ್ದೇನೆ.

ಡಯಟ್ ಮತ್ತು ಅಂಗಸೌಷ್ಟವ ಕಾಪಾಡಿದ ಬಗೆ...
ಗರ್ಭಿಣಿಯಾಗಿದ್ದಾಗ ಅಷ್ಟೇನೂ ಡಯಟ್ ಮಾಡಲಿಲ್ಲ. ಹೆರಿಗೆಯಾದ ನಂತರ ಬರೋಬ್ಬರಿ 22 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದೆ. ಮೈ ಗಾಡ್! ಆ ಮಂದಿರಾ ಬೇಡಿಯನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ. ಒಂದು ವಿಷಯ ಗೊತ್ತಾ? ಮಗುವಾದ ತಕ್ಷಣದಿಂದಲೇ ಡಯಟ್ ಮತ್ತು ವ್ಯಾಯಾಮಕ್ಕೆ ಮರಳಬೇಕು. ಇಲ್ಲದಿದ್ದರೆ ವಿಪರೀತ ಊದಿಕೊಳ್ಳುತ್ತೀರಿ. ಮಗುವಿಗೆ ಒಂದು ವರ್ಷವಾಗುವುದರೊಳಗೆ ನಿಮ್ಮ ಹಳೆಯ ತೂಕವನ್ನು ಗಳಿಸುವುದು ಸಾಧ್ಯವಾಗದಿದ್ದರೆ `ಉಫ್~ ಅಂತಲೇ ಇರಬೇಕಾಗುತ್ತದೆ.

ಹೆರಿಗೆಯಾದ 40ನೇ ದಿನದಿಂದಲೇ ಲಘು ವ್ಯಾಯಾಮ ಶುರುಮಾಡಿದೆ. ಎರಡನೇ ತಿಂಗಳಿನಿಂದ ಜಿಮ್‌ನಲ್ಲಿ 2 ಗಂಟೆ ವರ್ಕೌಟ್ ಮಾಡುತ್ತಿದ್ದೇನೆ. ನಾನು ಸಸ್ಯಾಹಾರಿಯಾದ್ರೂ ಮೊಟ್ಟೆ ತಿನ್ನುತ್ತೇನೆ. ಖಾರ, ಸಿಹಿ, ಕರಿದ ತಿನಿಸುಗಳು ಬಿಲ್‌ಕುಲ್ ಇಲ್ಲವೇ ಇಲ್ಲ. ಐಸ್‌ಕ್ರೀಂ ಮಾತೇ ಇಲ್ಲ ಬಿಡಿ.

(ಇಷ್ಟೆಲ್ಲ ಕಟ್ಟುನಿಟ್ಟು ಮಾಡಿದ್ದರಿಂದ ನೋಡಿ ಹೀಗಿದ್ದೇನೆ ಎಂದು ಹೆಮ್ಮೆಯಿಂದ ಬೀಗಿದರು).

ಒಂದೇ ಮಗೂನಾ?
ಇಲ್ಲಪ್ಪಾ. ನಂಗೊಂದು ಹೆಣ್ಣು ಮಗು ಬೇಕು. ಹೆಣ್ಣು ಮಕ್ಕಳೆಂದರೆ ನಂಗಿಷ್ಟ. ನನಗೇ ಹೆಣ್ಣು ಮಗುವಾಗೋದಾದ್ರೆ ಹೊತ್ತು ಹೆತ್ತು ಸಾಕಲು ರೆಡಿ. ಇಲ್ಲವಾದರೆ ದತ್ತು ತಗೊಂಡಾದ್ರೂ ಸಾಕ್ತೀನಿ. ಮಕ್ಕಳಲ್ಲಿ ಹೆಣ್ಣು ಮಕ್ಕಳೇ ಚಂದಾರೀ...

                                                ====

ಗರ್ಭಿಣಿಯರ ಕ್ಯಾಟ್‌ವಾಕ್

ಅಮ್ಮಂದಿರ ದಿನದ ಹಿನ್ನೆಲೆಯಲ್ಲಿ ಕ್ರಯೋಸೇವ್ ಸ್ಟೆಮ್‌ಸೆಲ್ ಬ್ಯಾಂಕಿಂಗ್ ಸಂಸ್ಥೆ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ತಾಯ್ತನದ ಪ್ರಕ್ರಿಯೆಯ ಸಾಧಕ-ಬಾಧಕಗಳ ಸಂವಾದದ ಉದ್ಘಾಟನೆಗಾಗಿ ಆಗಮಿಸಿದ್ದರು ಮಂದಿರಾ ಬೇಡಿ.

“

ನಿಮ್ಮ ಹೆಂಡತಿ ಗರ್ಭಿಣಿಯಾದ ಕ್ಷಣದಿಂದ `ನಾವು ಗರ್ಭ ಧರಿಸಿದ್ದೇವೆ~ ಎಂಬ ಭಾವವನ್ನು ತಂದುಕೊಳ್ಳಿ. ಅವಳು ಏನೇನೊ ನಖರಾ ಮಾಡಬಹುದು. ಹಾರ್ಮೋನ್‌ಗಳ ಪ್ರಭಾವ ಅದು. ನೀವೂ ನಖರಾ ಮಾಡಿ ಅವಳಿಗೆ ನೋವು ಕೊಡಬೇಡಿ.
 
ಪ್ರಸವದ ನಂತರ ಅದೆಲ್ಲ ಇರೊಲ್ಲ. ಖಟ್ಟಾ ಮಿಟ್ಟಾ (ಸಿಹಿ-ಖಾರ) ಮಿಶ್ರಣದ ಅನುಭವ ಎನ್ನುತ್ತಾರೆ. ಆದರೆ ಒಮ್ಮೆ ಮಗುವಾಗಿಬಿಟ್ಟರೆ ಬದುಕೆಲ್ಲ ಸಿಹಿ ಸಿಹಿ ಸಿಹಿ... ಹ್ಹಹ್ಹಹ್ಹ...” ಎಂದು, ಕಾರ್ಯಕ್ರಮದಲ್ಲಿ ಬಸುರಿ ಹೆಂಡತಿಯರೊಂದಿಗೆ ಉಪಸ್ಥಿತರಿದ್ದ ಭಾವಿ ಅಪ್ಪಂದಿರಿಗೆ ಕಿವಿಮಾತು ಹೇಳಿ ಚಪ್ಪಾಳೆ ಗಿಟ್ಟಿಸಿದರು.

ಸಂವಾದದ ಕೊನೆಯಲ್ಲಿ ಭಾವೀ ಅಮ್ಮಂದಿರು ಕ್ಯಾಟ್‌ವ್ಯಾಕ್ ಮಾಡುವ ಮೂಲಕ ಆರೋಗ್ಯವಂತ ಗರ್ಭಿಣಿಯರು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT