ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪ್ರತಿಭೆ ಅನಾವರಣ

Last Updated 8 ಜನವರಿ 2011, 10:00 IST
ಅಕ್ಷರ ಗಾತ್ರ

ಹಿರಿಯೂರು:  ‘ವಿಜ್ಞಾನ ತಂತ್ರಜ್ಞಾನ ಸಮಾಜ ವಿಜ್ಞಾನದ ಬಗೆಗಿನ ಅನೇಕ ಆವಿಷ್ಕಾರಗಳಿಗೆ ಸಾಕಾರ ರೂಪ ಕೊಟ್ಟಂತಹ ಎಳೆಯ ವಿಜ್ಞಾನಿಗಳು ಇಲ್ಲಿ ಮೇಳೈಸಿದ್ದರು. ವೀಕ್ಷಕರಿಗೆ ಅಚ್ಚರಿ ಎನಿಸುವ ರೀತಿಯಲ್ಲಿ ವಿವರಣೆ ಕೊಡುವ ಮೂಲಕ, ತಾವೂ ಭವಿಷ್ಯದಲ್ಲಿ ದೇಶಕ್ಕೆ ಸ್ಮರಣೀಯ ಕಾಣಿಕೆ ಕೊಡುತ್ತೇವೆ ಎಂಬ ಭಾವನೆಗೆ ಪುಷ್ಠಿಕೊಡುವಂತಿತ್ತು ಅಲ್ಲಿನ ಮಕ್ಕಳ ವರ್ತನೆ’.
ಇಂತಹ ದೃಶ್ಯ ಕಂಡು ಬಂದದ್ದು ಹಿರಿಯೂರಿನ ಅಸಂಷನ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಜ್ಞಾನ -ತಂತ್ರಜ್ಞಾನ-ಸಮಾಜ ವಿಜ್ಞಾನದ ವಸ್ತು ಪ್ರದರ್ಶನದಲ್ಲಿ.

ಶಿಕ್ಷಕರು -ಪೋಷಕರ ಮಾರ್ಗದರ್ಶನದಲ್ಲಿ ಸ್ವಲ್ಪ ಹೆಚ್ಚೇ ಎನ್ನಿಸುವಷ್ಟು ಶ್ರಮ ವಹಿಸಿ ವಸ್ತು ಪ್ರದರ್ಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ಮಳೆ ಕೊಯ್ಲು, ಸೌರಶಕ್ತಿ ಬಳಕೆ, ಮಣ್ಣು ಸವಕಳಿ ತಡೆ, ಅರಣ್ಯ ಸಂರಕ್ಷಣೆ, ಪಕ್ಷಿಧಾಮಗಳು, ಹೆಚ್ಚು ಪೌಷ್ಟಿಕಾಂಶವಿರುವ ಆಹಾರ ಪದಾರ್ಥಗಳು ಹಾಗೂ ಅವುಗಳ ಬಳಕೆಯಿಂದ ಆಗುವ ಪ್ರಯೋಜನಗಳು, ಕಂಪ್ಯೂಟರ್, ಪ್ರಿಂಟರ್ ಮುಂತಾದವುಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಬಳಸುವ ವಿಧಾನ, ಸೌರಮಂಡಲ, ಗ್ರಹಗಳ ಚಲನೆ, ವಿವಿಧ ರೀತಿಯ ಗ್ರಹಣಗಳು ಆಗುವ ಬಗೆ ಮುಂತಾದ ವಿಷಯಗಳನ್ನು ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶನ ಏರ್ಪಡಿಸಿದ್ದರು.

ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳು ಉಪಗ್ರಹಗಳ ಮೂಲಕ ಬಿತ್ತರಗೊಳ್ಳುವ ರೀತಿ, ತಾರಾಮಂಡಲದ ಪರಿಚಯದ ಜೊತೆಗೆ ಪ್ರಪಂಚದ ಭೂಪಟದ ಮೂಲಕ ವಿವಿಧ ದೇಶಗಳು, ಅಲ್ಲಿನ ಜೀವ ವೈವಿಧ್ಯ, ಪ್ರಮುಖ ನದಿ-ಪರ್ವತಗಳು, ನದಿಗಳಿಂದ ವಿದ್ಯುತ್ ಉತ್ಪಾದನೆ, ಕೃಷಿಗೆ ನೀರಿನ ಬಳಕೆ ಮೊದಲಾದ ಚಿತ್ರಗಳು ಗಮನ ಸೆಳೆದವು. ಪ್ರಾಥಮಿಕ ಶಾಲಾ ಮಕ್ಕಳು ತಯಾರಿಸಿದ್ದ ವಿಧಾನಸೌಧ, ಹಂಪಿಯ ಕಲ್ಲಿನ ರಥ, ಗೋಲ್‌ಗುಂಬಜ್, ಸ್ವಾತಂತ್ರ್ಯ ಹೋರಾಟಗಾರರು, ಸಾಧಕರ ಚಿತ್ರಗಳು, ಬಹುತೇಕ ಪ್ರಾಣಿ-ಪಕ್ಷಿಗಳ ಚಿತ್ರಗಳು, ಕೈದೋಟ, ವಿವಿಧ ಬಗೆಯ ತರಕಾರಿ ಮತ್ತು ಹಣ್ಣುಗಳು ಹಾಗೂ ಅವುಗಳ ಸೇವನೆಯ ಅಗತ್ಯ.  ವರ್ಣಮಾಲೆ ಆಕರ್ಷಣೀಯವಾಗಿದ್ದವು. ಸುಮಾರು ಹತ್ತಕ್ಕೂ ಹೆಚ್ಚು ಕೊಠಡಿಗಳಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ನಗರದ ಹತ್ತಾರು ಶಾಲೆಗಳ ಮಕ್ಕಳು ತಮ್ಮ ಶಿಕ್ಷಕರ ಜೊತೆ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT