ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿನ ಅಪೌಷ್ಟಿಕತೆ: ಆಹಾರ ಪದ್ಧತಿ ಬದಲಾಯಿಸಿ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮಕ್ಕಳಲ್ಲಿನ ಅಪೌಷ್ಟಿಕತೆ ಕಡಿಮೆ ಮಾಡಲು ಅಂಗನವಾಡಿಗಳಲ್ಲಿನ ಈಗಿನ ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡುವಂತೆ ಹಾಗೂ ಅದಕ್ಕೆ ನಿಗದಿಪಡಿಸಿರುವ ಹಣದ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಕೋರಲಾಗುವುದು~ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ್ ಗುರುವಾರ ಇಲ್ಲಿ ಒತ್ತಾಯಿಸಿದರು.

`ದೇಶದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದಕ್ಕೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯ ತೀವ್ರತೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು ಉತ್ತಮ ಬೆಳವಣಿಗೆ. ಇನ್ನಾದರೂ ಅದರ ನಿರ್ಮೂಲನೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈಗಿನ ಆಹಾರ ಪದ್ಧತಿಯನ್ನು ಬದಲಿಸಬೇಕು. ಪ್ರತಿಯೊಂದು ಮಗುವಿಗೆ ನೀಡುತ್ತಿರುವ ಹಣದ ಪ್ರಮಾಣವನ್ನು ಹೆಚ್ಚಿಸಬೇಕು. ಇದೆಲ್ಲಕ್ಕೂ ಮುನ್ನ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕು ಎಂಬುದರ ಬಗ್ಗೆ ತಾಂತ್ರಿಕ ಸಲಹೆ ಪಡೆಯಬೇಕು~ ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಈ ಕುರಿತು ಸದ್ಯದಲ್ಲೇ ಪ್ರಧಾನಿಗೆ ಪತ್ರ ಬರೆಯಲಾಗುವುದು. ಬಹುತೇಕ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಆಹಾರವನ್ನು ನೀಡುತ್ತಿದ್ದು, ಇದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಾಗುತ್ತಿಲ್ಲ. ಹೀಗಾಗಿ ಇದೇ 17ರಿಂದ ರಾಜ್ಯದಲ್ಲಿ ಆಹಾರ ಪದ್ಧತಿಯನ್ನು ಬದಲಿಸಲಾಗುವುದು. ಅಂದು ಗದಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು~ ಎಂದು ಅವರು ವಿವರಿಸಿದರು.

ಹೊಸ ಆಹಾರ ಪದ್ಧತಿಯನ್ನು ಮೂರು ತಿಂಗಳ ಕಾಲ ತಮಿಳುನಾಡಿನ ಕ್ರಿಸ್ಟಿ ಸಂಸ್ಥೆಗೆ ವಹಿಸಿದ್ದು, ಈ ಅವಧಿ ನಂತರ ಸ್ಥಳೀಯವಾಗಿಯೇ ಆಹಾರ ತಯಾರಿಸಿ, ಮಕ್ಕಳಿಗೆ ನೀಡಲು ತೀರ್ಮಾನಿಸಲಾಗಿದೆ.

`ರಾಜ್ಯದಲ್ಲಿ 61 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚಾಗಿದ್ದು, ಅಲ್ಲಿನ ಮಕ್ಕಳಿಗೆ ಹೆಚ್ಚುವರಿಯಾಗಿ ಹಾಲು ಮತ್ತು ಮೊಟ್ಟೆ ನೀಡುವ ಕೆಲಸ ನಡೆಯುತ್ತಿದೆ ಎಂದು ಅವರ ನುಡಿದರು.

ಇತ್ತೀಚೆಗೆ ಇಬ್ಬರು ಮಕ್ಕಳು ಸತ್ತ ಪ್ರಕರಣದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು, ಅದರಲ್ಲಿ ಸಾವಿಗೆ ಅಪೌಷ್ಟಿಕತೆ ಕಾರಣವಲ್ಲ ಎಂದು ಹೇಳಲಾಗಿದೆ. ಇದನ್ನೇ ಹೈಕೋರ್ಟ್ ಗಮನಕ್ಕೂ ತರಲಾಗಿದೆ~ ಎಂದು ಅವರು ಹೇಳಿದರು.

`ರಾಯಚೂರು, ಕೊಪ್ಪಳ, ವಿಜಾಪುರ, ಬಾಗಲಕೋಟೆ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದೆ. ಶಿಕ್ಷಣದಿಂದ ವಂಚಿತರಾದವರ ಮಕ್ಕಳೇ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಮಕ್ಕಳ ಚಿಕಿತ್ಸೆಗೆ ಬಾಲಸಂಜೀವಿನಿ ಯೋಜನೆಯಡಿ ಉಚಿತ ಚಿಕಿತ್ಸೆ ಕೊಡುವ ಕೆಲಸ ನಡೆಯುತ್ತಿದೆ. ಪೂರಕ ಆಹಾರ ನೀಡುವ ಬಗ್ಗೆಯೂ ಗಮನಹರಿಸಲಾಗುವುದು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT