ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಾಧೀಶರ ಜೋಳಿಗೆಗೆ ಬೀಡಿ, ಸಿಗರೇಟ್‌..!

Last Updated 21 ಸೆಪ್ಟೆಂಬರ್ 2013, 6:25 IST
ಅಕ್ಷರ ಗಾತ್ರ

ಬಳ್ಳಾರಿ: ಮಠ–ಮಾನ್ಯಗಳ ಸ್ವಾಮೀಜಿಗಳು, ವಟುಗಳು ಜೋಳಿಗೆ ಹಿಡಿದು ಹೊರಟರೆ ಭಕ್ತರು ದುಡ್ಡು–ಕಾಸು, ದವಸ– ಧಾನ್ಯ ನೀಡುವುದು ವಾಡಿಕೆ. ಆದರೆ, ತಾಲ್ಲೂಕಿನ ಕಮ್ಮರಚೇಡು ಮತ್ತು ಶಂಕರಬಂಡೆ ಗ್ರಾಮಗಳಲ್ಲಿ ಶುಕ್ರವಾರ ಮಠಾಧೀಶರು ಹಿಡಿದು ಬಂದ ಜೋಳಿಗೆಗೆ ಭಕ್ತರು ಬೀಡಿ, ಸಿಗರೇಟು, ಗುಟ್ಕಾ ಹಾಕಿದರು.

ಭಿಕ್ಷೆ ಬೇಡಿ ಬಂದ ಮಠಾಧೀಶರನ್ನು ಅವರು ಬೀಡಿ, ಸಿಗರೇಟು ಹಾಕುವ ಮೂಲಕ ಅವರನ್ನು ಅವಮಾನಗೊಳಿಸದೆ, ತೃಪ್ತಿಪಡಿಸಿದರು.
‘ಸಮಾಜದಲ್ಲಿ ಎದುರಾಗುವ ಸಕಲ ಸಮಸ್ಯೆಗಳಿಗೂ ದುಶ್ಚಟಗಳೇ ಮೂಲ ಕಾರಣ’  ಎಂಬುದನ್ನು ಅರಿತು, ಊರ ಉದ್ಧಾರಕ್ಕಾಗಿ ಜೋಳಿಗೆ ಹಿಡಿದ ಸ್ವಾಮೀಜಿಗಳಿಗೆ ಜನರು ಸಂಕೋಚ ಮರೆತು ತಮ್ಮ ದುಶ್ಚಟವನ್ನು ದಾನ ನೀಡಿ, ಕಾಲಿಗೆ ಬಿದ್ದು ಕೃತಾರ್ಥ ಭಾವನೆ ವ್ಯಕ್ತಪಡಿಸಿದರು.

ಲಿಂ. ಹಾನಗಲ್‌ ಕುಮಾರೇಶ್ವರರ ಜಯಂತ್ಯುತ್ಸವದ ಅಂಗವಾಗಿ ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವ್ಯಸನಮುಕ್ತಿಗಾಗಿ ಜನಜಾಗೃತಿ’ ಯಾತ್ರೆಯಲ್ಲಿ ಭಾಗವಹಿಸಿದ್ದ ನೂರಾರು ಜನರು ಇನ್ನು ಮುಂದೆ ಕೆಟ್ಟ ಚಟಗಳನ್ನು ಪೋಷಿಸುವುದಿಲ್ಲ ಎಂದು ಪ್ರಮಾಣ ಮಾಡಿದರು.

ಕಮ್ಮರಚೇಡು ಗ್ರಾಮದಲ್ಲಿನ ಕಲ್ಯಾಣ ಮಠದ ಆವರಣದಲ್ಲಿ ಮಧ್ಯಾಹ್ನ ನಡೆದ ಬಹಿರಂಗ ಸಮಾರಂಭದಲ್ಲಿ, ತಮ್ಮ ಚಟಗಳನ್ನು ಬಿಡು­ವುದಕ್ಕೆ ಸಂಕೋಚ ವ್ಯಕ್ತಪಡಿಸಿದವರು, ಇತರರನ್ನು ಕಂಡು ಪ್ರೇರೇಪಿತರಾಗಿ, ತಮ್ಮ ಜೇಬಿನಲ್ಲಿದ್ದ ಬೀಡಿ, ಸಿಗರೇಟು, ಗುಟ್ಕಾ ಚೀಟುಗಳನ್ನು ಸ್ವಾಮಿಗಳ ಜೋಳಿಗೆಗೆ ಹಾಕಿದರು.

‘ಇಲ್ಲಿ ಯಾರು ಮದ್ಯಪಾನ, ಧೂಮಪಾನ ಮಾಡುವುದಿಲ್ಲ ಕೈ ಎತ್ತಿ’ ಎಂದು ನೆರೆದವರಿಗೆ ಕಲ್ಯಾಣ ಸ್ವಾಮೀಜಿ ಸೂಚಿಸಿದಾಗ ಒಬ್ಬರೂ ಕೈ ಎತ್ತದೆ ಊರಲ್ಲಿ ಯಾರೊಬ್ಬರೂ ದುಶ್ಚಟಗಳನ್ನು ಹೊಂದಿಲ್ಲ ಎಂಬಂತೆ ಪ್ರತಿಕ್ರಿಯಿಸಿದರು. ‘ನೋಡಿ, ನೀವು ಜನರೆದುರು ಕೈ ಎತ್ತುವುದಕ್ಕೆ ನಾಚಿಕೆ ಪಟ್ಟುಕೊಳ್ಳುತ್ತೀರಿ. ದುಶ್ಚಟ ಕೆಟ್ಟದು, ಮರ್ಯಾದೆಗೇಡು ಎಂಬುದು ನಿಮಗೆ ಗೊತ್ತಿದೆ. ಆದರೂ, ಬಹಿರಂಗವಾಗಿ ಬೀಡಿ ಸೇದುತ್ತೀರಿ. ಇಂಥ ಚಟಗಳಿಗೆ ದಾಸರಾಗಬೇಡಿ. ಅವುಗಳಿಂದ ದೂರವಾಗಿ’ ಎಂಬ ಸಲಹೆ ನೀಡಿದ ತಕ್ಷಣವೇ ಹತ್ತಾರು ಜನ ಕೈ ಎತ್ತುವ ಮೂಲಕ ಒಬ್ಬರ ಹಿಂದೆ ಒಬ್ಬರಂತೆ ಬಂದು ಜೋಳಿಗೆಗೆ ವ್ಯಸನವನ್ನೇ ಭಿಕ್ಷೆ ಹಾಕಿದರು.

ಉತ್ತಮ ಆರೋಗ್ಯ ಮತ್ತು ಉತ್ತಮ ಆರ್ಥಿಕ ವ್ಯವಸ್ಥೆಗೆ ಭಂಗ ತರುವ ವ್ಯಸನವನ್ನು ತ್ಯಜಿಸುವ ಮೂಲಕ ಉಳಿತಾಯ, ವಿದ್ಯೆ, ಆಚಾರ, ವಿಚಾರಗಳ ಪಾಲನೆಗೆ ಸಮಾಜ ಒತ್ತು ನೀಡುವ ಅಗತ್ಯವಿದೆ ಎಂದು ಸ್ವಾಮೀಜಿಗಳು ಕಿವಿಮಾತು ಹೇಳಿದರು. ಚಟದಿಂದ ಮುಕ್ತರಾದವರಿಗೆಲ್ಲ ಆಶೀರ್ವಾದ ನೀಡಿದ ಸಂಗನಬಸವ ಸ್ವಾಮೀಜಿ, ಗ್ರಾಮೀಣರು ಆದರ್ಶ ಕೃಷಿಗೆ ಆದ್ಯತೆ ನೀಡಬೇಕು. ರಾಸಾಯನಿಕ, ಕ್ರಿಮಿನಾಶಕ ಬಳಸದೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ವ್ಯಕ್ತಿತ್ವವನ್ನೇ ನಾಶ ಮಾಡುವ ಮದ್ಯಪಾನವನ್ನು ತ್ಯಜಿಸುವ ಮೂಲಕ ಉತ್ತಮರ ಸಂಗ ಮಾಡಬೇಕು ಎಂದೂ ತಿಳಿಸಿದರು.

ಕಂಪ್ಲಿ, ಹರಗಿನಡೋಣಿ, ಉರುವಕೊಂಡ ಮಠಗಳ ಸ್ವಾಮೀಜಿಯವರು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು. ಶಿವಯೋಗ ಮಂದಿರದ ವಟುಗಳು ಮಠಾಧೀಶರೊಂದಿಗೆ ಜೋಳಿಗೆ ಹಿಡಿದು ಮನೆಮನೆಗೆ ತೆರಳಿ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರಿ ಹೇಳಿದರು.

ಗ್ರಾಮದ ಮುಖಂಡರು, ವಿಶೇಷವಾಗಿ ಮಹಿಳೆಯರು ಈ ಸಂದರ್ಭ ಉಪಸ್ಥಿತರಿದ್ದರು. ಎರಡೂ ಗ್ರಾಮಗಳಲ್ಲಿ ಮಠಾಧೀಶರ ಮೆರವಣಿಗೆ ಏರ್ಪಡಿಸಿ, ಭವ್ಯ ಸ್ವಾಗತ ಕೋರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT