ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಕುಸಿದು ಕೂಲಿ ಕಾರ್ಮಿಕ ಸಾವು

Last Updated 24 ಅಕ್ಟೋಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ಒಳ ಚರಂಡಿ ಕೊಳವೆ (ಪೈಪ್) ಅಳವಡಿಕೆ ಕಾಮಗಾರಿ ವೇಳೆ ಮಣ್ಣು ಕುಸಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಅಮೃತಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುಬ್ರಮಣ್ಯಂ (27) ಮೃತಪಟ್ಟವರು. ಅವರು ಅಮೃತಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ಜಲಮಂಡಳಿಯು ಅಮೃತಹಳ್ಳಿಯಲ್ಲಿ ಕೈಗೊಂಡಿರುವ ಒಳ ಚರಂಡಿ ಕಾಮಗಾರಿಗಾಗಿ ಸುಮಾರು ಹತ್ತು ಅಡಿ ಆಳದ ಗುಂಡಿ ತೋಡಲಾಗಿತ್ತು. ಸುಬ್ರಮಣ್ಯಂ ಅವರು ಮತ್ತೊಬ್ಬ ಕಾರ್ಮಿಕನ ಜತೆ ಗುಂಡಿಗೆ ಇಳಿದು ಪೈಪ್ ಅಳವಡಿಸುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗುಂಡಿಯ ಒಂದು ಪಾರ್ಶ್ವದಲ್ಲಿ ಮಣ್ಣು ಕುಸಿಯಿತು.
 
ಸುಬ್ರಮಣ್ಯಂ ಅವರ ಜತೆಗಿದ್ದ ಕಾರ್ಮಿಕ ಗುಂಡಿಯಿಂದ ಕೂಡಲೇ ಮೇಲೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾದ. ಆದರೆ ಮಣ್ಣಿನ ಕೆಳಗೆ ಸಿಲುಕಿದ ಅವರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟರು ಎಂದು ಅಮೃತಹಳ್ಳಿ ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ಮೃತರ ಸಹೋದರ ವೆಂಕಟೇಶ್ ಅವರು ದೂರು ಕೊಟ್ಟಿದ್ದಾರೆ. ಕಾಮಗಾರಿಯ ಗುತ್ತಿಗೆ ಪಡೆದಿದ್ದ ಜಿಕೆಎಲ್ ಕಂಪೆನಿಯ ವ್ಯವಸ್ಥಾಪಕ ಸತೀಶ್ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸತೀಶ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ, ಇನ್‌ಸ್ಪೆಕ್ಟರ್ ಎಸ್.ಪಾಂಡುರಂಗ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT