ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಬಂತು, ಗುಡಿಸಲೂ ಉಳೀತು...

ಹೊಸಮಟ್ನಹಳ್ಳಿಯಲ್ಲಿ ತಪ್ಪದ ಬವಣೆ
Last Updated 25 ಏಪ್ರಿಲ್ 2013, 8:33 IST
ಅಕ್ಷರ ಗಾತ್ರ

ಕೋಲಾರ: ಚುನಾವಣೆಯ ಇತಿಹಾಸದಲ್ಲೇ ಈ ಗ್ರಾಮದಲ್ಲಿ ಮೊದಲ ಬಾರಿಗೆ ಮತಗಟ್ಟೆಯೊಂದು ಸ್ಥಾಪನೆಯಾಗಿದೆ.
ಆದರೆ ಆ ಖುಷಿಯ ಜೊತೆಗೆ ಈ ಗ್ರಾಮಸ್ಥರ ಸಂಕಟಗಳೇನೂ ಪರಿಹಾರವಾಗಿಲ್ಲ. ಈ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆಗಳಿಲ್ಲ. ಜಲ್ಲಿಕಲ್ಲಿನ ಹಾಸಿಗೆಯ ಮಣ್ಣಿನ ರಸ್ತೆಯೇ `ಮುಖ್ಯರಸ್ತೆ'. ಉಳಿದಂತೆ ಕೆಲವು ಮನೆಗಳ ಮುಂದೆ ರಸ್ತೆಯೇ ಇಲ್ಲ. ನೀರಿನ ಸಮಸ್ಯೆ ಮಾತ್ರ ಸಮಾಧಾನಕರವಾಗಿದೆ.

ಇದೇ ಗ್ರಾಮದಲ್ಲಿ ಹಲವು ದಶಕಗಳಿಂದಲೂ ಗುಡಿಸಲು ವಾಸಿಗಳಾಗಿಯೇ ಇರುವ ಎರಡು ಕುಟುಂಬಗಳೂ ಇವೆ. ಹಲವು ವರ್ಷಗಳ ಬೇಡಿಕೆಯ ಪರಿಣಾಮವಾಗಿ ಮತಗಟ್ಟೆ ಬಂದರೂ, ಇವರಿಗೆ ಗುಡಿಸಲು ವಾಸ ಮಾತ್ರ ತಪ್ಪಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಈ ಸನ್ನಿವೇಶ ನೋಡಲು ಕೋಲಾರ ತಾಲ್ಲೂಕು ವ್ಯಾಪ್ತಿಯಲ್ಲಿರುವ, ಆದರೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಹೊಸಮಟ್ನಹಳ್ಳಿಗೆ ಬರಬೇಕು.

ಗುಡಿಸಲು ವಾಸ: ಈ ಗ್ರಾಮದ ಹನುಮಪ್ಪ ಮತ್ತು ಮುನಿವೆಂಕಟಮ್ಮ ದಂಪತಿ ದಶಕಗಳಿಂದ ಗುಡಿಸಲಲ್ಲೇ ನೆಲೆಸಿದ್ದಾರೆ. ವೆಂಕಟಶಾಮಿ ಎಂಬುವವರೂ ತಮ್ಮ ಮಕ್ಕಳೊಡನೆ ಗುಡಿಸಲಲ್ಲಿ ವಾಸಿಸುತ್ತಿದ್ದಾರೆ.

ವೆಂಕಟಶಾಮಿಯವರ ಗುಡಿಸಲು `ಪರವಾಗಿಲ್ಲ' ಎಂಬಂತೆ ಭದ್ರವಾಗಿದೆ. ಮಳೆ, ಚಳಿ, ಗಾಳಿಯಿಂದ ಒಳಗಿರುವವರನ್ನು ರಕ್ಷಿಸುತ್ತದೆ.
ಆದರೆ ಹನುಮಪ್ಪ ಮತ್ತು ಮುನಿವೆಂಕಟಮ್ಮ ದಂಪತಿಯ ಗುಡಿಸಲಿಗೆ ಮೇಲ್ಛಾವಣಿ ಇಲ್ಲ. ಮಳೆ ನೀರು, ಗಾಳಿ ತಡೆಯುವ ವ್ಯವಸ್ಥೆಯೇ ಇಲ್ಲ. ಬದುಕನ್ನು ಒಡ್ಡಿರುವ ಈ ಕೂಲಿ ಕುಟುಂಬಗಳ ಕಡೆಗೆ ಗ್ರಾಮಸ್ಥರದು ಅನುಕಂಪದ ನೋಟ. ಆದರೆ ಅದರಿಂದ ಪ್ರಯೋಜನವೇನೂ ಆಗಿಲ್ಲ.

ಬುಧವಾರ ಗ್ರಾಮಕ್ಕೆ `ಪ್ರಜಾವಾಣಿ' ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಚೌಡೇಗೌಡ, ಗ್ರಾಮದಲ್ಲಿ ಇನ್ನೂ ಗುಡಿಸಲು ವಾಸಿ ಜನರಿರುವ ಬಗ್ಗೆ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಆಶ್ರಯ ಯೋಜನೆ ಅಡಿಯಲ್ಲಿ ನಾಲ್ಕು ಬಾರಿ ಪಟ್ಟಿಯನ್ನು ತಯಾರಿಸಲಾಗಿದೆ. ಆ ಪಟ್ಟಿಗಳಲ್ಲಿ ಈ ಕುಟುಂಬಗಳ ಹೆಸರನ್ನು ಸೇರಿಸಲಾಗಿದೆ. ಆದರೆ ನಾಲ್ಕು ಬಾರಿಯೂ ಪಟ್ಟಿ ಅನುಮೋದನೆಯಾಗಿಲ್ಲ ಎನ್ನುತ್ತಾರೆ ಅವರು.

ಕಡೇ ಗ್ರಾಮ: ವಿಧಾನಸಭಾ ಕ್ಷೇತ್ರದ ಕಟ್ಟಕಡೆಯ ಗ್ರಾಮವಾಗಿರುವುದರಿಂದ ಇಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿರುವುದು ಬಹಳ ಕಡಿಮೆ ಎನ್ನುತ್ತಾರೆ ಗ್ರಾಮದ ಕುವೆಂಪು ಯುವಕ ಸಂಘದ ಅಧ್ಯಕ್ಷ ಎಚ್.ಆರ್.ನಾರಾಯಣಸ್ವಾಮಿ.

ಗ್ರಾಮದಲ್ಲಿ ಇತ್ತೀಚೆಗಷ್ಟೆ ನೀರಿನ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ. ಗ್ರಾಮದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಎಸ್.ಅಗ್ರಹಾರ ಕೆರೆಯಲ್ಲಿ ಕೊರೆದಿರುವ ಕೊಳವೆಬಾವಿಯಿಂದ ನೀರು ಬರುತ್ತಿದೆ ಎಂಬುದನ್ನು ಬಿಟ್ಟರೆ ಈ ಗ್ರಾಮದಲ್ಲಿ ಸಮಸ್ಯೆಗಳು ಹಲವು.

ಕೋಲಾರ ತಾಲ್ಲೂಕು ಮತ್ತು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವುದರಿಂದ ಈ ಗ್ರಾಮ ಒಂದು ರೀತಿಯಲ್ಲಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದೆ. ಕಂದಾಯ ಸೇರಿದಂತೆ ಹಲವು ಕೆಲಸಗಳಿಗೆ ಇಲ್ಲಿನ ಜನ ಕೋಲಾರ ತಾಲ್ಲೂಕು ಕಚೇರಿಗೆ ಹೋಗಬೇಕು. ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಶ್ರೀನಿವಾಸಪುರ ಶಾಸಕರ ಬಳಿಗೆ ಹೋಗಬೇಕು. ಹೀಗಾಗಿ ಎರಡೂ ಕಡೆ ಅಸ್ತಿತ್ವ ಸ್ಥಾಪನೆ ಎಂಬುದು ಗ್ರಾಮಸ್ಥರಿಗೆ ಕಷ್ಟಕರವಾದ ವಾಸ್ತವವಾಗಿದೆ.

ಈ ಗ್ರಾಮದ ಜನ ಏನೇ ಕೆಲಸವಾಗಬೇಕಾದರೂ 8 ಕಿಮೀ ದೂರದಲ್ಲಿರುವ ಸುಗಟೂರು ಗ್ರಾಮ ಪಂಚಾಯಿತಿ ಕೇಂದ್ರಕ್ಕೇ ಹೋಗಬೇಕು. ಸುಗಟೂರು, ಅಂಕತಟ್ಟಿ, ಮಟ್ನಹಳ್ಳಿ, ಹೊಸಮಟ್ನಹಳ್ಳಿ ಮತ್ತು ಎಸ್.ಅಗ್ರಹಾರ ಗ್ರಾಮಗಳ ವ್ಯಾಪ್ತಿಯಲ್ಲಿರುವ ಪಂಚಾಯಿತಿಯೂ ಈ ಹಳ್ಳಿ ಕಡೆಗೆ ಅಗತ್ಯ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ದೂರು.

ಮತಗಟ್ಟೆ: ಸುಮಾರು 400 ಜನಸಂಖ್ಯೆ ಮತ್ತು 260 ಮತದಾರರಿರುವ ಈ ಗ್ರಾಮದ ಜನ 1 ಕಿಮೀ ದೂರದಲ್ಲಿರುವ ಮಟ್ನಹಳ್ಳಿಗೆ ಮತ ಚಲಾಯಿಸಲು ಹೋಗುತ್ತಿದ್ದರು. ಈಗಲೂ ಅವರು ನ್ಯಾಯಬೆಲೆ ಅಂಗಡಿಗೆ 1 ಕಿಮೀ ದೂರವಿರುವ ಎಸ್ ಅಗ್ರಹಾರಕ್ಕೆ ಹೋಗುತ್ತಾರೆ.

ಈಗ ಮತಗಟ್ಟೆ ಬಂದಿರುವುದರಿಂದ ಮತದಾನದ ಪ್ರಮಾಣವೂ ಜಾಸ್ತಿಯಾಗುತ್ತದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಚುನಾವಣಾ ಆಯೋಗವು ಅವಶ್ಯಕತೆ ಇರುವ ಗ್ರಾಮಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವ ಕಡೆಗೆ ಗಮನ ಹರಿಸಿದರೆ ಗುರಿಮುಟ್ಟುವುದು ಸುಲಭ ಎಂಬುದು ಇದೇ ಗ್ರಾಮದ ವಕೀಲ ಎಸ್.ಸತೀಶ್ ಅವರ ಅಭಿಪ್ರಾಯ. ಅವರ ಅಭಿಪ್ರಾಯಕ್ಕೆ ಗ್ರಾಮದ ಬಹುತೇಕರ ಸಹಮತವೂ ಇದೆ.

ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಈ ಹಿಂದಿನ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಗಂಭೀರವಾಗಿ ಪರಿಗಣಿಸಿದರು. ಈಗಿನ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಮತಗಟ್ಟೆ ಮಂಜೂರು ಮಾಡಿ ಗ್ರಾಮಸ್ಥರ ಕಷ್ಟವನ್ನು ಪರಿಹರಿಸಿದ್ದಾರೆ ಎಂದು ಅವರು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT