ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮತದಾನ ಪ್ರಮಾಣ ಹೆಚ್ಚಳಕ್ಕೆ ಜಾಗೃತಿ ಅಗತ್ಯ'

Last Updated 5 ಏಪ್ರಿಲ್ 2013, 5:46 IST
ಅಕ್ಷರ ಗಾತ್ರ

ಹಾವೇರಿ: `ಗ್ರಾಮೀಣ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜನರಲ್ಲಿ ಮತದಾನದ ಮಹತ್ವ ತಿಳಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಳವಾಗಲು ಕ್ರಮ ಕೈಗೊಳ್ಳಬೇಕು' ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಉಮೇಶ ಕುಸಗಲ್ ಹೇಳಿದರು.

ಜಿ.ಪಂ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ  ಶಿಕ್ಷಣ ಇಲಾಖೆ ಹಾಗೂ ವಾರ್ತಾ ಇಲಾಖೆಯ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ನಡೆದ ಮತದಾರರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಜಿಲ್ಲೆಯಲ್ಲಿ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಮತದಾನ ಹೆಚ್ಚಳವಾಗುವ ಬದಲು ಕಡಿಮೆಯಾಗುತ್ತಾ ಸಾಗುತ್ತಿದೆ. ಜಿಲ್ಲೆಯಲ್ಲಿ ಸರಾಸರಿ ಶೇ 65ರಷ್ಟು ಮತದಾನ ಆಗುತ್ತಿದ್ದು, ಅದನ್ನು ಶೇ 80ರಿಂದ 85ಕ್ಕೆ ಹೆಚ್ಚಿಸಲು ಗಮನ ಹರಿಸಬೇಕಾಗಿದೆ' ಎಂದರು.

`ಸುಶಿಕ್ಷಿತರು ವಾಸಿಸುವ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿರುವುದು ವಿಷಾದಕರ ಎಂದ ಅವರು, ಮತದಾನ ಪ್ರತಿಯೊಬ್ಬರಿಗೆ ಸಂವಿಧಾನ ನೀಡಿರುವ ಹಕ್ಕು, ಅದನ್ನು ಅರ್ಹ ವ್ಯಕ್ತಿಗೆ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಎಲ್ಲರ ಕರ್ತವ್ಯ ಎಂಬುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು' ಎಂದು ಹೇಳಿದರು.

`ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಏ. 7 ಕೊನೆಯ ದಿನವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು' ಎಂದು ಹೇಳಿದರು.

ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ ಮಾತನಾಡಿ, `ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಕೇವಲ 5 ದಿನಗಳು ಬಾಕಿ ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು' ಎಂದು ತಿಳಿಸಿದರು.

ಕಾರ್ಯಾಕ್ರಮದಲ್ಲಿ ಡಿಡಿಪಿಐ ಎಸ್.ಬಿ.ಕೊಡ್ಲಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಚೆನ್ನಮ್ಮ ಹೊಳೆಹೊಸೂರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಎಚ್. ಲಲಿತಾ ಸೇರಿದಂತೆ ಅನೇಕರು ಹಾಜರಿದ್ದರು.

ಬೀಳ್ಕೊಡುಗೆ
ಹಿರೇಕೆರೂರ: ತಾಲ್ಲೂಕಿನ ಹಿರೇಮತ್ತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸರಸ್ವತಿ ಪೂಜೆಯೊಂದಿಗೆ 8ನೇ ತರಗತಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಎಚ್.ಆರ್.ಮಾದರ, `ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂಬುದನ್ನು ಅರಿತು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನಿರ್ಧಿಷ್ಟ ಗುರಿ ಹಾಗೂ ಸಾಧಿಸುವ ಛಲದೊಂದಿಗೆ ಉನ್ನತ ಅಧ್ಯಯನ ಮಾಡಿ ಉತ್ತಮ ಜೀವನ ನಡೆಸಬೇಕು' ಎಂದು ಹೇಳಿದರು.

ಜಯಪ್ಪ ಚನ್ನಳ್ಳಿ, ಶಿಕ್ಷಕ ಎನ್.ಎಂ.ನಾಸೂರ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಬಸನಗೌಡ ಹಲಗೇರಿ ವಹಿಸಿದ್ದರು. ಚೌಡಪ್ಪ ದೊಡ್ಡಮನಿ, ಹನುಮಂತಪ್ಪ ಆಲದಗೇರಿ, ಎಂ.ಬಿ.ಗಡದವರ ಮೊದಲಾದವರು ಉಪಸ್ಥಿತರಿದ್ದರು. ಜಯರಾಮ ಕೊಠಾರಿ ಸ್ವಾಗತಿಸಿದರು. ಜೆ.ಕೆ.ಸೋಮಕ್ಕಳವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT