ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಗೆ 3 ಲಕ್ಷ ಹೆಸರು

Last Updated 1 ಏಪ್ರಿಲ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಒಟ್ಟು 5.85 ಲಕ್ಷಗಳು ಅರ್ಜಿಗಳು ಬಂದಿವೆ. ಈ ಪೈಕಿ 3.06 ಲಕ್ಷ ಅರ್ಜಿದಾರರ ಹೆಸರುಗಳನ್ನು ಈಗಾಗಲೇ ಪಟ್ಟಿಗೆ ಸೇರಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದರು.

ಹೊಸದಾಗಿ ಸೇರ್ಪಡೆಯಾಗಿರುವ ಈ ಮತದಾರರು, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ, ಇಲ್ಲವೇ ಎಂಬುದನ್ನು ಆಯೋಗದ ವೆಬ್‌ಸೈಟ್ ಮೂಲಕ ಖಚಿತಪಡಿಸಿಕೊಳ್ಳಬಹುದು. ಈ ವರ್ಷದ ಜ.28ರ ನಂತರ ಅರ್ಜಿ ನೀಡಿದವರು, ತಮ್ಮ ಅರ್ಜಿಯ ಸ್ಥಿತಿ ತಿಳಿಯಲು ವೆಬ್‌ಸೈಟ್‌ನಲ್ಲಿ `ಶೋಧನೆ' ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಇದೇ 7ರಂದು ಕೊನೆಯ ದಿನ. ಅರ್ಜಿ ಸಲ್ಲಿಸಿದ ಹತ್ತು ದಿನಗಳ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ. ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವವರು ತಡ ಮಾಡದೆ ಅರ್ಜಿ ಸಲ್ಲಿಸುವ ಮೂಲಕ ಮತದಾನದ ಅವಕಾಶ ಪಡೆಯಬಹುದು ಎಂದರು.

ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿಯ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ 92433 55223ಕ್ಕೆ (ಟೋಲ್ ಫ್ರೀ) ಎಸ್.ಎಂ.ಎಸ್. ಮಾಡಿ ಮತಗಟ್ಟೆಯ ವಿವರ ಪಡೆಯಬಹುದು. 

ಬೆಳಿಗ್ಗೆ 8 ಗಂಟೆ ಬದಲು, 7 ಗಂಟೆಗೆ ಮತದಾನ ಆರಂಭಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು. ಮತದಾನದ ಅವಧಿಯನ್ನು  ಯಾವ ಕಾರಣಕ್ಕೆ ಬದಲಾಯಿಸಲಾಗಿದೆ ಎಂಬುದು ಗೊತ್ತಿಲ್ಲ ಎಂದರು.

ಕಂದಾಯ ಮತ್ತು ಪೊಲೀಸ್ ಇಲಾಖೆಯಲ್ಲಿ ಮೂರು ವರ್ಷ ಸೇವೆ ಪೂರೈಸಿರುವ ಅಧಿಕಾರಿಗಳನ್ನು ಇನ್ನೂ ವರ್ಗಾವಣೆ ಮಾಡದಿರುವ ಬಗ್ಗೆ ಪ್ರಶ್ನಿಸಿದಾಗ, ಸಂಬಂಧಪಟ್ಟ ಇಲಾಖೆಗಳು ವರ್ಗಾವಣೆಗೆ ಸಿದ್ಧತೆ ನಡೆಸಿವೆ. 2-3 ದಿನಗಳಲ್ಲಿ ವರ್ಗಾವಣೆ ಆಗಲಿದೆ ಎಂದರು.

ಗುಜರಾತ್ ಚುನಾವಣೆಗೆ ಹೊರಗಿನಿಂದ ಪೊಲೀಸ್ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ಅದೇ ರೀತಿ ರಾಜ್ಯದ ಚುನಾವಣೆಗೂ ಹೊರ ರಾಜ್ಯಗಳ ಐಪಿಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ 50 ದೂರುಗಳು ಬಂದಿವೆ. ದೂರು ನೀಡಲು ಇರುವ `1950' ಸಂಖ್ಯೆ ಸಹಾಯವಾಣಿ ಲೈನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ ನೀತಿ ಸಂಹಿತೆ ಅಡ್ಡಿಯಾಗುತ್ತದೆಯೇ ಎಂಬುದನ್ನು ತಕ್ಷಣ ಹೇಳಲು ಸಾಧ್ಯವಿಲ್ಲ. ಆಯೋಗದೊಂದಿಗೆ ಚರ್ಚಿಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಏಪ್ರಿಲ್ 7 ಕಡೆಯ ದಿನ
ಬೆಂಗಳೂರು:
ಮೇ 5 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಇರುವುದರ ಬಗ್ಗೆ ಖಾತ್ರಿಪಡಿಸಿಕೊಂಡು ಇಲ್ಲವಾದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪಟ್ಟಿಯಲ್ಲಿ ನಮೂದಿತವಾಗಿರುವ ಹೆಸರುಗಳಲ್ಲಿ ಲೋಪದೋಷಗಳಿದ್ದರೆ ಅದಕ್ಕೂ ಪ್ರತ್ಯೇಕ ಅರ್ಜಿ ಪಡೆದುಕೊಳ್ಳಬಹುದು. ಈ ಎಲ್ಲ ಪ್ರಕ್ರಿಯೆಗಳಿಗೆ ಏಪ್ರಿಲ್ 7 ಕೊನೆಯ ದಿನಾಂಕ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನಾ ಪ್ರಕರಣಗಳನ್ನು ದಾಖಲಿಸಲು ಕೆಳಕಂಡ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಹೇಮಲತಾ ಅವರು ಪ್ರಕಟಿಸಿದ್ದಾರೆ.
ಮಾಹಿತಿಗೆ: 080   2793 1237 (ಹೊಸಕೋಟೆ ತಾಲ್ಲೂಕು), 2768 2109 (ದೇವನಹಳ್ಳಿ ತಾಲ್ಲೂಕು), 2762 2033 ( ದೊಡ್ಡಬಳ್ಳಾಪುರ ತಾಲ್ಲೂಕು)  93792 60568 ( ನೆಲಮಂಗಲ ತಾಲ್ಲೂಕು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT