ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಮನಸಿಗೆ ಪಕ್ಷಗಳ ಜಾಹೀರಾತಿನ ಗಾಳ

ಎದುರಾಳಿಗಳ ಕಾಲೆಳೆಯಲು ಹೊಸ ತಂತ್ರ
Last Updated 24 ಏಪ್ರಿಲ್ 2013, 20:15 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಅಖಾಡದಲ್ಲಿ ಬಿಸಿ ಏರುತ್ತಿರುವಂತೆಯೇ ರಾಜಕೀಯ ಪಕ್ಷಗಳ ನಡುವೆ ಜಾಹೀರಾತು ಸಮರವೂ ಬಿರುಸು ಪಡೆದಿದೆ. ಎದುರಾಳಿ ನಾಯಕರು ಮತ್ತು ಪಕ್ಷಗಳನ್ನು ಗುರಿಯಾಗಿಸಿಕೊಂಡು ಪ್ರಮುಖ ಪಕ್ಷಗಳು ಜಾಹೀರಾತು ಪ್ರಕಟಿಸುತ್ತಿವೆ. ಹಳೆಯ ಘಟನೆಗಳನ್ನು ಕೆದಕಿ, ಅವುಗಳನ್ನು ಮತದಾರರ ಮುಂದಿಡಲು ಪ್ರಯತ್ನಿಸುತ್ತಿವೆ.

ಜಾಹೀರಾತು ಸಮರದಲ್ಲಿ ಬಿಜೆಪಿ ಬಹಳ ಮುಂದಿದೆ. ಮತದಾರರನ್ನು ಸೆಳೆಯಲು ಪ್ರಕಟಿಸಿದ ಮೊದಲ ಜಾಹೀರಾತಿನಲ್ಲೇ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪರೋಕ್ಷ ಪ್ರಹಾರ ನಡೆಸಿತ್ತು. `ಎಷ್ಟೇ ದೊಡ್ಡ ವ್ಯಕ್ತಿಯನ್ನಾಗಲೀ ನಾವು ತ್ಯಾಗ ಮಾಡಲು ಸಿದ್ಧ. ಅದಕ್ಕಾಗಿ ಯಾವುದೇ ಬೆಲೆ ತೆರಲೂ ಸಿದ್ಧ. ಇದು, ನಾವು ಮೌಲ್ಯ ಎತ್ತಿಹಿಡಿದ ಬಗೆ' ಎಂದು ಬಿಜೆಪಿ ತನ್ನ ಜಾಹೀರಾತಿನಲ್ಲಿ ಹೇಳಿಕೊಂಡಿದೆ.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರ ನಡೆಯುವಾಗ ಅದನ್ನು ತಡೆಯುವ ಪ್ರಯತ್ನ ಮಾಡದಿರುವುದನ್ನು ಈ ಜಾಹೀರಾತಿನ ಮೂಲಕ ಪಕ್ಷ ಸಮರ್ಥಿಸಿಕೊಂಡಿದೆ. ಯಡಿಯೂರಪ್ಪ ಅವರ ನಿರ್ಗಮನ ಬಿಜೆಪಿಗೆ ಮೌಲ್ಯವನ್ನು ಎತ್ತಿ ಹಿಡಿಯುವ ಅವಕಾಶ ಮಾಡಿಕೊಟ್ಟಿತು ಎಂದೂ ಸೂಚ್ಯವಾಗಿ ಹೇಳಿದೆ.

ಈ ಜಾಹೀರಾತಿನಲ್ಲಿ ಯಡಿಯೂರಪ್ಪ ಅವರ ಹೆಸರು ಉಲ್ಲೇಖಿಸದಿದ್ದರೂ, ಅದು ತಮ್ಮನ್ನೇ ಗುರಿಯಾಗಿಸಿಕೊಂಡದ್ದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. `ಅವರು (ಬಿಜೆಪಿ) ನನ್ನನ್ನು ದೊಡ್ಡವ ಎಂದು ಒಪ್ಪಿಕೊಂಡಿದ್ದಾರೆ' ಎಂದು ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೆಜೆಪಿ ಉಪಾಧ್ಯಕ್ಷ ಕೆ.ಎಚ್.ಶ್ರೀನಿವಾಸ್, ಈ ಜಾಹೀರಾತಿನಲ್ಲಿ `ದೊಡ್ಡವರು' ಎಂದು ಉಲ್ಲೇಖಿಸಿರುವುದು ಯಾರನ್ನು ಎಂಬುದನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.

ಚುನಾವಣಾ ಜಾಹೀರಾತುಗಳ ವಿನ್ಯಾಸಕ್ಕಾಗಿ ಬಿಜೆಪಿ ವಿಶೇಷ ಸಮಿತಿಯೊಂದನ್ನು ರಚಿಸಿದೆ. ಪಕ್ಷದಲ್ಲಿ ಸಕ್ರಿಯವಾಗಿದ್ದ ಕೆಲವರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರುವ ಕೆಲವರು ಈ ತಂಡದಲ್ಲಿದ್ದಾರೆ. ಮೊದಲ ಜಾಹೀರಾತು ಯಡಿಯೂರಪ್ಪ ಅವರನ್ನೇ ಗುರಿಯಾಗಿಸಿಕೊಂಡು ರೂಪಿಸಿದ್ದು ಎಂದು ಪಕ್ಷದ ಮೂಲಗಳು ತಿಳಿಸಿವೆ.

`ಯಡಿಯೂರಪ್ಪ ಅವರು ಪಕ್ಷದಿಂದ ನಿರ್ಗಮಿಸಿದ ಕುರಿತು ಜನರಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವೇ ಈ ಜಾಹೀರಾತಿನ ಮೂಲ ಉದ್ದೇಶ. ಅವರು ಪಕ್ಷದಿಂದ ಹೊರಹೋಗಿರುವುದರ ಪರಿಣಾಮವಾಗಿ ಆಗಬಹುದಾದ ನಷ್ಟವನ್ನು ತಡೆಯುವುದು ಕೂಡ ಅದನ್ನು ರೂಪಿಸಿರುವುದರ ಹಿಂದಿನ ಕಾರಣಗಳಲ್ಲಿ ಒಂದು' ಎಂದು ಹೇಳುತ್ತಾರೆ ಬಿಜೆಪಿ ಮುಖಂಡರು.

ಮೂರು ರೀತಿಯ ಜಾಹೀರಾತುಗಳನ್ನು ಬಿಜೆಪಿ ಸಿದ್ಧಪಡಿಸಿಕೊಂಡಿದೆ. ಯಡಿಯೂರಪ್ಪ ವಿರುದ್ಧ, ಕಾಂಗ್ರೆಸ್ ವಿರುದ್ಧ ಹಾಗೂ ಬಿಜೆಪಿಯ ಸಾಧನೆಗಳನ್ನು ಸಾರುವ ಜಾಹೀರಾತುಗಳು ಸಿದ್ಧವಾಗಿವೆ. ವಿವಿಧ ಹಂತಗಳಲ್ಲಿ ಅವುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಯೋಚಿಸಲಾಗಿದೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮೂರು ರೀತಿಯ ಜಾಹೀರಾತುಗಳು ಪ್ರಕಟವಾಗಲಿವೆ ಎನ್ನುತ್ತವೆ ಮೂಲಗಳು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಉಲ್ಲೇಖಿಸಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ಅವರು, `ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೆ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ' ಎಂದು ಹೇಳಿದ್ದರು. ಇದನ್ನು ತನ್ನ ಜಾಹೀರಾತಿನಲ್ಲಿ ಬಳಸಿಕೊಂಡಿರುವ ಬಿಜೆಪಿ, `ಮುಖ್ಯಮಂತ್ರಿ ಆಗಿದ್ದೆ ಅಂತ ಹೇಳ್ಕೊಳಕ್ಕೆ ನಾಚಿಕೆಯೆ? ಛೀ, ನಮಗೂ ನಾಚಿಕೆಗೇಡು, ಇಂಥವರು ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗೋದು!' ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಟಾಂಗ್ ನೀಡಿದೆ. ಜಾಹೀರಾತಿನ ಮೂಲಕ ಬಿಜೆಪಿ ಹೀಗೆ ತಿವಿದಿರುವುದು, ಮೊಯಿಲಿ ಅವರನ್ನು ಮಾತ್ರವೋ ಅಥವಾ ಯಡಿಯೂರಪ್ಪ ಅವರೂ ಇದರ ಗುರಿಯೋ ಎಂದು ಜನ ಲೆಕೆರೆದುಕೊಳ್ಳುತ್ತಿದ್ದಾರೆ!

ಕಾಂಗ್ರೆಸ್ ವಿರುದ್ಧ ಸಮರ: ಎರಡನೇ ಹಂತದಲ್ಲಿ ಕಾಂಗ್ರೆಸ್ ವಿರುದ್ಧದ ಜಾಹೀರಾತುಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸದೇ ಇರುವುದರ ಕುರಿತು ಜಾಹೀರಾತು ಪ್ರಕಟಿಸಿರುವ ಬಿಜೆಪಿ, `ಕಾಂಗ್ರೆಸ್‌ನಲ್ಲಿ ನಾಯಕರಾರು?' ಎಂದು ಕಾಲೆಳೆಯುವ ಪ್ರಯತ್ನವನ್ನೂ ಮಾಡಿದೆ. ಜಗದೀಶ ಶೆಟ್ಟರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದನ್ನು ಈ ಜಾಹೀರಾತಿನಲ್ಲಿ ಪೂರಕವಾಗಿ ಬಳಸಿಕೊಂಡಿದೆ.

ಬುಧವಾರ ಬೆಲೆ ಏರಿಕೆಯನ್ನು ಆಧರಿಸಿದ ಜಾಹೀರಾತುಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿರುವ ಜಾಹೀರಾತುಗಳಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರದ ಯುಪಿಎ ಸರ್ಕಾರ ವಿಫಲವಾಗಿದೆ ಎಂಬ ಅರ್ಥದಲ್ಲಿ ಈ ಜಾಹೀರಾತುಗಳನ್ನು ರೂಪಿಸಲಾಗಿದೆ.
ಮೂರನೇ ಹಂತದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳ ಬಿಡುಗಡೆಗೆ ವಿಶೇಷ ಸಮಿತಿ ಸಿದ್ಧತೆ ನಡೆಸಿದೆ.

ಸರ್ಕಾರದ ಸೇವೆಗಳ ಲಭ್ಯತೆಯ ಅವಧಿಗೆ ಖಾತರಿ ನೀಡುವ `ಸಕಾಲ' ಯೋಜನೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಆಧಾರವಾಗಿ ಇರಿಸಿಕೊಂಡು ಈ ಜಾಹೀರಾತುಗಳನ್ನು ವಿನ್ಯಾಸಗೊಳಿಸಲಾಗಿದೆ. ಕಾಂಗ್ರೆಸ್‌ನ ದೀರ್ಘ ಅವಧಿಯ ಆಡಳಿತ ಮತ್ತು ಬಿಜೆಪಿಯ ಐದು ವರ್ಷಗಳ ಆಡಳಿತದ ನಡುವೆ ಹೋಲಿಕೆ ಮಾಡುವ ಪ್ರಯತ್ನವೂ ಜಾಹೀರಾತುಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ತಿರುಗೇಟು: ಬಿಜೆಪಿಯ ಜಾಹೀರಾತಿನ ಏಟಿಗೆ ಕಾಂಗ್ರೆಸ್ ಕೂಡ ತಿರುಗೇಟು ನೀಡುತ್ತಿದೆ. ಜಾಹೀರಾತುಗಳ ವಿನ್ಯಾಸ ಮತ್ತು ಬಿಡುಗಡೆಯ ಹೊಣೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ಕಾಂಗ್ರೆಸ್ ನೀಡಿದೆ. ಪಕ್ಷದ ಕೆಲವು ಮುಖಂಡರ ಮೇಲುಸ್ತುವಾರಿಯಲ್ಲಿ ಈ ಕೆಲಸ ನಡೆಯುತ್ತಿದೆ. ಮೂರು ತಿಂಗಳ ಮೊದಲೇ ಜಾಹೀರಾತು ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

`ಬಿಜೆಪಿ ಸರ್ಕಾರ ಸಾಕು' ಎಂಬುದನ್ನು ಪರೋಕ್ಷವಾಗಿ ಹೇಳುವ `ಸಾಕಪ್ಪಾ ಸಾಕು' ಎಂಬ ಶೀರ್ಷಿಕೆಯ ಮೊದಲ ಜಾಹೀರಾತು ಕಾಂಗ್ರೆಸ್‌ನಿಂದ ಬಿಡುಗಡೆಯಾಗಿದೆ. ಬುಧವಾರ ಬಿಡುಗಡೆಯಾಗಿರುವ ಜಾಹೀರಾತಿನಲ್ಲಿ, ಬಿಜೆಪಿ ಸರ್ಕಾರ ಬೆಂಗಳೂರಿನ ತ್ಯಾಜ್ಯ ನಿರ್ವಹಣೆಯಲ್ಲಿ ಸೋತಿದೆ ಎಂಬ ಸಂದೇಶ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳು, ಆಡಳಿತದಲ್ಲಿನ ಲೋಪಗಳನ್ನು ಆಧರಿಸಿದ ಜಾಹೀರಾತುಗಳನ್ನು ಕಾಂಗ್ರೆಸ್ ಸಿದ್ಧಪಡಿಸಿಕೊಂಡಿದೆ. ಕೇಂದ್ರದ ಯುಪಿಎ ಸರ್ಕಾರದ ಸಾಧನೆಗಳನ್ನು ಆಧರಿಸಿದ ಜಾಹೀರಾತುಗಳನ್ನೂ ಪ್ರಕಟಿಸಲು ಮುಂದಾಗಿದೆ.

ಜೆಡಿಎಸ್ ಇದುವರೆಗೂ ಯಾವುದೇ ಜಾಹೀರಾತುಗಳನ್ನೂ ಬಿಡುಗಡೆ ಮಾಡಿಲ್ಲ. ಪಕ್ಷದ ಮೂಲಗಳು ಹೇಳುವ ಪ್ರಕಾರ, ಕಾಂಗ್ರೆಸ್, ಬಿಜೆಪಿ ಮತ್ತಿತರ ಪಕ್ಷಗಳ ವಿರುದ್ಧ ಹಾಗೂ ಜೆಡಿಎಸ್‌ನ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳನ್ನು ಪಕ್ಷ ಸಿದ್ಧಪಡಿಸಿಕೊಂಡಿದೆ. ಶೀಘ್ರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT