ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೂರರು ಬಿತ್ತರಿಸಿದ ಮೌಲ್ಯ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪದ್ಮಶ್ರಿ ಡಾ. ಮತ್ತೂರು ಕೃಷ್ಣಮೂರ್ತಿ ಅವರ ಮೂಲ ಹೆಸರು ಎಂ.ಆರ್. ಕೃಷ್ಣಮೂರ್ತಿ. ಕನ್ನಡ ಕಥಾಲೋಕದ ಹಿರಿಯಜ್ಜ ಮಾಸ್ತಿಯವರ `ಜೀವನ~ ಪತ್ರಿಕೆಗೆ ಅವರು ಆಗಾಗ ಬರೆಯುತ್ತಿದ್ದರು. ಅವರ ಹೆಸರಿಗೆ ಹುಟ್ಟೂರನ್ನು ಸೇರಿಸಿಕೊಳ್ಳಲು ಮಾಸ್ತಿಯವರೇ ಸೂಚಿಸಿದರಂತೆ.

ಹಾಸನ ಜಿಲ್ಲೆ ಮಾದಲಾಪುರದ ರಾಮಕೃಷ್ಣಯ್ಯ ಅವರ ಎಂಟು ಮಕ್ಕಳಲ್ಲಿ ಕೊನೆಯ ಮತ್ತು ಐದನೆ ಗಂಡು ಮಗು ಕೃಷ್ಣಮೂರ್ತಿ 1929ರ ಶ್ರಿ ಕೃಷ್ಣ ಜನ್ಮಾಷ್ಟಮಿಯಂದು ಜನಿಸಿದರು.
 
ಬಡಗಿ ವೃತ್ತಿ ಕೈಗೊಂಡು ಕುಟುಂಬ ಪೋಷಣೆ ಮಾಡುತ್ತಿದ್ದ ತಂದೆಯಿಂದ ಪಡೆದ ಆಸ್ತಿಯೆಂದರೆ ಬಡತನದ ಕೀಳರಿಮೆ ಇಲ್ಲದ ಕಾಯಕ ನಿಷ್ಠೆ. ರಾಮಕೃಷ್ಣಯ್ಯ ಮಾದಲಾಪುರದಲ್ಲಿ ಬದುಕು ನಿರ್ವಹಿಸಲಾಗದೆ ಪತ್ನಿ ನಂಜಮ್ಮ ಮತ್ತು ನಾಲ್ಕು ಮಕ್ಕಳೊಂದಿಗೆ ನಿರ್ಗತಿಕರಾಗಿ ಹೊರಟು ಬಂದು ಶಿವಮೊಗ್ಗದಲ್ಲಿ ಕೆಲವು ದಿನ ಧರ್ಮಛತ್ರದಲ್ಲಿ ತಂಗಿದ್ದರು. ಸಮೀಪದ ಮತ್ತೂರಿನ ಸ್ವಜನ ಸಂಕೇತಿ ಹಿರಿಯರೊಬ್ಬರ ಔದಾರ್ಯದಿಂದಾಗಿ ಅಲ್ಲಿ ಹೋಗಿ ನೆಲೆ ಕಂಡುಕೊಂಡರು. ಕೃಷ್ಣಮೂರ್ತಿ ಮತ್ತೂರಿನಲ್ಲೇ ಜನಿಸಿದರು.

ರಾಮಕೃಷ್ಣಯ್ಯ ಅವರ ಮಕ್ಕಳ ಸಾಂಪ್ರದಾಯಿಕ ಶಾಸ್ತ್ರ, ವಿದ್ಯಾಭ್ಯಾಸಕ್ಕೆ ಮತ್ತೂರಿನ ಪ್ರತಿ ಮನೆಯಲ್ಲಿ ಉಚಿತವಾಗಿ ಪಾಠ ಹೇಳುವ ಗುರುಗಳಿದ್ದುದೇ ಕೃಷ್ಣಮೂರ್ತಿ ಅವರ ಬಾಲ್ಯದ ಸೌಭಾಗ್ಯ. ಮತ್ತೂರಿನ ಸಂಪ್ರದಾಯಬದ್ಧ ಆಚರಣೆಗಳ ಪರಿಸರದ ಕೃಷ್ಣಮೂರ್ತಿ ಅವರು ತಮ್ಮ ಮೌಲ್ಯಗಳಿಗೆ ನಿಷ್ಠರಾಗಿಯೇ ಉಳಿದು ಆಧುನಿಕತೆಗೂ ಸಂದು ದೇಶ,ದೇಶಾಂತರಗಳ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದು ಅವರ ಸಕಾರಾತ್ಮಕ ಜೀವನೋತ್ಸಾಹದಿಂದ.

ಬಾಲ್ಯದ ಬಡತನ, ಭಿಕ್ಷಾನ್ನ, ವಾರಾನ್ನ ಅವರನ್ನು ದೀನರಾಗಿಸಲಿಲ್ಲ, ಪರಾಧೀನರೆನಿಸಲಿಲ್ಲ. ಎಲ್ಲರಿಗೂ ಬರುವಂತೆ ಅವರಿಗೆ ಸಮಸ್ಯೆ, ಸಂದಿಗ್ಧ,ಸಂಕಟ, ಸಂಕಷ್ಟಗಳು ಅತಿ ಹೆಚ್ಚು ಎನಿಸುವ ಮಟ್ಟದಲ್ಲೇ ಬಂದಿದ್ದವು. ಆದರೆ ಪ್ರತಿಯೊಂದರಲ್ಲೂ ಅವರಿಗೆ `ಸ~ಕಾರವೇ ಕಂಡಿತು. ಮತ್ತೂರರು ಹಿರಿಯ ವೇದ ವಿದ್ವಾಂಸ, ಗಾಂಧೀವಾದಿ, ರಾಮಾಯಣ- ಮಹಾಭಾರತಗಳ ವ್ಯಾಖ್ಯಾನಕಾರ, ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಕಂಪನ್ನು ವಿದೇಶಿ ನೆಲದಲ್ಲಿ ಪಸರಿಸಿದ ಮಹಾನುಭಾವ ಎಂದೆಲ್ಲ ವರ್ಣಿತರಾದವರು.

ಅವರ ವಾಗ್ಮಿತೆ, ವೇದ, ಪುರಾಣಗಳ ಸಂಸ್ಕಾರ, ನಾಟಕೀಯ ನಿರೂಪಣಾ ಪ್ರತಿಭೆ, ಪ್ರತಿಯೊಂದು ಕ್ಷಣವನ್ನೂ ಮೌಲಿಕವಾಗಿ ನಿರ್ವಹಿಸುವ ರೀತಿಯಿಂದಾಗಿ ಅಸಂಖ್ಯಾತ ಜನರಿಗೆ ಅವರು ಮಹಾನುಭಾವ, ಸಂತಸದೃಶರಾದರು. ಮಾಧ್ಯಮಗಳ ಇಂದಿನ ಮಂದಿಗೆ ಅವರು ವಿದ್ವಾಂಸ, ವೇದ, ಸಂಸ್ಕೃತ ಪಂಡಿತ, ಭಾರತೀಯ ವಿದ್ಯಾ ಭವನದ ಕೀರ್ತಿಕಲಶ. ಹಲವರಿಗೆ ಅವರು ತತ್ವಜ್ಞಾನಿ.

ಯಾವುದೋ ಒಂದು  ಹೊಸ ಯೋಜನೆಯ ವಿವರ ದರ್ಶಿಕೆಯಲ್ಲಿ ಮತ್ತೂರರ ಹೆಸರಿನ ಹಿಂದೆ ತತ್ವಜ್ಞಾನಿ ಎಂದು ಸೇರಿಸಲಾಗಿತ್ತು.ಅವರು ಅದನ್ನು ನೋಡಿ ಇಡೀ ಪುಟದ ಮೇಲೆ ಕಣ್ಣು ಹಾಯಿಸಿದರು.
 
ಒಂದು ಕ್ಷಣ ಮೌನ, ಅನಂತರ ಮೃದು ಧ್ವನಿಯಲ್ಲೇ  ತತ್ವಜ್ಞಾನಿ ಎನ್ನುವ ಪದ ಜಿಡ್ಡು ಕೃಷ್ಣಮೂರ್ತಿ, ಯು.ಜಿ. ಕೃಷ್ಣಮೂರ್ತಿ ಅವರಿಗೆ ಸರಿಹೋಗುತ್ತದೆ, ಮತ್ತೂರು ಕೃಷ್ಣಮೂರ್ತಿಗಲ್ಲ ಎಂದುಬಿಟ್ಟರು! ಅದೇ ಅಳತೆಯಲ್ಲಿ ಇನ್ನೊಂದು ಮಾತನ್ನು ಸೇರಿಸಿದರು. `ಇಡೀ ವಿನ್ಯಾಸ, ಬರಹ ಎಲ್ಲಾ ಸೊಗಸಾಗಿದೆ. 99ರಷ್ಟು ಸರಿ ಇದ್ದು, ಇಂಥ ಅಚಾತುರ್ಯ ಒಂದೇ ಇದ್ದರೂ ಇದೇ ದೊಡ್ಡದಾಗಿ ಕಂಡು ಆಡಿಕೊಳ್ಳುವಂತಾಗುತ್ತದೆ~ - ಕಲಿಯಬಲ್ಲವರಿಗೆ ಈ ಎರಡೇ ಮಾತುಗಳಲ್ಲಿ ಎಂಥ ಪಾಠ!

ಮತ್ತೂರ್‌ಜೀ ಜೀವನಗಾಥೆ - 480 ಪುಟಗಳ ಆತ್ಮಕಥನ- ಶ್ರಿಮತಿ ಸುಮನಾ ವಿಶ್ವನಾಥ್ ನಿರೂಪಣೆಯಲ್ಲಿ ಪ್ರಕಟವಾಗಿದೆ. ಅದರಲ್ಲಿ ಅವರು ಹೀಗೆ ಹೇಳಿದ್ದಾರೆ.

 `ನನ್ನ ಅಭಿಪ್ರಾಯದಲ್ಲಿ ಬಡತನ ಅನ್ನುವುದು ಒಂದು ಭಾಗ್ಯ. ನನಗೆ ಹಾಗೇ ಅನ್ನಿಸಿದೆ. ದೇವರು ಬಡತನ ಕೊಡುತ್ತಾನೆ. ಅವನು ನಿರ್ದಯಿ, ಬಡವರಿಗೆ ಬಡತನ- ಶ್ರಿಮಂತರಿಗೆ ಐಶ್ವರ್ಯ ಕೊಡುತ್ತಾನೆ ಎಂದು ನಾವು ದೇವರನ್ನು ದೂರುತ್ತೇವೆ. ಹಾಗೇ ಯೋಚಿಸುತ್ತ ಹೋದರೆ ಬಡತನವೇ ಆದರೂ, ಎಂತಹ ಒಂದು ಅನುಗ್ರಹ ಎಂದು ಅನಿಸದೆ ಇರುವುದಿಲ್ಲ. ವಯಸ್ಸಾಗುತ್ತಿದ್ದಂತೆ ಅನೇಕರ ಜೀವನ ಚರಿತ್ರೆಗಳನ್ನು ಓದಿದಾಗ ಬಡತನ ಕೊಟ್ಟು ದೇವರು ನಮ್ಮನ್ನು ಬದುಕಿಸಿದ ಎಂದೂ ಅನಿಸಿತು~. 

ತಾವು ರಾಮಕೃಷ್ಣ ಮಿಶನ್ನಿನ ಸನ್ಯಾಸಿಯಾಗಲು ಬಯಸಿದ್ದರ ಕುರಿತು ಅವರ ಅಭಿಪ್ರಾಯ ಹೀಗಿದೆ
`ಜೀವನದಲ್ಲಿ  ಬೇಸರವೋ, ಎಂಥದೂ ಅಲ್ಲ. ನನಗಿದ್ದುದು ಇಷ್ಟೇ. ಜನರ ಜತೆಯಲ್ಲಿ ಬೆರೆಯಬೇಕು. ನಾಲ್ಕಾರು ಜನರನ್ನುದ್ದೇಶಿಸಿ ಮಾತನಾಡಬೇಕು, ಊರೂರು ತಿರುಗಬೇಕು, ಹೇಗೆ ಈ ಸ್ವಾಮೀಜಿಗಳೆಲ್ಲ ಮಾಡುತ್ತಾರೆ? ಹಾಗೆಯೇ ನಾನೂ ಇರಬೇಕು- ಮಾಡಬೇಕು ಎನ್ನುವುದಷ್ಟೇ ಉದ್ದೇಶ! ಆದರೆ ಬಡತನದಿಂದಲೋ ಅಥವಾ ಮನೆಯಲ್ಲಿರಲು ಸಾಧ್ಯವಿಲ್ಲ ಎಂದೋ ಅಲ್ಲ. ಹೌದು, ಬಡತನ ಮನುಷ್ಯನಿಗೆ ಬಹಳ ಪಾಠ ಕಲಿಸುತ್ತದೆ.

ನಮ್ಮ ತಾಯಿಯೇ ಮನೆಯಲ್ಲಿ ನಾವೆಲ್ಲರೂ ಇದ್ದಾಗ ಒಬ್ಬೊಬ್ಬರನ್ನಾಗಿ ಹೊರಗೆ ಕಳುಹಿಸಿದರು. ಹೊರಗಿನ ಪ್ರಪಂಚ ಜ್ಞಾನ ಇರಬೇಕಾದರೆ ಹೊರಗಿರಬೇಕು. ಸದಾ ತನ್ನವರ ಮಧ್ಯೆ ಕುಳಿತಿದ್ದಾಗ ಆ ಅನುಭವ ಬರದು ಎಂದು. ಅದು ನನಗೆ ಅರ್ಥವಾಗಿತ್ತು~
`ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳ ನಾಯಕರುಗಳಾದ ಶ್ರಿ ರಾಮ, ಶ್ರಿ ಕೃಷ್ಣರು ಕವಿಗಳು ಚಿತ್ರಿಸಿರುವಂತೆಯೇ ಕಾಣದೆ ಏನೋ ಒಂದು ರೀತಿಯ ಮಹತ್ವ ಅವರಲ್ಲಿದೆ ಎಂದು ಬಹಳವಾಗಿ ಅನ್ನಿಸತೊಡಗಿತು. ನನ್ನಲ್ಲಿಯೇ ಯಾವುದೇ ಸ್ಪಷ್ಟ ಪರಿಕಲ್ಪನೆ ಇರಲಿಲ್ಲ~.

`ಪರಂಪರೆಯಿಂದ ವಿದ್ವಾಂಸರು ಅನೇಕರಿದ್ದರೂ ಯಾರನ್ನೂ ಏನನ್ನೂ ಕೇಳಲಾಗದು. ಸಾವಿರಾರು ವರ್ಷಗಳಿಂದ, ತಲೆಮಾರುಗಳು ಉಳಿಸಿಕೊಂಡು ಬಂದಿರುವ ಆ ಭಕ್ತಿ,ಆ ನಂಬಿಕೆಯನ್ನು ಪ್ರಶ್ನೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗೆ ಪ್ರಶ್ನೆ ಮಾಡಿದರೂ ಆಧುನಿಕ ರೀತಿಯ ಯೋಚನಾ ಧಾಟಿ ಅವರಲ್ಲಿ ಯಾರಿಗೂ ಇಲ್ಲದಿದ್ದುದು ನನಗೇ ತಿಳಿದಿತ್ತಾದ್ದರಿಂದ ನನ್ನ ಪ್ರಶ್ನೆಯನ್ನು ಅವರು ಸರಿಯಾಗಿ ವಿಮರ್ಶಿಸಿ ಉತ್ತರ ಹೇಳುವ ಸಾಧ್ಯತೆಗಳು ಬಹಳ ಕಡಿಮೆ ಎನಿಸಿತ್ತು~.

 `ಧರಿಸುವ ಉಡುಪುಗಳು ಹವಾಮಾನ, ಕಾಲ, ಜಾಗ, ದೇಶಗಳ ಮೇಲೆ ನಿರ್ಧರಿತವಾಗುವಂತವು. ಅದರ ಬದಲಾವಣೆ ಬಹಳ ಸಹಜ. ಅದರ ಬಗ್ಗೆ ಮೂಢನಂಬಿಕೆ ಅನಗತ್ಯ. ಹಾಗಾದರೆ ಮೌಲ್ಯಗಳು? ಕೆಲವು ಮೌಲ್ಯಗಳು ತರ್ಕಕ್ಕೆ  ಸಿಕ್ಕದಂಥವು.

ಅಂತಹ ಮೌಲ್ಯಗಳ ಬಗ್ಗೆ ಯೋಚಿಸಿ, ಸರಿ-ತಪ್ಪು ಎನ್ನುವುದನ್ನು ವಿಮರ್ಶಿಸಿ ನಾವು ತಿಳಿದುಕೊಳ್ಳಬಹುದು. ಆಧುನಿಕ ರೀತಿಯ ವಿಚಾರವಂತಿಕೆಗೆ ಮೌಲ್ಯಗಳು ಬಹಳ ಅಮೂಲ್ಯ. ಅದಕ್ಕೇ ತರ್ಕ ಮಾಡಿದಾಗ ಅದರ ಹಿಡಿತಕ್ಕೆ ಸಿಕ್ಕುವ ಮೌಲ್ಯಗಳು ಬದಲಾವಣೆಗೆ ಅರ್ಹವಾದುವುಗಳೇ ಆಗಿದ್ದರೆ ಆಗ ನಾವೂ ಆ ಬದಲಾವಣೆಗೆ ಹೊಂದಿಕೊಳ್ಳುವುದು ಸುಲಭವಾಗುತ್ತದೆ~.

 ಮತ್ತೂರರು ತಮ್ಮ ಆತ್ಮ ಕಥೆಯಲ್ಲಿ ತಮಗೆ ಮಾರ್ಗದರ್ಶನ ಮಾಡಿದವರನ್ನು ಸ್ಮರಿಸುವುದು ಹೀಗೆ- `ಮನುಷ್ಯತ್ವದಿಂದ ದೈವತ್ವದ ಕಡೆಗೆ ನಡೆದವರು ನಮ್ಮ ನಾಯಕರು ಶ್ರಿರಾಮ, ಶ್ರಿಕೃಷ್ಣರು! ಭಾಗವತದಲ್ಲಿ ಚಿತ್ರಿತವಾದ ಕೃಷ್ಣನಿಂದ, ಬಂಕಿಮಚಂದ್ರರು ತಮ್ಮ  `ಶ್ರಿ ಕೃಷ್ಣ ಚರಿತ~ದಲ್ಲಿ ಚಿತ್ರಿಸಿರುವ ಕೃಷ್ಣನ ತನಕ ನನ್ನನ್ನು ಕೈಹಿಡಿದು ಕರೆದೊಯ್ದವರು ಶ್ರಿ ವಿ.ಸೀ.ಯವರು. ಅವನ ಸಾಕ್ಷಾತ್ಕಾರ ಮಾಡಿಸಿದವರು ಅವರು! ಆಗ ನಾನು ಯೋಚಿಸುತ್ತಿದ್ದುದು ಸರಿ ಎನಿಸಿ ನನ್ನಲ್ಲಿ ಅದಮ್ಯ ಆತ್ಮವಿಶ್ವಾಸ ಮೂಡುವಂತೆ ಮಾಡಿದವರು ಪ್ರೊ.ವಿ.ಸೀ ಅವರು~ ಎಂದು ಹೇಳಿಕೊಂಡಿದ್ದಾರೆ.

 `ನಾನು ಬಹಳ ಅಭಿಮಾನಿಗಳನ್ನು ಹೊಂದಿರುವ, ಜನ ಮೆಚ್ಚಿರುವ ಪ್ರವಚನಕಾರ ಎನಿಸಿದ್ದರೆ ಅದರ ಬಹುಪಾಲು ಶ್ರೇಯಸ್ಸು ಶ್ರಿ ಎಂ.ವಿ. ಚಕ್ರವರ್ತಿಯವರಿಗೆ ಸಲ್ಲುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ. ರಾಮಾಯಣ, ಮಹಾಭಾರತಗಳ ಮೇಲೆ ಅವರಿಗಿದ್ದ  ಪಾಂಡಿತ್ಯವನ್ನು ಬಹುಶಃ ನಾನು ಮತ್ತೆ ಯಾರಲ್ಲೂ ಕಾಣಲು ಸಾಧ್ಯವಾಗಿರಲಿಲ್ಲ.

ನಾನು ದಿನಾ ಬೆಳಗ್ಗೆ ಅವರ ಮನೆಗೆ ಹೋಗುತ್ತಿದ್ದೆ. ಅವರ ಜೊತೆ ಮಾತನಾಡುತ್ತಿದ್ದೆ. ಅವರ ಮಾತುಗಳನ್ನು ಶ್ರದ್ಧೆಯಿಂದ ಒಂದಕ್ಷರವೂ ಬಿಡದೆ ಕೇಳುವುದು ನನ್ನ ಕೆಲಸ ಹಾಗೂ ಉದ್ದೇಶವಾಗಿತ್ತು. ಸಂಸ್ಕೃತ ಮೂಲ ಕಾವ್ಯಗಳ ಜತೆಜತೆಗೆ ಕುಮಾರವ್ಯಾಸನ ಭಾರತವನ್ನು ಆದ್ಯಂತವಾಗಿ ವಿಮರ್ಶಿಸಿ ಹೋಲಿಸಿ ತಿಳಿಸಿಕೊಟ್ಟ ಮಹನೀಯರು ಅವರು~.

`ಬಹಳ ಇಷ್ಟವಾದ ಆತ್ಮಕಥೆಗಳು, ವ್ಯಕ್ತಿಚಿತ್ರಗಳನ್ನೂ ಓದಿದೆ. ಇದು ನನಗೆ ಚಿಕ್ಕಂದಿನಿಂದಲೂ ಬಂದ ಅಭ್ಯಾಸ. ಹಲವಾರು ಪ್ರಸಿದ್ಧ ವ್ಯಕ್ತಿಗಳ ಜೀವನ ದರ್ಶನವಾದ ಮೇಲೆ ಅವರು ಮಹಾನ್‌ಆಗಬೇಕೆಂದು ಮೊದಲಿನಿಂದಲೂ ಕೆಲಸ ಮಾಡಿರುವುದಿಲ್ಲ.

ಅವರ ಹುಟ್ಟು, ಬಾಲ್ಯ ಜೀವನದಲ್ಲಿ ಬರುವ ಪರಿಸ್ಥಿತಿಗಳು ನಡೆಯುವ ಘಟನೆಗಳು ಅವುಗಳನ್ನು ಅವರು ಎದುರಿಸಿದ ಬಗೆ, ಅವುಗಳ ಮೇಲೆ ವಿಜಯ ಸಾಧಿಸಿದ ರೀತಿ ಅವರನ್ನು ಮಹಾನ್‌ರನ್ನಾಗಿ ಮಾಡುತ್ತದೆ ಎನ್ನುವ ವಿಷಯ ನನ್ನ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿತು~.

ಅವರು ಹೇಗೆ ದೊಡ್ಡವರಾದರು ಎನ್ನುವ ವಿಷಯ ನಮ್ಮ ಅರಿವಿಗೆ ಬಂದು, ನಾವು ಅವರಿಂದ ಬಹಳ ಕಲಿಯುತ್ತೇವೆ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತೇವೆ, ಅವರ ದಾರಿಯಲ್ಲಿ ನಡೆಯುವ ಎಂದು ಪ್ರಯತ್ನಿಸುತ್ತೇವೆ. ಪ್ರಯತ್ನ  ಪ್ರಾಮಾಣಿಕವಾಗಿದ್ದಲ್ಲಿ ನಮ್ಮಲ್ಲಿ ಪರಿವರ್ತನೆಯಾಗುವುದು ಖಂಡಿತ. ಅದು ಆ ಮಹಾನ್ ವ್ಯಕ್ತಿಗಳಿಗೆ ನಾವು ಸಲ್ಲಿಸುವ ಗೌರವ.

`ಮಹಾಭಾರತದಲ್ಲಿ 24 ಮಂದಿ ಗುರುಗಳು ಇರುತ್ತಾರೆಂದು ಹೇಳಿದೆ. ಒಬ್ಬೊಬ್ಬರಿಂದ ಒಂದೊಂದು ಕಲಿತರೂ 24 ವಿದ್ಯೆಗಳು ಬಂದಂತೆಯೇ. ಹಾಗೆ ನನಗೆ ಎಲ್ಲ ವಿಷಯಗಳನ್ನು ಕಲಿಯಲು ಸಮರ್ಥ ಗುರುಗಳು ಸಿಕ್ಕಿದರು. ಅವರೆಲ್ಲ ಇಂದಿಗೂ ನನಗೆ ಪ್ರಾತಃ ಸ್ಮರಣೀಯರು~ ಎಂದಿದ್ದಾರೆ ಮತ್ತೂರ್‌ಜೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT