ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಆರ್ಥಿಕ ಹಿಂಜರಿತ: ವಿಶ್ವಸಂಸ್ಥೆ ಎಚ್ಚರಿಕೆ ಗಂಟೆ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ):  ಅಮೆರಿಕ ಮತ್ತು ಯೂರೋಪ್‌ನಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಬಿಕ್ಕಟ್ಟು ಮತ್ತೊಂದು ಸುತ್ತಿನ `ಜಾಗತಿಕ ಆರ್ಥಿಕ ಹಿಂಜರಿತ'ಕ್ಕೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಸಮುದಾಯವನ್ನು ಎಚ್ಚರಿಸಿದೆ.

ಗರಿಷ್ಠ ಮಟ್ಟದ ಹಣದುಬ್ಬರ ಮತ್ತು ಹೆಚ್ಚುತ್ತಿರುವ ವಿತ್ತೀಯ ಕೊರತೆ ಅಂತರ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಒಟ್ಟಾರೆ ಆರ್ಥಿಕ ಪ್ರಗತಿಗೆ (ಜಿಡಿಪಿ) ತೀವ್ರ ಹಿನ್ನಡೆ ತಂದಿದೆ ಎಂದು `ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ನಿರೀಕ್ಷೆ-2013' ವರದಿಯಲ್ಲಿ ವಿಶ್ವಸಂಸ್ಥೆ ಗಮನ ಸೆಳೆದಿದೆ.

ವಿಶ್ವಸಂಸ್ಥೆಯ ಈ ವರದಿ ಮಂಗಳವಾರ ಪ್ರಕಟವಾಗಿದ್ದು, ಜಾಗತಿಕ ಆರ್ಥಿಕ ಪ್ರಗತಿಯ ಮುನ್ನೋಟ ಮುಂದಿನ ಎರಡು ವರ್ಷಗಳಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಇರಲಿದೆ ಎಂದು ವಿಶ್ಲೇಷಿಸಲಾಗಿದೆ.

ಜಾಗತಿಕ ಆರ್ಥಿಕತೆಯು 2013ರಲ್ಲಿ  ಶೇ 2.4ರಷ್ಟು ಮತ್ತು 2014ರಲ್ಲಿ 3.2ರಷ್ಟು ಪ್ರಗತಿ ದಾಖಲಿಸಬಹುದು ಎಂದು ವರದಿ ಹೇಳಿದೆ.
ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಕ್ರಮವಾಗಿ ಶೇ 2.7 ಮತ್ತು ಶೇ 3.9ರಷ್ಟು ಆರ್ಥಿಕ ಪ್ರಗತಿ ದಾಖಲಾಗಲಿದೆ ಎಂದು ವಿಶ್ವಸಂಸ್ಥೆ ಆರು ತಿಂಗಳ ಹಿಂದೆ ಅಂದಾಜು ಮಾಡಿತ್ತು.  

ಏಷ್ಯಾದ ಪ್ರಮುಖ ಆರ್ಥಿಕ ಶಕ್ತಿಗಳಾದ ಚೀನಾ ಮತ್ತು ಭಾರತದ `ಜಿಡಿಪಿ' ನಿರೀಕ್ಷೆಗಿಂತ ಬಹಳ ಕಡಿಮೆ ಇರಲಿದೆ. 2011ರಲ್ಲಿ ಶೇ 6.9ರಷ್ಟು `ಜಿಡಿಪಿ' ದಾಖಲಿಸಿದ್ದ ಭಾರತ, ಪ್ರಸಕ್ತ ವರ್ಷ ಶೇ 5.5ಕ್ಕೆ ಕುಸಿತ ಕಾಣಲಿದೆ. 2013ರಲ್ಲಿ ಇದು ಶೇ 6.1 ಮತ್ತು 2014ರ ವೇಳೆಗೆ ಶೇ 6.5ಕ್ಕೆ ಚೇತರಿಕೆ ಕಾಣಬಹುದು ಎಂದು ವರದಿ ಹೇಳಿದೆ.

ಭಾರತದ ಆರ್ಥಿಕ ಚೇತರಿಕೆಯಿಂದ ಒಟ್ಟಾರೆ ದಕ್ಷಿಣ ಏಷ್ಯಾದ `ಜಿಡಿಪಿ' ಪ್ರಗತಿ 2013ರಲ್ಲಿ ಶೇ 4.4ರಿಂದ       ಶೇ 5ಕ್ಕೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದೂ ಈ ವರದಿ ವಿಶ್ಲೇಷಿಸಿದೆ.

ಹಣದುಬ್ಬರ ಚಿಂತೆ ಸಲ್ಲ-ಕೌಶಿಕ್ ಬಸು
ಕೋಲ್ಕತ್ತ(ಪಿಟಿಐ): `ಆಶಾದಾಯಕವಾಗಿ ಪ್ರಗತಿಯ ಹಾದಿಯಲ್ಲಿರುವ ಭಾರತದಲ್ಲಿ ಶೇ 5ರಿಂದ 6ರಷ್ಟು ಹಣದುಬ್ಬರವಿದೆ ಎಂದರೆ ಅದು ಭಾರಿ ಪ್ರಮಾಣದ್ದೇನೂ ಅಲ್ಲ' ಎಂದು ವಿಶ್ವ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿನ ಹಣದುಬ್ಬರ ನವೆಂಬರ್‌ನಲ್ಲಿ ಶೇ 7.4ರಷ್ಟು ದಾಖಲಾಗಿದೆ.

`ಹಣದುಬ್ಬರವನ್ನು ಶೇ 5-6ರ ಮಟ್ಟದಲ್ಲಿ ಕಾಯ್ದುಕೊಂಡರೆ ಅದೇನೂ ಆತಂಕಪಡುವ ಸಂಗತಿ ಅಲ್ಲ. ದಕ್ಷಿಣ ಕೊರಿಯಾದಲ್ಲಿ 1970ರ ವೇಳೆ ಅತ್ಯುತ್ತಮ ಪ್ರಗತಿ ಕಂಡುಬರುತ್ತಿದ್ದಾಗ ಅಲ್ಲಿನ ಜನ ಹಣದುಬ್ಬರದ ಪರಿಣಾಮಗಳ ಮಧ್ಯೆಯೇ ಜೀವನ ಸಾಗಿಸಿದ್ದನ್ನೂ ನಾವು ಕಂಡಿದ್ದೇವೆ' ಎಂದು ಗಮನ ಸೆಳೆದರು.

`ಐಐಎಂ-ಕೋಲ್ಕತ್ತ' ಸಂಸ್ಥೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಬುಧವಾರ ಪಾಲ್ಗೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

`ದೇಶ ನೈಜ ಸ್ವರೂಪದ ಅಭಿವೃದ್ಧಿಯನ್ನು ಕಂಡರೆ ಆಹಾರ, ಬಟ್ಟೆ ಮೊದಲಾದ ಅಗತ್ಯ ವಸ್ತುಗಳೆಲ್ಲ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಲಭ್ಯವಿರುತ್ತವೆ. ಆಗ ತುಸು ಹೆಚ್ಚು ಹಣದುಬ್ಬರ ಇದ್ದರೆ ಅದನ್ನೂ ಒಪ್ಪಿಕೊಳ್ಳಬೇಕು, ಸಹಿಸಿಕೊಳ್ಳಬೇಕು ಅಷ್ಟೆ' ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.ಕೆಲವು ವರ್ಷಗಳ ಹಿಂದೆ ಇದ್ದಂತೆ ಹಣದುಬ್ಬರ ಶೇ 2ರಿಂದ 3ರ ಮಟ್ಟಕ್ಕೆ  ತಗ್ಗುವ ಸಾಧ್ಯತೆ ಸದ್ಯಕ್ಕಂತೂ ಇಲ್ಲ ಎಂದೂ ಬಸು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT