ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗಡಿ ಅತಿಕ್ರಮಿಸಿದ ಚೀನಾ

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಲೇಹ್ (ಪಿಟಿಐ): ಲಡಾಖ್‌ನ ಚುಮರ್ ವಲಯದಲ್ಲಿ ಚೀನಾ ಸೇನೆಯು ಮತ್ತೆ ಭಾರತದ ಗಡಿಯೊಳಕ್ಕೆ ಅತಿಕ್ರಮ ಪ್ರವೇಶ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 17ರಂದು ಈ ಅತಿಕ್ರಮಣ ನಡೆದಿದೆ. ಭಾರತದ ಭೂಭಾಗಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ತುಕಡಿಗಳು ಭಾರತೀಯ ಸೇನೆಯ ಕೆಲವು ಬಂಕರ್‌ಗಳನ್ನು ಧ್ವಂಸಗೊಳಿಸಿವೆ. 

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಅಳವಡಿಸಲಾಗಿದ್ದ ಸೋಲಾರ್ ಕ್ಯಾಮೆರಾಗಳನ್ನು ಹೊತ್ತೊಯ್ದಿವೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಏಪ್ರಿಲ್‌ನಲ್ಲಿ ಚೀನಾ ಸೇನೆಯು ಈ ಪ್ರದೇಶದಲ್ಲೇ ಅತಿಕ್ರಮಣ ನಡೆಸಿತ್ತು. 21 ದಿನಗಳ ಕಾಲ ಭಾರತ ಮತ್ತು ಚೀನಾದ ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದ ಈ ಬಿಕ್ಕಟ್ಟು ಮೇ 5ರಂದು ಬಗೆಹರಿದಿತ್ತು.

ಚುಮರ್ ವಿಭಾಗದಲ್ಲಿ ಭಾರತೀಯ ಸೇನೆ ವೀಕ್ಷಣಾ ಗೋಪುರ ನಿರ್ಮಿಸಿದ್ದು ಚೀನಾದ ಕೆಂಗಣ್ಣಿಗೆ ಗುರಿಯಾಗಿತ್ತು. ಏಪ್ರಿಲ್ 15ರಂದು ಲಡಾಖ್ ವಲಯದ ದೌಲತ್ ಬೇಗ್ ಓಲ್ಡಿ ವಲಯದಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದ ಚೀನಾ ಸೇನೆ ಶಿಬಿರಗಳನ್ನು ನಿರ್ಮಿಸಿತ್ತು. ಕೊನೆಗೆ ಭಾರತೀಯ ಸೇನೆಯು ವೀಕ್ಷಣಾ ಗೋಪುರ  ಧ್ವಂಸಗೊಳಿಸಿದ್ದರಿಂದ ಉಲ್ಬಣಗೊಂಡಿದ್ದ ಗಡಿ ವಿವಾದ ತಣ್ಣಗೆ ಆಗಿತ್ತು.

ಗೋಪುರ, ರಕ್ಷಣಾ ಬಂಕರ್‌ಗಳನ್ನು ನಾಶಗೊಳಿಸಿದ ಬಳಿಕ ಸೇನೆಯು, ಚೀನಾ ಸೇನೆಯ ಚಲನವಲನಗಳನ್ನು ಗಮನಿಸಲು ಎಲ್‌ಎಸಿಯಲ್ಲಿ ಸೋಲಾರ್ ಕ್ಯಾಮೆರಾಗಳನ್ನು ಅಳವಡಿಸಿತ್ತು. ಇದು ಚೀನಾ ಸೇನೆಯನ್ನು ಕೆರಳಿಸಿತ್ತು ಎಂದು ಹೇಳಲಾಗಿದೆ. ಹೊಸ ಅತಿಕ್ರಮಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸೇನಾ ಮೂಲಗಳು, `ಚುಮರ್ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ.

ಕ್ಯಾಮೆರಾಗಳು ನಾಪತ್ತೆಯಾಗಿರುವುದನ್ನು ಗಮನಿಸಿದ ಗಸ್ತು ತಿರುಗುತ್ತಿದ್ದ ಭಾರತೀಯ ಪಡೆ, ಈ ವಿಚಾರವನ್ನು ಚೀನಾ ಮುಂದೆ ಪ್ರಸ್ತಾಪಿಸಿ ತನ್ನ ಪ್ರತಿಭಟನೆ ದಾಖಲಿಸಿತ್ತು' ಎಂದು ಹೇಳಿವೆ. `ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಚೀನಾ ಪ್ರವಾಸವನ್ನು ಆರಂಭಿಸುವ ಒಂದು ದಿನದ ಮೊದಲು, ಅಂದರೆ ಜುಲೈ 3ರಂದು ಚೀನಾ ಸೇನೆ ಕ್ಯಾಮೆರಾಗಳನ್ನು ಹಿಂದಿರುಗಿಸಿತ್ತು' ಎಂದೂ ಮೂಲಗಳು ತಿಳಿಸಿವೆ.

ಆಂಟನಿ ಮತ್ತು ಚೀನಾ ಮುಖಂಡರೊಂದಿಗಿನ ಮಾತುಕತೆ ವೇಳೆ ಗಡಿ ವಿವಾದ ಮತ್ತು ಅತಿಕ್ರಮಣದ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತಾದರೂ ನಿರ್ದಿಷ್ಟ ಪ್ರಕರಣ ಉಲ್ಲೇಖಗೊಂಡಿರಲಿಲ್ಲ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಬಿಕ್ಕುಗಳ ಮೇಲೆ ದಾಳಿ
ಬೀಜಿಂಗ್ (ಎಎಫ್‌ಪಿ): ತಮ್ಮ ಧರ್ಮಗುರು ದಲೈಲಾಮಾ ಅವರ ಹುಟ್ಟುಹಬ್ಬ ಆಚರಣೆಗೆ ತೆರಳುತ್ತಿದ್ದ ಟಿಬೆಟನ್ನರ ಮೇಲೆ ಸಿಚುವಾನ್ ಪ್ರಾಂತ್ಯದಲ್ಲಿ ಚೀನಾ ಪೊಲೀಸ್ ಪಡೆಗಳು ಗುಂಡಿನ ದಾಳಿ ನಡೆಸಿದ್ದು ಹಲವು ಬಿಕ್ಕುಗಳು ತೀವ್ರ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT