ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿಗೆ ಅನುಮತಿ ಇಲ್ಲ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ದೇವಸ್ಥಾನ ಹಾಗೂ ಶಾಲೆಗಳ ಬಳಿ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದರು.

ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯದಂಗಡಿಗಳ ಸ್ಥಾಪನೆಗೆ ಅವಕಾಶ ನೀಡಬಾರದು ಎಂಬ ಬಿಜೆಪಿಯ ಪ್ರೊ.ಎಂ.ಆರ್. ದೊರೆಸ್ವಾಮಿ ಅವರ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿಗಳು ಉತ್ತರಿಸಿದರು.

`ಈ ಸಂಬಂಧ ಅಗತ್ಯ ಬಿದ್ದರೆ ನಿಯಮಗಳಿಗೆ ತಿದ್ದುಪಡಿ ತರಲು ಕೂಡ ಸರ್ಕಾರ ಪ್ರಯತ್ನ ನಡೆಸಲಿದೆ~ ಎಂದು ಆಶ್ವಾಸನೆ ನೀಡಿದರು.

ಬೇಡಿಕೆ ತಳ್ಳಿ ಹಾಕಿದ ಸಚಿವ
ಇದಕ್ಕೂ ಮುನ್ನ ಉತ್ತರ ನೀಡಿದ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸದಸ್ಯರ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು. `ರಾಜ್ಯದಲ್ಲಿ 8300 ವಿವಿಧ ಮದ್ಯ ಮಾರಾಟ ಮಳಿಗೆಗಳು ಚಾಲ್ತಿಯಲ್ಲಿದ್ದು, ಎಲ್ಲವೂ ಹಾಲಿ ನಿಯಮಗಳಲ್ಲಿ ಇರುವಂತಹ ಕನಿಷ್ಠ ದೂರದ ಮಿತಿ ಪಾಲಿಸುತ್ತಿವೆ. ಶಾಲೆ ಅಥವಾ ದೇವಸ್ಥಾನದ ಸುತ್ತ 100 ಮೀಟರ್ ಬದಲಿಗೆ 1 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯದಂಗಡಿಗಳ ಮಾರಾಟಕ್ಕೆ ನಿಷೇಧ ಹೇರಿದರೆ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ದೊಡ್ಡ ನಗರಗಳಲ್ಲಿ ಬಹುತೇಕ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ~ ಎಂದರು.

`ಅನೇಕ ವರ್ಷಗಳಿಂದ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಸಂಸ್ಥೆಗಳ ಪಾವಿತ್ರ್ಯಕ್ಕೆ ಕುಂದುಂಟಾಗದಂತೆ ಅಬಕಾರಿ ನೀತಿ ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ, ಈ ನೀತಿಯಲ್ಲಿ ದೊಡ್ಡ ಪ್ರಮಾಣದ ಮಾರ್ಪಾಡು ಮಾಡುವುದು ಸಾಧ್ಯವಿಲ್ಲ~ ಎಂದರು. ಅಲ್ಲದೆ, `ಈ ಕ್ರಮದಿಂದ ಸರ್ಕಾರಕ್ಕೆ ಆರ್ಥಿಕ ಸಮಸ್ಯೆ ತಲೆದೋರುವುದರ ಜತೆಗೆ, ಸಾಮಾಜಿಕ ಸಮಸ್ಯೆಗಳು ಕೂಡ ಉಂಟಾಗುವ ಸಾಧ್ಯತೆಯಿದೆ~ ಎಂದರು.

ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯರಾದ ಗಣೇಶ್ ಕಾರ್ಣಿಕ್  , ಡಾ. ಎ.ಎಚ್.ಶಿವಯೋಗಿಸ್ವಾಮಿ, `ಶಾಲೆ ಅಥವಾ ದೇವಸ್ಥಾನಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳನ್ನು ಸ್ಥಳಾಂತರಿಸಿದಲ್ಲಿ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತವೆ ಎಂಬ ಸರ್ಕಾರದ ದೃಷ್ಟಿಕೋನದಲ್ಲಿಯೇ ತಪ್ಪಿದೆ. ಕುಡಿತವೇ ಒಂದು ಸಾಮಾಜಿಕ ಸಮಸ್ಯೆಯಾಗಿರುವಾಗ ಮದ್ಯದಂಗಡಿ ತೆರವುಗೊಳಿಸುವುದರಿಂದ ಸಾಮಾಜಿಕ ಸಮಸ್ಯೆ ಹೇಗೆ ಉಂಟಾಗುತ್ತದೆ~ ಎಂದು ಪ್ರಶ್ನಿಸಿದರು.

ಸದಸ್ಯರಾದ ಡಿ.ಎಸ್. ವೀರಯ್ಯ, ಪ್ರೊ.ಎಸ್.ಆರ್. ಲೀಲಾ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT