ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ

Last Updated 19 ಅಕ್ಟೋಬರ್ 2012, 7:15 IST
ಅಕ್ಷರ ಗಾತ್ರ

ಕಾರವಾರ: `ಮಧ್ಯಸ್ಥಿಕೆ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲು ಸಾಧ್ಯವಿದೆ~ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಾಂತೇಶ ವಿಜಯಕುಮಾರ್ ದಾನಮ್ಮನವರ್ ತಿಳಿಸಿದರು.
ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ನ್ಯಾಯಾಲಯ ಮತ್ತು ಜಿಲ್ಲಾ ವಕೀಲರ ಸಂಘ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಧ್ಯಸ್ಥಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಹಲವು ಸಂದರ್ಭಗಳಲ್ಲಿ ನ್ಯಾಯಾಲಯದ ಮೂಲಕ ಕಾನೂನು ಪ್ರಕಾರ ನ್ಯಾಯ ಒದಗಿಸಬಹುದೇ ಹೊರತು, ವಿವಾದಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಎಷ್ಟು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ನ್ಯಾಯ ಒದಗಿಸಲು ಸಾಧ್ಯವಾಗಿದೆ ಎಂಬ ಅಂಶ ಸಹ ಪ್ರಮುಖವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಧ್ಯಸ್ಥಿಕೆ ಮೂಲಕ ಉಭಯ ಕಕ್ಷಿದಾರರಿಗೂ ಒಪ್ಪಿಗೆಯಾಗುವ ರೀತಿ ನ್ಯಾಯದಾನ ಮಾಡುವ ಪ್ರಕ್ರಿಯೆ ಪರಿಣಾಮಕಾರಿಯಾಗುತ್ತದೆ~ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

`ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಉತ್ತೇಜಿಸಿದೆ. ಕಡಿಮೆ ವೆಚ್ಚದಲ್ಲಿ ನ್ಯಾಯವನ್ನು ತ್ವರಿತವಾಗಿ ಒದಗಿಸಲು ಇದರಿಂದ ಸಾಧ್ಯವಾಗುವುದು~ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮತ್ತು  ಸೆಷನ್ಸ್ ನ್ಯಾಯಾಧೀಶ ವಿ.ಶ್ರೀಶಾನಂದ ಮಾತನಾಡಿ, `ದೇಶದಲ್ಲಿ ಕಕ್ಷಿದಾರರು ಮತ್ತು ನ್ಯಾಯಾಧೀಶರ ಅನುಪಾತದ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಿದೆ.

ಇಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿಗೆ ಒಬ್ಬ ನ್ಯಾಯಾಧೀಶ ಇದ್ದರೆ, ಆಸ್ಟ್ರೇಲಿಯಾದಲ್ಲಿ ಒಂದು ಸಾವಿರ ಮಂದಿಗೆ ಒಬ್ಬರಂತೆ ನ್ಯಾಯಾಧೀಶರ ಅನುಪಾತವಿದೆ. ಆದರೂ ನ್ಯಾಯವನ್ನು ತ್ವರಿತವಾಗಿ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲರಿಗೂ ತ್ವರಿತವಾಗಿ ನ್ಯಾಯ ಒದಗಿಸಲು ಮಧ್ಯಸ್ಥಿಕೆ ಪೂರಕವಾಗಿದೆ. ಈ ಪ್ರಕ್ರಿಯೆ ಪರ್ಯಾಯ ನ್ಯಾಯಾಂಗ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ~ ಎಂದು ಹೇಳಿದರು.

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ತರಬೇತುದಾರ ಭರತ್ ಕುಮಾರ್ ಮೆಹ್ತಾ ಮಾತನಾಡಿ, `ಮಧ್ಯಸ್ಥಿಕೆ ಮೂಲಕ ನ್ಯಾಯ ಒದಗಿಸುವುದು ಕಡ್ಡಾಯವಲ್ಲ. ಎರಡೂ ಪಕ್ಷದಾರರಿಗೆ ಒಪ್ಪಿಗೆ ಇದ್ದರೆ ಮಾತ್ರ ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಬಗೆಹರಿಸಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆದಾರ ರಾಜಿ ಸಂಧಾನಕರಾಗಿ ಕಾರ್ಯನಿರ್ವಹಿಸುತ್ತಾರೆ.

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದಲ್ಲಿ ಶೇ 67ರಷ್ಟು ಪ್ರಕರಣಗಳನ್ನು ಯಶಸ್ವಿಯಾಗಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಪ್ರಕ್ರಿಯೆ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ವ್ಯಾಜ್ಯಗಳ ಇತ್ಯರ್ಥ ಪ್ರಮಾಣ ಹೆಚ್ಚಲಿದೆ~ ಎಂದು ಭರವಸೆ ವ್ಯಕ್ತಪಡಿಸಿದರು.ಜಿಲ್ಲಾ  ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಗಾಂವ್ಕರ್, ತರಬೇತುದಾರ ಅಶೋಕ್ ಬಿ. ಪಾಟೀಲ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT