ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವಿ ಇತ್ಯರ್ಥ ಬಳಿಕ ಅಧಿಸೂಚನೆಗೆ ಒತ್ತಾಯ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಗುಲ್ಬರ್ಗ: ಎಲ್ಲ ವಿಶೇಷ ಮೇಲ್ಮನವಿಗಳು ಇತ್ಯರ್ಥಗೊಂಡ ಬಳಿಕ ಕೃಷ್ಣಾ ನದಿ ನೀರು ಹಂಚಿಕೆ ತೀರ್ಪಿನ ಮಾದರಿಯಲ್ಲಿ  ಕಾವೇರಿ ತೀರ್ಪಿನ ಅಧಿಸೂಚನೆ (ನೋಟಿಫಿಕೇಶನ್) ಹೊರಡಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. 

ರಾಜಕೀಯದ ಮೂಲಕ ನೀರು ಕಬಳಿಕೆ ಮಾಡುವಲ್ಲಿ ತಮಿಳುನಾಡು ಮುಖಂಡರು ನಿಸ್ಸೀಮರು. ಆದರೆ ಎಸ್.ಎಂ. ಕೃಷ್ಣ ಮತ್ತು ಎಸ್. ಬಂಗಾರಪ್ಪ ಅವಧಿಯಲ್ಲಿ ನಡೆದ ಕೆಲವು ಘಟನೆಗಳಿಂದ ಕರ್ನಾಟಕವು ನ್ಯಾಯಾಧಿಕರಣ ತೀರ್ಪಿಗೆ ಬೆಲೆ ನೀಡುವುದಿಲ್ಲ ಎಂಬ ತಪ್ಪು ಗ್ರಹಿಕೆ ಬಂದಿದೆ. ಹೀಗೆ ರಾಜ್ಯದ ಮೇಲೆ ಗೂಬೆ ಕೂರಿಸಿ ಸಂಸತ್ತಿನಲ್ಲಿ ಸವಿಸ್ತಾರ ಚರ್ಚೆಗೂ ಅವಕಾಶ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.

ಅಂದು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ತಮಿಳುನಾಡಿಗೆ ಹೋಗಿ 'ನಿಮಗೆ ನೀರು ಕೊಡುತ್ತೇವೆ. ನಮಗೆ ಬತ್ತ ಕೊಡಿ' ಎಂದು ಹೇಳಿ ಬಂದರು. ಇಂತಹ ಹಲವು ಹಿನ್ನೆಲೆಗಳಿಂದ ನಮಗೆ ಹಿನ್ನಡೆ ಆಗಿದೆ. ಅಲ್ಲದೇ ಬೇರೆ ಯಾವುದೇ ನದಿ ನೀರು ಹಂಚಿಕೆ ವಿಚಾರದಲ್ಲಿ ಮಧ್ಯಂತರ ತೀರ್ಪು ಕೊಟ್ಟ ನಿದರ್ಶನಗಳಿಲ್ಲ ಎಂದು ಅವರು ಮೆಲುಕು ಹಾಕಿದರು. 

ಪ್ರಾದೇಶಿಕ ಪಕ್ಷ: ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಬೇಸತ್ತ ಜನತೆ ಪ್ರಾದೇಶಿಕ ಪಕ್ಷಕ್ಕೆ ಆದ್ಯತೆ ನೀಡುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳು ನಿನ್ನೆ ಹುಟ್ಟಿ ನಾಳೆ ಸಾಯುವುದಲ್ಲ. ಆ ಮುಖಂಡರ ಹೋರಾಟಕ್ಕೆ 30ರಿಂದ 40 ವರ್ಷಗಳ ಇತಿಹಾಸವಿದೆ ಎಂದರು. ಈ ಸಂದರ್ಭ ಕೆಜೆಪಿ ಮತ್ತು ಬಿಎಸ್‌ಆರ್ ಪಕ್ಷಗಳ ಕುರಿತ ಪ್ರಶ್ನೆಗೆ 'ಅಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಜಾತಿ-ಧರ್ಮಾಧಾರಿತ- ಹಣ ಬಲದ ರಾಜಕೀಯ ಬಹಳ ಕಾಲ ನಡೆಯುವುದಿಲ್ಲ. ಭಾವನಾತ್ಮಕ ಮತದಾನ ಒಂದು ಬಾರಿ ಮಾತ್ರ ಸಾಧ್ಯ. ಚುನಾವಣೆ ವೇಳೆ ಎಲ್ಲವನ್ನೂ ಜನತೆಯ ಮುಂದೆ ಹೇಳುತ್ತೇನೆ' ಎಂದರು.

ರಾಜ್ಯದ ಆಡಳಿತ ಸಂಪೂರ್ಣ ಹದಗೆಟ್ಟಿದ್ದು ಮುಂದೆ ಬರುವ ಸರ್ಕಾರದ ಮೇಲೆ ದುರಸ್ತಿಯ ಜವಾಬ್ದಾರಿ ಇದೆ ಎಂದ ಅವರು, 'ನನ್ನ ಮಗನ ಮನೆ ಮೇಲೆ ನಡೆದ ದಾಳಿ ಹಾಗೂ ಈಶ್ವರಪ್ಪ ಮನೆ ಮೇಲೆ ನಡೆದ ದಾಳಿಗಳನ್ನು ತುಲನೆ ಮಾಡಿ. ಲೋಕಾಯುಕ್ತ ದಾಳಿ ಬಗ್ಗೆ ಎಲ್ಲವೂ ತಿಳಿಯುತ್ತದೆ' ಎಂದು ಈಶ್ವರಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT